ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳ ಸ್ಥಳಾಂತರಕ್ಕೆ ವಿರೋಧ

ತಿಮ್ಮಸಂದ್ರ ಗ್ರಾಮಸ್ಥರಿಂದ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ
Last Updated 25 ಜುಲೈ 2016, 20:03 IST
ಅಕ್ಷರ ಗಾತ್ರ

ಬೆಂಗಳೂರು: ಆಶ್ರಯ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಲು ಮೀಸಲಿಟ್ಟಿರುವ ಜಾಗಕ್ಕೆ ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ರಂಗನಾಥ್‌ ಅವರಿಗೆ ಸ್ಥಳೀಯ ನಿವಾಸಿಗಳು ಘೇರಾವ್‌ ಹಾಕಿ ಪ್ರತಿಭಟಿಸಿದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ‘ಆಶ್ರಯ ಯೋಜನೆಯಡಿ ಮೂರೂವರೆ ಸಾವಿರ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್‌ 19ರಲ್ಲಿ ಐದು ಎಕರೆ ಜಾಗವನ್ನು ಮೀಸಲಿರಿಸಲಾಗಿದೆ. ಆದರೆ, ಈ ಕ್ಷೇತ್ರಕ್ಕೆ ಸಂಬಂಧಪಡದ ಕೊಳೆಗೇರಿ ನಿವಾಸಿಗಳನ್ನು ಇಲ್ಲಿಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಅನ್ಯಾಯವಾಗಲಿದೆ’ ಎಂದು ದೂರಿದರು.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾವಿರಾರು ಬಡವರು ಗುಡಿಸಲು, ಹೆಂಚಿನ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ನಿವೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಅಶೋಕನ್‌ ಮಾತನಾಡಿ, ‘ಈ ಜಾಗವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮಂಜೂರು ಮಾಡಿದ್ದು, ಈ ಆದೇಶವನ್ನು ಕೂಡಲೇ ರದ್ದುಪಡಿಸಬೇಕು. 

ಈ ಬಗ್ಗೆ ಜುಲೈ 29ರಂದು ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ಗ್ರಾಮದ ನಿವಾಸಿ ಅನಿತಮ್ಮ ಅವರು, ‘ವಿಷ ಕುಡಿದು ಪ್ರಾಣ ಬಿಡುತ್ತೇವೆ ವಿನಾ ಈ ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರ ಅಹವಾಲು ಆಲಿಸಿದ ಉಪವಿಭಾಗಾಧಿಕಾರಿ ರಂಗನಾಥ್‌ ಅವರು, ‘ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚೆ ಮಾಡುತ್ತೇನೆ. ನಿಮಗೆ ಅನ್ಯಾಯವಾಗದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಭರವಸೆ ನೀಡಿದರು.

ಮುಖ್ಯಾಂಶಗಳು
* ತಿಮ್ಮಸಂದ್ರ ಗ್ರಾಮಸ್ಥರ ಪ್ರತಿಭಟನೆ
* ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ರಂಗನಾಥ್‌
* ‘ಆಶ್ರಯ ಯೋಜನೆ’ಯಡಿ ನಿವೇಶನ ಹಂಚಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT