ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ಗೆ ಬೀಗ ಹಾಕಿಸಿದ ಬಿಷಪ್‌

ಧರ್ಮಗುರು ಚಸರಾ ಪ್ರತಿಮೆ ಅನಾವರಣಕ್ಕೆ ವಿರೋಧ
Last Updated 3 ಮೇ 2016, 20:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿಶ್ವನಾಥ ನಾಗನಹಳ್ಳಿಯ ಸಂತ ವನಚಿನ್ನಪ್ಪ ದೇವಾಲಯ ಯಾನೆ  ಸಂತ ಪಾಲ ಹೆರ್ಮಿಟ್‌ ಚರ್ಚ್‌ ಸ್ಥಾಪಕ ಮತ್ತು ಕನ್ನಡ ಪರ ಹೋರಾಟಗಾರ ಫಾದರ್‌ ಚಸರಾ ಅವರ ಪ್ರತಿಮೆ ಅನಾವರಣಕ್ಕೆ  ತೀವ್ರ ವಿರೋಧ  ವ್ಯಕ್ತಪಡಿಸಿರುವ ಬೆಂಗಳೂರಿನ ಆರ್ಚ್ ಬಿಷಪ್‌ ರೆವರಂಡ್‌ ಬರ್ನಾರ್ಡ್‌ ಮೊರಾಸ್ ಅವರು ಚರ್ಚ್‌ಗೆ ಬೀಗ ಹಾಕಿಸಿದ್ದಾರೆ.

ಇದರಿಂದಾಗಿ ಚರ್ಚ್‌ನ ಸ್ಥಳೀಯ ಅನುಯಾಯಿಗಳು ಕಳೆದ 15 ದಿನಗಳಿಂದ ‘ದೇವರನ್ನು ಪೂಜಿಸುವ’ ಹಕ್ಕಿನಿಂದ ವಂಚಿತರಾಗಿದ್ದಾರೆ.

‘ವಿ.ನಾಗನಹಳ್ಳಿಯ ಸಂತ ಪಾಲ ಹೆರ್ಮಿಟ್‌ ಚರ್ಚ್‌್ ನಲ್ಲಿ ಫಾದರ್ ಚಸರಾ ಅವರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ ಎಂಬ ಸಂಗತಿ ನನಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಗೊತ್ತಾಗಿದೆ. ಈ ರೀತಿಯ ನಡವಳಿಕೆ  ಚರ್ಚ್ ಆಡಳಿತ ನಿರ್ವಹಣೆಯ ಸಾಮಾನ್ಯ ನಿಯಮಗಳ ಉಲ್ಲಂಘನೆಯಾಗಿದೆ. ಯಾವುದೇ ಕಾರಣಕ್ಕೂ ಹೆರ್ಮಿಟ್‌ ಚರ್ಚ್‌ನಲ್ಲಿ ಚೆಸರಾ ಅವರ ಪ್ರತಿಮೆ ಅನಾವರಣ ಮಾಡಕೂಡದು’ ಎಂದು ಮೊರಾಸ್‌ ನಗರದ ಪೊಲೀಸ್‌ ಕಮಿಷನರ್‌ ಅವರಿಗೆ ಏಪ್ರಿಲ್‌ 19ರಂದು ಲಿಖಿತ ದೂರು ಸಲ್ಲಿಸಿದ್ದರು.

‘ಈ ಸಂಬಂಧ ಪ್ರತಿಮೆ ಅನಾವರಣ ಮಾಡಲು ಹೊರಟಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಂತೆಯೇ ಚರ್ಚ್‌ನ ಪಾದ್ರಿ ರೆವರೆಂಡ್‌ ಫಾದರ್ ವಿನ್ಸೆಂಟ್‌ ಸಂತೋಷ್ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದೂ ಕೋರಿದ್ದರು.

‘ನನ್ನ ಆದೇಶ ನಿರ್ಲಕ್ಷಿಸಿ ಏಪ್ರಿಲ್‌ 23ರಂದು ಚರ್ಚ್‌ ಆವರಣದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಆದ ಕಾರಣ ಈ ಚರ್ಚ್‌ಗೆ ಬೀಗ ಹಾಕಲಾಗುತ್ತಿದೆ’ ಎಂದು  ಮೊರಾಸ್‌ ಭಕ್ತರಿಗೆ ತಿಳಿಸಿದ್ದಾರೆ.

ಈ ಕುರಿತು ಚರ್ಚ್‌ನ ಆಡಳಿತ ಮಂಡಳಿಯ ಸದಸ್ಯರೂ ಆದ ಅಂಥೋಣಿ ಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ,  ‘ಚಸರಾ ನಮ್ಮೆಲ್ಲರ ಪ್ರೀತಿ ಪಾತ್ರ ಫಾದರ್ ಎನಿಸಿಕೊಂಡಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಪ್ರತಿಮೆ ಅನಾವರಣ ಮಾಡಬೇಕೆಂಬುದು ನಮ್ಮೆಲ್ಲರ ಇಚ್ಛೆಯಾಗಿತ್ತು. ಈ ಕಾರಣಕ್ಕಾಗಿಯೇ  ಭಕ್ತರೆಲ್ಲ ಸೇರಿ ಚರ್ಚ್‌ ಆವರಣದಲ್ಲಿ ಪ್ರತಿಮೆ ಸ್ಥಾಪನೆ ಮಾಡಿದೆವು.  ಅದರೆ  ಪ್ರತಿಮೆಯನ್ನು ಇಲ್ಲಿಂದ ತೆಗೆಯುವವರೆಗೆ ಚರ್ಚ್ ಬೀಗ ತೆರೆಯಲು ಬಿಡುವುದಿಲ್ಲ ಎಂದು ಬಿಷಪ್‌ ಪಟ್ಟು ಹಿಡಿದಿದ್ದಾರೆ’ ಎಂದು ಆರೋಪಿಸುತ್ತಾರೆ.

ಚರ್ಚ್‌ನ ಅನುಯಾಯಿ ಲೂರ್ದ್ ಸ್ವಾಮಿ ಅವರು, ‘ಚರ್ಚ್‌ಗೆ ಬೀಗ ಹಾಕಿರುವ ಪರಿಣಾಮ ನಾವೀಗ ಚರ್ಚ್‌ನ ಹೊರ ಆವರಣದಲ್ಲೇ ಪ್ರಾರ್ಥನೆ ಮಾಡುತ್ತಿದ್ದೇವೆ. ಸ್ಥಳೀಯವಾಗಿ ನಮಗೊಬ್ಬ ಧರ್ಮಗುರು ಇಲ್ಲದೆ ನಮ್ಮ ಯಾವುದೇ ಧಾರ್ಮಿಕ ಕಾರ್ಯಗಳಿಗೆ ತೊಂದರೆಯಾಗಿದೆ’ ಎನ್ನುತ್ತಾರೆ.

ಕನ್ನಡ ಪರ ಹೋರಾಟಗಾರ
ಚಸರಾ ಅವರು ಕಳೆದ ತಿಂಗಳ 16ರಂದು ನಗರದ ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಅವರು ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗದ ಅಧ್ಯಕ್ಷರಾಗಿದ್ದರು ಮತ್ತು ಅಖಿಲ ಕರ್ನಾಟಕ ಕನ್ನಡ ಕ್ಯಾಥೊಲಿಕ್‌ ಕ್ರೈಸ್ತರ ಸಂಘದ ಪದಾಧಿಕಾರಿಯೂ ಆಗಿದ್ದರು. ರಾಜ್ಯದ ಕ್ಯಾಥೊಲಿಕ್‌ ಪಂಗಡದ ಚರ್ಚಗಳಲ್ಲಿ ಕನ್ನಡದಲ್ಲೇ ಪ್ರಾರ್ಥನೆ ನಡೆಯಬೇಕು ಎಂಬ ಪ್ರಬಲ ಪ್ರತಿಪಾದಕರಾಗಿದ್ದರು. ಮಲ್ಲೇಶ್ವರದ ಪೊಂಟಿಫಿಕಲ್‌ ಚರ್ಚ್‌ನ ಫಾದರ್‌ ಕೆ.ಜೆ.ಥಾಮಸ್‌ ರೆಕ್ಟರ್‌ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಅಂತ್ಯದಲ್ಲಿ ಪೊಲೀಸರು ಏಳು ಜನರ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಲ್ಲಿ ಚಸರಾ ಹೆಸರೂ ಇತ್ತು.
ಆದರೆ ಈ ದೋಷಾರೋಪ ಪಟ್ಟಿಗೆ  ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

* ಯಾರಾದರೂ ಸತ್ತರೆ ಅವರ ಅಂತ್ಯಕ್ರಿಯೆ ನಡೆಸುವುದಕ್ಕೂ ನಮಗೀಗ ಅಡ್ಡಿಯಾಗಿದೆ. ಕ್ರಿಯಾವಿಧಿ ನೆರವೇರಿಸಲು ಆರ್ಚ್‌ ಬಿಷಪ್‌ ಅವರ ನಿರ್ದೇಶನ ಬೇಕೇ ಬೇಕು. ಆದರೆ ಆರ್ಚ್ ಬಿಷಪ್‌ ಮೊರಾಸ್‌ ಅವರೇ ನಮ್ಮ ಕೈಗೆ ಸಿಗುತ್ತಿಲ್ಲ. ಸ್ಥಳೀಯ ಧರ್ಮಾಧಿಕಾರಿಗಳೂ ಇಲ್ಲದಂತಾಗಿದೆ.

–ಅಂಥೋಣಿ ಸ್ವಾಮಿ
ಸಂತ ಪಾಲ ಹೆರ್ಮಿಟ್‌ ಚರ್ಚ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT