ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ಮನೆಗಳು ಕಳಪೆ: ಆರೋಪ

ಉತ್ತರಹಳ್ಳಿ ವಾರ್ಡ್‌ ಭುವ­ನೇಶ್ವರಿ­ನಗರದಲ್ಲಿ ದುಸ್ಥಿತಿ
Last Updated 24 ಮೇ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರಹಳ್ಳಿ ವಾರ್ಡ್‌ನ  ಭುವ­ನೇಶ್ವರಿ­ನಗರ ಕೊಳಚೆ ಪ್ರದೇಶ­ದ ನಿವಾಸಿಗಳಾಗಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಿಸಿರುವ  ಮನೆಗಳು ಅತ್ಯಂತ ಕಳಪೆಯಿಂದ ಕೂಡಿದ್ದು,  ಶೌಚಾಲಯ, ಕಿಟಕಿ, ಬಾಗಿಲು, ನೀರು, ವಿದ್ಯುತ್‌ ಸಂಪರ್ಕ ಇಲ್ಲದೆ ಜನರು  ನರಕ ಯಾತನೆ ಅನುಭವಿಸುವಂತಾಗಿದೆ.

ಸರ್ವೆ ನಂ 64ರಲ್ಲಿನ 7 ಎಕರೆ 12 ಗುಂಟೆಯಲ್ಲಿ  480 ಕಡು ಬಡವರು ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಅದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದ ಜಾಗ­ವಾಗಿತ್ತು. ಅಲ್ಲಿ ವಾಸಿಸುತ್ತಿದ ನಿವೇಶನ ರಹಿತರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರವೇ, ಬಿಡಿಎ ಒಡೆತನದಲ್ಲಿದ್ದ ಈ ಜಮೀನನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿತ್ತು.

ವಸತಿ ನಿರ್ಮಿಸಿಕೊಡುವ ಉದ್ದೇಶ­ದಿಂದ 2010ರಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಬಹು ಅಂತಸ್ತಿನ 880 ಮನೆಗಳನ್ನು ನಿರ್ಮಿಸಲು ಅನುಮತಿ ನೀಡಿ, 2013ರಲ್ಲಿ ₹ 29.68 ಕೋಟಿ ಬಿಡುಗಡೆ ಮಾಡಿತು.  2014ರಲ್ಲಿ  ಯೋಜನಾ ವೆಚ್ಚವನ್ನು ₹ 34.23 ಕೋಟಿಗೆ ಹೆಚ್ಚಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅದರಂತೆ 880 ಮನೆಗಳು  ನಿರ್ಮಾಣವಾದವು. ಆದರೆ, ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ಗುತ್ತಿಗೆದಾರರು ವಿಫಲವಾಗಿದ್ದಾರೆ ಎಂಬ ಆರೋಪ ಇದೆ.

ಕೊಳೆಗೇರಿ ಪ್ರದೇಶದಲ್ಲಿ ಇದ್ದ 480 ಕುಟುಂಬಗಳಲ್ಲಿ ಈಗಾಗಲೇ 120 ಕುಟುಂಬದವರು ಇಲ್ಲಿನ ವಸತಿ ಕಟ್ಟಡಗಳಲ್ಲಿ ಬಂದು ನೆಲೆಸಿದ್ದಾರೆ.
ಇನ್ನು ಕೆಲ ಮನೆಗಳ ಬಾಗಿಲು, ಹೊಸಲು ಕಿತ್ತು ಹೋಗಿವೆ. ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ. ಮಳೆಬಂದಾಗ ನೀರು ಕೆರೆಯಂತೆ ಶೇಖರಣೆಯಾಗುತ್ತದೆ. ಗಾಳಿ ಬಂದರೆ ಭಯದ ವಾತಾವರಣದಲ್ಲಿ ಜೀವನವನ್ನು ಸಾಗಿಸಬೇಕಾಗಿದೆ ಎಂದು ನಿವಾಸಿಗಳು ದೂರುತ್ತಾರೆ.

ಮನೆಗಳ ಹಂಚಿಕೆ ಸಂಬಂಧ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಬೇರೆ ಭಾಗದವರ ಹೆಸರು ಸೇರ್ಪಡೆಯಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.  ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ  ಸ್ಥಳೀಯ ಬಿಬಿಎಂಪಿ ಸದಸ್ಯ ಹನುಮಂತಯ್ಯ ಅವರು, ‘  ಭುವನೇಶ್ವರಿ­ನಗರ ಕೊಳಗೇರಿಯ ಜನರಿಗೆ ಮತ್ತು ಸುಬ್ರಹ್ಮಣ್ಯಪುರ ಕೆರೆಯ ದಡದಲ್ಲಿ ವಾಸಿಸುವ ನಿವೇಶನ ರಹಿತರಿಗೆ ಮನೆ­ಗಳನ್ನು ನೀಡಬೇಕು. ಈ ವಿಷಯದಲ್ಲಿ ಅಕ್ರಮವಾದರೆ ಸಹಿಸುವುದಿಲ್ಲ. ಅಲ್ಲದೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಪಿ. ಸುಧೀರ್‌ ಪ್ರತಿಕ್ರಿಯಿಸಿ, ‘ಕೆಆರ್‌ಆರ್‌ ಇನ್‌ ಪ್ರಾಜೆಕ್ಟ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಯು ಕಾಮ­ಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಬೇರೊಂದು ಕಂಪೆನಿಗೆ ಕೆಲಸ ವಹಿಸ­ಲಾಯಿತು. ಇದರಿಂದ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಯಲ್ಲಿ ಕೆಲ ಲೋಪ ಆಗಿರುವ ಕುರಿತು ಸಾರ್ವಜನಿ­ಕರಿಂದ ದೂರುಗಳು ಬಂದಿದ್ದು, ಅವುಗಳನ್ನು ಬಗೆಹರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT