ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ನಾಡಿನಲ್ಲಿ ರಾಷ್ಟ್ರಕವಿಯ ಹೆಜ್ಜೆಗಳು...

ಜಿಎಸ್‌ಎಸ್‌ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು, ಸಾಹಿತ್ಯಾಭಿಮಾನಿಗಳು
Last Updated 24 ಡಿಸೆಂಬರ್ 2013, 6:03 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮುರುಘಾಮಠದ ಜಯದೇವ ಪ್ರಸಾದ ನಿಲಯದಲ್ಲಿ ಆ ದಿನ ಮುದ್ದೆ ಊಟ ನೀಡಿ ಪೋಷಿಸದಿದ್ದರೆ ಇವತ್ತು ಸನ್ಮಾನ ಸ್ವೀಕರಿಸುವಷ್ಟು ದೊಡ್ಡ ಸಾಹಿತಿಯಾಗುತ್ತಿರಲಿಲ್ಲ....’

1984–85ರಲ್ಲಿ ನಗರದ ಹಳೆಯ ಪುರಸಭೆಯ ಎದುರಿನ ಸಭಾಂಗಣದಲ್ಲಿ ಕಿಕ್ಕಿರಿದ ಸಾಹಿತ್ಯಾಭಿಮಾನಿಗಳ ಎದುರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರುಹೀಗೆ ಎದೆ ತುಂಬಿ, ಭಾವ ತುಂಬಿ ಮಾತನಾಡಿದ್ದನ್ನು ಇವತ್ತಿಗೂ ಎಲ್ಲರೂ ಸ್ಮರಿಸುತ್ತಾರೆ. ಅಷ್ಟರಮಟ್ಟಿಗೆ ಕೋಟೆ ನಾಡಿನೊಂದಿಗೆ ಜಿಎಸ್ಎಸ್ ನಂಟು ಬೆಸೆದಿತ್ತು.

ಪ್ರೌಢಶಾಲೆಯಿಂದಲೂ..: ಪ್ರೌಢಶಾಲೆಯ ಹಂತದಲ್ಲಿ ಜಿ.ಎಸ್.ಶಿವರುದ್ರಪ್ಪ ಅವರಿಗೆ ಆಶ್ರಯ ಕೊಟ್ಟಿದ್ದು ಮುರುಘಾಮಠದ ದಾವಣಗೆರೆಯ ಜಯದೇವ ವಸತಿ ನಿಲಯ. ಆ ಸಂದರ್ಭದಲ್ಲಿ ತನಗೆ ಆಶ್ರಯ ಕೊಟ್ಟ ಮುರುಘಾಮಠವನ್ನು ಅನೇಕ ಸಂದರ್ಭಗಳಲ್ಲಿ ನೆನಪಿಸಿಕೊಳ್ಳುತ್ತಿದ್ದರು ಎಂದು ಮುರುಘಾಮಠದ ಶಿವಮೂರ್ತಿ ಶರಣರು ಉಲ್ಲೇಖಿಸುತ್ತಾರೆ.

‘ಮುರುಘಾ ಮಠ ಪ್ರಗತಿಪರ ಹಾಗೂ ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸುತ್ತಿದ್ದ ಮಠವಾಗಿದ್ದರಿಂದ ಅವರಿಗೆ ಈ ಮಠದ ಬಗ್ಗೆ ಹೆಚ್ಚು ಪ್ರೀತಿ. ನಾವು ಅವರೊಂದಿಗೆ ಮಾತನಾಡುವಾಗ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು. ಲಿಂಗೈಕ್ಯ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 56ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜಿಎಸ್‌ಎಸ್ ಅವರಿಗೆ ‘ಜಯದೇವ ಪ್ರಶಸ್ತಿ’ ನೀಡಿ ಗೌರವಿಸಿದ್ದೆವು. ಅವರ ಮನೆಯಲ್ಲೇ ಪ್ರಶಸ್ತಿ ನೀಡಿದ್ದೆವು’ ಎಂದು ಮುರುಘಾ ಶರಣರು ನೆನಪಿಸಿಕೊಳ್ಳುತ್ತಾರೆ.

ಕಥೆ ನೆನಪಿಸುವ ಗುರು: ‘ಅಭಿಮನ್ಯವಿನ
ಪುತ್ರ ಪರೀಕ್ಷಿತರಾಜನಿಗೆ ಸರ್ಪವೊಂದರಿಂದ ಸಾವು ಸಂಭವಿಸುವ ಶಾಪವಿರುತ್ತದೆ. ಅದರಿಂದ ಪಾರಾಗಲು ಏಳು ದಿನಗಳ ಕಾಲ ಸುರಕ್ಷಿತ ಸ್ಥಳದಲ್ಲಿ ಜೀವನ ಸಾಗಿಸುತ್ತಾನೆ. ಕೊನೆಗೂ ಸರ್ಪ ಆತನನ್ನು ಸಾಯಿಸುತ್ತದೆ. ಏಳು ದಿನಗಳ ಪರೀಕ್ಷಿತರಾಜನ ಸಾವಿನ ಘಳಿಗೆಗಳನ್ನು ಕುರಿತು ಬರೆಯುವುದಾಗಿ ಜಿಎಸ್ಎಸ್ ಎದುರು ಹೇಳಿಕೊಂಡಿದ್ದೆ. ಆ ಬರಹದ ಬಗ್ಗೆ ಬಹಳ ಕುತೂಹಲ ಹೊಂದಿದ್ದ ಶಿವರುದ್ರಪ್ಪನವರು, ತಮ್ಮನ್ನು ಭೇಟಿಯಾದಾಗಲೆಲ್ಲ, ಕೃತಿ ಬಗ್ಗೆ ಕೇಳುತ್ತಿದ್ದರು’ ಎಂದು ಸಂಶೋಧಕ ಡಾ. ಬಿ.ರಾಜಶೇಖರಪ್ಪ ನೆನಪಿಸಿಕೊಳ್ಳುತ್ತಾರೆ.

ಗುರುವೂ ಹೌದು, ಗೆಳೆಯರೂ..: ‘ಉಸ್ಮಾನಿಯಾ ವಿಶ್ವ ವಿದ್ಯಾಲಯದಿಂದ ಮೈಸೂರಿಗೆ ವಾಪಸಾದಾಗ, ಮಹಾರಾಜ ಕಾಲೇಜಿನಲ್ಲಿ ಹಾಸ್ಟೆಲ್‌ನಲ್ಲಿ ಜಿಎಸ್ಎಸ್ ವಾಸವಿದ್ದರು. ಆಗ ನಾನು ಅವರೊಂದಿಗೆ ರೂಮ್‌ಮೆಟ್ ಆಗಿದ್ದೆ. ಒಂದೇ ಕೋಣೆಯಲ್ಲಿ ವಾಸ, ಊಟ, ಎಲ್ಲ. ಅವರು ಕಾಲೇಜಿನಲ್ಲಿ ನನಗೆ ಗುರುಗಳು, ರೂಮಿನಲ್ಲಿ ಗೆಳೆಯರು. ಗುರು –ಗೆಳೆತನದ ಸಂಬಂಧ ವರ್ಣಿಸಲು ಸಾಧ್ಯವಿಲ್ಲ’ ಎನ್ನುತ್ತಾ ಐದು ದಶಕಗಳ ಹಿಂದಿನ ನೆನಪುಗಳಿಗೆ ಜಾರುತ್ತಾರೆ ನಗರದ ನಿವೃತ್ತ ಕನ್ನಡ ಉಪನ್ಯಾಸಕ ಮಹೇಶರಪ್ಪ.

ಕೋಟೆ ನಾಡಿನ ಪ್ರೀತಿ: 60 ವಸಂತಗಳು ಪೂರೈಸಿದ ಸಂದರ್ಭದಲ್ಲಿ ಇಲ್ಲಿನ ನಾಗರಿಕರು ಜಿಎಸ್ಎಸ್‌ಗೆ ಸನ್ಮಾನ ಏರ್ಪಡಿಸಿದ್ದರು. ಸನ್ಮಾನ ಸ್ವೀಕರಿಸಿದ ಜಿಎಸ್ಎಸ್, ‘ಬಂಡೆಗಳ ನಾಡು ಎನ್ನುತ್ತಾರೆ ಈ ಊರನ್ನು. ಕಲ್ಲುಗಳಿರುವ ಒರಟು ನೆಲದಲ್ಲಿ ಸಾಹಿತ್ಯ ಶ್ರೀಮಂತಿಕೆಯ ಹೆಜ್ಜೆ ಗುರುತುಗಳಿವೆ. ನಾಡಿನ ತುಂಬಾ ಬಂಡೆಗಳೇ ತುಂಬಿದ್ದರೂ, ಇಲ್ಲಿನ ನಾಗರಿಕರ ಮನೆ–ಮನೆಗಳಲ್ಲಿ ಸಾಂಸ್ಕೃತಿಕ ಸಿರಿವಂತಿಕೆ ತುಂಬಿ ತುಳುಕುತ್ತಿದೆ. ಇಂಥ ನೆಲದಲ್ಲಿ ಅಭಿನಂದನೆಗೆ ಪಾತ್ರನಾದ ನಾನೇ ಧನ್ಯ’ ಎನ್ನುತ್ತಾ ಚಿತ್ರದುರ್ಗದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕೊಂಡಾಡಿದ್ದಾಗಿ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ನೆನಪಿಸಿಕೊಳ್ಳುತ್ತಾರೆ.

ನಾನು ಮೂರು ಜಿಲ್ಲೆಗೂ ಸೇರಿದವನು..!
ಜಿ.ಎಸ್.ಶಿವರುದ್ರಪ್ಪನವರ ತಾಯಿಯ ಊರು ಚಿತ್ರದುರ್ಗ. ಹಾಗಾಗಿ ‘ನಮ್ಮವರು’ ಎನ್ನುತ್ತಾರೆ ಚಿತ್ರದುರ್ಗದವರು. ದಾವಣಗೆರೆಯಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ್ದರಿಂದ, ಆ ಜಿಲ್ಲೆಯವರು ನಮ್ಮವರು ಎನ್ನುತ್ತಾರೆ. ಶಿಕಾರಿಪುರದಲ್ಲಿ ಹುಟ್ಟಿದ್ದರಿಂದ ಶಿವಮೊಗ್ಗದವರು ‘ನಮ್ಮ ನೆಲದ ಕವಿ’ ಎನ್ನುತ್ತಾರೆ. ಊರೂರು ತಿರುಗುತ್ತಾ ನೆಲೆ ಇಲ್ಲದೇ ಬದುಕಿದ ನನಗೆ ಈ ಮೂರು ಜಿಲ್ಲೆಗಳೂ ತವರು ನೆಲದಂತೆ ಎಂದು ಅನೇಕ ಕಾರ್ಯಕ್ರಮಗಳಲ್ಲಿ ಜಿಎಸ್‌ಎಸ್‌ ನೆನಪಿಸಿಕೊಳ್ಳುತ್ತಿದ್ದರು ಎನ್ನುತ್ತಾರೆ ಸಾಹಿತ್ಯ ಪರಿಚಾರಕ ವೆಂಕಣ್ಣಾಚಾರ್.

ಜಿಎಸ್‌ಎಸ್ ನಿಧನಕ್ಕೆ ಮಠಾಧೀಶರ ಸಂತಾಪ
ಸಿರಿಗೆರೆ: ಯಾವುದೇ ಪಂಥಗಳಿಗೆ ಸಿಲುಕದೆ ಎಲ್ಲವನ್ನೂ ಮೀರಿ ಬೆಳೆದು ಪ್ರಖಾಂಡ ಪಾಂಡಿತ್ಯ ಹೊಂದಿದ್ದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ನಮಗೆ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ನಷ್ಟವಾಗಿದೆ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಪಂಡಿತಾರಾಧ್ಯ ಶ್ರೀ ಸಂತಾಪ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಪ್ರಖ್ಯಾತ ವಿಮರ್ಶಕರು, ಕವಿಗಳು ಮತ್ತು ಅಪ್ಪಟ ಮಾನವೀಯ ಗುಣಗಳನ್ನು ಉಳ್ಳವರು. ಶ್ರೀಮಠದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದ ಅವರು ಸಾಣೇಹಳ್ಳಿ ಶ್ರೀಮಠದಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅರ್ಥಪೂರ್ಣ ಮಾತುಗಳನ್ನಾಡಿದ್ದು ಸ್ಮರಣೀಯ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಮುರುಘಾ ಶರಣರ ಸಂತಾಪ: ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ  ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಮಠದಿಂದ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಬೆಂಗಳೂರಿನ  ಮನೆಯಲ್ಲಿ  ಜಯದೇವಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಗಿತ್ತು. ಜಯದೇವ ಶ್ರೀಗಳ ಮೇಲಿದ್ದ ಅಪಾರ ಭಕ್ತಿಯಿಂದಾಗಿ ಪುತ್ರನಿಗೆ ಜಯದೇವ ಹೆಸರನ್ನಿಟ್ಟಿದ್ದರು’ ಎಂದು ಶರಣರು ನೆನಪಿಸಿಕೊಂಡಿದ್ದಾರೆ.

ಗಣ್ಯರ ಸಂತಾಪ: ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಮಲ್ಲಿಕಾರ್ಜುನಯ್ಯ, ಸಮಾಜ ಸೇವಕ ಆರ್.ಶೇಷಣ್ಣ ಕುಮಾರ್ ಎಂದು ಸಂಸದ ಜನಾರ್ದನ ಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಅಧ್ಯಕ್ಷ ಟಿ.ಜಿ. ನರೇಂದ್ರನಾಥ್ ಸೇರಿದಂತೆ ಬಿಜೆಪಿಯ ಜಿಲ್ಲಾ ಘಟಕದ ಪದಾಧಿಕಾರಗಳು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT