ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಾಯುದ್ಧದ ಹೊಸಹುಟ್ಟು!

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಂಗಬಿನ್ನಹ

ಧಾರವಾಡದ ವಿದ್ಯಾವರ್ಧಕ ಸಂಘದ ಪಾ.ಪು. ಭವನದಲ್ಲಿ ಐದು ಹವ್ಯಾಸಿ ನಾಟಕ ತಂಡಗಳಿಂದ ಈಚೆಗೆ `ಪೌರಾಣಿಕ ನಾಟಕೋತ್ಸವ' ನಡೆಯಿತು. ಪ್ರದರ್ಶನಗೊಂಡ `ರಕ್ತರಾತ್ರಿ', `ಶ್ರಿಕೃಷ್ಣ ಗಾರುಡಿ', `ರನ್ನನ ಗದಾಯುದ್ಧ', `ಸತ್ಯ ಹರಿಶ್ಚಂದ್ರ' ಹಾಗೂ `ಪ್ರಚಂಡ ರಾವಣ' ನಾಟಕಗಳಲ್ಲಿ ಹೆಚ್ಚು ಗಮನ ಸೆಳೆದದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ (ರನ್ನನ ಮುಧುವೊಳಲು) ತಾಲ್ಲೂಕಿನ ಲೋಕಾಪೂರದ ನಟರಾಜ ಹವ್ಯಾಸಿ ಕಲಾತಂಡ ಪ್ರಸ್ತುತಪಡಿಸಿದ `ರನ್ನನ ಗದಾಯುದ್ಧ'.

`ಕನ್ನಡ ಸಾಹಿತ್ಯ ಚರಿತ್ರೆಯಲಿ ರನ್ನ ಕವಿಯೊಬ್ಬ...' ಎಂಬ ಹಾಡಿನ ಮೂಲಕ ಪ್ರಾರಂಭವಾದ ನಾಟಕದಲ್ಲಿ ರನ್ನ ಕವಿ ತನ್ನ ಕಾವ್ಯಸೃಷ್ಟಿಗೆ ಕಾರಣ ಮತ್ತು ಕಾರಣೀ ಪುರುಷನನ್ನು ನೆನೆಯುತ್ತ ಪ್ರಸ್ತುತ ನಾಟಕದ ಸೂತ್ರಧಾರಿಕೆಯ (ರವೀಂದ್ರ ಉಪ್ಪಾರ) ಹೊಣೆ ಹೊರುತ್ತಾನೆ. ಅಲ್ಲಿಂದ ಮುಂದೆಲ್ಲ ಭಾರತ ಕಥನ!


ಕುರುಕ್ಷೇತ್ರ ಯುದ್ಧಾನಂತರ ದುರ್ಯೋಧನ ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯ ಸಮೇತ ಸೋದರರನ್ನೂ ಕಳೆದುಕೊಂಡು ಏಕಾಂಗಿಯಾಗಿ ಪರಿತಪಿಸುತ್ತಾನೆ. ಸೇಡಿನ ಕಿಚ್ಚಿಗೆ ವಶನಾಗುತ್ತಾನೆ. ಸಂಜಯ (ಸಂಗಮೇಶ ನೀಲಗುಂದ), ಧೃತರಾಷ್ಟ್ರ-ಗಾಂಧಾರಿ (ಬಸವರಾಜ ಚಿಪ್ಪಲಕಟ್ಟಿ-ದೊಡ್ಡವ್ವ ಹುಗ್ಗಿ), ಭೀಷ್ಮ (ಶಾಸನಗೌಡ ಪಾಟೀಲ)ರ ಮಾತು ಕೇಳದೆ ಸಂಧಿಗೆ ವಿಮುಖನಾಗುತ್ತಾನೆ.

ಪಾಂಡವರ ಕಣ್ಣಿಗೆ ಕಾಣದಂತೆ ದಿನವೊಂದನ್ನು ಕಳೆದರೆ ತನಗೆ ಜಯ ಖಂಡಿತವೆಂದು ಬಗೆದ ಸುಯೋಧನ, ಭೀಷ್ಮನಿಂದ ಜಲಸ್ತಂಭನ ವಿದ್ಯೆಯನ್ನು ಸಾಧಿಸಿ ವೈಶಂಪಾಯನ ಸರೋವರವನ್ನೇ ಅಡಗು ತಾಣ ಆಗಿಸಿಕೊಳ್ಳುತ್ತಾನೆ. ಕೃಷ್ಣಾದಿ ಪಾಂಡವರು ಆ ಕೊಳಕ್ಕೆ ಲಗ್ಗೆ ಇಡುತ್ತಾರೆ. ಅರ್ಜುನ (ಶಮಸುದ್ದೀನ ರಾಮದುರ್ಗ) ನಕುಲ, ಸಹದೇವ (ಗೋಪಾಲ ನಾಯಕ) ಹಾಗೂ ಭೀಮ (ಮಲ್ಲಯ್ಯ ಸಂಬಾಳದ)ನ ಹೀಯಾಳಿಕೆ ಮಾತು ಕೇಳಿ ಹೊರಬಂದ ದುರ್ಯೋಧನನಿಗೆ ಧರ್ಮರಾಯನೂ ಒಡಂಬಡಿಕೆಗೆ ಮನವೊಪ್ಪಿಸಲು ವ್ಯರ್ಥ ಪ್ರಯತ್ನಿಸುತ್ತಾನೆ.

ಭೀಮ-ದುರ್ಯೋಧನರ ನಡುವೆ ಗದಾಯುದ್ಧ ಅನಿವಾರ್ಯವಾಗುತ್ತದೆ. ಯುದ್ಧ ಮಧ್ಯೆ ಕೃಷ್ಣನ ಸಲಹೆಯ ಮೇರೆಗೆ ಭೀಮ ಸುಯೋಧನನ ಊರು ಭಂಗಿಸಿ ದ್ರೌಪತಿಯ ಮುಡಿ ಕಟ್ಟಿ ಅವಳ ಪ್ರತಿಜ್ಞೆಯನ್ನು ಈಡೇರಿಸುತ್ತಾನೆ. ಇಲ್ಲಿಗೆ, ನಾಟಕ ಮಂಗಲ ಸ್ವರೂಪ ತಾಳುತ್ತದೆ.
ರನ್ನ ಕಾವ್ಯದ ಕಂಪಿನಲ್ಲಿ ರಂಗ ಸಿರಿಯ ಪೆಂಪು ಮರೆದು ನಾಟಕ ಅದ್ಭುತವಾಗಿ ಮೂಡಿ ಬಂತು. ಕರುಣ-ರೌದ್ರ ರಸಪೂರ್ಣವಾದ ಈ ಆಖ್ಯಾನದಲ್ಲಿ ನಟರ ಆಂಗಿಕ ಮತ್ತು ವಾಚಿಕಾಭಿನಯಕ್ಕೂ ಅಲ್ಪಸ್ವಲ್ಪ ಹೊಂದಾಣಿಕೆಯಾಗದ್ದನ್ನು ಬಿಟ್ಟರೆ ಒಟ್ಟಾರೆ ಪ್ರದರ್ಶನ ರಂಜನೀಯ. ಹನುಮಂತ ಮೇತ್ರಿಯವರ ಕೀಬೋರ್ಡ್ ಚಾಕಚಕ್ಯತೆ ಪ್ರಸಂಶನೀಯ. ರಿದಂ ಪ್ಯಾಡ್ ಕಲಾವಿದ ಗೌಡಪ್ಪ ಅಂಕಲಗಿಯವರೂ ನುರಿತ ವಾದ್ಯಗಾರರಾಗಿದ್ದರು. ಆಕರ್ಷಕ ಹಾಗೂ ಸೂಕ್ತವಾದ ವೇಷಭೂಷಣಾದಿ ರಂಗ ಪರಿಕರಗಳು ಸ್ವಂತ ತಂಡದ್ದವೇ ಆಗಿದ್ದವು. ಪ್ರಸಾಧನ ಕಲೆ ಮಾತ್ರ ಎಂಬತ್ತೆರಡರ ಹರೆಯದ ಗಜಾನನ ಮಹಾಲೆಯವರದಾಗಿತ್ತು. 

ಅಶೋಕ ಬಾದರದಿನ್ನಿಯವರು ನಿರ್ದೇಶಿಸಿದ ಒಂದೂವರೆ ಗಂಟೆ ಅವಧಿಯ ಈ ನಾಟಕದಲ್ಲಿ ಬಾಲಕಲಾವಿದೆ ಲಾವಣ್ಯ ರಂಗಣ್ಣವರ ಹಾಗೂ ಪುಠಾಣಿ ಸಂಗಡಿಗರ ನೃತ್ಯ, ಪೈಶಾಚಿಕ ಆರ್ಭಟ, ಹಂಸಾಭಿನಯ ಅನುಕರಣೆ ವಿಶಿಷ್ಟವಾಗಿದ್ದವು. ಬಣ್ಣ-ಬೆಳಕಿನಲ್ಲಿ ವಿಶೇಷವೇನೂ ಇರಲಿಲ್ಲ. ನಾಟಕಕ್ಕೆ ಪ್ರಾಸಂಗಿಕ ರಂಗ ಚಮತ್ಕಾರಗಳ ಅಗತ್ಯತೆ ಇತ್ತು.

ಹಳಗನ್ನಡದ ರನ್ನನ `ಗದಾಯುದ್ಧ' ಪ್ರಸಂಗವನ್ನು ಹೊಸಗನ್ನಡಿಸಿ ರಂಗದಚ್ಚಿಗೆ ಹಾಕಿದ ಉಪನ್ಯಾಸಕ ಚಿತ್ರದುರ್ಗದ ಸಿ.ಪಿ. ಜ್ಞಾನದೇವ ಅವರ ಜಾಣ್ಮೆ ಮೆಚ್ಚುವಂತಹದು. ಆದರೆ, ಅವರ ಹೆಸರು ಆಮಂತ್ರಣ ಪತ್ರಿಕೆಯ ರಂಗ ವಿವರಣಾ ಸೂಚಿಯಲ್ಲಾಗಲಿ, ವೇದಿಕೆಯ ಮೇಲಾಗಲಿ ಎಲ್ಲೂ ಕೇಳಲಿಲ್ಲ, ಕಾಣಲಿಲ್ಲ.

ಭೀಮ-ದುರ್ಯೋಧನರ ಯುದ್ಧ ಸಂದರ್ಭದಲ್ಲಿ ಅವರ ಸಂಭಾಷಣೆಗೆ ರನ್ನನ ಪ್ರಚಲಿತ ಕಂದ-ವಚನಗಳನ್ನೇ ಯಥಾವತ್ತಾಗಿ ಪಾತ್ರಧಾರಿಗಳಿಂದ ಅಥವಾ ಅವರಿಗೆ ಧ್ವನಿ ಪೂರೈಸುವ ಮೂಲಕವಾಗಿ ಹೊರ ಹೊಮ್ಮಿಸಿದ್ದರೆ ಪ್ರದರ್ಶನಕ್ಕೆ ಹೊಸ ಆಯಾಮ ದೊರೆಯುತ್ತಿತ್ತು. ಆದರೆ, ಈ ನಾಟಕ ಪ್ರದರ್ಶನದ ಉದ್ದೇಶವೇ ಬೇರೆಯಾಗಿದೆ. ಶಿಕ್ಷಣದಲ್ಲಿ ರಂಗಕಲೆಯನ್ನು ಬಳಸಿಕೊಳ್ಳುವ ಹಾಗೂ ಹಳಗನ್ನಡದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನವರಿಕೆ ಮಾಡುವ ಉದ್ದೇಶ ಇಲ್ಲಿನದು.

“ಶಿಕ್ಷಣದೊಳಗ ರಂಗಕಲೆಯನ್ನ ಧಾರಾಳವಾಗಿ ಬಳಸಿಕೊಳ್ಳಬೇಕು ಅಂತ ಶೈಕ್ಷಣಿಕ ಇಲಾಖೆಯ ಯೋಜನಾನೂ ಅದರಿ. ಅದಕ್ಕ ಲೋಕಾಪೂರ, ಮುಧೋಳ, ಚಂಚಕಂಡಿ, ಪೆಟ್ಲೂರು, ಕಲಬಂದಕೆರೆ ಹೀಗೆ ಸುತ್ತುಮುತ್ತಲ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಕೂಡಿ ರಂಗ ಚಟುವಟಿಕೆಗಳನ್ನ ಮಾಡತಾ ಇರತೀವಿ.

ಇದರೊಳಗ ಬೇರೆ ನೌಕರರೂ, ನಾಗರಿಕರೂ ಇದಾರೆ... ಕಬ್ಬಿಣದ ಕಡಲೆಯಂಥಾ ಹಳಗನ್ನಡ ಸರಳವಾಗಿ ಮಕ್ಕಳಿಗೆ ತಿಳೀಲೀ ಅಂತ ನಾವು ಈ ರೀತಿ ನಾಟಕಾ ಕಲ್ತು ನಮ್ಮ ಶಾಲೆಯೊಳಗಷ್ಟ ಅಲ್ಲದ ಬೇರೆ ಬೇರೆ ಸ್ಕೂಲು, ಕಾಲೇಜು ಮತ್ತೆ ಶೈಕ್ಷಣಿಕ ಸಮಾರಂಭದಲ್ಲಿಯೂ ಅವರವರ ಬೇಡಿಕೆ ಪ್ರಕಾರ ಆಡತಾ ಇದೀವಿ.

ಈಗಾಗಲೇ ಬೈಲಹೊಂಗಲ, ಬೆಳಗಾವಿ, ಗೋಕಾಕ, ಬಾಗಲಕೋಟೆ, ಧಾರವಾಡ, ಇಲಕಲ್, ಮೈಸೂರು, ಮಂಡ್ಯ ಮುಂತಾದಕಡೆ ಪ್ರದರ್ಶನ ಕೊಟ್ಟೀವಿರಿ, ಬೆಂಗಳೂರಿಗೂ ಕರದಿದಾರೆ ಅಲ್ಲಿಗೂ ಹೋಗಬೇಕರೀ... ಇದೊಂದ ನಾಟಕಾ ಅಲ್ಲರೀ ನಾವಾಡೂದು, ಶಾಲಾ ಪಠ್ಯಕ್ಕನುಸಾರವಾಗಿ ಭಾಗೀರಥಿ, ಪುಣ್ಯಕೋಟಿ, ಹಲಗಲಿ ಬಂಡಾಯ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಹಾಗೂ ಭಾರತ ಸ್ವಾತಂತ್ರ್ಯ ಸಂಬಂಧದ ಇತರ ಕಥೆಗಳನ್ನು ಆಧರಿಸಿದ ರೂಪಕ, ನಾಟಕ, ನೃತ್ಯ ಮಾಡ್ತೀವಿರಿ...”- ನಾಟಕದ ಪಾತ್ರವೊಂದರ ಬಾಯಿಂದ ಬಂದ ಈ ಮಾತುಗಳೇ ಪ್ರದರ್ಶನದ ಉದ್ದೇಶವನ್ನು ಸಹೃದಯರಿಗೆ ಮನದಟ್ಟು ಮಾಡುವಂತಿದ್ದವು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT