ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೇ ಬೆಂಚಿನ ಹುಡುಗರು...

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ಶಾಲಾ ಕಾಲೇಜು ದಿನಗಳಲ್ಲಿ ಕೊನೆಯ ಬೆಂಚಿನ ಹುಡುಗರು ಎಂದರೆ ಅಸಡ್ಡೆ ತೋರುವವರೇ ಹೆಚ್ಚು. ಅವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ ಎಂಬ ಪ್ರತೀತಿ ಬೇರೆ! ಆದರೆ ಕೊನೆಯ ಬೆಂಚಿನಲ್ಲಿ ಕುಳಿತು, ಪಾಠ ಕೇಳಿ ಅಸಾಮಾನ್ಯ ಸಾಧನೆ ಮಾಡಿದವರು ನಮ್ಮ ನಡುವೆ ಇದ್ದಾರೆ. ಅಂತಹ ಸಾಧಕರ ಪರಿಚಯ ಈ ಬಾರಿ...

ಅಜಯ್ ತಿವಾರಿ
ಮುಂಬೈ ಮೂಲದ ಅಜಯ್ ತಿವಾರಿ ಅವರ ಪುಸ್ತಕ ಪ್ರೇಮದ ಕಥೆ ಇದು. ಬಡತನ ಅಜಯ್ ಅವರನ್ನು ಪುಸ್ತಕ ಓದುವಂತೆ ಪ್ರೇರೇಪಿಸಿತು. ಇವರು ಶಾಲಾ-ಕಾಲೇಜು ದಿನಗಳಲ್ಲಿ ಗೆಳೆಯರ ಜತೆ ಸೇರಿ ಸಿನಿಮಾಗೂ ಹೋಗುತ್ತಿರಲಿಲ್ಲ, ಹುಟ್ಟುಹಬ್ಬದ ಪಾರ್ಟಿಗಳಿಗೂ ಹೋಗುತ್ತಿರಲಿಲ್ಲ. ಯಾಕೆಂದರೆ ಅವರ ಬಳಿ ಹಣ ಇರುತ್ತಿರಲಿಲ್ಲ, ಹಾಗಾಗಿ ಮನೆಯ ಮೂಲೆ ಹಿಡಿದು ಪುಸ್ತಕ ಓದುತ್ತಿದ್ದರು. ಮುಂದೆ ಪುಸ್ತಕ ಓದುವ ಗೀಳು ಮುಂಬೈನ ಪರ್ಲೆಯಲ್ಲಿ ಗ್ರಂಥಾಲಯ ಸ್ಥಾಪಿಸುವಂತೆ ಮಾಡಿತು.

ಅಜಯ್ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡವರು. ತಾಯಿ, ಮೂವರು ತಮ್ಮಂದಿರು, ಇಬ್ಬರು ತಂಗಿಯರನ್ನು ಸಾಕುವ ಜವಾಬ್ದಾರಿ ಅಜಯ್ ಹೆಗಲಿಗೆ ಬಿತ್ತು. ಪಾರ್ಟ್ ಟೈಂ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದುವರೆಸಿದರು. ಇವರು ಕೂಡ ಕೊನೆಯ ಬೆಂಚಿನ ವಿದ್ಯಾರ್ಥಿಯೇ! ಬಿ.ಕಾಂ ಪದವಿ ಮುಗಿದ ಬಳಿಕ ಮನೆಯಲ್ಲೇ ಗ್ರಂಥಾಲಯ ಆರಂಭಿಸಿದರು.

ಗ್ರಾಹಕರು ಕೇಳಿದ ಪುಸ್ತಕಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದರು. ಕೆಲ ದಿನಗಳ ಬಳಿಕ ಈ ಗ್ರಂಥಾಲಯ ನಡೆಸುವುದರಿಂದ ಜೀವನ ನಡೆಯುವುದಿಲ್ಲ ಎಂಬುದು ಅಜಯ್‌ಗೆ ಗೊತ್ತಾಯಿತು. ಬಳಿಕ ಖಾಸಗಿ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡರು. ಆದರೆ ಅವರು ಗ್ರಂಥಾಲಯವನ್ನು ಮುಚ್ಚಲಿಲ್ಲ!

ಹಗಲು ಕೆಲಸಕ್ಕೆ ಹೋಗುವುದು ರಾತ್ರಿ ಗ್ರಂಥಾಲಯ ನಡೆಸುವ ಕಾಯಕವನ್ನು ಮುಂದುವರೆಸಿದರು. ಆ ಕಂಪೆನಿಯಲ್ಲಿ ಒಂದು ವರ್ಷ ಕೆಲಸ ಮಾಡಿದರಷ್ಟೇ! 2014 ರಲ್ಲಿ ಟ್ಯಾಕ್ಸಿಗಳನ್ನು ಖರೀದಿಸಿದರು. ಈ ವ್ಯವಹಾರದಲ್ಲಿ ಬಂದ ಲಾಭವನ್ನು ಗ್ರಂಥಾಲಯದ ಅಭಿವೃದ್ಧಿಗೆ ವಿನಿಯೋಗಿಸಿದರು.

ಇಂದು ಟ್ಯಾಕ್ಸಿ ವ್ಯವಹಾರದ ಜತೆಗೆ ಗ್ರಂಥಾಲಯ ನಡೆಸುತ್ತಿದ್ದಾರೆ. ಮರಾಠಿ, ಇಂಗ್ಲಿಷ್ ಪುಸ್ತಕಗಳು ಹಾಗೂ ಸಿನಿಮಾ ಸಿ.ಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ದೇಶದ ಸಣ್ಣ ಸಣ್ಣ ನಗರಗಳಲ್ಲೂ ಇಂತಹ ಗ್ರಂಥಾಲಯಗಳನ್ನು ಸ್ಥಾಪಿಸಬೇಕು ಎಂಬುದು ಅಜಯ್ ಗುರಿ.

ಈ ಗ್ರಂಥಾಲಯಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಚಂದಾದಾರರಾಗಿದ್ದಾರೆ. ಗ್ರಂಥಾಲಯ ಕೂಡ ನನ್ನ ಟ್ಯಾಕ್ಸಿಗಳಂತೆ ಉತ್ತಮ ಲಾಭ ತಂದುಕೊಡುತ್ತಿದೆ ಎನ್ನುತ್ತಾರೆ ಅಜಯ್ ತಿವಾರಿ.​

***
ಮುನಾಫ್ ಮತ್ತು ನಫೀಸಾ ಕಪಾಡಿಯಾ

ಮುಂಬೈನ ತಾಯಿ ಮಗನ ಯಶಸ್ವಿ ಸಾಧನೆಯ ಕಥೆ ಇದು. ಒಮ್ಮೆ ಮುನಾಫ್ ಗೆಳೆಯರಿಗಾಗಿ ಮನೆಯಲ್ಲಿ ಸಮೋಸಾ ತಯಾರಿಸಲು ತಾಯಿಗೆ ಹೇಳಿದ್ದರು. ತಾಯಿ ನಫೀಸಾ 50 ಸಮೋಸಾಗಳನ್ನು ಸಿದ್ಧಪಡಿಸಿ ಮಗನ ಗೆಳೆಯರಿಗೆ ಪ್ರೀತಿಯಿಂದ ಉಣಬಡಿಸಿದ್ದರು. ಈ ಒಂದು ಚಿಕ್ಕ ಪಾರ್ಟಿ ‘ದಿ ಬೋರಿ ಕಿಚನ್’ (ಟಿಬಿಕೆ) ಕಂಪೆನಿ ಸ್ಥಾಪನೆಗೆ ನಾಂದಿ ಹಾಡಿತು.

ಮಹಾನಗರಗಳ ಗಲ್ಲಿ ಗಲ್ಲಿಗಳಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಹೋಟೆಲ್ ಉದ್ಯಮ ನಡೆಸುವ ಆಸಕ್ತಿ ಇದ್ದರೂ ಮುನಾಫ್ ಕೈಯಲ್ಲಿ ಸಾಕಷ್ಟು ಹಣವಿರಲಿಲ್ಲ. ಸ್ಥಿರಾಸ್ತಿ ಇಲ್ಲದಿರುವುದರಿಂದ ಯಾವ ಬ್ಯಾಂಕ್‌ನವರು ಕೂಡ ಸಾಲ ಕೊಡುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ತಿಳಿದಿತ್ತು.

ಬಂಡವಾಳವಿಲ್ಲದಿದ್ದರೂ ಬುದ್ಧಿಮತ್ತೆಯಿಂದ ಹಣ ಸಂಪಾದನೆ ಮಾಡಬಹುದು ಎಂಬುದು ಮುನಾಫ್‌ಗೆ ಗೊತ್ತಿತ್ತು. ಇಂದು ಟಿಬಿಕೆ ಮೂಲಕ ತಿಂಗಳಿಗೆ 20 ಲಕ್ಷಕ್ಕೂ ಹೆಚ್ಚು ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ, ಅದೂ ಶೂನ್ಯ ಬಂಡವಾಳದಲ್ಲಿ ಎಂಬುದು ವಿಶೇಷ.

ಗೆಳೆಯರ ಪಾರ್ಟಿ ಬಳಿಕ ಮುನಾಫ್ ಆಲೋಚನೆ ಮಾಡಿದ್ದು ಮನೆಯ ವಾತಾವರಣದಲ್ಲಿ ಗ್ರಾಹಕರಿಗೆ ಊಟ ಬಡಿಸಬೇಕು ಎಂದು. ಈ ಬಗ್ಗೆ ತಾಯಿ ಜೊತೆ ಚರ್ಚೆ ಮಾಡಿದರು. ಅವರು ಕೂಡ ಇದಕ್ಕೆ ಸಾಥ್ ಕೊಟ್ಟರು.

ಮನೆಯಲ್ಲೇ 15 ಜನ ಕುಳಿತುಕೊಂಡು ಊಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದರು. ಫೇಸ್‌ಬುಕ್‌ನಲ್ಲಿ ಟಿಬಿಕೆ ಪೇಜ್ ಆರಂಭಿಸಿ ಕೌಟುಂಬಿಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದರು. ಗೆಳೆಯರು ಲಿಂಕ್ ಮೂಲಕವು ಗ್ರಾಹಕರನ್ನು ಸೆಳೆದರು.

ದಿನಕ್ಕೆ 30 ಜನರಿಗೆ ಮಾತ್ರ ಮನೆಯ ವಾತಾವರಣದಲ್ಲಿ ಊಟ ಬಡಿಸಲಾಗುತ್ತದೆ. ಒಂದು ಊಟಕ್ಕೆ 2500 ರೂಪಾಯಿ. ಈ ಟಿಬಿಕೆಯಲ್ಲಿ ಊಟ ಮಾಡಬಯಸುವ ಗ್ರಾಹಕರು ವಾರದ ಮೊದಲೇ ಮೆನುವಿನೊಂದಿಗೆ ಬುಕ್ ಮಾಡಬೇಕು. ಈ ಪೈಪೋಟಿ ಕಾಲದಲ್ಲಿ ವಿಭಿನ್ನವಾಗಿ ಆಲೋಚಿಸುವ ಮೂಲಕ ಯಶಸ್ಸನ್ನು ಸುಲಭವಾಗಿ ಸಂಪಾದಿಸಬಹುದು ಎಂಬುದನ್ನು ಮುನಾಫ್ ತೋರಿಸಿಕೊಟ್ಟಿದ್ದಾರೆ.

***
ಅಜಯ್ ಮತ್ತು ಭೂಪೇಂದರ್

ಅವರು ಹತ್ತನೇ ತರಗತಿಯವರೆಗೂ ಕಡೆಯ ಬೆಂಚಿನ ವಿದ್ಯಾರ್ಥಿಗಳು! ಅಂತೂ ಇಂತೂ 9ನೇ ತರಗತಿ ದಾಟಿ ಹತ್ತರಲ್ಲಿ ಬಂದು ಕೂತಿದ್ದರು! ಸುಮಾರಾಗಿ ಓದುತ್ತಿದ್ದ ಈ ಇಬ್ಬರು ಗೆಳೆಯರು ತರಲೆ ಮಾಡುವುದರಲ್ಲಿ ಎತ್ತಿದ ಕೈ.

ಇವರ ಶೈಕ್ಷಣಿಕ ಪ್ರಗತಿ ಕಂಡು ಮನೆಯವರು ನೀವು ಉದ್ಧಾರವಾಗಲ್ಲ ಎಂದು ಕೈ ಚೆಲ್ಲಿದ್ದರು! ಇತ್ತ ಶಿಕ್ಷಕರು ಕೂಡ ನೀವು ಪಾಸಾಗಲ್ಲ ಎಂದು ಭವಿಷ್ಯ ನುಡಿದಿದ್ದರು! ಪೋಷಕರು ಮತ್ತು ಶಿಕ್ಷಕರ ಬಗ್ಗೆ ತಲೆ ಕಡಿಸಿಕೊಳ್ಳದ ಇವರು, ಏನಾದರೂ ಸಾಧಿಸಬೇಕು, ನಮ್ಮನ್ನು ನಿಂದಿಸಿದವರ ಮುಂದೆ ತಲೆ ಎತ್ತಿ ನಿಲ್ಲಬೇಕು ಎಂದು ನಿಶ್ಚಯಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆದರು. ಕೇವಲ ಮೂರೇ ವರ್ಷಗಳಲ್ಲಿ ಸ್ಟಾರ್ಟ್‌ಅಪ್ ಆರಂಭಿಸಿ ಸೈ ಎನಿಸಿಕೊಂಡ ಆ ಯುವಕರೇ ಅಜಯ್ ಠಾಕೂರ್ ಮತ್ತು ಭೂಪೇಂದರ್ ನಯ್ಯರ್.

ಹಿಮಾಚಲ ಪ್ರದೇಶದ ಕುಲ್ಲು ಎಂಬ ಸಣ್ಣ ಪಟ್ಟಣದಲ್ಲಿ 2011ರಲ್ಲಿ ನಡೆದ ಕಥೆ ಇದು. ಆಗ ಅಜಯ್ ಮತ್ತು ಭೂಪೇಂದರ್ ಇಲ್ಲಿನ ಬ್ರಹ್ಮಶ್ರೀ ಮಿಷನ್ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದರು. ಹೇಗೂ ಅದರಲ್ಲೂ ಪಾಸಾಗಿ ಪಿಯುಸಿಗೆ ಸೇರಿಕೊಂಡರು.

ಮುಂದೆ ಚಂಡೀಗಢಕ್ಕೆ ಹೋಗಿ ಎಚ್‌ಸಿಎಲ್ ಕಂಪೆನಿ ನಡೆಸಿಕೊಡುತ್ತಿದ್ದ ವೆಬ್ ಡಿಸೈನಿಂಗ್ ಕೋರ್ಸ್‌ಗೆ ಸೇರಿದರು. ಆಗ ಅವರಿಗೆ 19 ವರ್ಷ. ಕೋರ್ಸ್‌ಗೆ ಸೇರಿದ ನಾಲ್ಕು ತಿಂಗಳಲ್ಲೇ ಬ್ಲಾಗ್ ಮಾದರಿಯ ಬೇಮ್‌ಸ್ಲಗ್ ಎಂಬ ವೆಬ್‌ಸೈಟ್ ವಿನ್ಯಾಸ ಮಾಡಿದರು. ಇದಕ್ಕೆ ಬೇಕಾದ ಪೂರಕ ಬರಹಗಳು, ಚಿತ್ರಗಳು ಮತ್ತು ವಿಡಿಯೊಗಳನ್ನು ಸಂಗ್ರಹಿಸಿದರು. ಕೆಲವನ್ನು ಹಣ ಕೊಟ್ಟು ಖರೀದಿಸಿದರು. ಓದುಗರಿಗೂ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆಯನ್ನು ಈ ವೆಬ್‌ಸೈಟ್‌ನಲ್ಲಿ ಕಲ್ಪಿಸಿದರು.

ನೂರು ಜನ ಬಳಕೆದಾರರಿಂದ ಆರಂಭವಾದ ಈ ಬೇಮ್‌ಸ್ಲಗ್ ಇಂದು 76 ಸಾವಿರ ಬಳಕೆದಾರರನ್ನು ಹೊಂದಿದೆ. ಭಾರತ ಮಾತ್ರವಲ್ಲದೇ ವಿದೇಶಿಯರು ಕೂಡ ಈ ವೆಬ್‌ಸೈಟ್ ಫಾಲೋ ಮಾಡುತ್ತಿದ್ದಾರೆ. ಮಾಸಿಕ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ ಎನ್ನುತ್ತಾರೆ ಅಜಯ್. ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಇತರರಿಗೂ ಮಾದರಿಯಾಗಿರುವ ಈ ಯುವಕರ ಸಾಧನೆ ಅನನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT