ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರ್‍ಲೆ ಹುಡುಗಿಯ ಪ್ರೇಮ ನಿವೇದನೆ

Last Updated 12 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮುದ್ದಿನ ಪೆದ್ದು ಹುಡುಗ,
ಇದೇನು ಹೀಗೆಲ್ಲ ಕರಿತಾಳಲ್ಲ ಅಂತ ತಲೆ ಕೆಡಿಸ್ಕೊಬೇಡ, ಪ್ರತಿ ರಾತ್ರಿ ನನ್ನ ಕನಸಲ್ಲಿ ನಿನ್ನನ್ನು ಹೀಗೆ ಕರಿಯೋದು. ಆದರೆ ನಿನ್ನ ಎದುರಿಗೆ ಈ ತರಹ ಕರೆಯೋ ಧೈರ್ಯ ಇನ್ನೂ ಬಂದಿಲ್ಲ. ನಿನ್ನಂಥ ಪಾಪದ ಹುಡುಗನಿಗೆ ನಾನ್ಯಾಕೆ ಭಯ ಪಡ್ತೀನಿ ಅಂತಾ ನಂಗೆ ಗೊತ್ತಿಲ್ಲ. ಏನಾಯ್ತು, ಹೇಗಾಯ್ತು ಒಂದೂ ಗೊತ್ತಿಲ್ಲ. ನನ್ನ ಮನಸ್ಸು ನಿನ್ನನ್ನು ತುಂಬಾ ಪ್ರೀತ್ಸೋಕೆ ಶುರು ಮಾಡ್ಬಿಟ್ಟಿದೆ. ಹೆಚ್ಚು ಕಮ್ಮಿ 6 ತಿಂಗಳಿಂದ ನಿನ್ನ ಗುಂಗಲ್ಲೇ ಇದ್ದೀನಿ. ನಿಂಗೆ ಹೇಳಬೇಕು ಅನ್ನೋ ತುಡಿತ ದಿನದಿನಕ್ಕೂ ಹೆಚ್ಚಾಗಿತ್ತು. ಅದಕ್ಕೆ ನನ್ನ ಭಾವನೆಗಳನ್ನ ಹಂಚ್ಕೊಳಕ್ಕೆ ಈ ಪ್ರೇಮ ಪತ್ರ.

ನಿನ್ನನ್ನ ಪ್ರೀತ್ಸೋಕೆ ಶುರು ಮಾಡಿದ್ಮೇಲೆ ನಿನ್ನನ್ನು ತುಂಬಾ ಗಮನಿಸ್ತಿದ್ದೀನಿ. ಈಗ ನಿನ್ನ ಪ್ರತಿಯೊಂದು ಗುಣಗಳು ನನ್ನನ್ನ ತುಂಬಾ ಇಂಪ್ರೆಸ್‌ ಮಾಡ್ಬಿಟ್ಟಿವೆ. ನೀನು ಹುಡುಗಿಯರಿಗೆ ಕೊಡೋ ಗೌರವ, ಅಸೂಯೆ ಅನ್ನೋದೆ ಇಲ್ಲೇ ಇರೋ ನಿನ್ನ ಶುದ್ಧ ಮನಸ್ಸು, ಕೋಪನೇ ಮಾಡ್ಕೊಳ್ದೆ ಇರೋ ನಿನ್ನ ಕೂಲ್‌ ವ್ಯಕ್ತಿತ್ವ ಎಲ್ಲ ನಂಗೆ ತುಂಬಾ ಇಷ್ಟ. ಹೆಚ್ಚು – ಕಮ್ಮಿ  ನಿನ್ನ ಅಭಿಮಾನಿ ಆಗ್ಬಿಟ್ಟಿದಿನಿ.

ಎಷ್ಟೇ ಒಳ್ಳೆವನಾದ್ರೂ, ನೀನು ತುಂಬಾನೆ ಪೆದ್ದು ಬಿಡು. ನಿನ್ನಂಥ ಟ್ಯೂಬ್‌ಲೈಟ್‌ನ ನಾನೂ ನೋಡೇ ಇಲ್ಲ. ಎಷ್ಟು ಸಲ ಇಂಡೈರೆಕ್ಟ ಆಗಿ ಹೇಳಿದಿನಿ. ನಾನು ನಿಂಗೆ ಲೈನ್‌ ಹಾಕ್ತಿರೋದು ಅಂತ, ನಿಂಗೆ ಅರ್ಥನೇ ಆಗಲ್ವ ಅಥವಾ ಅರ್ಥ ಆದ್ರೂ ಆಗದೇ ಇರೋ ತರಹ ನಾಟಕ ಆಡ್ತಿದ್ದೀಯಾ? ನಂಗೆ ನಿನ್ನ ತರಹ ಗಂಡನೇ ಬೇಕು ಅಂತ ನಾನೇ ಬಾಯಿ ಬಿಟ್ಟು ಕಷ್ಟ ಪಟ್ಟು ಹೇಳಿದ್ನಲ್ಲಾ. ಆದ್ರೂ ಮೊನ್ನೆ ದೊಡ್ಡ ಸನ್ಯಾಸಿ ತರಹ ‘ನಿಂಗೆ ನನಗಿಂತ ಚೆನ್ನಾಗಿರೋ ಹುಡ್ಗನೇ ಸಿಕ್ತಾನೆ ಯೋಚನೆ ಮಾಡ್ಬೇಡ’ ಅಂದ್ಯಲ್ಲ. ನಂಗೆ ಎಂಥಾ ಕೋಪ ಬಂದಿತ್ತು ಗೊತ್ತಾ.

ಎಲ್ರೂ ನೀನು ಮಾತಾಡೋದೆ ಇಲ್ಲ ಬೋರಿಂಗ್‌ ಫೆಲೋ ಅಂತ ಹೇಳ್ತಾರೆ. ನಂಗೂ ಸ್ವಲ್ಪ ಹಾಗೇ ಅನ್ಸುತ್ತೆ. ಆದ್ರೆ ನೀನು ಇತ್ತೀಚೆಗೆ

ತುಂಬಾ ಅಟ್ರಾಕ್ಟಿವ್‌ ಅನ್ನಿಸ್ತಿದೆ ಕಣೋ. ನಂಗೆ ಜಗಳ ಆಡೋಕೆ, ಜಗಳ ನೋಡೋಕೆ ಎಷ್ಟು ಇಷ್ಟ ಅಂತಾ ನಿಂಗೂ ಗೊತ್ತು. ನನ್ನಂತ ಜಗಳಗಂಟಿ ನಿನ್ನಂತಹ ಶಾಂತಿದೂತನ ಜೊತೆ ಹೇಗಪ್ಪಾ ಲೈಫ್‌ ಲಾಂಗ್‌ ಟೈಮ್‌ ಪಾಸ್‌ ಮಾಡೋದು ಅಂತ ಚಿಂತೆ ಆಗಿತ್ತು. ಇತ್ತೀಚೆಗೆ ಒಂದು ಒಳ್ಳೆ ವಿಷ್ಯ ಗೊತ್ತಾಯ್ತು, ನಿಮ್ಮಮ್ಮ ತುಂಬಾ ಜೋರು ಅಂತ ಯಾರೋ ಹೇಳಿದ್ರು. ತುಂಬಾ ಸಂತೋಷ ಆಯ್ತು. ಪೆದ್ದು, ಹೇಗೋ ಒಳ್ಳೆ ಅತ್ತೆ ಸಿಕ್ತಾರೆ ಅಂತ ಸಮಾಧಾನ ಆಯ್ತು.

ನೋಡು ನಿನ್ನ ಪ್ರಪೋಸ್‌ ಮಾಡೋಕೆ ಅಂತ ಬರ್‍ಯೋಕೆ ಶುರು ಮಾಡಿ ಏನೇನೋ ಹೇಳ್ತಿದ್ದೀನಿ. ಲೋ ಪೆದ್ದು ನನ್ನ ಹೃದಯದಲ್ಲಿ ಒಂದು ಪುಟ್ಟ ಜಾಗ ನಿಂಗೇ ಅಂತ ರಿಸರ್ವ್‌ ಆಗಿದೆ ಕಣೋ, ಆ ಜಾಗ ನಿಂಗಲ್ದೆ ಇನ್ಯಾರಿಗೊ ಕೊಡೋಕೆ ಆಗಲ್ಲ. ಸಿಲ್ಲಿ ಗರ್ಲ್‌ ಅಂತ ರಿಜೆಕ್ಟ್ ಮಾಡಲ್ಲ ತಾನೆ? ಹೊರ ನೋಟಕ್ಕೆ ಕಾಣೋ ಈ ತರ್‍ಲೆ ಹುಡುಗಿಯ ಒಳಗೆ ಒಬ್ಬಳು ಗಂಭೀರ, ಸೂಕ್ಷ್ಮ ಸ್ವಭಾವದ, ಮೃದು ಮನಸ್ಸಿನ ಹುಡುಗಿ ಇದ್ದಾಳೆ, ನನ್ನ ಮಧುರವಾದ ಭಾವನೆಗಳು, ಸಂವೇದನೆಗಳಿಗೆ ಸರಿಯಾಗಿ ಸ್ಪಂದಿಸೋ ಹೃದಯ ನೀನೇ ಅನ್ಸಿದೆ. ನಿನ್ನ ಹೃದಯದಲ್ಲೂ ನಂಗೆ ಒಂದು ಪುಟ್ಟ ಜಾಗ ಕೊಡ್ತಿಯಾ?

ಅಯ್ಯೋ, ಇದೆಲ್ಲ ಸ್ವಲ್ಪ ಓವರ್‌ ಆಯ್ತು ಅಲ್ವಾ, ಏನೇನೋ ಹುಚ್ಚುಚ್ಚಾಗಿ ಬರ್ದಿದ್ದಾಳೆ ಅಂತ ತಲೆ ಕೆರ್‍್ಕೊಬೇಡ. ನಿನ್ನ ಸಹವಾಸ ಮಾಡಿ ನಾನು ಬೋರಿಂಗ್‌ ಆಗಿ ಮಾತಾಡ್ತಿದ್ದೀನಿ ನೋಡು. ನಿಂಗೆ ಅರ್ಥ ಆಗೋ ಹಾಗೆ ಸಿಂಪಲ್ಲಾಗಿ ಹೇಳ್ತಿನಿ ಕೇಳು. ‘ಹೇ ಪೆದ್ದು ಹುಡುಗ ನಾನು ನಿನ್ನನ್ನೇ ಮದ್ವೆ ಆಗ್ಬೇಕು ಅಂತ ಡಿಸೈಡ್‌ ಮಾಡ್ಬಿಟ್ಟಿದ್ದೀನಿ. ಆದಷ್ಟು ಬೇಗ ನೀನು ನನ್ನನ್ನೇ ಮದ್ವೆ ಆಗ್ಬೇಕು ಅಂತ ಡಿಸೈಡ್‌ ಮಾಡ್ಬಿಡು’.                                                   
- ನಿನ್ನ ತರ್‍ಲೆ ಹುಡುಗಿ

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT