ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್‌ ಕಾರ್ಖಾನೆಗೆ ವಲಸಿಗರ ಲಗ್ಗೆ

ಜಾಗತೀಕರಣಕ್ಕೆ ದೇಶ ತೆರೆದುಕೊಂಡ ಮೇಲೆ ರೂಪಾಂತರಗೊಂಡ ಉಡುಪು ಉದ್ಯಮ
Last Updated 21 ಏಪ್ರಿಲ್ 2016, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ ನೂರರ ಸಂಖ್ಯೆಯಲ್ಲಿ ದರ್ಜಿಗಳನ್ನು ಇಟ್ಟುಕೊಂಡು ಶರ್ಟ್‌–ಪ್ಯಾಂಟ್‌ ತಯಾರಿಸುತ್ತಿದ್ದ ಮೇಸರ್ಸ್‌ ಬೆಂಗಳೂರು ಡ್ರೆಸ್‌ ಮೇಕಿಂಗ್‌ ಕಂಪೆನಿಯಿಂದ ಹಿಡಿದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಸಾವಿರಾರು ಕಾರ್ಖಾನೆಗಳವರೆಗೆ ದೊಡ್ಡ ಗಾತ್ರದಲ್ಲಿ ಬೆಳೆದು ನಿಂತಿದೆ ನಗರದ ಗಾರ್ಮೆಂಟ್‌ ಉದ್ಯಮ.

ಬ್ರಿಟಿಷ್‌ ಆಡಳಿತದ ವೇಳೆಯಲ್ಲೇ (1940) ಸ್ಥಾಪನೆಯಾದ ಸಂಸ್ಥೆ ಬೆಂಗಳೂರು ಡ್ರೆಸ್‌ ಮೇಕಿಂಗ್‌ ಕಂಪೆನಿ. ಆ ವೇಳೆಯಲ್ಲಿ ಆಂಗ್ಲೊ–ಇಂಡಿಯನ್ನರೇ ಹೆಚ್ಚಾಗಿ ಈ ಸಂಸ್ಥೆಯ ಗ್ರಾಹಕರಾಗಿದ್ದರು. ಮರಾಠಾ ಸಮುದಾಯದ ಕುಶಲ ದರ್ಜಿಗಳನ್ನು ಈ ಕಂಪೆನಿಗೆ ನೇಮಕ ಮಾಡಿಕೊಳ್ಳಲಾಗಿತ್ತು.

ನಂತರದ ದಿನಗಳಲ್ಲಿ ಲಲಿತಾ ಡ್ರೆಸ್‌ ಮೇಕಿಂಗ್‌ ಕಂಪೆನಿ, ಶಂಕರ್‌ ಡ್ರೆಸ್‌ ಮೇಕಿಂಗ್‌  ಕಂಪೆನಿ, ನಾವೆಲ್ಟೀಸ್‌ ಮೊದಲಾದ ಸಂಸ್ಥೆಗಳು ಬಂದವು. ಆ ದಿನಗಳಲ್ಲಿ ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ಉದ್ಯೋಗಿಗಳು ಮತ್ತು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿದ್ಧಪಡಿಸಿ ಕೊಡುವುದೇ ಈ ಸಂಸ್ಥೆಗಳ ಮುಖ್ಯ ಕಾಯಕವಾಗಿತ್ತು. ಉಳಿದಂತೆ ಬಟ್ಟೆ ಖರೀದಿಸಿ, ಟೇಲರ್‌ಗಳ ಬಳಿ ಹೊಲಿಸುವುದು ಜನಸಾಮಾನ್ಯರ ರೂಢಿಯಾಗಿತ್ತು.

ಲಾಲ್‌ಬಾಗ್‌ ರಸ್ತೆಯಲ್ಲಿ ಗೋಕುಲದಾಸ್‌ ಹಾಗೂ ರಾಜಾಜಿನಗರದಲ್ಲಿ ಅಶೋಕ ಎಕ್ಸ್‌ಪೋರ್ಟ್ಸ್‌ ಸಂಸ್ಥೆಗಳು ಆರಂಭವಾದ ಮೇಲೆ ನಗರದ ಸಿದ್ಧ ಉಡುಪುಗಳ ಉದ್ಯಮದ ಚಿತ್ರಣವೇ ಬದಲಾಯಿತು. ಈ ಸಂಸ್ಥೆಗಳಿಂದ ಉಡುಪು ತಯಾರಿಕೆಗೆ ಬೇಕಾದ ಬಟ್ಟೆಯನ್ನು ಕಟ್‌ ಮಾಡಿಸಿ, ಜೀಪುಗಳಲ್ಲಿ ದರ್ಜಿಗಳ ಮನೆ–ಮನೆಗೆ ಹೊಲಿಯಲು ಕೊಟ್ಟು ಬರಲಾಗುತ್ತಿತ್ತು.

ಲೆಗ್‌ ಮಷಿನ್‌ಗಳಲ್ಲಿ ತಯಾರಾಗುತ್ತಿದ್ದ ಸಿದ್ಧ ಉಡುಪುಗಳನ್ನು ಪುನಃ ಮನೆ–ಮನೆಗೆ ಹೋಗಿ ಸಂಗ್ರಹಿಸಿ ತರಲಾಗುತ್ತಿತ್ತು. ಬಳಿಕ ಇಸ್ತ್ರಿ ಹೊಡೆದು, ಪ್ಯಾಕ್‌ ಮಾಡಿ ಮಾರುಕಟ್ಟೆಗೆ ಸಾಗಾಟ ಮಾಡಲಾಗುತ್ತಿತ್ತು. ಆದರೆ, 1990ರ ದಶಕದಲ್ಲಿ ಜಾಗತೀಕರಣಕ್ಕೆ ದೇಶ ತೆರೆದುಕೊಂಡ ಮೇಲೆ ನೂರಾರು ಕಾರ್ಖಾನೆಗಳು ಒಮ್ಮೆಲೇ ದಾಂಗುಡಿ ಇಟ್ಟು, ಸಿದ್ಧ ಉಡುಪು ಉದ್ಯಮ ಸಂಪೂರ್ಣವಾಗಿ ರೂಪಾಂತರ ಹೊಂದಿತು.

ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲದೆ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಕೋಲಾರ, ತುಮಕೂರು ಜಿಲ್ಲೆಗಳ ಬಡಕಾರ್ಮಿಕರ ಅನ್ನಕ್ಕೂ ಮಾರ್ಗವಾಯಿತು ಈ ಕಾರ್ಖಾನೆಗಳ ಕೆಲಸ. ಮಂಡ್ಯ, ರಾಮನಗರ ಹಾಗೂ ತುಮಕೂರು ಭಾಗಗಳಿಂದ ಗ್ರಾಮೀಣ ಭಾಗದ ಜನ ನಸುಕಿನಲ್ಲೇ ರೈಲು ಹಾಗೂ ಬಸ್‌ಗಳ ಮೂಲಕ ಗಾರ್ಮೆಂಟ್‌ ಕಾರ್ಖಾನೆಗಳಲ್ಲಿ ದುಡಿಯಲು ಧಾವಿಸತೊಡಗಿದರು.

‘1980ರಿಂದ 2010ರವರೆಗೆ ಗ್ರಾಮಾಂತರ ಪ್ರದೇಶಗಳಿಂದ ನಗರದ ಸಿದ್ಧ ಉಡುಪು ಕಾರ್ಖಾನೆಗಳಿಗೆ ಕೆಲಸಕ್ಕೆ ನಸುಕಿನಲ್ಲೇ ಬರುತ್ತಿದ್ದ ಮಹಿಳೆಯರು, ರೈಲು ನಿಲ್ದಾಣಗಳಲ್ಲಿ ಮುಖ ತೊಳೆದು ಸೀದಾ ಕೆಲಸಕ್ಕೆ ಹೋಗುತ್ತಿದ್ದ ನೋಟ ಇನ್ನೂ ಕಣ್ಣಿಗೆ ಕಟ್ಟಿದಂತಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ಗಾರ್ಮೆಂಟ್‌ ಅಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ನ ಸಂಘಟನಾ ಕಾರ್ಯದರ್ಶಿ ಎ.ಎಚ್‌.ಜಯರಾಂ.
ರಾಮನಗರ ಹಾಗೂ ತುಮಕೂರು ಭಾಗಗಳಿಂದ ಈಗಲೂ ಸಾವಿರಾರು ಕಾರ್ಮಿಕರು ಬೆಂಗಳೂರಿನ ಕಾರ್ಖಾನೆಗಳಿಗೆ ದುಡಿಯಲು ಬಂದು ಹೋಗುತ್ತಾರೆ. ಸಂಜೆಹೊತ್ತು ಕೆಲಸ ಮುಗಿಸಿದ ಮೇಲೆ ಮನೆಯಲ್ಲಿ ಬಿಟ್ಟುಬಂದ ಕಂದಮ್ಮಗಳನ್ನು ನೆನೆದು ಈ ಮಹಿಳಾ ಕಾರ್ಮಿಕರು ಬಸ್‌ ಹಿಡಿಯಲು ನಡೆಸುವ ಪರದಾಟ ಮನಕಲಕುತ್ತದೆ.

‘ಎಷ್ಟು ಮಂದಿ ಬಂದರೂ ಕೆಲಸ ಇದೆ’ ಎಂಬ ಸುದ್ದಿ ರಾಜ್ಯದ ಇತರ ಭಾಗಗಳಲ್ಲಿ ಹರಡಿದ ಮೇಲೆ ಬರಪೀಡಿತ ಕಲಬುರ್ಗಿ, ರಾಯಚೂರು, ವಿಜಯಪುರ ಭಾಗದ ರೈತ ಮಹಿಳೆಯರೂ ಗಾರ್ಮೆಂಟ್‌ ಕಾರ್ಖಾನೆಗಳ ಕೆಲಸ ಹುಡುಕಿಕೊಂಡು ಬಂದರು. ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಟೇಲರ್‌ಗಳಷ್ಟೇ ಇಲ್ಲ; ಬದಲು ಮಾರ್ಕರ್‌ಗಳು, ಕಟರ್‌ಗಳು, ಚೆಕರ್‌ಗಳು, ಫೀಡಿಂಗ್‌ ಹೆಲ್ಪರ್‌ಗಳು, ಕಾಚಾ ಬಟನ್‌ ಆಪರೇಟರ್‌ಗಳು, ಮೆಟೆಲ್‌ ಡಿಟೆಕ್ಟರ್‌ಗಳು, ಪ್ಯಾಕರ್‌ಗಳು, ಲೋಡರ್‌ಗಳು... ಹೀಗೆ ಹಲವು ಸ್ತರದ ಕಾರ್ಮಿಕರು ಬೇಕು. ಆದ್ದರಿಂದಲೇ ಈ ಕಾರ್ಖಾನೆಗಳಲ್ಲಿ ಮಾನವ ಸಂಪನ್ಮೂಲದ ಬೇಡಿಕೆ ಹೆಚ್ಚಾಗಿದೆ.

ಉತ್ತರ ಕರ್ನಾಟಕ ಭಾಗದ ಮಹಿಳೆಯರು ತಮ್ಮ ಮಕ್ಕಳನ್ನು ಕಟ್ಟಿಕೊಂಡು ದುಡಿಯಲು ಬಂದರೆ, ಹೊಲ ಹಾಗೂ ದನಕರ ನೋಡಿಕೊಳ್ಳುವ ಅವರ ಗಂಡಂದಿರು ಊರಲ್ಲೇ ಉಳಿದ ಉದಾಹರಣೆಗಳು ಬೇಕಾದಷ್ಟಿವೆ. ಸಾಲದ ಸುಳಿಯಿಂದ ಸಾಧ್ಯವಾದಷ್ಟು ಬೇಗ ಹೊರಬರಬೇಕು ಎಂಬ ಆಸೆಯಿಂದ ಅವರು ದುಡಿಯಲು ಬರುತ್ತಾರೆ.

ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗ ಅರಿಸಿ ಕಾರ್ಮಿಕರು ನಗರಕ್ಕೆ ವಲಸೆ ಬಂದರೆ, ಅವರಿಗೆ ಬಿಹಾರ, ಅಸ್ಸಾಂ, ಓಡಿಶಾ ಮತ್ತಿತರ ರಾಜ್ಯಗಳ ಬಡ ಕೂಲಿಕಾರರು ಪೈಪೋಟಿ ನೀಡುತ್ತಾರೆ. ಪರರಾಜ್ಯಗಳಿಂದ ಕಡಿಮೆ ಸಂಬಳಕ್ಕೆ ಸಿಗುವ ಕಾರ್ಮಿಕರಿಗಾಗಿ ಹಲವು ಕಾರ್ಖಾನೆಗಳು ಹಾಸ್ಟೆಲ್‌ಗಳ ವ್ಯವಸ್ಥೆಯನ್ನೂ ಮಾಡಿವೆ.

ಭಾರತದ ಸಂಸ್ಥೆಗಳಿಗೆ ಉಪಗುತ್ತಿಗೆ
ಪ್ರಪಂಚದಲ್ಲಿ ಚೀನಾ ಹೊರತುಪಡಿಸಿದರೆ ಅತಿ ಹೆಚ್ಚು ಸಿದ್ಧ ಉಡುಪು ತಯಾರಾಗುವ ದೇಶ ಭಾರತ. ತುಂಬಾ ಅಗ್ಗದ ದರದಲ್ಲಿ ಮಾನವ ಸಂಪನ್ಮೂಲ ಸಿಗುವುದರಿಂದ ಅಮೆರಿಕ ಹಾಗೂ ಯುರೋಪ್‌ ದೇಶಗಳ ಬ್ರಾಂಡೆಡ್‌ ಕಂಪೆನಿಗಳು ಸಿದ್ಧ ಉಡುಪು ತಯಾರಿಸಲು ಭಾರತದ ಸಂಸ್ಥೆಗಳಿಗೆ ಉಪಗುತ್ತಿಗೆ ನೀಡುತ್ತವೆ. ಬ್ರಾಂಡೆಡ್‌ ಕಂಪೆನಿಗಳ ಬೇಡಿಕೆ ಹೆಚ್ಚಿದಂತೆ ಇಲ್ಲಿನ ಕಾರ್ಖಾನೆಗಳ ಸಂಖ್ಯೆಯೂ ಏರುತ್ತಲೇ ಇದೆ.

‘ಉಪಗುತ್ತಿಗೆ ಪಡೆದ ಸಂಸ್ಥೆಗಳು ಹೆಚ್ಚಿನ ಲಾಭ ಬಾಚಿಕೊಳ್ಳಲು ಕಾರ್ಮಿಕರ ಸಂಬಳದಲ್ಲಿ ಸಾಕಷ್ಟು ಕತ್ತರಿ ಆಡಿಸುತ್ತವೆ. ಅನ್ನ ಹುಡುಕಿಕೊಂಡು ಬಂದವರ ಅನಿವಾರ್ಯತೆಯನ್ನೇ ಅಸ್ತ್ರ ಮಾಡಿಕೊಂಡು ಸುಲಿಗೆ ಮಾಡುತ್ತಿವೆ’ ಎನ್ನುವುದು ಗಾರ್ಮೆಂಟ್‌ ಲೇಬರ್‌ ಯೂನಿಯನ್‌ ಅಧ್ಯಕ್ಷೆ ರುಕ್ಮಿಣಿ ಅವರ ಆಕ್ರೋಶ. ‘ಮೂರ್ನಾಲ್ಕು ಮಂದಿ ದುಡಿದರೂ ಕುಟುಂಬದ ನಿರ್ವಹಣೆಗೆ ಹಣ ಸಾಕಾಗಲ್ಲ. ಆದ್ದರಿಂದಲೇ ಭವಿಷ್ಯ ನಿಧಿ (ಪಿಎಫ್‌) ಹಣ ಸಂಪೂರ್ಣವಾಗಿ ಸಿಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಕಾರ್ಮಿಕರಲ್ಲಿ ಅಷ್ಟೊಂದು ಆಕ್ರೋಶ ವ್ಯಕ್ತಪಡಿಸಿದ್ದು’ ಎಂದು ಅವರು ಹೇಳುತ್ತಾರೆ.

ಬೆಂಗಳೂರಿನ ನಾಲ್ಕು ಪ್ರಮುಖ ರಸ್ತೆಗಳ  –ಮೈಸೂರು, ಹೊಸೂರು, ತುಮಕೂರು ಹಾಗೂ ದೊಡ್ಡಬಳ್ಳಾಪುರ– ದಂಡೆಗುಂಟ ಸಿದ್ಧ ಉಡುಪುಗಳ ಕಾರ್ಖಾನೆಗಳು ತುಂಬಿಕೊಂಡಿವೆ. ನಗರದ ಬೊಮ್ಮನಹಳ್ಳಿ, ಪೀಣ್ಯ, ಹುಳಿಮಾವು, ಅರಕೆರೆ, ಬೊಮ್ಮಸಂದ್ರ, ಅತ್ತಿಬೆಲೆ, ಹೆಬ್ಬಗೋಡಿ, ಸಿಂಗಸಂದ್ರ, ಕೆಂಗೇರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅವು ನೆಲೆ ಕಂಡುಕೊಂಡಿವೆ.

ಇನ್ನಷ್ಟು ಘಟಕಗಳನ್ನು ಹಾಕಲು ಸ್ಥಳ ಸಿಗದೇ ಹೋದಾಗ ಅವುಗಳ ಮಾಲೀಕರಿಗೆ ಹೊಳೆದ ಯೋಚನೆಯೇ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿರುವ ಊರುಗಳಲ್ಲೇ ಕಾರ್ಖಾನೆ ಸ್ಥಾಪನೆ ಮಾಡುವುದು. ಹೀಗಾಗಿಯೇ ರಾಮನಗರ, ಮಂಡ್ಯ, ಮೈಸೂರು, ಹಾಸನ, ಕೋಲಾರ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಸಿದ್ಧ ಉಡುಪುಗಳ ಕಾರ್ಖಾನೆಗಳು ತಲೆ ಎತ್ತಿವೆ. ಈಗ ದಾವಣೆಗೆರೆ ಕಡೆಗೂ ಕಾರ್ಖಾನೆಗಳ ಮಾಲೀಕರ ಚಿತ್ತ ಹರಿದಿದೆ.

ಕೆಲಸ ಅರಿಸಿಕೊಂಡು ಬೆಂಗಳೂರಿಗೆ ಬಂದ ಸಾವಿರಾರು ಮಂದಿ ಈಗ ತಮ್ಮೂರಿನಲ್ಲೇ ಆರಂಭವಾಗಿರುವ ಕಾರ್ಖಾನೆಗಳಲ್ಲಿ ಉದ್ಯೋಗ ಗಿಟ್ಟಿಸಲು ಮರು ವಲಸೆ ಹೋಗಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT