ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ ಚಂದವಾಗಿ ನಗುವ ನನ್ನ ಬಿದಿಗೆ ಬಿಂಬವೇ, ನನ್ನ ಬದುಕಿನ ಮಹಾಪ್ರಾಣವೇ

Last Updated 12 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಅವತ್ತು ಜೋರು ಮಳೆಗಾಲದ ಮಧ್ಯೆ ಒಂದು ಬಿಡುವಿನ ಹನಿಗಾಲದ ಇಳಿ ಮಧ್ಯಾಹ್ನ ಇನ್ನೇನು ಹೊನ್ನ ಬೆಳಕಲ್ಲಿ ಮೀಯುವ ಸಂಜೆಗೆ ಅಡಿಯಿಡಬೇಕು ಅಂತಹ ಬಂಗಾರದ ಘಳಿಗೆ.

ಇವತ್ತು ಮೆಟ್ರೊ ಮತ್ತು ಅಸಂಖ್ಯ ಆಟೊಮೊಬೈಲುಗಳಿಂದ ತುಂಬಿ ಕಿಕ್ಕಿರಿದ ರಸ್ತೆಯಲ್ಲಿ ಅವತ್ತು ಬರಿಯ ಜನಜಂಗುಳಿ ಮೆಲ್ಲಗೆ ಸೋನೆಯಲ್ಲಿ ನೆನೆಯುತ್ತಾ ಏನನ್ನೋ ನೆನಸುತ್ತಾ, ಇನ್ನೇನನ್ನೋ ಹುಡುಕುತ್ತಾ ಸಾಗಿತ್ತು.

ನನ್ನ ಕೈ ನಿನ್ನ ಜಾಕೆಟ್‌ ಜಗ್ಗಿ ಹಿಡಿದಿದ್ದರೆ, ನೀನು ನನ್ನ ಸುತ್ತಲೂ ಒಂದು ಕೈಯನ್ನು ಹಗೂರ ಬಳಸಿ ಅವರಿವರು ಸೆಳೆಯದಂತೆ... ಆ ಮಳೆಯಲ್ಲಿ ನೆಂದು ಹೊಳಪಾದ ಕಪ್ಪು ರಸ್ತೆಯ ಮೇಲೆ ನಮ್ಮ ಮೆತ್ತ ಮೆತ್ತನೆಯ ಹೆಜ್ಜೆ.

ರಸ್ತೆ ತುಂಬ ಹರಿಯುವ ಕಣ್ಣು ಆಗೀಗ ಬದಿಬದಿಯಲ್ಲೆ ಒಬ್ಬರಿನ್ನೊಬ್ಬರ ನೋಟಕ್ಕೆ ಸಿಕ್ಕಿ, ನಿಸಾರರ ಪದ್ಯದ ಸಾಲಿನಂತೆ ‘ಕಣ್ಣ ಕೊಳದ ಕಪ್ಪು ಮೀನು ಹೃದಯ ಬಲೆಗೆ ಬಿತ್ತೆ...!’ ಒಂದು ಕಿರಿನಗು, ಕೆನ್ನೆಯ ತುದಿಯಲ್ಲಿ ಚೂರು ಹೌದೋ ಅಲ್ಲವೋ ಎಂಬಂತೆ ಸಿಗ್ಗು.

ಅದೊಂದು ಕಾಲ. ಇವತ್ತಾಗಿದ್ರೆ ಇಬ್ರೂ ಒಂದೊಂದು ಕೈಯಲ್ಲಿ ಮೊಬೈಲು ಹಿಡಿದುಕೊಂಡು ಬಂದ್‌ ಬಂದ ಹಾಗೆಲ್ಲಾ ನಮ್ ನಮ್ಮ ಸ್ನೇಹಿತರಿಗೆ ಮೆಸೇಜು

ಕಳಿಸುತ್ತಾ ಈಗ ಎಂ.ಜಿ. ರಸ್ತೆ, ಈಗ ಚರ್ಚ್ ರಸ್ತೆಯ ಕ್ರಾಸು, ಈಗ ಬ್ರಿಗೇಡಿನ ತುದಿ... ಅಂತ ಸ್ಟೇಟಸ್‌ ಅಪ್ಡೇಟು ಮಾಡುತ್ತಾ... ಎಕ್ಸಕ್ಯೂಸ್‌ ಮೀ ಎಂದು ಪಲುಕಿ ಮೌನವನ್ನೆಲ್ಲ ಮುರಿಯುತ್ತಾ ಜೋರು ಜೋರಾಗಿ ನಗುತ್ತಾ... ಯಾ ಯಾ ಅನ್ನುತ್ತಾ... ಒಬ್ಬರಿಗೊಬ್ಬರ ಕಾಲು ಮುಗಿಯುವುದನ್ನು ಕಾಯುತ್ತಾ ಹೋಗಿಬಿಡಬೇಕಿತ್ತೇನೋ...

ಅದೆಲ್ಲ ಬಿಡು... ನಿನ್ನ ಜೇಬಲ್ಲಿ ಇಂಗ್ಲಿಷು ಸಿನಿಮಾದ ಟಿಕೇಟಿತ್ತು. ನನಗೆ ಕನ್ನಡ ನಾಟಕ ನೋಡಬೇಕಿತ್ತು. ಎರಡು ದಿನದಿಂದ ಸಿಕ್ಕಾಗೆಲ್ಲ ವಾದಿಸಿಕೊಂಡು, ಕೊನೆಗೆ ಈ ಇಂಗ್ಲಿಷ್‌ ಸಿನಿಮಾ ನೋಡಿಕೊಂಡು, ಆಟೊ ಹಿಡಿದು, ಕಲಾಕ್ಷೇತ್ರದಲ್ಲಿ ನಡೆಯುವ ನಾಟಕಕ್ಕೆ ಹೋಗುವುದು ಎಂದಾಗಿತ್ತು.
ಒದ್ದೆ ಒದ್ದೆ ಚೂಡಿಯಲ್ಲಿ ಪಟ್‌ ಪಟ್‌ ಎಂದು ರಸ್ತೆ ನೀರನ್ನ ಹಾರಿಸುತ್ತ ನಾನು ನಡೆದರೆ, ನಿನಗೆ ಸಿಟ್ಟು. ಸ್ವಲ್ಪ ನೋಡಿ ನಡೆಯೇ... ಎಲ್ಲರಿಗೂ ಸಿಡಿಯುತ್ತೆ... ಅಂತ ಬಯ್ಯುವಷ್ಟರಲ್ಲಿ... ಅವಳ್ಯಾವಳೋ ಬಿಂಕದ ರಾಣಿ.

ನನ್ನ ಕೆನ್ನೆ ಹಿಂಡುತ್ತಾ ಹೌ ಸ್ವೀಟ್‌... ಬ್ಯಾಕ್‌ ಟು ಚೈಲ್ಡ ಹುಡ್‌... ಅಲ್ವಾ... ಅಂದು ನಿನ್ನ ನೋಡಿ ಒಂದು ನಗುವೆಸೆದರೆ... ನೀನು... ಹಿ ಹ್ಹಿ ಅಂತ ಹಲ್‌ ಕಿರಿದಿದ್ದೆ. ಅವಳು ಹೋದ ಮೇಲೆ ಕೆಂಪಗಾದ ನಿನ್ನ ಕೆನ್ನೆ ನೋಡಿ ನನಗೆ ಅದೇನೋ ಖುಶಿ ಖುಶಿ.

ಸುಮ್ಮನೆ ಹತ್ತಿರಕ್ಕೆ ಬಂದೆ. ನೀನೋ ಇನ್ನೇನೋ ಅಂದುಕೊಂಡು ಕೆನ್ನೆ ಬಗ್ಗಿಸಿದೆ. ನಾನು ನಿನ್ನ ಕಿವಿಯಲ್ಲಿ, ಹೋಗಲಿ... ಹೊಸ ಕೊಡೆ ಕೊಡ್ಸು. ಡೀಸೆಂಟಾಗಿ ಬರ್ತೀನಿ ಅಂದು ನಕ್ಕಿದ್ದೆ... ಯಾವಾಗ್ಲೂ ಏನಾರು ಒಂದು ಕೊಡಿಸ್ಕೋಳ್ಳೋದಕ್ಕೆ ನೋಡ್ತಿರ್ತಾರೆ ಈ ಹುಡ್ಗೀರು... ನಮ್ಗೆ ಏನಾರು ಕೊಡಿ ಅಂದ್ರೆ ಮೀನಾ ಮೇಷ ಅಂತ ಗೊಣಗಿದ್ದೆ ನೀನು.

ಸಿನಿಮಾ ಮುಗೀತು. ಹೊರಗೆ ಬಂದು ಆಟೊ ಹತ್ತಿಯೂ ಆಯಿತು. ಹನಿ ಹನಿ ಮಳೆ ಧಾರೆಯಾಗಿತ್ತು. ಈಗ ಗೇಟು ದಾಟಿ ಆಟೊ ಹತ್ತುವಷ್ಟರಲ್ಲಿ ಇಬ್ಬರೂ ಒದ್ದೆ ಮುದ್ದೆ.

ಆ ಕಪ್ಪು ಸಂಜೆಯ ಹಸಿಯಲ್ಲಿ, ನಮ್ಮ ಉಸಿರ ಬಿಸಿ ಇನ್ನಷ್ಟು ಆಪ್ತ. ನೀನೇ ಎಳೆದುಕೊಳ್ಳಲಿ ಅಂತ ನಾನು ಸ್ವಲ್ಪ ದೂರ ಕೂತಿದ್ದೆ. ಅವಳೇ ಹತ್ತಿರ ಬರಲಿ ಅಂತ ನೀನೂ... ಅಷ್ಟರಲ್ಲಿ ರಸ್ತೆ ಹಂಪೊಂದು ಸಿಕ್ಕಿ ಇಬ್ಬರೂ ಹತ್ತಿರಾಗಿ ಒಂದು ಢೀ ಕೊಟ್ಟರೆ, ಆಟೊದವನು ಸಾರಿ ಸಾರ್... ಮಳೇಲಿ ಹಂಪು ಗೊತ್ತಾಗ್ಲಿಲ್ಲ ಅಂದು ಕಿರುನಕ್ಕ. ನಾವಿಬ್ಬರೂ ಕಷ್ಟಪಟ್ಟು ಥ್ಯಾಂಕ್ಸ ಅಂತ ಹೇಳದೆ ಉಳಿದೆವು. ಬೇಂದ್ರೆಯವರ ಗಲ್ಲ ಗಲ್ಲ ಹಚ್ಚಿ ಕೂತ ಮಲ್ಲಿಗೆ ಮಂಟಪ ಹೇಗಿರಬಹುದು ಅಂತರಿವಾದ ಕ್ಷಣ!

ಸಂಜೆ ಗೂಡಿಗೆ ಹೊರಟ ಸಾವಿರಾರು ಹಕ್ಕಿಗಳ ಯಾನದಲ್ಲಿ ನಿಧಾನಕ್ಕೆ ಸೇರಿದ ಆಟೊ ಕಲಾಕ್ಷೇತ್ರದ ಹತ್ತಿರ ಬರುವಾಗ ಒಳಗೆ ಹೋಗುವ ಸಮಯವೇ ಆಗಿದ್ರೂ ನಾನು ಎಂದಿನಂತೆ ಕೂಗಾಡದೆ, ಸುಮ್ಮನೆ ಬೆಚ್ಚಗೆ ನಿನ್ನ ಕೈ ಹಿಡಿದುಕೊಂಡು ಮೆಟ್ಟಿಲು ಹತ್ತಿದ್ದೆ. ನೀನು ಇನ್ಮೇಲೆ ಇವಳ ಜೊತೆ ಮಳೆಯಲ್ಲೇ ಸುತ್ತಬೇಕು ಅಂದುಕೊಂಡಿದ್ದು ನಂಗೆ ಗೊತ್ತು. ಯಾಕಂದ್ರೆ ನಂಗೂ ಹಂಗೆ ಅನಿಸಿತ್ತು. ಒಂದು ಆ್ಯಕ್ಷನ್‌ ಸಿನಿಮಾ ನೋಡಿ ಮುಗಿಸಿ ಬಂದ ಕೂಡಲೇ, ಇನ್ನೊಂದು ಮೌನ ತಲ್ಲಣಗಳ ನಾಟಕ ನೋಡಲು ನಮ್ಮನ್ನು ಅಣಿಗೊಳಿಸಿದ್ದು ಆ ಒದ್ದೆ ಆಪ್ತ ಆಟೊಯಾನ ಮತ್ತು ಅದರ ತುಂಬ ತುಂಬಿದ್ದ ಮೌನ. ಮಾತಿನ ಅಳಿವೆಯ ದಾಟಿ ಮೌನದ ಲಂಗರಿಗೆ ಬಿದ್ದ ನಮ್ಮ ಪ್ರೀತಿಯ ನಾವೆ... ಸೇರಿದ್ದು... ಕೆ.ಎಸ್‌.ನ ಬಣ್ಣಿಸಿದ ಸರ್ವಋತು ಬಂದರಿಗೆ.

ಆಮೇಲಾಮೇಲೆ ನಮ್ಮ ನಡುವಿನ ಅಂತರ ಕಾಣದಾಗಿ, ವಾದಗಳು ನಿರುತ್ತರವಾಗಿ, ನನ್ನ ಕಣ್ಣಲ್ಲಿ ನಿನ್ನ ಪ್ರತಿಫಲನವಷ್ಟೇ ಉಳಿದು, ನೀನು ನನಗಾಗಿಯೇ ನಾಟಕಗಳ ಸೀಸನ್‌ ಟಿಕೆಟ್ಟು ತೆಗೆದಿಟ್ಟುಕೊಳ್ಳುತ್ತಾ ಬಂದೆ. ನಾನು ಮೊದಲ ವಾರದ ಸಂಜೆಯ ಸಿನಿಮಾಗೆ ಆನ್‌ಲೈನ್‌ ಬುಕ್‌ ಮಾಡತೊಡಗಿದೆ. ಇಬ್ಬರೂ ಒಬ್ಬರಿಗೊಬ್ಬರು ಅರ್ಥವಾದಿವಿ ಅಂತ ಅಲ್ಲ. ಆದರೆ ಹತ್ತಿರವಾದಿವಿ. ನಮ್‌ ನಮ್ಮ ಭಾವಕೋಶದಲ್ಲಿ ಒಬ್ಬರಿಗೊಬ್ಬರು ಹೊಕ್ಕಲು ಅಣಿ ಮಾಡಿದಿವಿ ಅನ್ನಬಹುದು. ನೀನು ಕೆನ್ನಿ ಜಿ. ಎಲ್ವಿಸ್‌, ಯಾನ್ನಿ ಅಂತ ರಾಕು, ಪಾಪು, ಮೆಟಲುಗಳ ಆಲ್ಬಂಗಳ ಪಾರ್ಕಿಗೆ ಕರೆದುಕೊಂಡು ಹೋದೆ. ನಾನು ಅನಂತಸ್ವಾಮಿ, ರತ್ನಮಾಲಾ, ಛಾಯಾ, ಕಟ್ಟಿ, ಅತ್ರಿ, ಅಂತ ನಿನ್ನ ಗುಡ್ಡ ಹತ್ತಿಸಿದೆ.

ಇದೆಲ್ಲ ಈಗ ಯಾಕೆ ಅಂದ್ರೆ... ನಾನು ಆಫೀಸಿನವರ ಜೊತೆಗೆ ಮೂರು ದಿನ ಸಮುದ್ರ ತೀರಕ್ಕೆ ಪ್ರವಾಸ ಹೋಗ್ಬಿಟ್ಟೆ ನಿನ್‌ ಬಿಟ್ಟು ಅಂತ ಸಿಟ್ಟು ಮಾಡಿಕೊಂಡು, ನಾನು ವಾಪಸ್‌ ಬರೋ ಅಷ್ಟರಲ್ಲಿ ನೀನು ಕಾಡು ಸುತ್ತೋಕೆ ಹೋಗ್ಬಿಟ್ಟಿದೀಯ.

ಸಾಲು ಸಾಲು ಮರಗಳ ಕೆಳಗೆ ಹಕ್ಕಿ ಉಲಿ ಕೇಳುತ್ತಾ ನಡೆದು ಹೋಗಿ ಕೂಡಿಟ್ಟ ನಮ್ಮ ಸಂಜೆಗಳ ಮೇಲಾಣೆ... ಸಿಟ್ಟು ಇಳಿಸಿ ಬೇಗ ವಾಪಸ್‌ ಬಾ. ನನಗಾಗಿ ಅಲ್ಲ. ನಿನಗಾಗಿ ಬಾ.

ಇಲ್ಲದೆ ಇದ್ರೆ ಏನಾಗುತ್ತೆ ಗೊತ್ತಾ... ನೀನು ಬೆನ್ನಿಗೆ ಕಟ್ಟಿ ಕರಕೊಂಡು ಹೋಗಿದ್ದೀಯಲ್ಲ ನಮ್ಮ ಪುಟ್ಟ ಕೃಷ್ಣಿ, ಅವಳನ್ನ ಅಲ್ಲಿ ಸಂಭಾಳಿಸುವುದು ಕಷ್ಟ ಆಗುತ್ತೆ ನಿನಗೆ. ಒಂದಿನಾನಾದ್ರೂ ಮನೆಯಲ್ಲಿ ಅವಳನ್ನ ನೋಡ್ಕೊಂಡಿದ್ರೆ ಏನೂ ಅಂತಿರಲಿಲ್ಲ ನಾನು. ಮಜಾ ಮಾಡಿ ಅಂತಿದ್ದೆ. ನಿನಗೇ ಎಲ್ಲ ಇನ್ನೂ ಕೈ ಕೈಗೇ ಕೊಟ್ಟು ಸಂಭಾಳಿಸಬೇಕು. ಆ ಪುಟ್ಟ ದೇವತೆಯ ಪೂಜೆ ಹೇಗೆ ಮಾಡೀಯ. ಬೇಗ ಬನ್ನಿ ಇಬ್ರೂ... ಸಿಗ್ನಲ್ಲು ಸಿಕ್ಕು ಜೀಮೈಲು ನೋಡಿದ ಕೂಡಲೇ ಓಡಿ ಬರದೇ ಇದ್ರೆ ಏನಾಗುತ್ತೆ ಗೊತ್ತಲ್ಲ... ನಾಳೆವರೆಗೂ ಕಾದು ನಾನೂ ಬಂದುಬಿಡುತ್ತೇನೆ ಅಷ್ಟೇ...

ಸಿಗ್ಗು ಎನ್ನುವ ಪದದ ಬಂಧ ಮತ್ತು ಚಂದ ಎರಡೂ ಮರೆತ ಈ ಕಾಲದಲ್ಲಿ ಇವತ್ತಿಗೂ ಮನೆಯ ಗೋಡೆಯಲ್ಲಿ ನೇತು ಹಾಕಿರುವ ನಿನ್ನ ಜಾಕೆಟ್‌ ನೋಡಿ ಒಂದ್ಸಲ ಕೆನ್ನೆಯೊತ್ತಿ ಯಾರೂ ಕಾಣಲಿಲ್ಲ ಅಂದುಕೊಂಡು ನಿರಾಳವಾಗುತ್ತೇನೆ.

ಮಿಸ್‌ ಯೂ... ಬೇಗ ಬಂದ್ಬಿಡು. ಲವ್ಯೂ ಅಂತೆಲ್ಲ ಹೇಳಿದ್ರೆ ನೀನು ಬೈತೀಯ ಅಂತ ಹೇಳ್ತಾ ಇಲ್ಲ. ಆದ್ರೆ ನಿಜ್ವಾಗ್ಲೂ ನೀನಿಲ್ಲದೇ ಇರುವುದಕ್ಕೆ ಆಗೋಲ್ಲ ಕಣೋ ಬೇಗ್‌ ಬಾ. 

ಗಟ್ಟಿ ಮುತ್ತು ಮತ್ತು ಕರಡಿ ಅಪ್ಪುಗೆಗಳೊಂದಿಗೆ
                                               -ಜಾನೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT