ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ಗೆ ಅಂಗ ಸಂರಕ್ಷಿಸಿ ಚಿಕಿತ್ಸೆ

Last Updated 18 ಜುಲೈ 2014, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ. ಇವುಗಳಲ್ಲಿ 2-3 ಲಕ್ಷ ಜನರು ತಲೆ ಮತ್ತು ಕತ್ತಿಗೆ ಸಂಬಂಧಿಸಿದ ಕ್ಯಾನ್ಸರ್ ಪೀಡಿತರಾಗಿರುತ್ತಾರೆ. ಇವರಲ್ಲಿ ಶೇ 95 ಜನರಲ್ಲಿ ಕಂಡು ಬರುವ ಕ್ಯಾನ್ಸರ್‌ಗೆ ತಂಬಾಕು ಸೇವನೆಯೇ ಕಾರಣ ಎನ್ನುವುದು ಬಹುತೇಕ ಜನರಿಗೆ ತಿಳಿದ ಸತ್ಯವಾಗಿದೆ.

ಕತ್ತು ಮತ್ತು ತಲೆ ಎರಡೂ ನಮ್ಮ ದೇಹದ ಮುಖ್ಯ ಅಂಗವಾಗಿವೆ. ದೇಹ ಮಾತ್ರವಲ್ಲ ವ್ಯಕ್ತಿತ್ವವನ್ನೂ ತಿಳಿಸುವ ಅಂಗಗಳಾಗಿವೆ. ಈ ಭಾಗದಲ್ಲಿ ಯಾವುದೇ ಬಗೆಯ ಕ್ಯಾನ್ಸರ್ ಅಥವಾ ಗಡ್ಡೆಗಳಾದರೆ ನಿಮ್ಮ ಸ್ವರೂಪವನ್ನೇ ಬದಲಿಸಬಲ್ಲವು. ವಿಕಾರಗೊಳಿಸಲೂಬಹುದು. ಆದರೆ ಬಹುತೇಕವಾಗಿ ಈ ಬಗೆಯ ಎಲ್ಲ ಕ್ಯಾನ್ಸರ್‌ಗಳು ಅಂತಿಮ ಹಂತದಲ್ಲಿಯೇ ವೈದ್ಯರ ಗಮನಕ್ಕೆ ಬರುತ್ತವೆ.

ಕಾರಣ ಗುರುತಿಸುವುದೇ ವಿಳಂಬವಾಗಿರುತ್ತದೆ. ಪರಿಣಾಮ ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕಾರಣವೇನೆಂದರೆ ಕ್ಯಾನ್ಸರ್‌ಗೆ ತುತ್ತಾಗಿರುವ ಅಂಗವನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಚಿಕಿತ್ಸೆಯೂ ದುಬಾರಿ. ಜೊತೆಗೆ ಅಂಗವಿಹೀನರಾಗುವ ಆತಂಕವೂ ಈ ಪ್ರಕರಣಗಳಲ್ಲಿರುತ್ತವೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಆಗಿರುವ ತೀವ್ರತರನಾದ ಬದಲಾವಣೆಗಳು ಚಿಕಿತ್ಸೆಯನ್ನು ಉತ್ತಮಗೊಳಿಸುವಲ್ಲಿ ಖಂಡಿತವಾಗಿಯೂ ನೆರವಾಗುತ್ತಿವೆ. ನಿರ್ದಿಷ್ಟ ಮತ್ತು ಅತ್ಯುತ್ಕೃಷ್ಟ ಗುಣಮಟ್ಟವನ್ನು ಸಾಧಿಸುವಂತಾಗಿದೆ. ಇಂಥವೇ ಕೆಲವು ಅತ್ಯಾಧುನಿಕ ತಂತ್ರಗಳಲ್ಲಿ ಅಂಗ ರಕ್ಷಣೆಯೂ ಒಂದಾಗಿದೆ. ಸದ್ಯಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಆಸಕ್ತಿಕರ ಮತ್ತು ಪ್ರಚಲಿತದಲ್ಲಿರುವ ಚರ್ಚೆಯೆಂದರೆ ಅಂಗರಕ್ಷಣೆ ಎಂದೇ ಹೇಳಬಹುದಾಗಿದೆ. ಕ್ಯಾನ್ಸರ್‌ನಿಂದ ಗುಣಮುಖರಾಗುವ ಹಿನ್ನೆಲೆಯಲ್ಲಿ ತಮ್ಮ ಅಂಗವನ್ನು ಸಹಜವಾಗಿಯೇ ಸಂರಕ್ಷಿಸುವುದು ಎಲ್ಲ ರೋಗಿಗಳ ಆದ್ಯತೆ ಆಗಿರುತ್ತದೆ. ಆಸಕ್ತಿಯೂ ಆಗಿರುತ್ತದೆ. 

ಅಂಗ ಸರಂಕ್ಷಣೆ ತಂತ್ರಜ್ಞಾನ ಕೇವಲ ಕ್ಯಾನ್ಸರ್‌ನಿಂದ ಗುಣಮುಖರಾಗುವಲ್ಲಿ ಹೆಚ್ಚಿನ ಭರವಸೆಯನ್ನು ನೀಡುವುದಷ್ಟೇ ಅಲ್ಲ, ಚಿಕಿತ್ಸೆಯ ನಂತರವೂ ರೋಗಿಯು ಮೊದಲಿನಂತೆಯೇ ಕಾಣಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಆ ಅಂಗದ ಕಾರ್ಯ ನಿರ್ವಹಣೆಯ ವೈಖರಿಯನ್ನೂ ಸಂರಕ್ಷಿಸುತ್ತದೆ. ಆದರೆ ಬಹತೇಕ ಜನರಿಗೆ ಈ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಕ್ಯಾನ್ಸರ್‌ಗೆ ತುತ್ತಾಗಿರುವ ಅಂಗ ರಕ್ಷಿಸುವುದು ಹೇಗೆ? ಅಂಗ ಸಂರಕ್ಷಣೆಯೊಂದಿಗೆ ಕ್ಯಾನ್ಸರ್ ನಿರ್ಮೂಲನೆ ಹೇಗೆ?

ಇದಕ್ಕೆ ಒಂದೇ ಪದದಲ್ಲಿ ಉತ್ತರಿಸುವುದಾದರೆ ಅತ್ಯಾಧುನಿಕ ತಂತ್ರಜ್ಞಾನದಿಂದ. ಈ ಮೊದಲು ಲಭ್ಯವಿದ್ದ ತಂತ್ರಜ್ಞಾನದ ಮೂಲಕ ವೈದ್ಯರು ಕ್ಯಾನ್ಸರ್‌ನ ಭಾಗವನ್ನು ತಲುಪುವುದು ಕಷ್ಟಸಾಧ್ಯವಾಗಿತ್ತು. ಆದರೆ ಸದ್ಯಕ್ಕೆ ಲಭ್ಯ ಇರುವ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಯಾವುದೇ ಕ್ಲಿಷ್ಟಕರ ಭಾಗವಾದರೂ ಸಹ ವೈದ್ಯರು ತಲುಪಬಹುದಾಗಿದೆ. ರೇಡಿಯೋಥೆರಪಿ ಯಂತ್ರಗಳು ಕ್ಯಾನ್ಸರ್ ರೋಗಿಗಳಿಗೆ ವರದಾನವಾಗಿವೆ ಎಂದೇ ಹೇಳಬಹುದಾಗಿದೆ.

ಇವು ಕ್ಯಾನ್ಸರ್ ಅಂಟಿಕೊಂಡ ನಿರ್ದಿಷ್ಟವಾದ ಪ್ರದೇಶವನ್ನಷ್ಟೇ ಗುರುತಿಸುತ್ತವೆ. ಕ್ಯಾನ್ಸರ್ ಪೀಡಿತ ಪ್ರದೇಶವನ್ನಷ್ಟೇ ಚಿಕಿತ್ಸೆಗೊಳಪಡಿಸುತ್ತವೆ. ಹಾಗಾಗಿ ಸುತ್ತಲಿನ ಪ್ರದೇಶವು ಸಹಜವಾಗಿಯೇ ತಮ್ಮ ಮೂಲಸ್ವರೂಪವನ್ನು ಉಳಿಸಕೊಳ್ಳುತ್ತವೆ. ಕ್ಯಾನ್ಸರ್ ಪೀಡಿತ ಪ್ರದೇಶದ ಸುತ್ತಮುತ್ತ ಹೆಚ್ಚು ಹಾನಿಯಾಗದು. ಈ ತಂತ್ರಜ್ಞಾನದಿಂದಾಗಿ ಧ್ವನಿಪೆಟ್ಟಿಗೆಯ ಕ್ಯಾನ್ಸರ್, ಅನ್ನನಾಳ, ಕಣ್ಣುಗುಡ್ಡೆಯ ಕ್ಯಾನ್ಸರ್‌ಗಳಿಗೆ ಇದು ಪರಿಣಾಮಕಾರಿಯಾದ ಚಿಕಿತ್ಸೆಯಾಗಲಿದೆ.

ಇನ್ನು ಕೆಲವು ಆಯ್ದ ಪ್ರಕರಣಗಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಈ ಹಿಂದೆ ಹಲವಾರು ದಿನಗಳಷ್ಟು ಕಾಲ ಚಿಕಿತ್ಸೆಗೆ ಬೇಕಿದ್ದರೆ ಇದೀಗ ಕೆಲವೇ ನಿಮಿಷಗಳಲ್ಲಿ ಈ ಚಿಕಿತ್ಸೆಯನ್ನು ಮುಗಿಸಬಹುದಾಗಿದೆ. ಇನ್ನೊಂದು ಮಹತ್ವದ ಆಯಾಮವೆಂದರೆ ಅಂಗ ಸಂರಕ್ಷಣೆಗೆ ಶಸ್ತ್ರಚಿಕಿತ್ಸಾ ತಂತ್ರಜ್ಞಾನವೂ ಸರಳವಾಗಿರುವುದು ಒಂದು ಕಾರಣವಾಗಿದೆ. ಲೇಸರ್‌ಗಳ ಬಳಕೆಯಿಂದಾಗಿ ಈ ಗುರಿಯನ್ನು ಸಾಧಿಸಬಹುದಾಗಿದೆ.

ಉದಾಹರಣೆಗೆ ಧ್ವನಿಪೆಟ್ಟಿಗೆಗೆ ಕ್ಯಾನ್ಸರ್ ತಗುಲಿದ್ದರೆ ಈ ಮೊದಲು ಧ್ವನಿಪೆಟ್ಟಿಗೆಯನ್ನೇ ನಿರ್ಮೂಲನ ಮಾಡಬೇಕಾಗುತ್ತಿತ್ತು. ಇಲ್ಲವೇ ನಿಷ್ಕ್ರಿಯಗೊಳಿಸಬೇಕಾಗುತ್ತಿತ್ತು. ಆದರೆ ಇದೀಗ ಲೇಸರ್‌ನಿಂದಾಗಿ ಧ್ವನಿಪೆಟ್ಟಿಗೆಯನ್ನು ಆವರಿಸಿರುವ ಕ್ಯಾನ್ಸರ್‌ನ ಭಾಗಕ್ಕೆ ಮಾತ್ರ ಕಾರ್ಬನ್ ಡೈಆಕ್ಸೈಡ್ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದ ಧ್ವನ್ಯಂಗವನ್ನು ಉಳಿಸಿಕೊಳ್ಳಬಹುದಾಗಿದೆ.

ಒಬ್ಬ ವ್ಯಕ್ತಿಗೆ ಸಂವಹನಕ್ಕಾಗಿ ಮಾತನಾಡಲು ಧ್ವನ್ಯಂಗ ಅತ್ಯವಶ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇಂದಿನ ಲೇಸರ್ ಚಿಕಿತ್ಸೆಯಿಂದಾಗಿ ಚಿಕಿತ್ಸೆಯ ಅವಧಿಯಲ್ಲಿಯೂ ಕಡಿತವಾಗುತ್ತದೆ. ಹೆಚ್ಚಿನ ಆರೈಕೆಯ ಅಗತ್ಯವೂ ಇರುವುದಿಲ್ಲ. ರೋಗಿಯೂ ಬಲುಬೇಗನೆ ಚೇತರಿಸಿಕೊಳ್ಳುತ್ತಾನೆ.

ಅಂಥ ಸೂಕ್ಷ್ಮ ತಂತ್ರಜ್ಞಾನ ಹಾಗೂ ಯಂತ್ರಗಳೆರಡೂ ಈಗ ಲಭ್ಯ ಇವೆ.  ಕಾರ್ಯನಿರತ ಕಾರ್ಯತತ್ಪರವಾದ ಅಂಗಗಳ ಸಂರಕ್ಷಣೆ ಸಾದ್ಯ ಎನ್ನುವುದೇ ಅತಿಮುಖ್ಯ. ಒಬ್ಬ ವ್ಯಕ್ತಿಯ ದಿನನಿತ್ಯದ ಜೀವನಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಚಿಕಿತ್ಸೆ ಸಾಧ್ಯ ಎನ್ನುವುದೇ ಆಶಾದಾಯಕ ಸಂಗತಿಯಾಗಿದೆ.
 (ಸಮಾಲೋಚಕರು, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT