ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಪಡೆಗೆ ಮತ್ತೊಂದು ಗೆಲುವಿನ ಕಾತರ

ಇಂದಿನಿಂದ ಭಾರತ– ವೆಸ್ಟ್‌ ಇಂಡೀಸ್‌ ನಡುವಣ ಎರಡನೇ ಟೆಸ್ಟ್‌ ಪಂದ್ಯ; ಬೌಲರ್‌ಗಳ ಮೇಲೆ ನಿರೀಕ್ಷೆಯ ಭಾರ
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಕಿಂಗ್ಸ್‌ಟನ್‌, ಜಮೈಕಾ (ಪಿಟಿಐ): ಆರಂಭಿಕ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಗಳಿಸಿ ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿರುವ ವಿರಾಟ್‌ ಕೊಹ್ಲಿ ಬಳಗ   ಈಗ ಮತ್ತೊಂದು ಸವಾಲಿಗೆ ಎದೆ ಯೊಡ್ಡಲು  ಸಜ್ಜಾಗಿದೆ.

ಶನಿವಾರ ಆರಂಭವಾಗಲಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಆತಿಥೇಯ ವೆಸ್ಟ್‌ ಇಂಡೀಸ್‌ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಣ ಈ ಹೋರಾಟಕ್ಕೆ ಸಬಿನಾ ಪಾರ್ಕ್‌ನಲ್ಲಿ ವೇದಿಕೆಯೂ ಸಿದ್ಧಗೊಂಡಿದೆ.

ಆ್ಯಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಅಂಗಳದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ ನಾಲ್ಕು ದಿನಗಳಲ್ಲೇ ಗೆಲುವಿನ  ತೋರಣ ಕಟ್ಟಿತ್ತು.

ಪ್ರವಾಸಿ ತಂಡ ಇನಿಂಗ್ಸ್‌ ಮತ್ತು 92 ರನ್‌ಗಳ ಅಂತರದಿಂದ ಆತಿಥೇಯರನ್ನು ಮಣಿಸಿತ್ತು. ಈ ಮೂಲಕ ಏಷ್ಯಾ ಖಂಡದ ಹೊರಗೆ ದೊಡ್ಡ ಅಂತರದ ಗೆಲುವು ಗಳಿಸಿದ ಸಾಧನೆಗೂ ಭಾಜನವಾಗಿತ್ತು.

ಅನಿಲ್‌ ಕುಂಬ್ಳೆ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಭಾರತ ತಂಡ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಆಟ ಆಡಿತ್ತು.
ಆರಂಭಿಕರಾಗಿ ಕಣಕ್ಕಿಳಿದಿದ್ದ  ಮುರಳಿ ವಿಜಯ್‌ ಮತ್ತು ಶಿಖರ್‌ ಧವನ್‌  ಉತ್ತಮ ಅಡಿಪಾಯ ಹಾಕಿಕೊಡಲು ವಿಫಲರಾಗಿದ್ದರು.
ತಮಿಳುನಾಡಿನ ವಿಜಯ್‌ 7ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ ಧವನ್‌ 84ರನ್‌ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು.

ಎರಡನೇ ಪಂದ್ಯದಲ್ಲಿಯೂ ಇವರಿಬ್ಬರು ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ನಾಯಕ ಕೊಹ್ಲಿ ಬದಲಾವಣೆಗೆ ಕೈ ಹಾಕಿದರೆ, ಧವನ್‌ ಜೊತೆಗೆ ಕರ್ನಾಟಕದ ಕೆ.ಎಲ್‌. ರಾಹುಲ್‌ಗೆ  ಇನಿಂಗ್ಸ್‌ ಆರಂಭಿಸುವ ಅವಕಾಶ ಸಿಗಬಹುದು.

ಬಲಗೈ ಬ್ಯಾಟ್ಸ್‌ಮನ್‌ ರಾಹುಲ್‌, ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಗಮನಸೆಳೆದಿದ್ದರು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ತಂಡದ ಆಧಾರ ಸ್ತಂಭ ಎನಿಸಿದ್ದಾರೆ. ಮೊದಲ ಪಂದ್ಯದಲ್ಲಿ 200ರನ್‌ ಬಾರಿಸಿದ್ದ ಅವರು ಉತ್ತಮ ಲಯದಲ್ಲಿದ್ದು ಸಬಿನಾ ಪಾರ್ಕ್‌ ಅಂಗಳದಲ್ಲೂ ರನ್‌ ಮಳೆ ಸುರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಆದರೆ ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರು ರನ್‌ ಗಳಿಸಲು ಪರದಾಡುತ್ತಿರುವುದು ನಾಯಕ ವಿರಾಟ್‌ ಚಿಂತೆಗೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಪೂಜಾರ 16 ರನ್‌ ಗಳಿಸಿದ್ದರೆ, ರಹಾನೆ 22ರನ್‌ ಕಲೆಹಾಕಿ ವಿಕೆಟ್‌ ಒಪ್ಪಿಸಿದ್ದರು.

ಇವರಿಬ್ಬರು ಎರಡನೇ ಪಂದ್ಯದಲ್ಲಿ ಲಯ ಕಂಡುಕೊಳ್ಳುವುದು ಅಗತ್ಯವಾಗಿದೆ. ರಹಾನೆ ಮತ್ತು ಪೂಜಾರ ಎಂದಿನ ಲಯದಲ್ಲಿ ಬ್ಯಾಟ್‌ ಬೀಸಿದ್ದೇ ಆದಲ್ಲಿ ತಂಡ ದೊಡ್ಡ ಮೊತ್ತ ಪೇರಿಸುವುದರಲ್ಲಿ ಅನುಮಾನವಿಲ್ಲ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ ಕೂಡಾ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು.

ಆ್ಯಂಟಿಗ ದಲ್ಲಿ 40 ರನ್‌ ಗಳಿಸಿದ್ದ ಅವರು ಎರಡನೇ ಪಂದ್ಯದಲ್ಲಿ ಆತಿಥೇಯ ಬೌಲರ್‌ಗಳನ್ನು ಕಾಡುವ ಹುಮ್ಮಸ್ಸಿನಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಆರ್‌. ಅಶ್ವಿನ್‌ ಮತ್ತು ಅಮಿತ್‌ ಮಿಶ್ರಾ ತಾವು ಬ್ಯಾಟಿಂಗ್‌ ಮೂಲಕವೂ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಬಲ್ಲೆವು ಎಂಬುದನ್ನು ಮೊದಲ ಪಂದ್ಯದಲ್ಲಿ ಸಾಬೀತು ಮಾಡಿದ್ದಾರೆ.

ತಮಿಳುನಾಡಿನ ಅಶ್ವಿನ್‌ ಶತಕ ಗಳಿಸಿದ್ದರಲ್ಲದೆ,  ನಾಯಕ ಕೊಹ್ಲಿ ಜೊತೆ ಸುಂದರ ಇನಿಂಗ್ಸ್‌ ಕಟ್ಟಿ ತಂಡದ ರನ್‌ ಗಳಿಕೆಗೆ ವೇಗ ತುಂಬಿದ್ದರು. ಮಿಶ್ರಾ ಕೂಡಾ 66 ಎಸೆತಗಳಲ್ಲಿ 53ರನ್‌ ಕಲೆಹಾಕಿ ಮಿಂಚಿದ್ದರು. ಬೌಲಿಂಗ್‌ನಲ್ಲೂ ಭಾರತ ಬಲಿಷ್ಠವಾಗಿದೆ. ಹಿಂದಿನ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ವಿರಾಟ್‌ ಪಡೆಯ ವೇಗಿಗಳು ಪಾರಮ್ಯ ಮೆರೆದಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ ಸ್ಪಿನ್ನರ್‌ ಅಶ್ವಿನ್‌ ಮೋಡಿ ಮಾಡಿದ್ದರು.

ಉಮೇಶ್‌ ಯಾದವ್‌ ಮತ್ತು ಮಹಮ್ಮದ್‌ ಶಮಿ ಅವರು ತಮ್ಮ ಬಿರುಗಾಳಿ ವೇಗದ ದಾಳಿಯಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳ ಸದ್ದಡಗಿಸಿದ್ದರು.  ಇವರಿಬ್ಬರು ತಲಾ ನಾಲ್ಕು ವಿಕೆಟ್‌ ಉರುಳಿಸಿದ್ದರೆ,

ಅಮಿತ್‌ ಮಿಶ್ರಾ ಎರಡು ವಿಕೆಟ್‌ ಕಬಳಿಸಿ ವಿಂಡೀಸ್‌ ತಂಡದ ಇನಿಂಗ್ಸ್‌ಗೆ ಬೇಗನೆ ತೀಲಾಂಜಲಿ ಇಟ್ಟಿದ್ದರು. ಹಿಂದಿನ ಎರಡು ದಿನಗಳಿಂದ ನೆಟ್ಸ್‌ನಲ್ಲಿ ಕಠಿಣ ತಾಲೀಮು ನಡೆಸಿರುವ ಇವರು  ಎರಡನೇ ಪಂದ್ಯದಲ್ಲೂ ಆತಿಥೇಯರ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡುವ ವಿಶ್ವಾಸ ಹೊಂದಿದ್ದಾರೆ.

ಅಶ್ವಿನ್‌ ಕೈಚಳಕದ ನಿರೀಕ್ಷೆ
ವೇಗಿಗಳ ಸ್ವರ್ಗ ಎನಿಸಿರುವ ಕೆರಿಬಿಯನ್‌ ನಾಡಿನ ಪಿಚ್‌ಗಳಲ್ಲಿ ಸ್ಪಿನ್ನರ್‌ ಅಶ್ವಿನ್‌ ಕೈಚಳಕ ತೋರಿದ್ದರು.
ವಿಂಡೀಸ್‌ ಬ್ಯಾಟ್ಸ್‌ಮನ್‌ಗಳು ಮೊದಲ ಪಂದ್ಯದಲ್ಲಿ ಅಶ್ವಿನ್‌ ಸ್ಪಿನ್‌ ಬಲೆಯಲ್ಲಿ ಸಿಲುಕಿ ಒದ್ದಾಡಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿಯೂ ಅಶ್ವಿನ್‌ ಮೇಲೆ ನಿರೀಕ್ಷೆಯ ಭಾರ ಇದೆ.

ಬ್ಯಾಟಿಂಗ್‌ನದ್ದೇ ಚಿಂತೆ
ವೆಸ್ಟ್‌ ಇಂಡೀಸ್‌ ತಂಡ ಎರಡನೇ ಪಂದ್ಯದಲ್ಲಿ ಗೆದ್ದು ಭಾರತ ತಂಡಕ್ಕೆ ತಿರುಗೇಟು ನೀಡುವ ವಿಶ್ವಾಸ ಹೊಂದಿ ದೆ. ಆದರೆ ಪ್ರಮುಖ ಬ್ಯಾಟ್ಸ್‌ ಮನ್‌ಗಳ ವೈಫಲ್ಯ ಆತಿಥೇಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಆರಂಭಿಕ ಬ್ಯಾಟ್ಸ್‌ಮನ್‌ ಕ್ರೆಗ್‌ ಬ್ರಾಥ್‌ವೈಟ್‌ ಮತ್ತು ಅನುಭವಿ ಆಟಗಾರ ಮರ್ಲಾನ್‌ ಸ್ಯಾಮುಯೆಲ್ಸ್‌ ಅವರನ್ನು ಬಿಟ್ಟರೆ ಉಳಿದ ಯಾರೂ ಮೊದಲ ಪಂದ್ಯದಲ್ಲಿ ಮಿಂಚಿರಲಿಲ್ಲ.

ಬ್ರಾಥ್‌ವೈಟ್‌ ಮೊದಲ ಇನಿಂಗ್ಸ್‌ನಲ್ಲಿ 74 ರನ್‌ ಗಳಿಸಿದ್ದರೆ, ಸ್ಯಾಮುಯೆಲ್ಸ್‌ ಎರಡನೇ ಇನಿಂಗ್ಸ್‌ನಲ್ಲಿ 50ರನ್‌ ಬಾರಿಸಿದ್ದರು. ಕಾರ್ಲೊಸ್‌ ಬ್ರಾಥ್‌ವೈಟ್‌ ಔಟಾಗದೆ 51ರನ್‌ ದಾಖಲಿಸಿ  ಗಮನಸೆಳೆದಿದ್ದರು.  ಬೌಲಿಂಗ್‌ನಲ್ಲಿ ತಂಡದ ವೇಗಿಗಳು ಹಾಗೂ ಸ್ಪಿನ್ನರ್‌ಗಳು ಹೆಚ್ಚಿನ ವಿಕೆಟ್‌  ಉರುಳಿಸಿರಲಿಲ್ಲ.

ದೇವೇಂದ್ರ ಬಿಷೂ ಮತ್ತು ಕ್ರೆಗ್‌ ಬ್ರಾಥ್‌ವೈಟ್‌ ತಲಾ ಮೂರು ವಿಕೆಟ್‌ ಉರುಳಿಸಿದರೆ, ಶಾನನ್‌ ಗ್ಯಾಬ್ರಿಯಲ್‌ ಎರಡು ವಿಕೆಟ್‌ ಕಬಳಿಸಿದ್ದರು.
ಇವರು ಎರಡನೇ ಪಂದ್ಯದಲ್ಲಿ ಇನ್ನಷ್ಟು ಚುರುಕಾಗಿ ಬೌಲಿಂಗ್‌ ಮಾಡು ವುದು ಅಗತ್ಯ. ಇಲ್ಲದಿದ್ದರೆ ಭಾರತದ ಬ್ಯಾಟ್ಸ್‌ಮನ್‌ಗಳಿಂದ ದಂಡನೆಗೆ ಒಳಗಾಗುವುದಂತೂ ನಿಜ.

ತಂಡ ಇಂತಿದೆ: ಭಾರತ
ವಿರಾಟ್‌ ಕೊಹ್ಲಿ (ನಾಯಕ), ಮುರಳಿ ವಿಜಯ್‌, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್‌ ಶರ್ಮಾ, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ಆರ್‌. ಅಶ್ವಿನ್‌, ಅಮಿತ್‌ ಮಿಶ್ರಾ, ರವೀಂದ್ರ ಜಡೇಜ, ಸ್ಟುವರ್ಟ್‌ ಬಿನ್ನಿ, ಭುವನೇಶ್ವರ್‌ ಕುಮಾರ್‌, ಮಹಮ್ಮದ್‌ ಶಮಿ, ಶಾರ್ದೂಲ್‌ ಠಾಕೂರ್‌, ಉಮೇಶ್‌ ಯಾದವ್‌ ಮತ್ತು ಇಶಾಂತ್‌ ಶರ್ಮಾ.

ವೆಸ್ಟ್‌ ಇಂಡೀಸ್‌: ಜಾಸನ್‌ ಹೋಲ್ಡರ್‌ (ನಾಯಕ), ಕ್ರೆಗ್‌ ಬ್ರಾಥ್‌ವೈಟ್‌, ರಾಜೇಂದ್ರ ಚಂದ್ರಿಕ, ಡರೆನ್‌ ಬ್ರಾವೊ, ಮರ್ಲಾನ್‌ ಸ್ಯಾಮು ಯೆಲ್ಸ್‌, ಜರ್ಮೈನ್‌ ಬ್ಲಾಕ್‌ವುಡ್‌, ರಾಸ್ಟನ್‌ ಚೇಸ್‌, ಲಿಯೊನ್‌ ಜಾನ್ಸನ್‌, ಶೇನ್‌ ಡೌರಿಚ್‌ (ವಿಕೆಟ್‌ ಕೀಪರ್‌), ದೇವೇಂದ್ರ ಬಿಷೂ, ಕಾರ್ಲೊಸ್‌ ಬ್ರಾಥ್‌ ವೈಟ್‌, ಶಾನನ್‌ ಗ್ಯಾಬ್ರಿಯಲ್‌, ಮಿಗೆಲ್ ಕಮಿನ್ಸ್‌ ಮತ್ತು ಅಲಜಾರಿ ಜೋಸೆಫ್‌.

ಪಂದ್ಯದ ಆರಂಭ: ರಾತ್ರಿ 8.30

ಮುಖ್ಯಾಂಶಗಳು
*ಮೊದಲ ಪಂದ್ಯದಲ್ಲಿ 200ರನ್‌ ಗಳಿಸಿದ್ದ ಕೊಹ್ಲಿ
* ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ್ದ ಅಶ್ವಿನ್‌
* ಕರ್ನಾಟಕದ ಕೆ.ಎಲ್‌. ರಾಹುಲ್‌ಗೆ ಅವಕಾಶ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT