ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಕಕ್ಷೆಗೆ ಸೇರಿದ ‘ಜುನೊ’

Last Updated 5 ಜುಲೈ 2016, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್‌ (ಪಿಟಿಐ):  ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ)  ನಿರ್ಮಿತ ‘ಜುನೊ’ ಗಗನನೌಕೆ ಮಂಗಳವಾರ ಬೆಳಿಗ್ಗೆ (ಭಾರತೀಯ ಕಾಲಮಾನ ) ಯಶಸ್ವಿಯಾಗಿ ಗುರುಗ್ರಹದ ಕಕ್ಷೆಯನ್ನು ಸೇರಿದೆ. ಆ ಮೂಲಕ, ಸೌರ ಮಂಡಲದ ಅತ್ಯಂತ ದೊಡ್ಡ ಗ್ರಹದ ಸಮೀಪಕ್ಕೆ ತೆರಳಿದ ಮೊದಲ ಗಗನ ನೌಕೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ಬೃಹದಾಕಾರದ ಗ್ರಹದ ಮೂಲ ಹಾಗೂ ಉಗಮ, ಅದರ ಜೊತೆಗೆ ಸೌರ ಮಂಡಲದ ಸೃಷ್ಟಿಯ ಅಧ್ಯಯನದಲ್ಲಿ ಇದೊಂದು ದೊಡ್ಡ ಹೆಜ್ಜೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಅಮೆರಿಕದಾದ್ಯಂತ ಸೋಮವಾರ ಜನ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ, ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್‌ ಪ್ರೊಪಲ್ಷನ್‌ ಲ್ಯಾಬೊರೇಟರಿಯಲ್ಲಿದ್ದ (ಜೆಪಿಎಲ್‌) ಯೋಜನಾ ನಿಯಂತ್ರಕರು   ಮತ್ತು ವಿಜ್ಞಾನಿಗಳಿಗೆ ನೌಕೆಯು ನಿಗದಿತ ಕಕ್ಷೆ ಸೇರಿದ್ದು ಮಹಾ ಸಂಭ್ರಮವನ್ನು ಉಂಟು ಮಾಡಿತ್ತು.

ಡೂಡಲ್‌: ಜುನೊ ನೌಕೆ ಯಶಸ್ವಿಯಾಗಿ ಗುರುಗ್ರಹದ ಕಕ್ಷೆಯನ್ನು ಸೇರಿದ ಸಂಭ್ರಮವನ್ನು ಇಂಟರ್‌ನೆಟ್‌ ದೈತ್ಯ ಗೂಗಲ್‌, ತನ್ನ ಮುಖಪುಟದಲ್ಲಿ ನೌಕೆಯ ಚಿತ್ರವುಳ್ಳ ‘ಡೂಡಲ್‌’ ಪ್ರಕಟಿಸುವ ಮೂಲಕ ಆಚರಿಸಿತು.

ಭಾರತೀಯ ಕಾಲಮಾನ ಮಂಗಳವಾರ ಬೆಳಿಗ್ಗೆ 8.48ಕ್ಕೆ ನೌಕೆಯ ಪ್ರಧಾನ ಎಂಜಿನ್‌ ಉರಿಯಲು ಆರಂಭಿಸಿತು. 35 ನಿಮಿಷಗಳ ನಂತರ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು. ನೌಕೆಯ ವೇಗವನ್ನು ಪ್ರತಿ ಸೆಕೆಂಡ್‌ಗೆ 542 ಮೀಟರ್‌ಗೆ ಕುಗ್ಗಿಸುವುದಕ್ಕಾಗಿ ಎಂಜಿನ್‌ ಉರಿಸಲಾಯಿತು.

* 9ನೌಕೆಯಲ್ಲಿರುವ ವೈಜ್ಞಾನಿಕ ಉಪಕರಣಗಳು

* 18,698 ಸೌರ ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಜುನೊದಲ್ಲಿ ಅಳವಡಿಸಲಾಗಿರುವ ಸೌರ ಕೋಶಗಳು

ನೌಕೆ ಹೇಗಿದೆ?

11.5 ಅಡಿ ಎತ್ತರ
11.5ಅಡಿ ವ್ಯಾಸ
ಮೂರು ಸೌರ ಫಲಕಗಳು 66 ಅಡಿ ವ್ಯಾಪ್ತಿಯಲ್ಲಿ ಹರಡಿಕೊಳ್ಳುತ್ತವೆ

ಮುಂದೆ...
ನೌಕೆಯು 20 ತಿಂಗಳು  ಕಾರ್ಯ ನಿರ್ವಹಿಸಲಿದೆ. ಗುರುಗ್ರಹದಿಂದ 4,100 ಕಿ.ಮೀ ಎತ್ತರದಲ್ಲಿ ಬುಗುರಿಯಂತೆ ತಿರುಗುತ್ತ 37 ಸಲ ಪ್ರದಕ್ಷಿಣೆ ಬರಲಿದೆ.

* 4 ವರ್ಷ  11 ತಿಂಗಳು ಭೂಮಿಯಿಂದ ಗುರುಗ್ರಹಕ್ಕೆ ಜುನೊ ನೌಕೆ ಪ್ರಯಾಣಿಸಿದ ಅವಧಿ

* 2011 ಆಗಸ್ಟ್‌ 5 ಫ್ಲಾರಿಡಾದ ಕೇಪ್‌ ಕ್ಯಾನ್‌ವೆರಾಲ್‌ ನೆಲೆಯಿಂದ ನೌಕೆಯನ್ನು ಉಡಾವಣೆ ಮಾಡಿದ ದಿನ

* 280 ಕೋಟಿ ಕಿ.ಮೀ ಕ್ರಮಿಸಿದ ದೂರ

* 2018, ಫೆಬ್ರುವರಿ 20 ಜುನೊ ತನ್ನ ಕಾರ್ಯ ಸ್ಥಗಿತಗೊಳಿಸುವ ದಿನ. ಗುರುಗ್ರಹಕ್ಕೆ ಅಪ್ಪಳಿಸಿ ನೌಕೆ ಧ್ವಂಸವಾಗಲಿದೆ.

* ₹7,480 ಕೋಟಿ (110 ಕೋಟಿ ಡಾಲರ್‌) ಜುನೊ ಯೋಜನಾ ವೆಚ್ಚ

ಜುನೊ ಮಾಡುವುದೇನು?
* ಗುರುಗ್ರಹದ ಗರ್ಭದ (ತಿರುಳು) ಅಧ್ಯಯನ

* ಕಾಂತ ಕ್ಷೇತ್ರದ ವಿಶ್ಲೇಷಣೆ
* ಗ್ರಹದ ಆಳ ವಾತಾವರಣದಲ್ಲಿ ಇರಬಹುದಾದ ನೀರು ಮತ್ತು ಅಮೋನಿಯಾ ಪ್ರಮಾಣ ಅಳೆಯುವುದು
* ಗ್ರಹದ ಧ್ರುವ ಪ್ರಭೆಗಳ ಅಧ್ಯಯನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT