ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯಕ್ಕೆ ತಡೆ

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಹೋರಿಗಳನ್ನು ಮಣಿಸುವ ಗ್ರಾಮೀಣ ಕ್ರೀಡೆ ಜಲ್ಲಿಕಟ್ಟು  ಹಾಗೂ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ­ಕೋರ್ಟ್ ನಿಷೇಧಿಸಿದೆ. ಮಾನವನ ಕ್ರೌರ್ಯದಿಂದ ಪ್ರಾಣಿಗಳಿಗೆ ರಕ್ಷಣೆ ನೀಡುವಂತಹ ಈ ತೀರ್ಪು ಮಹತ್ವದ್ದು. ‘1960ರ ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯಿದೆಯಡಿ ಹೋರಿಗಳಿಗೆ ಇರುವ ಹಕ್ಕುಗಳನ್ನು ಕಿತ್ತು­ಕೊಳ್ಳ­ಲಾಗದು ಅಥವಾ ಕಡಿಮೆ  ಮಾಡಲಾಗದು’ ಎಂದು ಕೋರ್ಟ್ ಹೇಳಿದೆ. ಅಷ್ಟೇ ಅಲ್ಲ, ಪ್ರಾಣಿಗಳಿಗೂ ಸಾಂವಿಧಾನಿಕ ಹಕ್ಕುಗಳನ್ನು ಸಂಸತ್ ನೀಡಬೇಕು  ಎಂದು ಕರೆ ನೀಡುವ ಮೂಲಕ ಪ್ರಾಣಿಗಳ ಹಕ್ಕುಗಳನ್ನು ಕೋರ್ಟ್  ಉನ್ನ­ತೀಕರಿಸಿದೆ. ಪೊಂಗಲ್ ಹಬ್ಬದ ಸಮಯದಲ್ಲಿ ಹೋರಿ­ಗಳನ್ನು ಪಳಗಿಸುವ ಜಲ್ಲಿಕಟ್ಟು ತಮಿಳುನಾಡಿನಲ್ಲಿ ತುಂಬಾ ಜನಪ್ರಿಯವಾದ  ಆಚರಣೆಯಾ­ಗಿದೆ.

ಕೆಲವು ವರ್ಷಗಳ ಹಿಂದೆ ಇದನ್ನು ಮದ್ರಾಸ್ ಹೈಕೋರ್ಟ್ ನಿಷೇಧಿ­ಸಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿತ್ತು. ನಂತರ ನಾಲ್ಕೇ ದಿನಗಳಲ್ಲಿ ಈ ನಿರ್ಧಾರ ಬದಲಿಸಿ, ಹೋರಿಗಳು, ಅದನ್ನು ಮಣಿಸು­ವ­ವರು ಹಾಗೂ ಪ್ರೇಕ್ಷಕರಿಗೆ  ರಕ್ಷಣೆ ಒದಗಿಸುವಂತಹ ಕೆಲವು ಮಾರ್ಗ­ಸೂಚಿಗಳನ್ನು ಪಾಲನೆ ಮಾಡಬೇಕೆಂಬ ಷರತ್ತುಗಳನ್ನು ವಿಧಿಸಿ ಜಲ್ಲಿಕಟ್ಟು ಆಚರಣೆ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಜಲ್ಲಿಕಟ್ಟು ನಿಯಂತ್ರಿಸುವ ಕಾನೂನನ್ನು 2011ರಲ್ಲಿ ತಮಿಳುನಾಡು ಸರ್ಕಾರ ಕೂಡ ಜಾರಿ­ಗೊಳಿಸಿತ್ತು. ಆದರೂ ಜಲ್ಲಿಕಟ್ಟು ಆಚರಣೆಗಳಲ್ಲಿ ಹಿಂಸೆ, ಕ್ರೌರ್ಯ ಮುಂದುವರಿದಿದ್ದರಿಂದ  ನಿಷೇಧಕ್ಕೆ ಈಗ ಸುಪ್ರೀಂಕೋರ್ಟ್ ಮುಂದಾದದ್ದು ಸರಿಯಾದ ಕ್ರಮ.

ಜಲ್ಲಿಕಟ್ಟು, ತಮಿಳು ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ. ಇಂತಹ ನಿಷೇಧ  ದಿಂದ ಸಾಂಸ್ಕೃತಿಕ ಆಚರಣೆಗಳಲ್ಲಿ ಸರ್ಕಾರದ ಹಸ್ತಕ್ಷೇಪವಾದಂತಾಗುತ್ತದೆ ಎಂದು ಜಲ್ಲಿಕಟ್ಟು ಆಚರಣೆ ಬೆಂಬಲಿಸುವವರು ವಾದ ಮಾಡುತ್ತಾರೆ.    ಆದರೆ ಪಾರಂಪರಿಕವಾಗಿ ಜಲ್ಲಿಕಟ್ಟು  ಎಂಬುದು ಒಂದು ಹೋರಿ ಹಾಗೂ ಒಬ್ಬ ಪುರುಷನ ನಡುವೆ ನಡೆಯುವ ಕ್ರೀಡೆಯಾಗಿರುತ್ತಿತ್ತು. ಆದರೆ  ಇತ್ತೀ­ಚಿನ ದಿನಗಳಲ್ಲಿ ಇದು ಒಂದು ಹೋರಿ ಹಾಗೂ ನೂರಾರು ಪುರುಷರ ನಡುವಿನ ಕ್ರೀಡೆಯಾಗಿ ಪರಿವರ್ತಿತವಾಗಿದೆ. ಹೀಗಾಗಿ  ಇಂದಿನ ಜಲ್ಲಿಕಟ್ಟು ಆಚರಣೆಗೆ ಶತಮಾನಗಳ ಪರಂಪರೆ ಇದ್ದರೂ ಅದರ ಆಚರಣೆ ಸಮ­ರ್ಥ­ನೀಯವಲ್ಲ. 

ಏಕೆಂದರೆ ಅದು ಕ್ರೌರ್ಯ ಹಾಗೂ ವಿಕೃತ ಸಂತೋಷದ ಪ್ರತೀಕ­ವಾಗಿದೆ. ಹೋರಿಗಳನ್ನು ಪಳಗಿಸುವ ಈ ಕ್ರೀಡೆಯಲ್ಲಿ  ಹೋರಿಗಳಿಗೆ ಖಾರದ ಪುಡಿ ಎರಚಿ ಅವು ಹೆಚ್ಚು ಆಕ್ರಮಣಶೀಲವಾಗುವಂತೆ ಮಾಡಲಾಗುತ್ತದೆ.  ಆ ಮೂಲಕ ಮನರಂಜನೆಯ ಅಂಶ ಹೆಚ್ಚಿಸಲಾಗುತ್ತದೆ. 2008ರಲ್ಲಿ ಸುಪ್ರೀಂಕೋರ್ಟ್ ನ ನಿಷೇಧ ಜಲ್ಲಿಕಟ್ಟುಗೆ ಮಾತ್ರ ಸೀಮಿತವಾಗಿತ್ತು.  ಆದರೆ ಈಗ ಈ ನಿಷೇಧದ ವ್ಯಾಪ್ತಿ ದೊಡ್ಡದಾಗಿದೆ.  ಇದು ಎತ್ತಿನ ಗಾಡಿ  ಹಾಗೂ ಎತ್ತುಗಳ ಓಟವನ್ನೂ ಒಳಗೊಂಡಿದೆ. ಈ ಮೂಲಕ  ಅತಿಯಾದ ಹಿಂಸೆ ಇರುವ ಆಚರಣೆಗಳಷ್ಟೇ ಅಲ್ಲ ಸ್ಪರ್ಧಾತ್ಮಕವಾದ ಆಚರಣೆಗಳಿಗೂ ರಾಷ್ಟ್ರ­ದಾದ್ಯಂತ ಕೋರ್ಟ್ ನಿಷೇಧ ಹೇರಲು ಮುಂದಾಗಿದೆ. ಸುಪ್ರೀಂ ಕೋರ್ಟ್ ನ ಈ ತೀರ್ಪು ಪ್ರಾಣಿಗಳಿಗೆ ನೀಡಲಾಗುವ ಹಿಂಸೆಯ ಬಗ್ಗೆ ಜನರ ಕಣ್ಣು ತೆರೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT