ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ: ‘ಕೋರ್ಟ್‌ ಕಮಿಷನರ್‌’ ನೇಮಕ

‘ಸುಪ್ರೀಂ’ ಆದೇಶ
Last Updated 12 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ– ಮಹಾರಾಷ್ಟ್ರ ನಡುವಣ ಗಡಿ ವಿವಾದಕ್ಕೆ ಸಂಬಂಧಿಸಿದ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ಜಮ್ಮು–ಕಾಶ್ಮೀರ ನಿವೃತ್ತ  ಮುಖ್ಯ ನ್ಯಾಯ­ಮೂರ್ತಿ ಮನಮೋಹನ್‌ ಸರೀನ್‌ ಅವರನ್ನು ‘ಕೋರ್ಟ್‌ ಕಮಿಷನರ್‌’ ಆಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ನೇಮಕ ಮಾಡಿ ಆದೇಶ ನೀಡಿತು.

ಗಡಿ ವಿವಾದದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ನ್ಯಾಯಪೀಠವು ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ಪ್ರಮಾಣ ಪತ್ರಗಳ ಆಧಾರದ ಮೇಲೆ ಸಾಕ್ಷಿಗಳ ಪಾಟೀ ಸವಾಲು ನಡೆಸಲು ಸರೀನ್‌ ಅವರನ್ನು ಕೋರ್ಟ್‌ ಕಮಿಷನರ್‌ ಆಗಿ ನೇಮಕ ಮಾಡಿತು. ಕಮಿಷನರ್‌ ಅವರಿಗೆ ತಮ್ಮ ಜವಾಬ್ದಾರಿ ಪೂರ್ಣಗೊಳಿಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ತನಗೆ ಸೇರಬೇಕಾದ 865 ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಗಡಿಗಳನ್ನು ಹೊಸದಾಗಿ ಗುರುತಿಸುವಂತೆ ಮಹಾರಾಷ್ಟ್ರ ತನ್ನ ಮೂಲ ಅರ್ಜಿಯಲ್ಲಿ ಮನವಿ ಮಾಡಿದೆ. ಆದರೆ, ಈ ಸಂಬಂಧ ನೆರೆಯ ರಾಜ್ಯ ಪ್ರಮಾಣ ಪತ್ರ ಸಲ್ಲಿಸಬೇಕಿದೆ.

ಮಹಾರಾಷ್ಟ್ರ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಎತ್ತಲಿರುವ ಪ್ರಶ್ನೆಗಳಿಗೆ ಕರ್ನಾಟಕ ಹಾಗೂ ಕೇಂದ್ರ ಸರ್ಕಾರ ಉತ್ತರ ಸಲ್ಲಿಸಬೇಕಾಗಿದೆ. ಎರಡು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣ­ಗೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ. ಉಭಯ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಸಲ್ಲಿಸುವ ಪ್ರಮಾಣ ಪತ್ರಗಳನ್ನು ಕೋರ್ಟ್‌ ಕಮಿಷನರ್‌ ಪರಿಶೀಲಿಸಿ ಸಂಬಂಧಪಟ್ಟ ಸಾಕ್ಷಿಗಳ ಪಾಟೀ ಸವಾಲು ನಡೆಸಲಿದ್ದಾರೆ. ಸರೀನ್‌ ನಾಲ್ಕು ತಿಂಗಳೊಳಗೆ ತಮಗೆ ವಹಿಸಿರುವ ಜವಾಬ್ದಾರಿ ಪೂರ್ಣಗೊ­ಳಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಗಡಿ ವಿವಾದದ ಪ್ರಕರಣ ವಿಚಾರಣೆಗೆ ಬಂದಾಗ ಕರ್ನಾಟಕ ತೀವ್ರವಾಗಿ ಆಕ್ಷೇಪಿಸಿತು. ಸಂವಿಧಾನದ ಕಲಂ ಮೂರರ ಪ್ರಕಾರ ಗಡಿಗಳನ್ನು ಬದಲಾವಣೆ ಮಾಡುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಈ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂದು ಕರ್ನಾಟಕದ ವಕೀಲರು ಪ್ರತಿಪಾದಿಸಿದರು.

ಕೋರ್ಟ್‌ಗೆ ಅಧಿಕಾರ: ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ, ಸಂವಿಧಾನದ ಕಲಂ 131ರ ಅನ್ವಯ ರಾಜ್ಯಗಳ ನಡುವಣ ವಿವಾದ, ಒಪ್ಪಂದಗಳನ್ನು ಕುರಿತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ಗೆ ಅಧಿ­ಕಾರವಿದೆ ಎಂದು ಅಭಿಪ್ರಾಯಪಟ್ಟರು.

ಕೋರ್ಟ್‌ ಕಮಿಷನರ್‌ ತಕ್ಷಣ ತಮ್ಮ ಕೆಲಸ ಆರಂಭಿಸಲಿದ್ದಾರೆ. ಅವರು ಪ್ರಮಾಣ ಪತ್ರ ಪರಿಶೀಲಿಸಿ ಪಾಟೀ ಸವಾಲು ಪ್ರಕ್ರಿಯೆ ಪೂರ್ಣಗೊಳಿಸದ ಬಳಿಕ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಣ ಗಡಿ ವಿವಾದದ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಹತ್ತು ವರ್ಷಗಳ ಹಿಂದೆ ಸಲ್ಲಿಸಿರುವ ಮೂಲ ದಾವೆಯಲ್ಲಿ ನೆರೆಯ ಮಹಾರಾಷ್ಟ್ರ 865 ಹಳ್ಳಿಗಳು ತನಗೇ ಸೇರಬೇಕು ಎಂದು ವಾದಿಸಿದೆ. ಅನಂತರ 2006ರಲ್ಲಿ ಸಲ್ಲಿಸಿದ ಮಧ್ಯಾಂತರ ಅರ್ಜಿಯಲ್ಲಿ ಬೆಳಗಾವಿ ನಗರವನ್ನು ವಿವಾದ ಇತ್ಯರ್ಥ ಆಗುವವರೆಗೂ ಕೇಂದ್ರದ ಆಡಳಿತಕ್ಕೆ ಒಳಪಡಿಸಬೇಕು ಎಂದು ಮಹಾರಾಷ್ಟ್ರ ವಾದಿಸಿದೆ.

ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿ­ಸಿರುವ ಕರ್ನಾಟಕ, ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂದು ಮಹಾಜನ್‌ ಆಯೋಗ ಹೇಳಿದೆ. ರಾಜ್ಯದ ಒಂದು ಇಂಚೂ ಭೂಮಿ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ರಾಜ್ಯದ ಪರವಾಗಿ ಹಿರಿಯ ವಕೀಲ ಉದಯ ಹೊಳ್ಳ ಅವರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT