ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಬ್‌, ರೆಸಾರ್ಟ್‌ ಸೇರಿ 70 ಅಪರಾಧ ಕೃತ್ಯದಲ್ಲಿ ಭಾಗಿ: 11 ಡಕಾಯಿತರ ಬಂಧನ

Last Updated 24 ಏಪ್ರಿಲ್ 2014, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕ್ಲಬ್‌, ರೆಸಾರ್ಟ್‌, ರಿಯಲ್‌ ಎಸ್ಟೇಟ್ ಕಚೇರಿ ಮತ್ತಿತರ ಕಡೆ ಶಸ್ತ್ರಾಸ್ತ್ರ ತೋರಿಸಿ ಡಕಾಯಿತಿ ನಡೆಸಿದ್ದ 11 ಆರೋಪಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ದರೋಡೆ, ಡಕಾಯಿತಿ ಸೇರಿದಂತೆ 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ತಂಡ, ಭೂಗತ ಜಗತ್ತಿನಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ ಸರಣಿ ದುಷ್ಕೃತ್ಯ ಆರಂಭಿಸಿತ್ತು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಕುಖ್ಯಾತ ದರೋಡೆಕೋರ ಕುಣಿಗಲ್‌ ಗಿರಿಯ ಸಹಚರರಾದ ಸುಂಕದಕಟ್ಟೆಯ ಕೃಷ್ಣ (27), ಯಾಲಕ್ಕಯ್ಯ (34), ಶಶಿಕುಮಾರ್ (21), ಅಪ್ಪಾಜಿ (30), ಶಿವು ಅಲಿಯಾಸ್ ದಂಧೆ ಶಿವು (19),  ರಾಮನಗರದ ರಂಗೇಗೌಡ (28), ರವೀಶ ಅಲಿಯಾಸ್ ಜೈಲ್ ರವಿ (29), ರಾಜಣ್ಣ (35), ತುಮಕೂರು ಜಿಲ್ಲೆ ಯಡಿಯೂರಿನ ರವಿ ಅಲಿಯಾಸ್ ಗುಂಡ (27), ಮೇಲುಕೋಟೆಯ ಮಹೇಶ (21) ಹಾಗೂ ಭರತ್ ಬಂಧಿತರು. ಕುಣಿಗಲ್‌ ಗಿರಿ ಸೇರಿ ಐದು ಮಂದಿ ತಲೆಮರೆಸಿಕೊಂಡಿದ್ದಾರೆ.

‘ಆರೋಪಿಗಳು ರಾತ್ರಿ 7.30 ರಿಂದ 11 ಗಂಟೆಯ ಅಂತರದಲ್ಲೇ ದರೋಡೆ, ಡಕಾಯಿತಿ ಮಾಡುತ್ತಿದ್ದರು. ಮಾರ್ಚ್‌ 27ರಂದು ಬೇಗೂರು ರಸ್ತೆಯ ಎಸ್‌ಎಂಟಿ ಬಿಲ್ಡರ್ಸ್‌ ಅಂಡ್‌ ಡೆವಲಪರ್ಸ್‌ ಕಚೇರಿಗೆ ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿ ರಿಯಲ್‌ ಎಸ್ಟೇಟ್‌ ಉದ್ಯಮಿ ಕಿರಣ್‌ಕುಮಾರ್ ಎಂಬುವರಿಂದ ಹಣ,  ಚಿನ್ನಾಭರಣ ದೋಚಿದ್ದರು. ಅದೇ ಮಾದರಿಯಲ್ಲಿ ಏ. 2ರಂದು ಕೊಮ್ಮಘಟ್ಟ ರಸ್ತೆಯ ಸ್ಯಾಟಲೈಟ್  ಟೌನ್‌ ಕ್ಲಬ್‌ನಲ್ಲಿ ಡಕಾಯಿತಿ ಮಾಡಿದ್ದರು. ನಂತರ ಜಿಗಣಿ ಬಳಿಯ ರೆಸಾರ್ಟ್‌ಗೆ ನುಗ್ಗಿ ದರೋಡೆ ಮಾಡಿದ್ದರು’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಆರೋಪಿಗಳ ಪತ್ತೆಗೆ ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್‌ ಗೋಯಲ್‌ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ದೇವೇಗೌಡ ವೃತ್ತ ಬಳಿ ಇರುವ ಲಕ್ಷ್ಮೀ ವೆಂಕಟೇಶ್ವರ ರೀಕ್ರಿಯೇಷನ್‌ ಕ್ಲಬ್‌ನ ಮೇಲೆ ಡಕಾಯಿತರು ದಾಳಿ ನಡೆಸುವ ಬಗ್ಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ 10 ಮಂದಿ ಸಿಕ್ಕಿಬಿದ್ದರು. ಗಿರಿ, ಗೋವಿಂದ, ಭರತ್, ಜಗದೀಶ ಹಾಗೂ ಶ್ರೀನಿವಾಸ ಅಲಿಯಾಸ್ ವಾಸು ತಪ್ಪಿಸಿಕೊಂಡಿದ್ದರು’ ಎಂದು ಅವರು ವಿವರಿಸಿದರು.

ಪೊಲೀಸರನ್ನೇ ಬೆದರಿಸಿದ: ನಾಗರಬಾವಿ ಮುಖ್ಯ­ರಸ್ತೆಯ ದೀಪಾ ಕಾಂಪ್ಲೆಕ್ಸ್‌ ಬಳಿ ಬುಧವಾರ (ಏ.23) ರಾತ್ರಿ ಗಿರಿ ಮತ್ತು ಭರತ್‌ ಬೈಕ್‌ ಕಳವು ಮಾಡುವ ಯತ್ನದಲ್ಲಿದ್ದರು. ಆಗ ಗಸ್ತಿನಲ್ಲಿದ್ದ ಸಿಬ್ಬಂದಿ ಬೆನ್ನಟ್ಟಿದಾಗ ಗಿರಿ ಪಿಸ್ತೂಲು ತೋರಿಸಿ ಸಿಬ್ಬಂದಿಯನ್ನು ಬೆದರಿಸಿ ಪರಾರಿಯಾದ. ಆದರೆ ಭರತ್‌ ಸಿಕ್ಕಿಬಿದ್ದ. ಗಿರಿ ಈ ಹಿಂದೆಯೂ ಮೂರು ಸಲ ಪೊಲೀಸರನ್ನು ಬೆದರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಗಳ ಪ್ರಮುಖ ಆರೋಪಿ­ಯಾಗಿರುವ ಕುಣಿಗಲ್‌ ಗಿರಿ ಸಾಮಾನ್ಯವಾಗಿ ನಾಲ್ವರು ಸಹಚರರಾದ ಗೋವಿಂದ, ಭರತ್, ಜಗದೀಶ ಮತ್ತು ಶ್ರೀನಿವಾಸ ಅವರೊಂದಿಗೆ ಅಪರಾಧ ಕೃತ್ಯ ಎಸಗುತ್ತಿದ್ದ. ದೊಡ್ಡ ಮಟ್ಟದಲ್ಲಿ ಡಕಾಯಿತಿ ಮಾಡುವಾಗ ಮಾತ್ರ ಇತರರನ್ನು ಆಹ್ವಾನಿಸುತ್ತಿದ್ದ. ಮೊಬೈಲ್‌ ಬಳಕೆ ಮಾಡಿದರೆ ಪೊಲೀಸರಿಗೆ ಸುಲಭವಾಗಿ ಸುಳಿವು ಸಿಗುತ್ತದೆ ಎಂಬ ಕಾರಣಕ್ಕೆ ಯಾರಿಗೂ ಮೊಬೈಲ್‌ ಬಳಕೆ  ಮಾಡದಂತೆ ಸೂಚನೆ ನೀಡಿದ್ದ. ಹೀಗಾಗಿ ಸುಳಿವು ಸಿಗದೆ ಪೊಲೀಸರು ಪರದಾಡಬೇಕಾಯಿತು.

ಜಾಮೀನು ಕೊಡಿಸಲು ದರೋಡೆ: ಈ ಹಿಂದೆ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ಕುಣಿಗಲ್‌ ಗಿರಿ, ಅಲ್ಲಿಂದಲೇ ಸಹಚರರ ಮೂಲಕ ಅಪರಾಧ ಕೃತ್ಯಗಳನ್ನು ಮಾಡಿಸುತ್ತಿದ್ದ. ನಂತರ ಆತನಿಗೆ ಜಾಮೀನು ಕೊಡಿಸಲು ಹಣ ಹೊಂದಿಸುವ ಉದ್ದೇಶದಿಂದ ಸಹಚರರು 2013ರ ನವೆಂಬರ್‌ ತಿಂಗಳಿನಿಂದ  ರಸ್ತೆಯಲ್ಲಿ ಬೈಕ್‌ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡಲು ಆರಂಭಿಸಿದರು. ಆ ಹಣದಲ್ಲೇ 2014ರ ಜನವರಿ 10ರಂದು ಗಿರಿಗೆ ಜಾಮೀನು ಕೊಡಿಸಿದ್ದರು ಎಂಬುದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ.

ಆತ ಜೈಲಿನಿಂದ ಹೊರಬಂದ ನಂತರ ದೊಡ್ಡ ಮಟ್ಟದಲ್ಲಿ ದರೋಡೆ ಮಾಡಲು ನಿರ್ಧರಿಸಿದ್ದ. ಇತ್ತೀಚೆಗೆ ಚಂದ್ರಾಲೇಔಟ್‌ನಲ್ಲಿ ಭರತ್‌ ಮತ್ತು ವಾಸು ಸೇರಿ ವ್ಯಕ್ತಿಯೊಬ್ಬರಿಗೆ ಮಾರಕಾಸ್ತ್ರದಿಂದ ಬೆದರಿಸಿ ಚಿನ್ನದ ಸರ ದೋಚಿದ್ದರು. ಆ ದೃಶ್ಯಾವಳಿ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಅದರಲ್ಲಿ ಭರತ್‌ನ ಮುಖ ಸ್ಪಷ್ಟವಾಗಿ ಕಾಣಿಸುತ್ತಿದ್ದರಿಂದ ಆರೋಪಿಗಳ ಸುಳಿವು ಸಿಕ್ಕಿತ್ತು. ಆದರೆ, ಈ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಎಚ್ಚೆತ್ತುಕೊಂಡ ಗಿರಿ, ದರೋಡೆ ಮಾಡುವ ರೀತಿಯನ್ನೇ ಬದಲಾಯಿಸಿ­ಕೊಂಡ. ಬಳಿಕ ಸಣ್ಣಪುಟ್ಟ ದರೋಡೆ ಬಿಟ್ಟು, ಕ್ಲಬ್‌, ರೆಸಾರ್ಟ್‌, ರಿಯಲ್‌ ಎಸ್ಟೇಟ್‌ ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಡಕಾಯಿತಿ ಆರಂಭಿಸಿದ್ದ ಎಂದು ಹೇಳಲಾಗಿದೆ.

ಡೈರಿಯಲ್ಲಿ ಅಪರಾಧ ಮಾಹಿತಿ
ಪೊಲೀಸರು ಕುಣಿಗಲ್‌ನಲ್ಲಿರುವ ಗಿರಿ ಮನೆ ಮೇಲೆ ದಾಳಿ ನಡೆಸಿ ಆತನ ಡೈರಿ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತ­ನಾಡಿದ ಡಿಸಿಪಿ ಅಭಿಷೇಕ್ ಗೋಯಲ್, ‘ಗಿರಿ ಇತ್ತೀಚೆಗೆ ಡೈರಿ ಬರೆಯಲು ಆರಂಭಿಸಿದ್ದ. ತನ್ನಿಂದ ಆದ ಅಪರಾಧ ಕೃತ್ಯಗಳನ್ನು 27 ಪುಟಗಳಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾನೆ’ ಎಂದರು.

‘2011ರಲ್ಲಿ ಬಳ್ಳಾರಿಯಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ, ₨ 3 ಕೋಟಿ ಹಣ ದೋಚಿದ್ದೆ. ಆ ಹಣದ ಚೀಲವನ್ನು ಕಾರಿನ­ಲ್ಲಿ­ಟ್ಟುಕೊಂಡು ಹೊರಡುವ ವೇಳೆ, ಹಿಂದಿನಿಂದ ಎದುರಾಳಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ. ಹೀಗಾಗಿ ಆತನನ್ನು ಕೊಲ್ಲಲು ಮಚ್ಚು ತೆಗೆದುಕೊಂಡು ಕಾರಿನಿಂದ ಇಳಿಯು­ತ್ತಿದ್ದಂತೆ ಆ ತಂಡದವರೇ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು­ವಾಗ ಪೊಲೀಸರು ನನ್ನನ್ನು ಬಂಧಿಸಿದ್ದರು’ ಎಂದು ಆತ ಡೈರಿಯಲ್ಲಿ ಬರೆದಿದ್ದಾನೆ.

ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಚಿತ್ರ ನಟ ಹರ್ಷ ಅವರ ಮನೆಯಲ್ಲಿ ಮಾಡಿದ ದರೋಡೆ, ಮಾಗಡಿ ರಸ್ತೆ, ಕೊಮ್ಮಘಟ್ಟ ರಸ್ತೆ, ಚಂದ್ರಾಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು ಬಳಿ ಮಾಡಿದ ದರೋಡೆಯ ವಿವರಗಳನ್ನು ಡೈರಿಯಲ್ಲಿ ನಮೂದಿಸಿದ್ದಾನೆ.

ಸುಳಿವು ಸಿಕ್ಕಿದ್ದು ಹೇಗೆ?
ನಾಲ್ಕೈದು ತಿಂಗಳಿಂದೀಚೆಗೆ ನಗರದ ಒಳಭಾಗ ಹಾಗೂ ಹೊರವಲಯಗಳಲ್ಲಿ ಡಕಾಯತಿ ಪ್ರಕರಣಗಳು ಹೆಚ್ಚಾದ ಕಾರಣ ಒಂದೇ ತಂಡದ ಸದಸ್ಯರು ಈ ಕೃತ್ಯ ಎಸಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಯಿತು. ಎಲ್ಲ ಪ್ರಕರಣಗಳ ವಿವರಗಳನ್ನು ತರಿಸಿಕೊಂಡು ಅಧ್ಯಯನ ಮಾಡಲಾಯಿತು. ಜತೆಗೆ ಕಳೆದ ಆರು ತಿಂಗಳಿನಿಂದ ಜೈಲಿನಿಂದ ಬಿಡುಗಡೆಯಾದವರ ಪಟ್ಟಿಯನ್ನು ತರಿಸಿಕೊಂಡು ಪರಿಶೀಲಿಸಲಾಯಿತು. ಆಗ ಜ.10ರಂದು ಬಿಡುಗಡೆಯಾದ ಕುಣಿಗಲ್‌ ಗಿರಿಯ ಮೇಲೆ ಅನುಮಾನ ದಟ್ಟವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಜಿಗಿಣಿ ಬಳಿಯ ರೆಸಾರ್ಟ್‌ನಲ್ಲಿ ದರೋಡೆ ಮಾಡಿದ ನಂತರ ಗಿರಿ ಮತ್ತು ತಂಡ ಹೋಟೆಲ್‌ವೊಂದರಲ್ಲಿ ಮೋಜಿನ ಕೂಟ ನಡೆಸಿತ್ತು. ಆ ಹೋಟೆಲ್‌ನಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಗಿರಿಯ ಚಲನವಲನಗಳು ದಾಖಲಾಗಿದ್ದವು. ಆ ಕೂಟದಲ್ಲಿ ಭರತ್‌ ಕೂಡ ಇದ್ದ.
ಗಿರಿಯ ಆಪ್ತ ಸಹಚರನಾಗಿದ್ದ  ಭರತ್‌, ಇತ್ತೀಚೆಗೆ ಚಂದ್ರಾಲೇಔಟ್‌ನ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಗತಿ ಗೊತ್ತಿತ್ತು.  ಹೀಗಾಗಿ ಈ ತಂಡವೇ ನಗರದಲ್ಲಿ ಮತ್ತೆ ಕೃತ್ಯಗಳನ್ನು ಆರಂಭಿಸಿದೆ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡು ಬಲೆ ಬೀಸಿದ್ದರು.

‘ರಾಷ್ಟ್ರ ಮಟ್ಟದಲ್ಲಿ ಕುಖ್ಯಾತರಾಗುವ ಆಸೆ’
ದರೋಡೆ, ಡಕಾಯಿತಿ ಮೂಲಕ ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಪಡೆಯಬೇಕು ಎಂಬುದು ಬಂಧಿತ ಆರೋಪಿಗಳ ಆಸೆ­ಯಾಗಿತ್ತು. ರಾಷ್ಟ್ರಪತಿ ಹಾಗೂ ಪ್ರಧಾನಿ ಬಾಯಲ್ಲಿ ತಮ್ಮ ತಂಡದ ಹೆಸರು ಬರಬೇಕು. ಈ ಗುರಿ ಈಡೇರಿದ ಬಳಿಕ ಅಪರಾಧ ಕೃತ್ಯ ನಿಲ್ಲಿಸಿ ನ್ಯಾಯಯುತವಾಗಿ ಬದುಕಬೇಕು ಎಂಬುದು ಅವರ ಕನಸಾಗಿತ್ತು.

ಇವರು ರಾತ್ರಿ 7.30 ರಿಂದ 11ಗಂಟೆಯ ಅಂತರದಲ್ಲಿ ಬೈಕ್‌ಗಳಲ್ಲಿ ಬಂದು ಕೃತ್ಯ ಎಸಗುತ್ತಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಆ ಅವಧಿಯಲ್ಲಿ ನಗರದೆಲ್ಲೆಡೆ ನಾಕಾಬಂಧಿ ಹಾಕಿ ಒಟ್ಟು 15 ಸಾವಿರ ಬೈಕ್‌ಗಳ ತಪಾಸಣೆ ಮಾಡಲಾಗಿತ್ತು. ಆರೋಪಿಗಳನ್ನು ಹಿಡಿದ ತಂಡಕ್ಕೆ ಡಿಜಿಪಿ ಬಹುಮಾನ ಘೋಷಿಸಿದ್ದಾರೆ.
– ರಾಘವೇಂದ್ರ ಔರಾದಕರ್, ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT