ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಿಕ್ ಮುಖರ್ಜಿ ವಿರುದ್ಧ ಜಾತಿ ನಿಂದನೆ ಆರೋಪ

Last Updated 6 ಮಾರ್ಚ್ 2015, 19:47 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ವಿರುದ್ಧ ರಾಜ್ಯ ಜೀತ ವಿಮೋಚನಾ ಸಂಘಟನೆ ಸದಸ್ಯರು ಜಾತಿನಿಂದನೆ ಆರೋಪದಡಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಮುಖರ್ಜಿ ಅವರು ಸಂಘಟನೆ ಸದ­ಸ್ಯರ ಜತೆ ಅಗೌರವದಿಂದ ವರ್ತಿಸಿ­ದ್ದಾರೆ. ನಮ್ಮನ್ನು ಅಸ್ಪೃಶ್ಯರಂತೆ ನಡೆಸಿ­ಕೊಂಡಿ­ದ್ದಾರೆ’ ಎಂದು ಸಂಘಟನೆಯ ಮುಖ್ಯಸ್ಥ ಗೋವಿಂದರಾಜು ಆರೋಪಿಸಿದ್ದಾರೆ.  ‘ಮುಖ್ಯ ಕಾರ್ಯದರ್ಶಿಗಳು ಕಾರ್ಯಾಂಗದ ಮುಖ್ಯಸ್ಥರಾಗಿದ್ದಾರೆ. ಅವರ ಅಧೀನದಲ್ಲಿ 58 ಇಲಾಖೆಗಳು ಬರುತ್ತವೆ.

ಹೀಗಾಗಿ ಜೀತದಾಳು ಹಾಗೂ ದಲಿತರ ಸಮಸ್ಯೆಗಳ ಸಮಾ­ಲೋಚ­ನೆಗೆ ಅವಕಾಶ ಕೋರಿದ್ದೆವು. ಈ ಹಿಂದೆ ಐದಾರು ಬಾರಿ ಸಮಯ ನಿಗದಿ­ಯಾಗಿತ್ತಾದರೂ, ಕೊನೆ ಕ್ಷಣದಲ್ಲಿ ಸಭೆ ರದ್ದು ಮಾಡಿದ್ದರು. ಕೊನೆಗೂ ಗುರುವಾರ (ಮಾ.5) ಸಂಜೆ 4 ಗಂಟೆಗೆ ಮಾತುಕತೆಗೆ ಕರೆದಿದ್ದರು. ಅದರಂತೆ ಆ ಸಮಯಕ್ಕೆ ಅವರ ಕಚೇರಿಗೆ ಹೋಗಿದ್ದೆವು’ ಎಂದು ಗೋವಿಂದರಾಜು ವಿವರಿಸಿದರು.

‘ಕಚೇರಿ ಹತ್ತಿರ ಹೋಗುತ್ತಿದ್ದಂತೆಯೇ ಕೋಪಗೊಂಡ ಅವರು, ನಮ್ಮ ಅಹವಾಲು ಆಲಿಸುವ ಸೌಜನ್ಯ ಕೂಡ ತೋರಲಿಲ್ಲ. ಜಾತಿ ಹೆಸರಿನಿಂದ ನಿಂದಿಸಿ ಕಚೇರಿಯಿಂದ ಹೊರನಡೆದರು. ಈ ಸಂಬಂಧ ರಾಷ್ಟ್ರಪತಿಗಳು, ರಾಜ್ಯಪಾ­ಲರು, ಹೈಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ­ಗಳು, ಕೇಂದ್ರ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ’ ಎಂದರು.

ಪ್ರತಿದೂರು: ತಜ್ಞರ ಸಲಹೆ
ಕೌಶಿಕ್‌ ಮುಖರ್ಜಿ ಅವರ ಆಪ್ತ ಕಾರ್ಯದರ್ಶಿ ಸಣ್ಣಪ್ಪ ಅವರು ರಾಜ್ಯ ಜೀತ ವಿಮೋಚನಾ ಸಂಘಟನೆ ಸದಸ್ಯರ ವಿರುದ್ಧ  ಪ್ರತಿದೂರು ಕೊಟ್ಟಿ­ದ್ದಾರೆ. ದೂರು–ಪ್ರತಿದೂರಿನ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ತೆಗೆದುಕೊಳ್ಳಲಾಗು­ವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT