ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಗೆದ್ದ ಆರ್‌ಸಿಬಿ

ಮಿಷೆಲ್‌ ಮೊನಚಿನ ದಾಳಿ, ಅಬ್ಬರಿಸಿದ ಡಿವಿಲಿಯರ್ಸ್‌,ರಾಯಲ್ಸ್‌ಗೆ ನಿರಾಸೆ
Last Updated 25 ಏಪ್ರಿಲ್ 2015, 8:24 IST
ಅಕ್ಷರ ಗಾತ್ರ

ಅಹಮದಾಬಾದ್: ಆರ್‌ಸಿಬಿ ತಂಡದ ಅಭಿಮಾನಿಗಳು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಸತತ ಮೂರು ಸೋಲುಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರು ತಂಡ ರಾಜಸ್ತಾನ ರಾಯಲ್ಸ್‌ ಎದುರು 9 ವಿಕೆಟ್‌ಗಳ ಗೆಲುವು ಪಡೆಯಿತು.

ಮೋಟೆರಾದ ಸರ್ದಾರ್‌ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ  ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ರಾಜಸ್ತಾನ ರಾಯಲ್ಸ್‌ 20 ಓವರುಗಳಲ್ಲಿ 9 ವಿಕೆಟ್‌ ಕಳೆದುಕೊಂಡು 130 ರನ್‌ ಗಳಿಸಿತು. ಸಾಧಾರಣ ಗುರಿಯನ್ನು ಕೊಹ್ಲಿ ಪಡೆ  16.1 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಐಪಿಎಲ್‌ ಎಂಟನೇ ಆವೃತ್ತಿಯಲ್ಲಿ ಆರ್‌ಸಿಬಿ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಜಯ ಪಡೆದಿತ್ತು. ನಂತರದ ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌, ಮುಂಬೈ ಇಂಡಿಯನ್ಸ್‌ ಹಾಗೂ ಸೂಪರ್‌ ಕಿಂಗ್ಸ್‌ ಎದುರು ಪರಾಭವಗೊಂಡಿತ್ತು. ಈಗ ಜಯದ ಹಾದಿಗೆ ಮರಳಿದೆ.

ದಿಟ್ಟ ಹೋರಾಟ: ಅಲ್ಪ ಗುರಿಯ ಎದುರು ಆರ್‌ಸಿಬಿ ಆರಂಭದಿಂದಲೇ ಅಬ್ಬರಿಸಿತು. ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಕ್ರಿಸ್‌ ಗೇಲ್‌  ಇಲ್ಲಿ 20 ರನ್ ಗಳಿಸಿ ಔಟಾದರು. ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ನಂತರ ಕೊಹ್ಲಿ ಮತ್ತು ಡಿವಿಲಿಯರ್ಸ್‌ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ರಾಯಲ್ಸ್‌ ಬೌಲರ್‌ಗಳ ಚಳಿ ಬಿಡಿಸಿದರು.

46 ಎಸೆತಗಳನ್ನು ಎದುರಿಸಿದ ಕೊಹ್ಲಿ  ಔಟಾಗದೆ 62 ರನ್‌ ಗಳಿಸಿದರು. ಇದರಲ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸೇರಿವೆ. ಡಿವಿಲಿಯರ್ಸ್‌ 34 ಎಸೆತಗಳಲ್ಲಿ 47 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 98 ರನ್‌ ಕಲೆ ಹಾಕಿ ಗೆಲುವು ತಂದುಕೊಟ್ಟರು. ಆರ್‌ಸಿಬಿ ತಂಡ ಜಯ ಪಡೆಯಲು ಬೌಲಿಂಗ್‌ನಲ್ಲಿ ತೋರಿದ ಚುರುಕುತನವೂ ಕಾರಣವಾಯಿತು.

ನಾಲ್ಕು ಓವರ್‌ ಬೌಲಿಂಗ್‌ ಮಾಡಿದ ವೇಗಿ ಮಿಷೆಲ್ ಸ್ಟಾರ್ಕ್‌ 22 ರನ್‌ಗಳನ್ನಷ್ಟೇ ನೀಡಿ ಮೂರು ವಿಕೆಟ್‌ ಉರುಳಿಸಿದರು. ಸ್ಟಾರ್ಕ್‌ ಪ್ರಮುಖ ವಿಕೆಟ್‌ಗಳನ್ನು ಪಡೆದ ಕಾರಣ ಆರ್‌ಸಿಬಿ ಗೆಲುವು ಸುಲಭವಾಯಿತು. ಹರ್ಷಲ್‌ ಪಟೇಲ್‌ ಮತ್ತು ಯಜುವೇಂದ್ರ ಚಾಹಲ್‌ ತಲಾ ಎರಡು ವಿಕೆಟ್‌ ಪಡೆದರು.

ಕುಸಿದ ರಾಯಲ್ಸ್‌: ಈ ಸಲದ ಐಪಿಎಲ್‌ನ ಮೊದಲ ಐದೂ ಪಂದ್ಯ ಗಳಲ್ಲಿ ಗೆಲುವು ಪಡೆದಿರುವ ರಾಯಲ್ಸ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಹಿಂದಿನ ಪಂದ್ಯದಲ್ಲಿ ಅಬ್ಬರಿಸಿದ್ದ ಅಜಿಂಕ್ಯ ರಹಾನೆ (18), ಶೇನ್‌ ವಾಟ್ಸನ್‌ (26) ಮತ್ತು ಕರುಣ್‌ ನಾಯರ್‌ (16) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. 28 ಎಸೆತಗಳನ್ನು ಎದುರಿಸಿದ ಸ್ಟೀವನ್‌ ಸ್ಮಿತ್‌ 31 ರನ್‌ ಗಳಿಸಿದರು. ಇದು ರಾಯಲ್ಸ್‌ ಬ್ಯಾಟ್ಸ್‌ಮನ್‌ ಗಳಿಸಿದ ಗರಿಷ್ಠ ಸ್ಕೋರ್‌ ಎನಿಸಿತು.

ಸ್ಟಾರ್ಕ್‌ ಮತ್ತು ಹರ್ಷಲ್‌ ಪಟೇಲ್‌ ಆರಂಭದಲ್ಲಿ ಚುರುಕಿನ ದಾಳಿ ನಡೆಸಿದ್ದರಿಂದ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಈ ತಂಡ ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ 73 ರನ್‌ ಗಳಿಸಿತ್ತು. ಕೊನೆಯ 60 ಎಸೆತಗಳಲ್ಲಿ ಬಂದಿದ್ದು 57 ರನ್‌ ಮಾತ್ರ. ಆರ್‌ಸಿಬಿ ತಂಡದ ಬೌಲಿಂಗ್‌ ಎಷ್ಟೊಂದು ಚುರುಕಾಗಿತ್ತು ಎನ್ನುವುದಕ್ಕೆ ಇದೇ ಸಾಕ್ಷಿ.

ಗಾಯದ ಸಮಸ್ಯೆಯಿಂದ ಬಳಲಿದ್ದ ಸ್ಟಾರ್ಕ್‌ ಈ ಸಲದ ಐಪಿಎಲ್‌ನ ಆರಂಭದ ಪಂದ್ಯಗಳಲ್ಲಿ ಆಡಿರಲಿಲ್ಲ. ‘ಸ್ಟಾರ್ಕ್‌ ಬಂದರೆ ನಮ್ಮ ತಂಡದ ಬೌಲಿಂಗ್‌ ಶಕ್ತಿ ಹೆಚ್ಚಾಗಲಿದೆ’ ಎಂದು ಕೊಹ್ಲಿ ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದ ಬಳಿಕ ಹೇಳಿದ್ದರು. ಅವರ ಮಾತು ಈಗ ನಿಜವಾಗಿದೆ.

ಸ್ಕೋರ್ ಕಾರ್ಡ್
ರಾಜಸ್ತಾನ ರಾಯಲ್ಸ್‌ 9ಕ್ಕೆ 130 (20 ಓವರ್‌)

ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಹರ್ಷಲ್ ಪಟೇಲ್  18
ಶೇನ್ ವಾಟ್ಸನ್ ಸಿ ಮಿಷೆಲ್ ಸ್ಟಾರ್ಕ್ ಬಿ ಯಜುವೆಂದ್ರ ಚಾಹಲ್  26
ಸ್ಟೀವನ್ ಸ್ಮಿತ್ ಸಿ ದಿನೇಶ್ ಕಾರ್ತಿಕ್ ಬಿ ಮಿಷೆಲ್ ಸ್ಟಾರ್ಕ್  31
ಕರುಣ್ ನಾಯರ್ ರನ್‌ಔಟ್ (ಹರ್ಷಲ್ ಪಟೇಲ್/ಕೊಹ್ಲಿ)  16
ದೀಪಕ್ ಹೂಡಾ ಬಿ ಇಕ್ಬಾಲ್ ಅಬ್ದುಲ್ಲಾ  01
ಸಂಜು ಸ್ಯಾಮ್ಸನ್ ಬಿ ಯಜುವೇಂದ್ರ ಚಾಹಲ್  04
ಸ್ಟುವರ್ಟ್ ಬಿನ್ನಿ ಸಿ ವೈಸ್ ಬಿ ಮಿಷೆಲ್ ಸ್ಟಾರ್ಕ್  20
ಜೇಮ್ಸ್ ಫಾಕ್ನರ್ ಸಿ ದಿನೇಶ್ ಕಾರ್ತಿಕ್ ಬಿ ಹರ್ಷಲ್ ಪಟೇಲ್  04
ಕ್ರಿಸ್ ಮೋರಿಸ್  ಔಟಾಗದೆ  03
ಧವಳ್ ಕುಲಕರ್ಣಿ ಬಿ ಮಿಷೆಲ್ ಸ್ಟಾರ್ಕ್  01
ಪ್ರವೀಣ್ ತಾಂಬೆ ಔಟಾಗದೆ  02
ಇತರೆ: ( ವೈಡ್‌–3, ಲೆಗ್‌ ಬೈ–1)  04
ವಿಕೆಟ್ ಪತನ:  1-36 (ರಹಾನೆ 4.6),  2–46 (ವಾಟ್ಸನ್ 5.4), 3–72 (ನಾಯರ್ 9.5), 4–84 (ಹೂಡಾ 11.2), 5–89 (ಸ್ಯಾಮ್ಸನ್ 12.4), 6–119 (ಸ್ಮಿತ್ 17.1), 7–121 (ಬಿನ್ನಿ 17.5), 8–126 (ಫಾಕ್ನರ್ 18.5),  9–127 (ಧವಳ್ 19.1)
ಬೌಲಿಂಗ್‌: ಮಿಷೆಲ್ ಸ್ಟಾರ್ಕ್ 4–0–22–3 (ವೈಡ್ 2), ಇಕ್ಬಾಲ್ ಅಬ್ದುಲ್ಲಾ 4–0–28–1 (ವೈಡ್ 1), ಹರ್ಷಲ್ ಪಟೇಲ್ 4–0–23–2, ಯಜುವೇಂದ್ರ ಚಾಹಲ್ 3.1–0–25–2, ಡೇವಿಡ್ ವೈಸ್ 4–0–27–0, ವಿರಾಟ್  ಕೊಹ್ಲಿ 0.5–0–4–0

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 1ಕ್ಕೆ 134 (16.1 ಓವರ್‌)

ಕ್ರಿಸ್‌ ಗೇಲ್‌ ಸಿ ಸಂಜು ಸ್ಯಾಮ್ಸನ್  ಬಿ ಶೇನ್‌ ವಾಟ್ಸನ್‌  20
ವಿರಾಟ್‌ ಕೊಹ್ಲಿ ಔಟಾಗದೆ  62
ಎಬಿ ಡಿವಿಲಿಯರ್ಸ್‌ ಔಟಾಗದೆ  47
ಇತರೆ: (ಲೆಗ್‌ ಬೈ–5)  05
ವಿಕೆಟ್ ಪತನ:  1–36 (ಗೇಲ್‌; 4.3)
ಬೌಲಿಂಗ್‌: ಕ್ರಿಸ್‌ ಮಾರಿಸ್‌ 3–0–23–0, ಧವಳ್‌ ಕುಲಕರ್ಣಿ 4–0–26–0, ಶೇನ್‌ ವಾಟ್ಸನ್‌ 3–0–23–1, ಜೇಮ್ಸ್‌ ಫಾಕ್ನರ್‌ 2–0–17–0, ಪ್ರವೀಣ್‌ ತಾಂಬೆ 4–0–36–0, ದೀಪಕ್‌ ಹೂಡಾ 0.1–0–4–0.
ಫಲಿತಾಂಶ: ಆರ್‌ಸಿಬಿ ತಂಡಕ್ಕೆ 9 ವಿಕೆಟ್‌ ಗೆಲುವು.
ಪಂದ್ಯ ಶ್ರೇಷ್ಠ: ಮಿಷೆಲ್‌ ಸ್ಟಾರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT