ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕನಸು; ಗ್ರಾಮೀಣ ಮನಸು

Last Updated 14 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪ್ರೀತಿ–ಪ್ರೇಮದ ಕಥಾವಸ್ತುವಿನ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಹಳ್ಳಿಗಳಲ್ಲಿ ಶೌಚಾಲಯ ಸಮಸ್ಯೆ ಕುರಿತ ಚಿತ್ರವೊಂದನ್ನು ಸಿದ್ಧಪಡಿಸಿದ್ದಾರೆ ರಮೇಶ್ ಎಸ್. ಪರವಿನಾಯ್ಕರ್. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ತೆರೆದಿಡುವ ‘ಗಾಂಧೀಜಿ ಕನಸು’ ಚಿತ್ರ, ಅತಿ ವಿಶಿಷ್ಟ ಕಥಾವಸ್ತು ಹೊಂದಿದೆ ಎಂಬುದು ಅವರ ಬಣ್ಣನೆ. ಇದೇ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ.

‘ಇದು ಕಾಲ್ಪನಿಕ ಕಥೆಯ ಸಿನಿಮಾ ಅಲ್ಲ. ಉತ್ತರ ಕರ್ನಾಟಕದ ಹಲವು ಹಳ್ಳಿಗಳಲ್ಲಿ ನಾನು ನೋಡಿರುವ ಘಟನೆಗಳನ್ನೇ ಇಲ್ಲಿ ದೃಶ್ಯರೂಪಕ್ಕೆ ಇಳಿಸಿದ್ದೇನೆ’ ಎನ್ನುವ ರಮೇಶ್, ಈ ಚಿತ್ರಕ್ಕೆ ಹಣ ಹಾಕಿ, ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.

ಮೂಲತಃ ರಾಜಕಾರಣಿಯಾಗಿರುವ ರಮೇಶ್ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವು ಇದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಅವರು ಕ್ಷೇತ್ರದಲ್ಲಿ ಸಂಚರಿಸುವಾಗ ಮಹಿಳೆಯರು ಅನುಭವಿಸುವ ಸಮಸ್ಯೆಗಳನ್ನು ಕಂಡಿದ್ದಾರೆ. ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುವ ಸಿನಿಮಾ ನಿರ್ಮಾಣಕ್ಕೆ ಮುಂದಾದಾಗ ಸಂಗೀತ ನಿರ್ದೇಶಕ ಗುರುರಾಜ ಹೊಸಕೋಟೆ ‘ಇಲ್ಲಿ ನಿನ್ನ ಮಂಗ್ಯಾ ಮಾಡ್ತಾರೆ ನೋಡು’ ಅಂತ ಎಚ್ಚರಿಕೆ ನೀಡಿದ್ದರಂತೆ. ಆದರೂ ಅದನ್ನು ಸಿನಿಮಾಕ್ಕೆ ಅಳವಡಿಸುವ ಅವರ ‘ಸಾಹಸ’ ಮೆಚ್ಚುವಂಥದ್ದು! ಅಂದ ಹಾಗೆ ಅವರೇ ಚಿತ್ರದ ನಾಯಕ ಕೂಡ. ಶಿಕ್ಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ (ಪಿಡಿಒ) ರೂಪಿಕಾ ಕಾಣಿಸಿಕೊಂಡಿದ್ದಾರೆ. ಶೌಚಾಲಯ ಬಳಸುವಂತೆ ಮಹಿಳೆಯರನ್ನು ಪ್ರೇರೇಪಿಸುವ ಅಧಿಕಾರಿಯ ವಿಭಿನ್ನ ಪಾತ್ರ ಸಿಕ್ಕಿರುವುದು ಅವರಲ್ಲಿ ಖುಷಿ ಮೂಡಿಸಿದೆ. ‘ಶೂಟಿಂಗ್‌ಗೆಂದು ಹಳ್ಳಿಗಳಿಗೆ ಹೋದಾಗ ಅಲ್ಲಿನ ಮಹಿಳೆಯರು ಅನುಭವಿಸಿದ ತಾಪತ್ರಯ ಕಂಡು ಅಯ್ಯೋ ಅನಿಸಿತು’ ಎಂದು ತಮ್ಮ ಅನುಭವ ತೆರೆದಿಟ್ಟರು. ಪಿಡಿಒ ಗುರಿ ಹಾಗೂ ನಾಯಕನ ಉದ್ದೇಶ ಒಂದೇ ಇದ್ದು, ಇಬ್ಬರ ಮಧ್ಯೆ ಪ್ರೇಮ ಉಂಟಾಗುವುದರಿಂದ ಸಮಯಕ್ಕೆ ತಕ್ಕಂತೆ ಡ್ಯುಯೆಟ್ ಹಾಡುಗಳೂ ಚಿತ್ರದಲ್ಲಿ ಇವೆ.

ಉತ್ತರ ಕರ್ನಾಟಕ ಶೈಲಿಯಲ್ಲಿ ಆರು ಹಾಡುಗಳನ್ನು ಬರೆದು, ಸಂಗೀತ ಹೊಸೆದ ಗುರುರಾಜ ಹೊಸಕೋಟೆ ಅವರು ಇಂಥ ವಿಶಿಷ್ಟ ಕಥಾವಸ್ತುವನ್ನು ಸಿನಿಮಾಕ್ಕೆ ಅಳವಡಿಸುವ ರಮೇಶ್ ಅವರ ‘ಭಂಡ ಧೈರ್ಯ’ವನ್ನು ಕೊಂಡಾಡಿದರು.

ಶೌಚಾಲಯ ಅಗತ್ಯ ಎಂಬ ಸಂದೇಶ ಸಾರುವ ಈ ಸಿನಿಮಾದಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಎಸ್.ಆರ್.ಪಾಟೀಲ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಶಾಸಕ ಶಿವಳ್ಳಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಮೇಶ್, ಬ್ಯಾಂಕ್ ಜನಾರ್ದನ್, ಹೊನ್ನವಳ್ಳಿ ಕೃಷ್ಣ, ವೈಜನಾಥ ಬಿರಾದಾರ, ಎಂ.ಎನ್.ಲಕ್ಷ್ಮೀದೇವಮ್ಮ, ರೇಖಾದಾಸ್ ತಾರಾಗಣದಲ್ಲಿ ಇದ್ದಾರೆ. z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT