ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆವ ವಿಶಿಷ್ಟ ಶಾಸನಗಳು

ಇಲಾಖೆಗಳ ನಿರ್ಲಕ್ಷ್ಯ, ರಕ್ಷಣೆ ಬೇಡುವ ಐತಿಹಾಸಿಕ ಶಾಸನಗಳು, ಸಂರಕ್ಷಣೆಗೆ ಒತ್ತಾಯ
Last Updated 10 ಮೇ 2015, 8:57 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣದ ಶಿಲಾ ಶಾಸನ, ಶಾಸನ ಶಿಲ್ಪಗಳು, ಮೂರ್ತಿ ಶಿಲ್ಪಗಳು ಮೌರ್ಯರು, ಸೇವಣರು, ಕದಂಬ, ಚಾಲುಕ್ಯ, ವಿಜಯ ನಗರದ ಅರಸರ ರಾಜಮನೆತನದ ಇತಿಹಾಸಗಳನ್ನು ಹೇಳುತ್ತವೆ. ಕೃಷ್ಣ, -ತುಂಗಭದ್ರೆಯರ ತೊಟ್ಟಿಲಲ್ಲಿ ಓಲಾಡುತ್ತಿರುವ ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣ ತನ್ನದೇ ಆದ ಇತಿಹಾಸ ಹೊಂದಿದೆ.

ಎರಡು ಸುತ್ತಿನ ಕೋಟೆಯ ಒಳಾವರಣದಲ್ಲಿ ಅನೇಕ ಹಿಂದೂ, ಮುಸ್ಲಿಂ  ಹಾಗೂ ಕ್ರೈಸ್ತ ಸ್ಮಾರಕಗಳು ಹಾಗೂ ದೇವಾಲಯಗಳಿವೆ. ಬಾಲಾಜಿ, ಆದಿಕೇಶವ, ಬೆಣ್ಣೆಕೃಷ್ಣ, ಅಶ್ವತ್ಥ­ನಾರಾಯಣ, ದಿದ್ದಿರಾಯ (ಹನುಮಪ್ಪ), ರಂಗನಾಥ, ರಾಮಲಿಂಗೇಶ್ವರ, ಎಮ್ಮೆ ಬಸವಣ್ಣ, ಕೋತಿ ಹನುಮಪ್ಪ ದೇವಾಲಯಗಳು, ರಾಘವೇಂದ್ರ ಸ್ವಾಮಿ ಮಠ, ಹಜರತ್ ಹುಸೇನಿ ಆಲಂ ದರ್ಗಾ, ಮುತ್ಯಾನ ದರ್ಗಾ, ದಿನದಾರಖಾನೆ ಮಸೀದಿ­ಗಳೊಂದಿಗೆ ಗಜಶಾಲೆ, ಗರಡಿ­ಮನೆ, ಚಾರ್ ಮಹಲ್ ಬಾವಿ, ಬಾಗಲಾ ಹಾಳುಬಾವಿ,  ಬಾರೂದ ಕೋಟೆ (ಮುದ್ದಿ­ನ ಮನೆ)ಗಳು ಗಮನ ಸೆಳೆಯುತ್ತವೆ.

ಹಳೆಪೇಟೆ ಚೌಡೇಶ್ವರಿ ಮೂರ್ತಿ ಶಿಲ್ಪ, ಲಕ್ಷ್ಮಿ ಉಬ್ಬು ಶಿಲ್ಪಗಳು, ಸೂರ್ಯ ಶಿಲ್ಪ, ನೂರಾರು ವೀರಗಲ್ಲು, ಮಹಾಸತಿಗಲ್ಲುಗಳು ಇಲ್ಲಿವೆ.
ಇಲ್ಲಿ ಕದಂಬ, ವಿಜಯನಗರ, ವಿಜಯಪುರ ಆದಿಲ್‌ ಶಾಹಿ ಸೇರಿದಂತೆ ಇನ್ನಿತರ ಅರಸರ ಆಳ್ವಿಕೆ ನಡೆಸಿದ್ದಾರೆ. ಅವರ ಕಾಲದ ಶಿಲಾ ಶಾಸನಗಳು, ಬಾಗಿಲು ಶಾಸನ, ಬಂಡೆಗಲ್ಲು ಸೇರಿ 100 ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಇವುಗಳಲ್ಲಿ ಕೆಲವು ಶಾಸನಗಳು ಕೋಟೆ ಬಗ್ಗೆ ಮಾಹಿತಿ ನೀಡುತ್ತಿವೆ. ಕೆಲ ಶಾಸನಗಳು ಕಾಲ ಗರ್ಭಕ್ಕೆ ಸಿಕ್ಕು ನಿರ್ಲಕ್ಷ್ಯ ಒಳಗಾಗಿವೆ.

ವಿಜಯಪುರ ಆದಿಲ್ ಶಾಹಿ ಕಾಲದ ಅರೇಬಿಕ್ ಭಾಷೆಯಲ್ಲಿ ಕೆತ್ತಲಾದ ಶಿಲಾ ಶಾಸನಗಳು ಇಲ್ಲಿನ ವೈಶಿಷ್ಠ್ಯ, ಅರೇಬಿಕೆ ಭಾಷೆಯಲ್ಲಿ ಕೆತ್ತಲಾದ ಶಿಲಾ ಶಾಸನಗಳು  ಈ ಭಾಗದಲ್ಲಿ ಪಟ್ಟಣದಲ್ಲಿ ಮಾತ್ರ ಕಾಣಸಿಗುವುದು ಇಲ್ಲಿನ ವಿಶೇಷತೆಗೆ ಕನ್ನಡಿ ಹಿಡಿದಿವೆ. ಬೇಲೂರು ಚನ್ನಕೇಶವ ದೇವಾಲಯದಲ್ಲಿ ಕಾಣಸಿಗುವ ವಿಶಿಷ್ಟ ಮಾದರಿ ಶಿಲಾ ಶಾಸನಗಳನ್ನು ಇಲ್ಲಿ ಮಾತ್ರ ಕಾಣಬಹುದು.

‘ಕಿಲ್ಲಾದ ರಾಮಲಿಂಗೇಶ್ವರ ದೇವಾಲಯದಲ್ಲಿ ದೊರೆತ ಕ್ರಿ.ಶ 1215 ರ ಕಾಲದ  ಶಾಸನದಲ್ಲಿ ಕದಂಬರ ಬಿಜ್ಜರಸ ಇನ್ನಿತರು ಸೇರಿ ಪ್ರಸನ್ನ ಚನ್ನಕೇಶವ ಹಾಗೂ ಇನ್ನಿತರ ದೇವರ ಸೇವೆಗೆ ಬ್ರಹ್ಮಪುರಿಯನ್ನು ದಾನ ನೀಡಿದ ಬಗ್ಗೆ ತಿಳಿಸುತ್ತದೆ’ ಎಂದು ಡಾ.ಅಮರೇಶ ಯತಗಲ್ ಅವರ ಸಂಶೋಧನೆ ಮೂಲಕ ತಿಳಿದು ಬರುತ್ತದೆ.

ಕ್ರಿ.ಶ 1482 ರಲ್ಲಿ ವಿಜಯನಗರದ ರಾಮರಾಯನ ಮಗ ಕೃಷ್ಣರಾಜನ ಆಧೀನದಲ್ಲಿದ್ದ ವೆಂಗಳಪ್ಪ ನಾಯಕ ಬಾಗಿಲು, ಹೊರ ಕೋಟೆಯಲ್ಲಿ ದೊರೆ ಯುವ ಶಾಸನಗಳಲ್ಲಿ ವಿಜಯಪುರದ 2ನೇ ಇಬ್ರಾಹಿಂ ಆದಿಲ್‌ಶಾಹನ ಅಧಿಕಾರಿ ಮಲ್ಲಿಕ್ ಮುರಾದ ಕಟ್ಟಿಸಿದ ಬಗ್ಗೆ ಹಾಗೂ ಮಲ್ಲಿಕ್ ಮುರಾದಗೆ ಇದ್ದ ಬಿರುದುಗಳ ವಿವರಣೆಗಳನ್ನು ಹೇಳುತ್ತಿವೆ. ಚಾರಮಹಲ್‌ ಬಾವಿ, ಹಲಾಲಖೋರ ಬಾವಿಗಳನ್ನು ಸಾಳುವ ತಿಮ್ಮಯ್ಯ, ಕುರುಗೋಡ ಸೋಮಣ್ಣ ನಾಯಕನ ಪ್ರಧಾನಿಯ ಮಗ ನರಸಪ್ಪ ನಿರ್ಮಿಸಿದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ.ಇ ನ್ನು ಅನೇಕ ಶಾಸನಗಳು ವಿವಿಧ ಅರಸ ಇತಿಹಾಸಗಳು ತಿಳಿಸುತ್ತಿವೆ.

ಎರಡನೇ ಕೋಟೆಯ ಒಳಭಾಗದಲ್ಲಿ ವಿಜಯಪುರ ಆದಿಲ್ ಶಾಹಿ ಕಾಲದ ಅರಬಿಕ್ ಶಾಸನ ಕಾಣಸಿಗುತ್ತದೆ. ಕೋಟೆಯ ಗೋಡೆ ಬಿದ್ದಿದ್ದರಿಂದ ಶಾಸನ ಬಿದ್ದು ಹಾಳಾಗುತ್ತಿದೆ.  ಜಿಲ್ಲೆಯ ಚರಿತ್ರೆ ಮತ್ತು ಸಾಂಸ್ಕೃತಿಕ ಭವ್ಯ ಕುರುಹು ಆಗಿರುವ ಇಲ್ಲಿನ ಶಾಸನಗಳು ಸದ್ಯ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಂಬಂಧಿಸಿದ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಶಾಸನಗಳ ರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT