ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧರ್ವ ಲೋಕದ ಅಕ್ಷರಚಿತ್ರಗಳು

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಭಾರತರತ್ನ ಪಂ. ಭೀಮಸೇನ ಜೋಶಿ : ನಾವು ನೀವು ಕಂಡಂತೆ
ಲೇ: ನಾಗರಾಜ ಹವಾಲ್ದಾರ್‌, ಪು: 224; ಬೆ: ರೂ. 400, ಪ್ರ: ಸುನಾದ ಕಲಾ ಪ್ರತಿಷ್ಠಾನ, ನಂ 140, ಸುಕೃತಿ ನಿವಾಸ, 5ನೇ ಮುಖ್ಯರಸ್ತೆ, ಐ.ಟಿ.ಐ ಲೇಔಟ್, ವಿದ್ಯಾಪೀಠ, ಬನಶಂಕರಿ ಮೂರನೆಯ ಹಂತ, ಬೆಂಗಳೂರು– 560085

ಸ್ವರ ಸನ್ನಿಧಿ
ಲೇ: ನಾಗರಾಜ ಹವಾಲ್ದಾರ್‌, ಪು: 298; ಬೆ: ರೂ. 225, ಪ್ರ: ವಸಂತ ಪ್ರಕಾಶನ , ನಂ 360, 10 ನೇ ಬಿ ಮುಖ್ಯರಸ್ತೆ , 3ನೇ ಬ್ಲಾಕ್‌ ಜಯನಗರ,
ಬೆಂಗಳೂರು - 560011


ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕಂಡು ಬರುವ ಗುರು-ಶಿಷ್ಯ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಮೌಖಿಕ ಸಂಸ್ಕೃತಿಯಲ್ಲಿ ಸಂಗೀತವನ್ನು ಶ್ರವಣ ವಿದ್ಯೆಯೆಂದೇ ಪ್ರತಿಪಾದಿಸಲಾಗಿದೆ. ಸಾಮಾನ್ಯವಾಗಿ ನಮ್ಮ ಶಾಸ್ತ್ರೀಯ ಸಂಗೀತ ಕಲಾವಿದರು ತಮ್ಮ ಸಂಗೀತ ವೃತ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬರೆಯುವುದು ವಿರಳ. ಬರವಣಿಗೆಯಲ್ಲಿ ದಾಖಲಿಸಬೇಕಾದ ಸಂದರ್ಭ ಬಂದಾಗ ಎಷ್ಟೋ ಕಲಾವಿದರು ಉತ್ಪ್ರೇಕ್ಷೆಯಲ್ಲಿ ತೊಡಗುವುದು ಹೆಚ್ಚು. ಅತಿಯಾದ ವೈಭವೀಕರಣ, ವಸ್ತುನಿಷ್ಠ ನಿರೂಪಣೆಯ ಕೊರತೆ– ಇವೆಲ್ಲ ಎದ್ದು ಕಾಣುವಂತಿರುತ್ತವೆ. ಹಾಗೆಂದು ಸಂಗೀತಗಾರರು ತಮ್ಮ ಕಲೆಯ ಬಗ್ಗೆ ಅರ್ಥಪೂರ್ಣ ಕೃತಿಗಳನ್ನು ಬರೆದಿಲ್ಲವೆಂದೇನೂ ಅಲ್ಲ. ಈ ಸಾಲಿಗೆ ಸೇರ್ಪಡೆಗೊಳ್ಳುವ ಇತ್ತೀಚಿನ ಎರಡು ವಿಶಿಷ್ಟ ಕೃತಿಗಳೆಂದರೆ ‘ಸ್ವರ ಸನ್ನಿಧಿ’ ಮತ್ತು ‘ಭಾರತ ರತ್ನ ಭೀಮ್ ಸೇನ್ ಜೋಶಿ : ನಾವು-ನೀವು ಕಂಡಂತೆ’. ಆಪ್ಯಾಯಮಾನ ಶೈಲಿ, ಸರಳ–ಮನೋಜ್ಞ ನಿರೂಪಣೆ, ನವಿರಾದ ಹಾಸ್ಯದ ಲೇಪನ, ವಿಮರ್ಶಾತ್ಮಕ ಪ್ರಜ್ಞೆ, ಮನಸ್ಸನ್ನು ಮಿಡಿಯುವ ಭಾವುಕತೆ, ಜೀವನ ಪ್ರೀತಿ– ಇವೆಲ್ಲವುಗಳನ್ನೂ ಒಳಗೊಂಡ ಈ ಎರಡು ಕೃತಿಗಳನ್ನು ನಾಗರಾಜರಾವ್ ಹವಾಲ್ದಾರ್ ನೀಡಿದ್ದಾರೆ.

ಭಾರತ ರತ್ನ ಪಂಡಿತ್ ಭೀಮ್‌ಸೇನ್ ಜೋಶಿಯವರ ಅಗ್ರ ಶಿಷ್ಯರಾದ ಪಂಡಿತ್ ಮಾಧವ್ ಗುಡಿ ಅವರ ಶಿಷ್ಯರಾದ ನಾಗರಾಜ್‌ರಾವ್ ಹವಾಲ್ದಾರ್ ನಮ್ಮ ನಾಡಿನ ಹೆಸರಾಂತ ಹಿಂದೂಸ್ತಾನಿ ಗಾಯಕರು. ತಾವೊಬ್ಬ ಸಂವೇದನಾಶೀಲ ಸಂಗೀತ ಕಲಾವಿದ ಅಷ್ಟೇ ಅಲ್ಲದೆ, ಸುಲಲಿತವಾಗಿ ಬರೆಯಬಲ್ಲ ಉತ್ತಮ ಲೇಖಕನೆಂದೂ ಈ ಎರಡು ಪುಸ್ತಕಗಳ ಮೂಲಕ ಅವರು ಸಾಬೀತು ಮಾಡಿದ್ದಾರೆ. ತಮ್ಮ ಕಂಠಸಿರಿಯಿಂದ ಶ್ರೋತೃಗಳ ಮನಸ್ಸನ್ನು ಸೂರೆಗೊಂಡಿರುವ ಹವಾಲ್ದಾರ್ ಇಲ್ಲಿ ಲೇಖಕನಾಗಿ ಸಂಗೀತ ಕಲಾವಿದರ ಕುರಿತು ರಸವತ್ತಾದ ವ್ಯಕ್ತಿ ಚಿತ್ರಣಗಳ ಮೂಲಕ ನಮ್ಮನ್ನು ಬೆರಗುಗೊಳಿಸುತ್ತಾರೆ. ರಾಗ ಸಂಗೀತದ ಜೀವಾಳವಾಗಿರುವ ಭಾವಪೂರ್ಣ ಖ್ಯಾಲ್ ಗಾಯನವನ್ನು ಆಸ್ವಾದಿಸುತ್ತಿರುವಾಗ ಹೃದಯ ತುಂಬಿ ಬರುವಂತೆ ಹವಾಲ್ದಾರರ ಶಬ್ದಚಿತ್ರಿಕೆಗಳು ನಮ್ಮನ್ನು ಭಾವಪರವಶರನ್ನಾಗಿ ಮಾಡುತ್ತವೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎನ್ನುವ ಗಂಧರ್ವ ಲೋಕದ ದಿಗ್ಗಜರಾದ ಅಬ್ದುಲ್ ಕರೀಂ ಖಾನ್, ಸವಾಯಿ ಗಂಧರ್ವ, ಬಾಲ ಗಂಧರ್ವ, ಕೇಸರ್ ಬಾಯಿ, ಹೀರಾಬಾಯಿ ಬಡೋದೆಕರ್, ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ವಸಂತ ಕನಕಾಪುರ್, ವಿಶ್ವೇಶ್ವರನ್, ಫಿರೋಜ್ ದಸ್ತೂರ್, ಶೇಷಾದ್ರಿ ಗವಾಯಿ, ಪಂಚಾಕ್ಷರಿ ಮತ್ತಿಗಟ್ಟಿ, ಕುಮಾರ್ ಗಂಧರ್ವ, ಬಾಲೇಖಾನ್– ಹೀಗೆ ದಂತಕತೆಗಳಾಗಿ ಹೋದ ಶ್ರೇಷ್ಠ ಕಲಾವಿದರ ವ್ಯಕ್ತಿತ್ವಗಳನ್ನು ತಮ್ಮ ಕಿರು ಲೇಖನಗಳಲ್ಲಿ ಹವಾಲ್ದಾರ್ ಸೊಗಸಾಗಿ ಅನಾವರಣಗೊಳಿಸಿದ್ದಾರೆ. ಸಂಗೀತಾಸಕ್ತರಿಗೆ, ಸಂಗೀತದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಸಂಗೀತದಲ್ಲಿ ಯಾವ ವಿಶೇಷ ಪರಿಣತಿಯನ್ನೂ ಹೊಂದಿರದ ಸಾಮಾನ್ಯ ಓದುಗರಿಗೂ ಈ ಚಿತ್ರಣಗಳು ಆಕರ್ಷಕ ಹಾಗೂ ಸ್ಫೂರ್ತಿದಾಯಕ ಎನಿಸಬಲ್ಲವು. 

‘ಸ್ವರ ಸನ್ನಿಧಿ’ ಪುಸ್ತಕದಲ್ಲಿ 69 ಲೇಖನಗಳಿವೆ. ಕಲಾವಿದರನ್ನು ಸಮಾಜದ ಅವಿಭಾಜ್ಯ ಅಂಗವಾಗಿ, ಅವರ ಸಂಪರ್ಕ-ಒಡನಾಟ, ಸಂವಾದ, ನಡೆ-ನುಡಿ, ಕಷ್ಟ-ಸುಖಗಳನ್ನು ತೆರೆದಿಡುವ ಪ್ರಯತ್ನ ಎಂದು ತಮ್ಮ ಬರಹಗಳನ್ನು ಲೇಖಕರು ವಿವರಿಸುತ್ತಾರೆ. ಅವರ ಲೇಖನಗಳ ಹರಹು ವಿಸ್ತಾರವಾಗಿದೆ. ‘ರಾಯಚೂರಿನಿಂದ ಬಂದಿತ್ತು ಮನೆಗೊಂದು ಮಾಣಿಕ್ಯ’, ‘ಸಂಚಾರಿ ವಿಶ್ವವಿದ್ಯಾನಿಲಯವಾಗಿದ್ದ ಪಂಚಾಕ್ಷರಿ ಗವಾಯಿಗಳು’, ‘ಕಾಡಿನ ಮಧ್ಯೆ ಭೀಮಸೇನ ಘರ್ಜನೆ’, ‘ಭೈರವ್ ಜೀಸಸ್ ಸಂವಾದ’, ‘ಸುಧಾಮಯಿ - ನಿನಗೆ ನೂರಾರು ವಸಂತಗಳು ಬರಲಿ’, ‘ನೂರು ಭಾವಗಳಿಗೆ ದನಿಯಾದ
ಎಸ್. ಜಾನಕಿ’– ಮೊದಲಾದ ಶೀರ್ಷಿಕೆಗಳು ನಮ್ಮ ಗಮನ ಸೆಳೆಯುತ್ತವೆ. ಹಿರಿಯ ಸಂಗೀತ ಕಲಾವಿದರ ಬಗ್ಗೆ ಹವಾಲ್ದಾರರಿಗಿರುವ ಗೌರವಾದರಗಳು, ಅವರ ಅನನ್ಯವಾದ ಗುರುಭಕ್ತಿ, ತಮ್ಮ ಬಾಳಸಂಗಾತಿ ಸುಧಾಮಯಿಯವರ ಸಾಂಗತ್ಯ, ಪ್ರೀತಿ, ತ್ಯಾಗಗಳಿಗೆ ಅವರು ಸ್ಪಂದಿಸುವ ರೀತಿ ತುಂಬ ಸುಂದರವಾಗಿ ಮೂಡಿಬಂದಿದೆ.

ಇಲ್ಲಿನ ಬರಹಗಳ ಮೂಲಕ ನಾಗರಾಜ ಹವಾಲ್ದಾರರ ನಾದ ಪ್ರಪಂಚ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ವೃತ್ತಿ ಜೀವನ ಹಾಗೂ ಸಂಗೀತವನ್ನು ಒಟ್ಟಗೇ ನಿಭಾಯಿಸುವ ಪರಿಸ್ಥಿತಿಯಲ್ಲಿ ಅವರು ಎದುರಿಸಿದ ಸವಾಲುಗಳು, ಸಂದಿಗ್ಧತೆಗಳು, ವೃತ್ತಿಗೆ ತಿಲಾಂಜಲಿಯಿತ್ತು ಎಲ್ಲ ಸಮಯವನ್ನೂ ತಮ್ಮ ಸಂಗೀತ ಸಾಧನೆಗೇ ಮುಡಿಪಾಗಿಟ್ಟದ್ದು ಹಾಗೂ ಕುಟುಂಬ ವರ್ಗದವರ ಬೆಂಬಲ– ಈ ಎಲ್ಲ ವಿವರಗಳನ್ನು ಸ್ವಾರಸ್ಯಕರವಾಗಿ ಬಣ್ಣಿಸುತ್ತ ಶಾಸ್ತ್ರೀಯ ಸಂಗೀತ ಕಲಾವಿದನಾಗಿ ತನ್ನ ಜೀವನದಲ್ಲಿ ನಡೆದ ಅವಿಸ್ಮರಣೀಯ ಘಟನೆಗಳನ್ನು ಹವಾಲ್ದಾರ್ ಮೆಲುಕು ಹಾಕುವ ರೀತಿ ಹೃದಯಸ್ಪರ್ಶಿಯಾಗಿದೆ.

‘ಹಾಡೊಂದ ಹಾಡುವೆ’ ಲೇಖನದಲ್ಲಿ ಬರುವ ಒಂದು ಮನಮುಟ್ಟುವ ಪ್ರಸಂಗ ಇದಕ್ಕೆ ಉದಾಹರಣೆ. ತನ್ನ ಸಂಗೀತದ ಅಭಿಮಾನಿಗಳಾದ ಡಾ. ಎ.ಜಿ. ಕೃಷ್ಣ ಹಾಗೂ ಅವರ ಪತ್ನಿ ಸುಮಿತ್ರರವರ ಬಗ್ಗೆ ಬರೆಯುತ್ತ ಹವಾಲ್ದಾರ್– ‘‘ಒಂದು ರಾತ್ರಿ ಹನ್ನೆರಡು ಗಂಟೆಗೆ ಪ್ರೊ. ಕೃಷ್ಣ ಅವರಿಂದ ನನಗೆ ಫೋನು ಬಂತು. ನಾಗರಾಜ, ಅರ್ಜೆಂಟ್ ನನ್ನ ಮನೆಗೆ ಬನ್ನಿ, ನನ್ನ ವಿನಂತಿ ಎಂದರು. ನಾನು ದೌಡಾಯಿಸಿದೆ. ಹೋಗಿ ನೋಡಿದರೆ ಸುಮಿತ್ರ ಕೊನೆಯುಸಿರೆಳೆದಿದ್ದರು. ಕೃಷ್ಣ ಮೌನವಾಗಿದ್ದವರು, ‘ನೋಡಪ್ಪಾ, ಸಾಯುವ ಮುಂಚೆ ಅವಳು ನೀನು ಹಾಡ್ತಿದ್ದ ದಾರಿ ಯಾವುದಯ್ಯಾ ವೈಕುಂಠಕೆ ಕೇಳಬೇಕು ಅಂದಳು’ ಎಂದು ಗದ್ಗದಿತರಾದರು. ‘ದಯವಿಟ್ಟು ಶವಸಂಸ್ಕಾರಕ್ಕೆ ಮುಂಚೆ ಅವಳೆದುರು ಒಮ್ಮೆ ಹಾಡುವೆಯಾ?’ ಎಂದು ಕೇಳಿದರು. ಮಧ್ಯರಾತ್ರಿ ನಿರ್ಜೀವ ದೇಹದ ಮುಂದೆ ನನ್ನ ಹಾಡು ದಾರಿ ಯಾವುದಯ್ಯಾ ವೈಕುಂಠಕೆ, ಕೃಷ್ಣ ಮತ್ತು ನಾನು ಇಬ್ಬರ ಕಣ್ಣಲ್ಲೂ ನೀರು’’. ಈ ಲೇಖನಗಳನ್ನು ಅನುರಾಗ ಮಾಲಿಕೆ ಎಂದು ಹವಾಲ್ದಾರ್ ಕರೆಯುತ್ತಾರೆ.

ಮುನ್ನುಡಿಯಲ್ಲಿ ಕವಿ
ಎಚ್.ಎಸ್. ವೆಂಕಟೇಶಮೂರ್ತಿ ಅವರು ಅಭಿಪ್ರಾಯಪಟ್ಟಿರುವಂತೆ ‘ಸ್ವರ ಸನ್ನಿಧಿ’ ಓದುವವರಿಗೆಲ್ಲ ಪ್ರಿಯವಾಗುವಂಥ ಪುಸ್ತಕ.
ಇಪ್ಪತ್ತಾರು ವರ್ಷಗಳ ಕಾಲ ಪಂಡಿತ್ ಭೀಮ್‌ಸೇನ್ ಜೋಷಿಯವರ ಪರಮ ಶಿಷ್ಯರಾಗಿದ್ದ ಪಂಡಿತ್ ಮಾಧವ ಗುಡಿಯವರ ಶಿಷ್ಯರಾದ ನಾಗರಾಜ ಹವಾಲ್ದಾರ್‌ ಅವರು ತಮ್ಮ ಗುರುವಿನ ಗುರುಗಳಾದ ಭೀಮ್‌ಸೇನ್ ಜೋಷಿಯವರ ಬಗ್ಗೆ ಬರೆದ ಪುಸ್ತಕ ‘ಭಾರತ ರತ್ನ ಪಂ. ಭೀಮಸೇನ ಜೋಷಿ : ನಾವು -ನೀವು ಕಂಡಂತೆ’. ಹಿಂದೂಸ್ತಾನಿ ಸಂಗೀತ ಪ್ರೇಮಿಗಳ ಮನಸ್ಸನ್ನು ಸೂರಗೊಳ್ಳುವ ಕೃತಿಯಿದು. ನಮ್ಮ ದೇಶದ ಮೇರು ಪ್ರತಿಭೆ, ಸುಪ್ರಸಿದ್ಧ ಗಾಯಕ ಪಂಡಿತ್ ಭೀಮಸೇನ ಜೋಷಿಯವರ ಗಾನ ಮಾಧುರ್ಯಕ್ಕೆ, ಶರ ವೇಗದಲ್ಲಿ ಸಾಗುವ ಅವರ ಮಿಂಚಿನಂಥ ತಾನುಗಳಿಗೆ, ಜಲಪಾತದಂತೆ ಭೋರ್ಗರೆಯುವ ಅವರ ದಿವ್ಯ ಆಲಾಪನೆಗೆ ಮರುಳಾಗದವರು ಯಾರು? ಅದೇ ಪರಂಪರೆಯಲ್ಲಿ ಬಂದಿರುವ ಹವಾಲ್ದಾರರಿಗೆ ತಮ್ಮ ಪರಮ ಗುರುಗಳ ಜೀವನದಲ್ಲಿ ನಡೆದ ಅನೇಕ ರೋಚಕ ಘಟನೆಗಳನ್ನು ಚಿತ್ರಿಸಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಹವಾಲ್ದಾರರು ತಮ್ಮ ಗುರುಗಳ ಮೂಲಕ ಭೀಮಸೇನ ಜೋಷಿಯವರ ಜೀವನದ ಬಗ್ಗೆ ಅನೇಕ ಮಾಹಿತಿಗಳು, ಒಳನೋಟಗಳು ಪ್ರಾಪ್ತಿಯಾಗಿದ್ದು ಸಹಜವೇ. ಅದರ ಒಂದು ಝಲಕ್ ಮಾಧವ ಗುಡಿಯವರ ಅಂತರ್ದನಿಯಾಗಿ , ಅಂತರಗಂಗೆಯಾಗಿ ಇಲ್ಲಿ ಹರಿದಿದೆ ಎಂದು ಲೇಖಕರು ಹೇಳುತ್ತಾರೆ.

ಭೀಮಸೇನರ ಶಾಸ್ತ್ರೀಯ ಗಾಯನದ ಧ್ವನಿಮುದ್ರಿಕೆಗಳನ್ನು ಮತ್ತೆ ಮತ್ತೆ ಕೇಳುತ್ತ ಅವರ ಅಲೌಕಿಕವಾದ ಗಾಯನದ ಸೌಂದರ್ಯವನ್ನು ಸವಿಯುವವರಿಗೆ ಅವರ ಬದುಕಿನ ಬಗ್ಗೆ ಕುತೂಹಲ ಇರುವುದು ಸಹಜವೇ. ಜೋಷಿಯವರ ಆಕರ್ಷಕ ವ್ಯಕ್ತಿತ್ವದ ಹಲವು ಮುಖಗಳನ್ನು ಇಲ್ಲಿ ಲೇಖಕರು ಯಶಸ್ವಿಯಾಗಿ ಚಿತ್ರಿಸಿದ್ದಾರೆ. ಇಲ್ಲಿ ಬರುವ ಅನೇಕ ಸ್ವಾರಸ್ಯಕರ ಸಂಗತಿಗಳು ಸಂಗಿತಾಸಕ್ತರಿಗೆ, ವಿದ್ಯಾರ್ಥಿಗಳಿಗೆ, ಸಂಗೀತ ಕಲಾವಿದರಿಗೆ ಸ್ಫೂರ್ತಿ ನೀಡುವಂತಿವೆ.

ಜೋಷಿಯವರನ್ನು ಪರಮ ಗುರುಗಳು ಎಂದೇ ಕರೆಯುವ ಹವಾಲ್ದಾರ್‌ರವರು ಪಂಡಿತ್‌ಜೀಯವರ ಬಾಲ್ಯ, ಉಸ್ತಾದ್ ಅಬ್ದುಲ್ ಕರೀಂ ಖಾನ್‌ರವರ ಧ್ವನಿಮುದ್ರಿಕೆಯನ್ನು ಕೇಳಿ, ಸಂಗೀತ ಕಲಿಯುವ ಹೆಬ್ಬಯಕೆಯಿಂದ ಮನೆಯಿಂದ ಓಡಿ ಹೋಗಿದ್ದು, ನಂತರದ ಅಲೆದಾಟ, ಸವಾಯಿ ಗಂಧರ್ವರಲ್ಲಿ ಶಿಷ್ಯತ್ವ, ಗುರು ಭಗಿನಿ ಗಂಗೂಬಾಯಿಯವರೊಡನೆ ಇದ್ದ ಬಾಂಧವ್ಯ– ಇವುಗಳನ್ನು ರಸವತ್ತಾಗಿ ವರ್ಣಿಸುತ್ತಾರೆ. ಜೋಷಿಯವರ ಧ್ವನಿಮುದ್ರಿಕೆಗಳು, ಅಪ್ರಚಲಿತ ಹಾಗೂ ಪ್ರಚಲಿತ ರಾಗಗಳ ಬಗ್ಗೆ ಅವರಿಗಿದ್ದ ಅಭಿಪ್ರಾಯಗಳು, ಚಲನಚಿತ್ರರಂಗಕ್ಕೆ ಅವರಿತ್ತ ಅಮೋಘ ಕೊಡುಗೆ, ಅವರ ಕಾರ್ ಶೋಕಿ, ಸಮಕಾಲೀನ ಕಲಾವಿದರು, ಶಿಷ್ಯರು ಮತ್ತು ಮಕ್ಕಳು ಅವರನ್ನು ಅರ್ಥೈಸಿಕೊಂಡ ಬಗೆ ಸೇರಿದಂತೆ ಹಲವು  ಸ್ವಾರಸ್ಯಕರವಾದ ಪ್ರಸಂಗಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಕನ್ನಡದ ‘ಸಂಧ್ಯಾರಾಗ’ ಚಲನಚಿತ್ರಕ್ಕೆ ಜೋಷಿಯವರು ಪೂರ್ವಾಕಲ್ಯಾಣ್ ರಾಗದಲ್ಲಿ ಅದ್ಭುತವಾಗಿ ಹಾಡಿದ ‘ನಂಬಿದೆ ನಿನ್ನ ನಾದದೇವತೆಯೆ’ ಹಾಡು, ಅನಂತನಾಗ್-ಶಂಕರ್‌ನಾಗ್ ಸಹೋದರರ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಚಿತ್ರಕ್ಕೆ ಅವರು ಭಾವಪೂರ್ಣವಾಗಿ ಹಾಡಿದ ಪುರಂದರದಾಸರ ದೇವರನಾಮ ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ಅಮೋಲ್ ಪಾಲೇಕರ್‌ರವರ ಚಿತ್ರಕ್ಕೆ ಜೈದೇವ್ ವರ್ಮಾ ನಿರ್ದೇಶನದಲ್ಲಿ ಜೋಷಿಯವರು ಹಾಡಿದ ಎರಡು ಅವಿಸ್ಮರಣಿಯ ಸಂತ ತುಲಸೀದಾಸರ ಭಜನ್‌ಗಳು- ಮೊದಲಾದ ಸಂಗತಿಗಳು ತುಂಬ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಈ ಅಮೂಲ್ಯವಾದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೇಖಕರು ಅನೇಕ ವ್ಯಕ್ತಿಗಳನ್ನು ಸಂದರ್ಶಿಸಿದ್ದಾರೆ. ರವಿಶಂಕರ್, ಶಿವಕುಮಾರ್ ಶರ್ಮ, ಹರಿಪ್ರಸಾದ್ ಚೌರಾಸಿಯ, ಪ್ರಭಾ ಅತ್ರೆ, ಕುಮಾರ್ ಗಂಧರ್ವ, ಜಸರಾಜ್ ಮೊದಲಾದ ಸಂಗೀತ ಲೋಕದ ಹೆಸರಾಂತ ಕಲಾವಿದರು ಭೀಮಸೇನ ಜೋಷಿಯವರ ಗಾಯನ ಹಾಗೂ ವ್ಯಕ್ತಿತ್ವದ ಬಗ್ಗೆ ವ್ಯಕ್ತ ಪಡಿಸಿದ ಪ್ರಶಂಸೆ, ಶ್ಲಾಘನೆಗಳು ಕೃತಿಯಲ್ಲಿ ದಾಖಲಾಗಿವೆ. ,

ಪಂಡಿತ್ ಭೀಮಸೇನ ಜೋಷಿಯವರು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳಲ್ಲಿ, ಮಂಗಳೂರಿನಲ್ಲಿ (1956) ನಡೆದ ಅವರ ಸಂಗೀತ ಕಛೇರಿಯ ಆಹ್ವಾನ ಪತ್ರಿಕೆಯ ಪ್ರತಿಯನ್ನು ಪುಸ್ತಕದ ಕೊನೆಯ ಪುಟದಲ್ಲಿ ಮುದ್ರಿಸಲಾಗಿದೆ. ಜೋಷಿಯವರ ಯೌವನ ಕಾಲದ ಅಪರೂಪದ ಚಿತ್ರಗಳು, ಗುರು ಬಂಧುಗಳಾದ ಗಂಗೂಬಾಯಿ ಹಾನಗಲ್ ಹಾಗೂ ಫಿರೋಜ್ ದಸ್ತೂರ್ ಅವರೊಂದಿಗಿರುವ ಫೋಟೊಗಳು ಪುಸ್ತಕಕ್ಕೆ ಮತ್ತೊಂದು ವಿಶಿಷ್ಟವಾದ ಆಯಾಮವನ್ನೇ ನೀಡುತ್ತವೆ. ರಾಷ್ಟ್ರೀಯ ಭಾವೈಕ್ಯತೆಯ ದ್ಯೋತಕವಾಗಿ ನಿರ್ಮಿಸಲಾದ ಗೀತ ಚಿತ್ರಗಳಾದ ಮಿಲೇ ಸುರ್ ಮೇರಾ ಹಮಾರ ಹಾಗೂ ದೇಶ ರಾಗಗಳ ಕುರಿತಾದ ಕೆಲವು ಗಮನಾರ್ಹ ವಿವರಗಳೊಂದಿಗೆ ಈ ಪುಸ್ತಕ ಕೊನೆಗೊಳ್ಳುತ್ತದೆ. ತಮ್ಮ ಎರಡು ಕೃತಿಗಳ ಮೂಲಕ ಖ್ಯಾತ ಸಂಗೀತ ಕಲಾವಿದ ನಾಗರಾಜರಾವ್ ಹವಾಲ್ದಾರ್‌ ಅವರು ಭರವಸೆ ಮೂಡಿಸಬಲ್ಲ ಲೇಖಕರಾಗಿ ಹೊರಹೊಮ್ಮಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT