ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ಟೂ ಬಿಡದೇ ನೆನಪಾಗಿ ಕಾಡುವವಳೇ,

Last Updated 12 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮನದ ಮುದ್ದಿನ ಮನದನ್ನೆಯ ಮೂಗಿನ ನತ್ತಿನ ಹೊಳಪಿಗೊಂದು ಹೂಮುತ್ತು. ದಯಮಾಡಿ ಒಪ್ಪಿಸಿಕೋ.

ಮುಂದೆ ಏನು ಬರೆಯಬೇಕೋ ತೋಚುತ್ತಿಲ್ಲ. ಪಾಪಿ ಕಣ್ಣುಗಳು ಬೇರೆ ಕೆಂಡದಂತೆ ಕೆಂಪಗೆ ಉರಿಯುತ್ತಿವೆ. ಮುಂಚೆಯಾಗಿದ್ದರೆ ತೆಪ್ಪಗೆ ಹಾಸಿಗೆ ಮೇಲೆ ಅಂಗಾತ ಬಿದ್ದುಕೊಂಡರೆ ಸಾಕು, ಕಣ್ತುಂಬ ನಿದ್ದೆ ಮಾಯಾಂಗನೆಯಂತೆ ಮುಸುಕು ಹೊದಿಸುತ್ತಿತ್ತು. ಆದರೆ ಆ ಪರಮ ದೌರ್ಭಾಗ್ಯದ ದಿನ ನಾವಿಬ್ಬರೂ ಒಬ್ಬರನ್ನೊಬ್ಬರು ಧಿಕ್ಕರಿಸಿ ದೂರವಾದೆವಲ್ಲ, ಆವತ್ತಿನಿಂದ ನಿದ್ದೆಯ ಮಾತೇ ಇಲ್ಲ. ಮನೆಯವರೆಲ್ಲರೂ ಮಲಗಿಕೊಂಡ ಮೇಲೆ ಒಂದೊಂದೇ ಮೆಟ್ಟಿಲು ಹತ್ತಿ ತಾರಸಿ ಎಂಬ ಬಯಲ ದೇಗುಲಕ್ಕೆ ಬರುತ್ತೇನೆ. ನೆತ್ತಿ ಮೇಲಿನ ನಕ್ಷತ್ರ ದಿಟ್ಟಿಸುತ್ತ ಕಡೆದಿಟ್ಟ ಶಿಲ್ಪದಂತೆ ನಿಂತುಬಿಡುತ್ತೇನೆ. ಬೆನ್ನುಮೂಳೆಯವರೆಗೆ ನಾಲಗೆ ಚಾಚಿ ನೆಕ್ಕುವ ಕೆಟ್ಟ ಚಳಿಯಲ್ಲೂ ಹೃದಯವೆಂಬ ಅಗ್ನಿಕುಂಡ ಹೊತ್ತಿಕೊಂಡು ಧಗಧಗನೆ ಉರಿಯುತ್ತೆ, ಬೆಳಕು ಮಾತ್ರ ನಾಪತ್ತೆ. ನಿಲುಕದ ಆಗಸದಲ್ಲಿ ತಾರೆಯೊಂದು ನನ್ನನ್ನೇ ನೋಡುತ್ತ ಕಣ್ಣು ಪಿಳುಕಿಸಿದಂತಾಗುತ್ತೆ.

ಇರುಳಿನ ಆಕಾಶದಲ್ಲಿ ತಾರೆಗಳ ಸಂತೆ ಇನ್ನೇನು ಮುಗಿಯುತ್ತೆ ಅನ್ನುವ ಹೊತ್ತಿಗೆ ಕೆಳಗಿಳಿದು ಬಂದು ಮಲಗುವ ಶಾಸ್ತ್ರ ಮುಗಿಸಿದವನು ಬೆಳಗ್ಗೆ ಎದ್ದ ಕೂಡಲೇ ಈ ಜನ್ಮದ ಇನ್ನೂ ಒಂದು ದಿನವನ್ನು ನಿನ್ನ ಸಾಂತ್ಯವಿಲ್ಲದೇ ಕಳೆಯಬೇಕಲ್ಲ ಎಂಬ ಬೇಸರ ಮೈಮನಸ್ಸನ್ನೆಲ್ಲ ಜಡ್ಡುಗಟ್ಟಿಸಿ ಬಿಡುತ್ತದೆ. ಕೆಂಪಡರಿದ ಕಣ್ಣನ್ನು ಅಮ್ಮ ಗಮನಿಸಿದಾಗ ಕೂಡಲೇ ಕಣ್ಣಿಗೆ ದೂಳು ಬಿತ್ತು ಎಂದುಬಿಡುತ್ತೇನೆ. ಅಮ್ಮ ಎಂಬ ಅಮಾಯಕ ಜೀವಿಯನ್ನು ಯಾಮಾರಿಸಲಿಕ್ಕೆ ಯಾವ ಮಹಾವಿದ್ಯೆಯ ಅಗತ್ಯವೂ ಇಲ್ಲವಲ್ಲ?

ಅಮ್ಮ ಮಾಡಿಕೊಟ್ಟ ಕಾಫಿ ಕುಡಿದ ನಂತರ ಲೋಟದ ತಳದಲ್ಲಿ ಕರಗದೆ ಉಳಿದ ಸಕ್ಕರೆ ಕಂಡಾಗ ಮನಸ್ಸೆಲ್ಲಾ ಯಾಕೋ ಕಹಿ ಕಹಿ. ಸ್ನಾನಕ್ಕೆ ಅಂತ ಬಚ್ಚಲು ಮನೆಗೆ ಹೋದವನು ನವಿಲುಗರಿಯ ನವಿರುಸ್ಪರ್ಶಿದಂಥವಳ ನೆನಪು ಮಾತ್ರ ಇಷ್ಟು ಭಾರವಾಗುವುದು ಹೇಗೆ ಅಂತ ನ್ಯೂಟನ್‌ ಮಹಾಶಯನ ಗುರುತ್ವಾಕರ್ಷಣೆಯ ಸಿದ್ಧಾಂತದ ಸತ್ಯಾಸತ್ಯತೆಯ ಬಗ್ಗೆ ಸುಖಾಸುಮ್ಮನೆ ತಲೆಕೆಡಿಸಿಕೊಳ್ಳುತ್ತೇನೆ.

ನಮ್ಮಿಬ್ಬರಿಗೂ ಸರಿ ಸುಮಾರು ಒಂದೂವರೆ ಕತ್ತೆಗಳಷ್ಟು ವಯಸ್ಸಾಗಿರಬಹುದು. ಆದರೂ ಪ್ರೇಮವೆಂಬ ಅಬೋಧ ಶಿಶುವನ್ನು ಕಣ್ಣಲ್ಲಿ ಕಣ್ಣಿಟ್ಟು ಜತನದಿಂದ ಕಾಪಾಡಬೇಕೆಂಬ ಪರಿಜ್ಞಾನ ಇಬ್ಬರಿಗೂ ಬರಲಿಲ್ಲವಲ್ಲ? ಅಂದ ಹಾಗೆ, ನಾವು ಯಾವ ಕಾರಣಕ್ಕೆ ಆವತ್ತು ಆ ಪರಿ ಜಗಳವಾಡಿಕೊಂಡು ಬೇರಾದೆವು ಅನ್ನೋದೇ ಮರೆತುಹೋಗಿದೆ. ಅಂತಹ ನೆನಪಿಗೇ ಬಾರದ ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿಕೊಂಡು ದೂರವಾದೆವಲ್ಲ. ನಮ್ಮಿಬ್ಬರ ಧಿಮಾಕಿಗೂ ಒಂದು ಹಿಡಿ ಧಿಕ್ಕಾರವಿರಲಿ!

ನಾವಂತೂ ದುರಹಂಕಾರಿ ಬುದ್ಧಿಗೇಡಿಗಳು, ಜಗಳವಾಡಿಕೊಂಡು ಮಾತು ಬಿಟ್ಟೆವು. ಆದರೆ ನಮ್ಮಿಬ್ಬರನ್ನೂ ಹತ್ತಿರ ಕರೆಸಿಕೊಂಡು ಬುದ್ಧಿಮಾತು ಹೇಳಿ ಕಿತ್ತು

ಹೋದ ಸಂಬಂಧಕ್ಕೆ ತೇಪೆ ಹಾಕಲು ಈ ಹಾಳು ಜಗತ್ತಿಗೇನು ಧಾಡಿ? ಅದಕ್ಕೇ ಇಡೀ ಜಗತ್ತಿನ ಮೇಲೆ ಸೇಡು ತೀರಿಸಿಕೊಳ್ಳುವ ನೂರಾ ಎಂಟು ತಂತ್ರ ಕಲಿತಿದ್ದೇನೆ. ನಿನ್ನ ದಂತದ ಬಣ್ಣದ ಬೆರಳುಗಳು ನನ್ನ ತಲೆಯಲ್ಲಿನ ತುಂಬುಗೂದಲಿನಲ್ಲಿ ಸಲುಗೆಯಿಂದ ಸರಿದಾಡುತ್ತಿದ್ದವಲ್ಲ? ಇವತ್ತು ಬಂದು ನೋಡು. ತಿರುಪತಿ ತಿಮ್ಮಪ್ಪನ ಮೇಲೆ ಇಲ್ಲದ ಭಕ್ತಿ ಹುಟ್ಟಿಸಿಕೊಂಡು ಮುಡಿ ಕೊಡುವ ನೆಪದಲ್ಲಿ ನೀಟಾಗಿ ತಲೆ ಬೋಳಿಸಿಕೊಂಡಿದ್ದೇನೆ. ನೀನು ಹುಟ್ಟಾ ಮಾರ್ವಾಡಿಯ ಥರ ಎಣಿಸಿ ಎಣಿಸಿ ಮುತ್ತು ಕೊಟ್ಟಿದ್ದೆಯಲ್ಲ? ಆ ಒರಟೊರಟು ಕೆನ್ನೆಯ ಮೇಲೆಲ್ಲ ಅಡ್ಡಾದಿಡ್ಡಿ ಬೆಳೆದ ಪುಟ್ಟ ಫಕೀರನಂತಹ ಕುರುಚಲು ಗಡ್ಡಕ್ಕೆ ನಾಗರಿಕತೆ ಎಂದೋ ಮರೆತುಹೋಗಿದೆ. ಸಾಲದ್ದಕ್ಕೆ ಹಾದಿ ಬೀದಿಯಲ್ಲಿ ಯಾರಾದರೂ ಪರಿಚಯದವರು ಸಿಕ್ಕಾಗ ‘ಹೆಂಗಿದೆ ಲೈಫು?’ ಅನ್ನೋ ಕೆಲಸಕ್ಕೆ ಬಾರದ ಪ್ರಶ್ನೆ ಕೇಳುತ್ತಾರೆ. ‘ಬೊಂಬಾಟಾಗಿದೆ ಗುರೂ’ ಅಂತ ಪಕ್ಕಾ ಛಾರ್ಟೆರ್ಡ್‌ ಅಕೌಂಟೆಂಟ್‌ನಂತೆ ಸಲೀಸಾಗಿ ಸುಳ್ಳು ಹೇಳಿಬಿಡುತ್ತೇನೆ. ಕಣ್ಣಲ್ಲಿ ಮಾತ್ರ ಪಶ್ಚಾತ್ತಾಪದ ತೇವ. ಗಾಬರಿಯಾಗಿ ಸುಮ್ಮನಾಗಿ ಬಿಡುತ್ತೇನೆ. ಇಷ್ಟಕ್ಕೂ ನಾವೇನೂ ಜನ್ಮಜನ್ಮಾಂತರಕ್ಕೂ ಒಬ್ಬರ ಮುಖ ಒಬ್ಬರು ನೋಡುವುದಿಲ್ಲ ಅಂತ ಒಪ್ಪಂದವೇನೂ ಮಾಡಿಕೊಂಡಿಲ್ಲವಲ್ಲ?

ಇಬ್ಬರೂ ಸೇರಿ ಕೊಲ್ಲದ ಹೊರತು ಪ್ರೀತಿ ಸಾಯುವುದಿಲ್ಲ. ನಾನೋ ಬಲೂನಿಗೆ ಸೂಜಿ ಚುಚ್ಚಿ ಢಮ್ಮೆನ್ನಿಸಲೂ ಭಯಪಡುವ ಮಹಾನ್‌ ಹೆದರುಪುಕ್ಕಲ. ಪ್ರೀತಿಯನ್ನು ಕೊಂದು ಹಾಕಿ ನಾನು ಮಾತ್ರ ಆರಾಮಾಗಿ ಬದುಕಿ ಬಿಡಬಲ್ಲೆ ಎಂಬ ಧೈರ್ಯ ನನಗಿಲ್ಲ. ನೀನಂತೂ ಸಾಕ್ಷಾತ್‌ ಮದರ್‌ ಥೆರೇಸಾಳನ್ನೇ ಹೆತ್ತು ಮೊಲೆ ಹಾಲುಣಿಸಿ ಬೆಳೆಸಿದ ಮಹಾತಾಯಿಯಂಥವಳು. ಮೊಲದ ಮರಿಯಂಥ ನಮ್ಮ ಪ್ರೀತಿಯನ್ನು ಕತ್ತು ಹಿಸುಕಿ ಸಾಯಿಸಿ ಬಿಡುವಷ್ಟು ಕ್ರೌರ್ಯ ನಿನ್ನಲ್ಲಿ ಇಲ್ಲವೇ ಇಲ್ಲ. ಅಲ್ಲಿಗೆ ಆ ಸೃಷ್ಟಿಕರ್ತ ಬ್ರಹ್ಮನೆಂಬ ವಾತ್ಸಲ್ಯಮಯಿ ಮುತ್ತಜ್ಜ ನಮ್ಮ ಪ್ರೀತಿಯನ್ನು ಸೃಷ್ಟಿಸಿದಾಗಲೇ ಅದಕ್ಕೊಂದು ಚಿರಂಜೀವಿತ್ವವನ್ನು ದಯಪಾಲಿಸಿದ್ದಾನೆ ಅನ್ನೋದು ಖಾತರಿಯಾಯಿತು.

ನೀನು ಮರೆತಿರಲಿಕ್ಕಿಲ್ಲ. ನಾಳೆಗೆ ನಮ್ಮಿಬ್ಬರ ನಡುವೆ ಪ್ರೀತಿ ಪಲ್ಲವಿಸಿ ಬರೋಬ್ಬರಿ ಒಂದು ವರ್ಷವಾಗುತ್ತೆ. ನಮ್ಮ ಪ್ರೀತಿಯೆಂಬ ಸುಕೋಮಲ ಕೂಸಿಗೆ ನಾಳೆ ಮೊದಲ ಹುಟ್ಟು ಹಬ್ಬ!

ತೀರಾ ಹೀಗೆ ತಿಂಗಳುಗಟ್ಟಲೆ ಪ್ರೇಮಿಗಳು ಒಬ್ಬರನ್ನೊಬ್ಬರು ಮಾತಾಡಿಸದೆ ಇದ್ದುಬಿಟ್ಟರೆ ದೇವರಂಥ ದೇವರಿಗೂ ಪ್ರಳಯಾಂತಕ ಸಿಟ್ಟು ಬಂದು ಬಿಡುತ್ತದೆ. ಅಂತಹ ರಿಸ್ಕು ನಮಗ್ಯಾಕೆ ಬೇಕು ಹೇಳು? ಅದಕ್ಕೇ ನಾಳೆ ಸಂಜೆ ನಮ್ಮ ಪ್ರೀತಿಯ ಹ್ಯಾಪಿ ಬರ್ತ್‌ಡೇನ ಸಂಭ್ರಮದಿಂದ ಜೊತೆ ಸೇರಿ ಆಚರಿಸೋಣ. ನಿನ್ನಿಷ್ಟದ ಕೇಕು ತಂದಿಟ್ಟಿರುತ್ತೇನೆ. ನೀನು ಮುನಿಸು ತ್ಯಜಿಸಿ ಒಂದೊಳ್ಳೆ ಮುಗುಳ್ನಗೆಯನ್ನು ಧರಿಸಿಕೊಂಡು ಬಾ. ಮೇಣದ ಬತ್ತಿಯನ್ನು ಊದಿ ಆರಿಸುವ ಪಾಪ ಮಾಡುವುದು ಬೇಡ. ಒಂದು ಪುಟ್ಟ ಹಣತೆಯನ್ನು ಒಟ್ಟಿಗೇ ಹಚ್ಚೋಣ. ನನಗೆ ಅಂತ ಒಂದು ತುಣುಕೂ ಉಳಿಸದೇ ಪೂರ್ತಿ ಕೇಕು ನೀನೇ ತಿಂದು ಮುಗಿಸು. ನಿನಗೇ ಗೊತ್ತಲ್ಲ. ನನಗೆ ಕೇಕು ಅಂದರೆ ಅಷ್ಟಕ್ಕಷ್ಟೇ. ರಸಗುಲ್ಲಾ ಅಂದರೆ ಪಂಚಪ್ರಾಣ. ಆದರೆ ಒಂದು ಷರತ್ತು. ಬರುವಾಗ ಕೆನೆಮೊಸರಿನಂಥ ಕೆನ್ನೆಗೆ ಫೇರ್‌ ಅಂಡ್‌ ಲವ್ಲಿ ಮೆತ್ತಿಕೊಂಡು ಬರಬೇಡ. ರಸಗುಲ್ಲಾ ರುಚಿ ಕೆಟ್ಟು ಹೋಗುತ್ತೆ!
                                                                                                     – ಯಾವತ್ತಿಗೂ ನಿನ್ನವನು


****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT