ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತೆಯಲ್ಲಿನ ತಾರತಮ್ಯದ ಗೆಡ್ಡೆ ಕತ್ತರಿಸಬೇಕು

ಅಭಿಮತ ಮಂಗಳೂರು ಆಯೋಜಿಸಿದ್ದ ಜನನುಡಿಯಲ್ಲಿ ದೇವನೂರ ಮಹಾದೇವ ಪ್ರತಿಪಾದನೆ
Last Updated 19 ಡಿಸೆಂಬರ್ 2015, 19:31 IST
ಅಕ್ಷರ ಗಾತ್ರ

ಮಂಗಳೂರು: ಭಗವದ್ಗೀತೆಯಲ್ಲಿನ ತಾರತಮ್ಯ ರೋಗದ ಗೆಡ್ಡೆಗಳನ್ನು ಕತ್ತರಿಸಿ ಎಸೆದು ಗೀತೆಯನ್ನು ಉಳಿಸಿಕೊಳ್ಳಬೇಕು. ಆ ಮೂಲಕ ದೇಶದಲ್ಲಿ ಚಾತುರ್ವರ್ಣ ಆಧಾರಿತ ಜಾತಿ ಪದ್ಧತಿಯ ವಿಜೃಂಭಣೆಗೆ ಕಡಿವಾಣ ಹಾಕಬೇಕು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ಅಭಿಮತ ಮಂಗಳೂರು ವತಿಯಿಂದ 2 ದಿನಗಳ ಜನನುಡಿ–2015 ಸಾಹಿತ್ಯ ಸಮಾವೇಶಕ್ಕೆ ಅವರು ಶನಿವಾರ ಚಾಲನೆ  ನೀಡಿದರು.

‘ಕುವೆಂಪು ಅವರಲ್ಲಿ ಇದ್ದ ದರ್ಶನದ ಪ್ರತಿಮಾದೃಷ್ಟಿ ಬೆಳೆಸಿಕೊಂಡರೆ ಮಾತ್ರ ಭಗವದ್ಗೀತೆಗೆ ಶಸ್ತ್ರಚಿಕಿತ್ಸೆ ಮಾಡುವುದು ಸಾಧ್ಯ. ಆದರೆ, ಈಗ ನಮ್ಮ ಸಮಾಜ ಪ್ರತಿಕೃತಿ ದೃಷ್ಟಿಗೆ ಬಿದ್ದು ಒದ್ದಾಡುತ್ತಿದೆ’ ಎಂದರು.

ಚಾತುರ್ವರ್ಣ ಮತ್ತು ಜಾತಿ ಪದ್ಧತಿಗೆ ವಿರುದ್ಧವಾಗಿ ಬೆಳೆದ ಬೌದ್ಧ ಧರ್ಮದಲ್ಲಿ ಉನ್ನತ ಮೌಲ್ಯಗಳಿವೆ. ಆದರೆ, ಜಾತಿ ವ್ಯವಸ್ಥೆಯನ್ನು ಒಪ್ಪದ ಕಾರಣಕ್ಕಾಗಿ ಅದು ಭಾರತದ ನೆಲದಲ್ಲೇ ಪರದೇಶಿ ಆಗಬೇಕಾಯಿತು. ಜೈನ ಮತ್ತು ಲಿಂಗಾಯತ ಧರ್ಮಗಳು ಜಾತಿಯಾಗಿ ಹಿಡ ಮಾಡಿಸಿಕೊಂಡು ಇಲ್ಲಿ ಉಳಿದಿವೆ ಎಂದರು.

‘ಭಾರತದ ಸಮುದಾಯದ ಮನಸ್ಸನ್ನು ಹೊರತೆಗೆದು ಚಾಪೆಯಂತೆ ಹಾಸಿದರೆ ಅಲ್ಲಿ ಅರ್ಧಕ್ಕೂ ಹೆಚ್ಚಾಗಿ ರಾಮಾಯಣ, ಮಹಾಭಾರತಗಳು ಒಂದಲ್ಲಾ ಒಂದು ರೀತಿಯಲ್ಲಿ ತುಂಬಿಕೊಂಡಿವೆ. ಈ ಪುರಾಣ ಕಾವ್ಯಗಳ ಗಣಿಯಿಂದ ಅದಿರು ತೆಗೆದು ಚಿನ್ನ ಬೇರ್ಪಡಿಸಿ ಒಡವೆ ಮಾಡಿಕೊಳ್ಳದ ನಾವು ಇಲ್ಲದವರು ಆಗಿಬಿಟ್ಟಿದ್ದೀವಾ? ಈ ಕಾರಣಕ್ಕಾಗಿಯೇ ನಾವು ಎಷ್ಟೇ ಚೆನ್ನಾಗಿ ಮಾತನಾಡಿದರೂ ಅಷ್ಟೇ ಪ್ರಬಲವಾಗಿ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ನಡೆಯುತ್ತಿವೆಯೇ? ಸಮುದಾಯದ ಮನಸ್ಸಿನೊಡನೆ ಸಂಪರ್ಕ ಸಾಧಿಸಿ, ಮಥಿಸಿ ಮರುಹುಟ್ಟು ಪಡೆಯದಿದ್ದರೆ ನಾವು ಸಮುದಾಯದಿಂದಲೇ ಹೊರಗೆ ಉಳಿದವರಾಗುವುದಿಲ್ಲವೇ?’ ಎಂದರು.

‘ಆತಂಕದಿಂದ ಪುರಾಣ ಕಾವ್ಯ ಹಿಡಿದು ಗಾಂಧೀಜಿಯ ಬಳಿ ಹೋದರೆ ಪ್ರಾರ್ಥನೆ, ಭಜನೆ ಮಾಡಿಬಿಡುತ್ತಾರೆ. ಅಂಬೇಡ್ಕರ್‌ ಬಳಿ ಹೋದರೆ ವಾಸ್ತವ ಎಂಬಂತೆ ವಿಶ್ಲೇಷಣೆ ಮಾಡುತ್ತಾರೆ. ಪೆರಿಯಾರ್‌ ಮುರಿದು ಎಸೆಯುತ್ತಾರೆ. ಕಾರ್ಲ್‌ಮಾರ್ಕ್‌್ಸ ಅತ್ತ ಕಡೆ ತಲೆಹಾಕಿಯೂ ಮಲಗುವುದಿಲ್ಲ. ಲೋಹಿಯಾ ಅವರು ಪುರಾಣಕಾವ್ಯ ಕಾಣುತ್ತಾರೆ. ಈ ವಿಚಾರದಲ್ಲಿ ಕುವೆಂಪು ನಮ್ಮ ಸಾಂಸ್ಕೃತಿಕ ವಿವೇಕ ಅನಿಸಿಬಿಡುತ್ತಾರೆ’ ಎಂದ ದೇವನೂರ, 1944ರಲ್ಲಿ ಕುವೆಂಪು ಅವರು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆಕೊಟ್ಟ ಸಂದೇಶದ ಹಲವು ಸಾಲುಗಳನ್ನು ಉಲ್ಲೇಖಿಸಿದರು.

‘ಕುವೆಂಪು ಅವರ ಮಾತಿಗೆ ಈಗ 71 ವರ್ಷ. ಈ ಗ್ರಹಿಕೆ ಕೂಡ ಪ್ರಗತಿಪರರು ಎಂದುಕೊಂಡ ನಮಗೆ ಇನ್ನೂ ಸಾಧ್ಯವಾಗಿಲ್ಲ. ಅವರ ಮಾತುಗಳು ಕ್ರಿಯೆಯಾಗಿದ್ದರೆ ನಮ್ಮ ಇಂದಿನ ಬದುಕು ಹೆಚ್ಚು ಸಹ್ಯವಾಗಿರುತ್ತಿತ್ತು. ಜಾತಿಯ ಉಪನಗರಗಳು ಅಸಹ್ಯವಾಗಿ ಕಾಣಿಸುತ್ತಿದ್ದವು. ಕುವೆಂಪು ದರ್ಶನವನ್ನು ಕಾಲಮಾನಕ್ಕೆ ತಕ್ಕಂತೆ ಕಸಿ ಮಾಡಿಕೊಳ್ಳದೆ ನಾವು ಕುರುಡರಾದೆವು. ನಮ್ಮ ಆಶಯಗಳಿಗೆ ತಕ್ಕ ಕ್ರಿಯಾರೂಪವೇ ಇಲ್ಲ. ಇದರಿಂದಾಗಿ ಸಾಂಸ್ಕೃತಿಕ ಗರೀಬರಾಗಿದ್ದೇವೆ’ ಎಂದರು.

‘ಈಗೀಗ ಎಲ್ಲರೂ ಚೆನ್ನಾಗಿ ಮಾತನಾಡುತ್ತಿದ್ದಾರೆ. ನಾನು ಕೂಡ ಅದರಲ್ಲಿ ಸೇರಿದ್ದೇನೆ. ಆದರೆ, ನಮ್ಮ ಮಾತಿನ ಆಶಯಗಳು ಏನಿವೆಯೋ ಅದಕ್ಕೆ ವಿರುದ್ಧವಾದ ವಿದ್ಯಮಾನಗಳೇ ಸಮಾಜದಲ್ಲಿ ಹೆಚ್ಚುತ್ತಿವೆ. ತಾಳ ತಪ್ಪುತ್ತಿರುವುದು ಎಲ್ಲಿ? ಸಮಾನತೆ ಆಶಯದ ನಮ್ಮ ಮಾತುಗಳು ಕೇವಲ ಕೌಶಲ್ಯ ಆಗಿಬಿಟ್ಟಿವೆಯೇ? ನಮ್ಮ ಹುಡುಕಾಟ ಸ್ಥಗಿತಗೊಂಡು ಪೀಠಸ್ಥರಾಗಿ ಪ್ರವಚಕರಂತೆ ರಂಜನೆ ಕೊಡುತ್ತಿದ್ದೇವೆಯೇ? ಇಲ್ಲಿ ನಿಂತು ನಮ್ಮ ನ್ನೂ, ನಮ್ಮ ಮಾತುಗಳನ್ನೂ ನಾವೇ ನೋಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಸಾಂಸ್ಕೃತಿಕ ಕಣ್ಣಿಗಾಗಿ ತಪಸ್ಸು: ‘ದಾಳಿ ಮಾಡುವುದಕ್ಕೆ ಎದುರಿಗೆ ಯಾರಾದರೂ ವಿರೋಧಿ ಇದ್ದರೆ ಮಾತ್ರ ಹೋರಾಡುವ ಜಾಯಮಾನ ನಮ್ಮ ಹೋರಾಟಗಾರರಲ್ಲಿ ಹೆಚ್ಚುತ್ತಿದೆ. ಆದರೆ, ನಮ್ಮ ಆಶಯಗಳಿಗೆ ತಕ್ಕಂತೆ ಕ್ರಿಯೆ ರೂಪಿಸಿ  ನಡೆಯಬೇಕಾದರೆ ನಾವು ಶ್ರಮಜೀವಿಗಳು ಆಗಿಬಿಡುತ್ತೇವೆ. ಅದು ನಮಗೆ ಬೇಕಾಗಿಲ್ಲವೇ’ ಎಂದು ಪ್ರಶ್ನಿಸಿದರು.

ಜನನುಡಿಯು ಆಳ್ವಾಸ್‌ ನುಡಿಸಿರಿಗೆ ಪ್ರತಿಕ್ರಿಯೆಯ ರೂಪದಲ್ಲಿ ಹುಟ್ಟಿದೆ. ಅದು ಈಗ ಪೊರೆ ಕಳಚಿ ಹೊಸ ಹುಟ್ಟು ಪಡೆಯಬೇಕಾಗಿದೆ. ಸಮುದಾಯದ ಮನಸ್ಸಿನ ತಾಯಿಬಳ್ಳಿಗೆ ಮತ್ತೆ ಕಸಿ ಮಾಡಿಕೊಂಡು  ಸಾಂಸ್ಕೃತಿಕ ಕಣ್ಣು ಪಡೆಯಬೇಕಾಗಿದೆ. ಈ ಸಾಂಸ್ಕೃತಿಕ ಕಣ್ಣಿಗಾಗಿ ತಪಸ್ಸು ಮಾಡಬೇಕಾಗಿದೆ ಎಂದು ಕರೆ ನೀಡಿದರು.
*
‘ಆತಂಕವಾಗುತ್ತದೆ’
‘ನಾನು ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಹುಟ್ಟಿದವನು. ಆದರೆ, ನನ್ನ ಅನೇಕ ಮಿತ್ರರು ನನ್ನನ್ನು ಸ್ವಾತಂತ್ರ್ಯ ಹೋರಾಟಗಾರನೇನೋ ಎಂದು ಭಾವಿಸಿದಂತಿದೆ. ಎಚ್‌.ಎಸ್‌.ದೊರೆಸ್ವಾಮಿಯವರ ಪಕ್ಕ ನನ್ನನ್ನು ಇಟ್ಟು ನೋಡುವ ಪರಿಪಾಠ ಹೆಚ್ಚುತ್ತಿದೆ. ಇದೆಲ್ಲ ಒಳ್ಳೆಯದಕ್ಕೋ? ಕೆಟ್ಟದಕ್ಕೋ ನನಗೇ ಗೊತ್ತಿಲ್ಲ. ಇದನ್ನೆಲ್ಲಾ ನೋಡಿದಾಗ ನನಗೆ ವಯಸ್ಸಾಯಿತು ಎಂಬ ಅರಿವಾಗಿ ಆತಂಕವಾಗುತ್ತದೆ’  ಎಂದು ದೇವನೂರ ಮಹಾದೇವ ಭಾಷಣದ ಆರಂಭದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT