ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡಜ್ಜಿ ಎಂಬ ಬೆಳಕು

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೊಂಡಜ್ಜಿ. ಇದು ಹರಿಹರ- ದಾವಣಗೆರೆಗೆ ಸರಿಸಮಾನ ದೂರದ ಒಂದು ಸಾಧಾರಣ ಹಳ್ಳಿ. ಆದರೆ ಇದಕ್ಕೆ ಇಂದು ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ಮಟ್ಟದಲ್ಲಿ ಒಂದಿಷ್ಟು ಹೆಸರು ಏನಾದರೂ ಬಂದಿದ್ದರೆ ಅದರ ಕಾರಣಕರ್ತರು ಅದೇ ಗ್ರಾಮದವರಾದ ಕೊಂಡಜ್ಜಿ ಬಸಪ್ಪನವರು. ರಾಜಕಾರಣಿಯಾಗಿದ್ದರೂ ಅದನ್ನೂ ಮೀರಿ ಬೆಳೆದವರು.

ಮಕ್ಕಳ ಅಭ್ಯುದಯಕ್ಕಾಗಿ ಶ್ರಮಿಸಿದವರು. ‘ಸ್ಕೌಟ್ಸ್ ಮತ್ತು ಗೈಡ್ಸ್ ಎಂದರೆ ಕೊಂಡಜ್ಜಿ; ಕೊಂಡಜ್ಜಿ ಎಂದರೆ ಸ್ಕೌಟ್ಸ್ ಮತ್ತು ಗೈಡ್ಸ್’ ಎನ್ನುವಷ್ಟರ ಮಟ್ಟಿಗೆ ಅದನ್ನೇ ತಮ್ಮ ಉಸಿರಾಗಿ ಮಾಡಿಕೊಂಡವರು. ಒಬ್ಬರಿಗೊಬ್ಬರು ಕಾಲೆಳೆಯುವ, ಒಳಒಳಗೆ ಕತ್ತಿ ಮಸೆಯುವ, ಅತ್ಯಲ್ಪ ಕಾಲ ಸಣ್ಣ ರಾಜಕೀಯ ಹುದ್ದೆ ಸಿಕ್ಕರೂ ಕೊಪ್ಪರಿಗೆ ಹಣ ಮಾಡುವ, ಅಧಿಕಾರಕ್ಕಾಗಿ ಹಪಹಪಿಸುವ, ತಮ್ಮ ಮಕ್ಕಳನ್ನೇ ಮುಂದೆ ತರುವ ಇಂದಿನ ರಾಜಕಾರಣಕ್ಕಿಂತ ಭಿನ್ನವಾಗಿ ಬದುಕು ಸವೆಸಿದವರು.

ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬ ದಾರ್ಶನಿಕ ದೃಷ್ಟಿ ಬೆಳೆಸಿಕೊಂಡವರು. ಅವರೇನಾದರೂ ಬದುಕಿದ್ದರೆ 100ನೇ ವರ್ಷಕ್ಕೆ (ಜನನ 1915 ಡಿ. 11- ಮರಣ 1982 ನ. 14) ಕಾಲಿಡುತ್ತಿದ್ದರು. ಜನಿಸಿದ್ದು ಸಾಧಾರಣ ಕುಟುಂಬದಲ್ಲಿ. ಕಷ್ಟಪಟ್ಟು, ಅವರಿವರ ಸಹಾಯದಿಂದ ಓದಿ ಮುಂದೆ ಬಂದವರು ಅವರು. ಕಾನೂನು ಪದವಿ ಪಡೆದು ವಕೀಲಿ ವೃತ್ತಿಗೆ ಕಾಲಿಟ್ಟರು. ಆದರೆ ಎರಡೇ ವರ್ಷದಲ್ಲಿ ಅವರೆಷ್ಟು ಜನಾನುರಾಗಿಯಾದರು ಎಂದರೆ ಜಿಲ್ಲಾ ಬೋರ್ಡ್ ಚುನಾವಣೆಗೆ ನಿಂತು ಮೊದಲ ಯತ್ನದಲ್ಲೇ ಗೆದ್ದರು.

ಕೇವಲ 29ನೇ ವರ್ಷದಲ್ಲೇ (1944) ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಅಧಿಕಾರ ಎನ್ನುವುದು ಜನರ ಸೇವೆಗೊಂದು ಅವಕಾಶ ಎಂಬ ತತ್ವವನ್ನು ನಂಬಿ ಅದರಂತೆ ನಡೆದುಕೊಂಡರು. ಅವರ ಅಧಿಕಾರದ ಅವಧಿಯಲ್ಲೇ ಚಿತ್ರದುರ್ಗದ ಎಲ್ಲ ತಾಲ್ಲೂಕುಗಳಲ್ಲೂ ಪ್ರೌಢಶಾಲೆಗಳು, ಆಸ್ಪತ್ರೆಗಳು ಸ್ಥಾಪನೆಯಾದವು. ದಾವಣಗೆರೆ, ಚಿತ್ರದುರ್ಗಕ್ಕೆ ಕಾಲೇಜು ಬಂತು. ನಾವು ಇಂದು ನೋಡುವಂಥ ಓಲೈಕೆ ರಾಜಕಾರಣ ಅವರಿಗೆ ಆಗಿ ಬರುತ್ತಿರಲಿಲ್ಲ. ಅದರ ಪರಿಣಾಮವಾಗಿ ಮೂರು ವರ್ಷದ ನಂತರ ಜಿಲ್ಲಾ ಬೋರ್ಡ್ ಅಧ್ಯಕ್ಷರ ಚುನಾವಣೆಯಲ್ಲಿ ಅವರಿಗೆ ಸೋಲಾಯಿತು.

ಮತ್ತೆ ಮರಳಿದ್ದು ವಕೀಲಿ ವೃತ್ತಿಗೆ. 1962ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಧಾನಸಭೆಗೆ ಚುನಾಯಿತರಾಗಿ ಎಸ್. ನಿಜಲಿಂಗಪ್ಪನವರ ಸಂಪುಟದಲ್ಲಿ ಅಬಕಾರಿ, ಸಹಕಾರ, ವಾರ್ತಾ ಖಾತೆಗಳ ಉಪ ಸಚಿವರಾದರು. ಕಾಂಗ್ರೆಸ್ ವಿಭಜನೆ ನಂತರ 1971ರಲ್ಲಿ ದಾವಣಗೆರೆ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಉಪ ಸಚಿವರಾದರು. ಕುಷ್ಠರೋಗ ನಿವಾರಣಾ ಕೇಂದ್ರ ಕರ್ನಾಟಕಕ್ಕೆ ದಕ್ಕಿದ್ದು ಅವರ ಕಾಲದಲ್ಲೇ.

ರಾಜಕಾರಣದಲ್ಲಿ ಎಷ್ಟೆಲ್ಲ ಪದವಿ, ಅಧಿಕಾರ ಅನುಭವಿಸಿದರೂ ಸ್ವಾರ್ಥ, ಸ್ವಜನ ಪಕ್ಷಪಾತ, ನಾನು- ನನ್ನ ಕುಟುಂಬ- ಎಲ್ಲವೂ ನನಗೇ ಬೇಕು ಎಂಬ ವ್ಯಾಮೋಹವನ್ನು ದೂರ ಇಟ್ಟವರು ಕೊಂಡಜ್ಜಿ ಬಸಪ್ಪನವರು. ಹಾಗೆ ನೋಡಿದರೆ ನಿಜವಾದ ಅರ್ಥದಲ್ಲಿ ಅವರು ಗಾಂಧಿವಾದಿ, ಸಮಾಜವಾದಿ. ಕೇಂದ್ರದಲ್ಲಿ ಆರೋಗ್ಯ ಖಾತೆ ಉಪ ಮಂತ್ರಿಯಾಗಿದ್ದ 32 ತಿಂಗಳಲ್ಲಿ ನಾನಾ ಯೋಜನೆಗಳ ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಕರ್ನಾಟಕದ 3 ಡಜನ್‌ಗೂ ಹೆಚ್ಚು ವೈದ್ಯರನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು.

ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ಅವರ ವೈದ್ಯ ಪದವೀಧರ ಮಗ ಇರಲಿಲ್ಲ. ಅವರನ್ನು ಹತ್ತಿರದಿಂದ ಕಂಡವರು ಹೇಳುವ ಪ್ರಕಾರ, ಏಕೈಕ ಮಗಳ ಮದುವೆಗೆ ಹಣ ಹೊಂದಿಸಲಾಗದೆ ಸಾಲ ಮಾಡಿದ್ದರು. 7 ಗಂಡು ಮಕ್ಕಳಿಗೂ ವಿದ್ಯೆ ಕೊಡಿಸಿದರೇ ಹೊರತು ಹಣ, ಆಸ್ತಿ ಕೂಡಿಡಲಿಲ್ಲ. ಸಂಸದರಾಗಿದ್ದಾಗ ಕಾರು ಕೊಳ್ಳಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಆದರೆ ಕಂತು ಕಟ್ಟಲು ಕಷ್ಟವಾಗಿ ಮರು ವರ್ಷವೇ ಕಾರು ಮಾರಿದ್ದರು. ಮೂರು ವರ್ಷದ ನಂತರ ಮತ್ತೊಮ್ಮೆ ಕಾರು ಕೊಳ್ಳುವ ಮನಸ್ಸಾಯಿತು. ಆಗಲೂ ಅದೇ ಕತೆ. ಬ್ಯಾಂಕ್‌ನಿಂದ ಸಾಲ ಪಡೆದರು. ಕಂತು ಕಟ್ಟಲು ಅದೇ ಕಾರು ಮಾರಿದರು.

ಅವರ ಒಂದು ದೌರ್ಬಲ್ಯ ಎಂದರೆ ಬೇರೆಯವರ ಮಾತುಗಳನ್ನು ಬೇಗ ನಂಬಿ ಬಿಡುತ್ತಿದ್ದರು. ಆದರೆ ತಮ್ಮ ಗ್ರಹಿಕೆ ತಪ್ಪು ಎಂದು ಅರಿವಾದಾಗ ಅಷ್ಟೇ ಬೇಗ ತಿದ್ದಿಕೊಳ್ಳುತ್ತಿದ್ದರು. ಪಕ್ಷ ರಾಜಕಾರಣಕ್ಕಿಂತಲೂ ಅವರಿಗೆ ಹೆಚ್ಚು ಪ್ರಿಯವಾಗಿದ್ದ ಕ್ಷೇತ್ರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆ. ಶಾಲಾ ಮಕ್ಕಳಲ್ಲಿ ಸ್ವಯಂಸೇವೆ, ಶಿಸ್ತು, ಸಜ್ಜನಿಕೆ, ಉತ್ತಮ ನಡೆನುಡಿ, ಸೇವಾ ಮನೋಭಾವ, ಧೈರ್ಯ, ಸಾಹಸ ಪ್ರವೃತ್ತಿ ಮುಂತಾದ ಗುಣಗಳನ್ನು ಬೆಳೆಸಲು ವಿಶ್ವಮಟ್ಟದಲ್ಲಿ ಹುಟ್ಟಿಕೊಂಡ ಈ ಆಂದೋಲನ ಅವರನ್ನು ಆಕರ್ಷಿಸಿತ್ತು.

ಅದರಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡರು ಎಂದರೆ ತಾವೇ ಆರ್ಥಿಕವಾಗಿ ಕಷ್ಟದಲ್ಲಿದ್ದರೂ ತಮ್ಮ ಅಲ್ಪ ಸ್ವಲ್ಪ ದುಡಿಮೆಯನ್ನೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಗೆ ಧಾರೆ ಎರೆದರು. ವಿದ್ಯಾರ್ಥಿ ದೆಸೆಯಿಂದಲೆ ಸ್ಕೌಟ್ ಸಂಪರ್ಕ ಹೊಂದಿದ್ದರು. ಓದು ಮುಗಿಸಿ ದಾವಣಗೆರೆಯಲ್ಲಿ ವಕೀಲಿ ವೃತ್ತಿಗೆ ಇಳಿದ ಬಸಪ್ಪ 1950ರಲ್ಲಿ ಅಲ್ಲಿಯೇ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಮೀಷನರ್ ಆದರು. 68 ರಿಂದ ಆರಂಭಿಸಿ 82ರಲ್ಲಿ ನಿಧನರಾಗುವವರೆಗೂ ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾಗಿದ್ದರು.

ಬದುಕಿನ ಕೊನೆಯ ಕ್ಷಣದವರೆಗೂ ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಅನುದಿನದ ಉಸಿರಾಗಿತ್ತು. ಎಷ್ಟೋ ಸಲ ಸ್ಕೌಟ್ಸ್ ಕಚೇರಿಗೆ ಮಗನ ಸ್ಕೂಟರ್‌ನಲ್ಲಿಯೇ ಹೋಗಿ ಬರುತ್ತಿದ್ದರು. ಎಂದೂ ಪ್ರಯಾಣ ವೆಚ್ಚವಾಗಲಿ, ಮಾಸಿಕ ಗೌರವ ಧನವನ್ನಾಗಲೀ ಪಡೆದವರಲ್ಲ. ಸ್ಕೌಟ್ ಸಂಸ್ಥೆಗೆ ಸಲ್ಲಿಸಿದ ಸೇವೆಗಾಗಿ 1976ರಲ್ಲಿ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸಿ 1 ಲಕ್ಷ ರೂಪಾಯಿ ಹಮ್ಮಿಣಿ ಅರ್ಪಿಸಲಾಗಿತ್ತು. ಅದೆಲ್ಲವನ್ನೂ ಸ್ಕೌಟ್ಸ್‌ಗೇ ಬಳಸುವಂತೆ ಅದೇ ಸಮಾರಂಭದಲ್ಲಿ ಮರಳಿಸಿದರು.

ದೊಡ್ಡಬಳ್ಳಾಪುರದಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಣ ಸಂಸ್ಥೆ ಸರ್ವಸಜ್ಜಿತವಾಗಿ ಬೆಳೆಯುವಲ್ಲಿ ಕೊಂಡಜ್ಜಿಯವರ ಸೇವೆ ಅನುಪಮ. ಇಂಥದೇ ಅನುಕೂಲ ಉತ್ತರ ಕರ್ನಾಟಕದಲ್ಲೂ ಬೇಕು ಎಂದುಕೊಂಡು ತಮ್ಮ ಹುಟ್ಟೂರು ಕೊಂಡಜ್ಜಿಯನ್ನು ಆಯ್ಕೆ ಮಾಡಿದರು. ದಾನಿಗಳ ನೆರವಿನಿಂದ ಅಲ್ಲಿನ ಕೆರೆಯ ಸುತ್ತ ಅವರು ಬೆಳೆಸಿದ ಈ ಸುಸಜ್ಜಿತ ತರಬೇತಿ ಕೇಂದ್ರಕ್ಕೆ ಅವರದೇ ಹೆಸರಿಡಲಾಗಿದೆ. ಅವರ ಬದುಕು ಸೇವೆಗಳನ್ನು ಕುರಿತ ಅನೇಕ ಕೃತಿಗಳು ಬಂದಿವೆ.

ಮರದ ತುದಿ ಎಷ್ಟಿದೆಯೊ ಅಷ್ಟೇ ಎತ್ತರ ಬೆಳೆದು
ನೆಲದ ಮೇಲೆಯೇ ನಿಂತು ತುದಿ ಮುಟ್ಟಿದಿರಿ ನೀವು!
ನಿಮ್ಮ ರೀತಿಯೇ ಬೇರೆ
ಗೆದ್ದ ಹಿಗ್ಗಿಲ್ಲ; ಸೋತ ಸಂಕಟವಿಲ್ಲ!

ಎಂಬ ಗೊ.ರು. ಚನ್ನಬಸಪ್ಪ ಅವರ ಆತ್ಮೀಯ ಅಭಿನಂದನೆ.

‘ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ಯಾರೂ ಎಲ್ಲರನ್ನೂ ಮೆಚ್ಚಿಸಲಾರರು. ಆದರೆ ಶ್ರೀ ಬಸಪ್ಪನವರ ವೈಯಕ್ತಿಕ ಜೀವನ ಶುದ್ಧವಾದದ್ದು, ಮೆಚ್ಚತಕ್ಕದ್ದು, ಎಲ್ಲರೂ ಒಪ್ಪತಕ್ಕದ್ದು’ ಎನ್ನುವ ದಿ. ಎಸ್. ನಿಜಲಿಂಗಪ್ಪನವರ ಮಾತು ಕೊಂಡಜ್ಜಿ ಬಸಪ್ಪನವರ ಬದುಕನ್ನೆ ಅಕ್ಷರಗಳಲ್ಲಿ ಕಟ್ಟಿಕೊಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT