ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ಚಂದಿರ

Last Updated 23 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅವರು ಕೇವಲ ಸಿನಿಮಾ ದರ್ಶಕರಲ್ಲ, ಜೀವನದ ಮಾರ್ಗದರ್ಶಕ ಕೂಡ’- – ನಟ ಪ್ರಕಾಶ್‌ ರೈ ಹೇಳುವ ಒಂದು ಸಾಲು ತಮಿಳಿನ ಖ್ಯಾತ ನಿರ್ದೇ­ಶಕ ಕೆ. ಬಾಲಚಂದರ್‌ ಅವರ ಇಡೀ ವ್ಯಕ್ತಿತ್ವದ ಚಿತ್ರಣ ಕಟ್ಟಿಕೊಡ­ಬಲ್ಲದು.

ಸಾಮಾಜಿಕ ಸಂಗತಿಗಳನ್ನು ಸಿನಿಮಾ­ಗಳಲ್ಲಿ ಅಳವಡಿಸಿಕೊಂಡ ಕೆ. ಬಾಲ­ಚಂದರ್‌, ಸಿನಿಮಾಗಳಲ್ಲಿನ ಮಡಿವಂತಿಕೆ­ಧಿಕ್ಕರಿಸಿದ ಪ್ರಮುಖ ನಿರ್ದೇಶಕರ­ಲ್ಲೊಬ್ಬರು. ಅವರು ನಿರ್ದೇಶಿಸಿದ–ಚಿತ್ರಕಥೆ ಬರೆದ ಸುಮಾರು 100 ಚಿತ್ರಗಳಲ್ಲಿಯೂ ಪ್ರೇಕ್ಷಕರನ್ನು ಚಿಂತನೆಗೆ ಒರೆ ಹಚ್ಚುವ ಸಮಾಜ ಚಿಕಿತ್ಸಕ ಗುಣ­ಗಳಿದ್ದವು. ದಿಟ್ಟತನದ ಸ್ತ್ರೀ ಪಾತ್ರಗಳನ್ನು ಸೃಷ್ಟಿಸುವ, ಮಹಿಳಾ ಕೇಂದ್ರಿತ ಚಿತ್ರಗಳಿಗೆ ಪ್ರಾಮುಖ್ಯ ನೀಡಿದ ಅಪರೂಪದ ನಿರ್ದೇಶಕ ಅವರು.

ಕೆ.ಬಿ ಎಂಬ ಸಂಕ್ಷಿಪ್ತ ಹೆಸರಿನಲ್ಲಿಯೇ ಜನಪ್ರಿಯರಾದ ಅವರನ್ನು ಭಾರ­ತೀಯ ಚಿತ್ರರಂಗ ಸದಾ ಸ್ಮರಿಸಿಕೊಳ್ಳಲು ಅವರು ನೀಡಿದ ಚಿತ್ರಗಳು ಮಾತ್ರವಲ್ಲ, ಕಮಲ­ಹಾಸನ್‌, ರಜನಿಕಾಂತ್‌, ಪ್ರಕಾಶ್‌ ರೈ, ವಿವೇಕ್‌ ಮುಂತಾದ ಹತ್ತಾರು ಪ್ರತಿಭೆ­ಗಳನ್ನು ಬೆಳೆಸಿದ ಪರಿಯೂ ಕಾರಣ.

ತಮಿಳುನಾಡಿನ ನನ್ನಿಲಂನಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕೈಲಾಸಂ ಬಾಲಚಂದರ್‌ (1930, ಜುಲೈ 9) ಬಾಲ್ಯದಲ್ಲಿಯೇ ಎಂ.ಕೆ. ತ್ಯಾಗರಾಜ ಭಾಗವತರ್‌ ಅವರ ಸಿನಿಮಾ­ಗಳಿಂದ ಪ್ರಭಾವಿತರಾದವರು. ಈ ಸೆಳೆತ ಅವರನ್ನು 12ನೇ ವಯಸ್ಸಿ­ನಲ್ಲಿಯೇ ರಂಗಭೂಮಿಯತ್ತ ಕರೆ­ತಂದಿತು. ನಾಟಕ­ಗಳ ನಟನೆ, ಬರವಣಿಗೆ, ನಿರ್ದೇಶನ ಕ್ರಮೇಣ ಅವರಲ್ಲಿ ಪ್ರಬುದ್ಧ ನಿರ್ದೇಶಕ­ನೊಬ್ಬನಿಗಿರಬೇಕಾದ ಕೌಶಲ ಮತ್ತು ಸೂಕ್ಷ್ಮತೆಗಳನ್ನು ಬೆಳೆಸಿತು.

ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ಪದವಿ ಪಡೆಯುವಾಗಲೂ ಅವರಲ್ಲಿನ ರಂಗಭೂಮಿ ಆಸಕ್ತಿ ಕೊಂಚವೂ ಕುಂದಿರಲಿಲ್ಲ.
ತಿರುವು ಕೊಟ್ಟ ನಾಟಕ: 1949ರಲ್ಲಿ ಪದವಿ ಪೂರ್ಣಗೊಳಿಸಿ ತಿರುವರ್‌ ಜಿಲ್ಲೆ ಮುತ್ತುಪೇಟೆಯಲ್ಲಿ ಶಿಕ್ಷಕ ವೃತ್ತಿ ಆರಂಭಿ­ಸಿ­ದರು. 1950ರಲ್ಲಿ ಮದ್ರಾಸ್‌ನ (ಚೆನ್ನೈ) ಪ್ರಧಾನ ಲೆಕ್ಕಾಧಿಕಾರಿ ಕಚೇರಿ­ಯಲ್ಲಿ ತರಬೇತಿ ಗುಮಾಸ್ತನಾಗಿ ಸೇರಿ­ಕೊಂಡರು. ಅದೇ ವೇಳೆ ‘ಯುನೈಟೆಡ್‌ ಅಮೆಚ್ಯುರ್‌ ಆರ್ಟಿಸ್ಟ್ಸ್‌’ ಎಂಬ ನಾಟಕ ಕಂಪೆನಿ ಸೇರಿದರು, ಬಳಿಕ ತಮ್ಮದೇ ತಂಡ ಹುಟ್ಟುಹಾಕಿದರು.

1965ರಲ್ಲಿ ಎಂ.ಜಿ. ರಾಮಚಂದ್ರನ್‌ ನಾಯಕರಾಗಿದ್ದ ‘ದೈವ ಥಾಯ್’ ಚಿತ್ರಕ್ಕೆ ಸಂಭಾಷಣೆ ಬರೆಯುವ ಅವಕಾಶ ಒದಗಿ­ಬಂದಿತು. ಅದೇ ವೇಳೆ ಕಚೇರಿ­ಯಲ್ಲಿ ಮೇಲ್ವಿ­ಚಾರಕ ಹುದ್ದೆಗೆ ಬಡ್ತಿಯೂ ದೊರಕಿತು. ಅವರು ರಚಿಸಿದ ‘ಸರ್ವರ್‌ ಸುಂದರಂ’, ‘ಮೇಜರ್‌ ಚಂದ್ರಕಾಂತ್‌’ (ಹಿಂದಿ ) ಸಿನಿಮಾ ರೂಪಾಂತರಗೊಂಡು ಪ್ರಶಸ್ತಿಗಳನ್ನೂ ಗಳಿಸಿದವು. ತಮ್ಮದೇ ನಾಟಕ ಆಧರಿಸಿದ ‘ನೀರಕು­ಮಿಳಿ’ (1965) ಮೂಲಕ ನಿರ್ದೇಶಕ­ರಾಗಿ ಚಿತ್ರರಂಗ ಪ್ರವೇಶಿಸಿ­ದರು. ನಂತರ ಬಂದ ‘ನಾನಲ್‌’, ‘ಮೇಜರ್‌ ಚಂದ್ರ­ಕಾಂತ್‌’ ಮತ್ತು ‘ಎದಿರ್‌ ನೀಚಲ್‌’ ಅವರದೇ ನಾಟಕ­ಗಳನ್ನು ಆಧರಿಸಿದ್ದು. ಜೆಮಿನಿ ಗಣೇಶನ್‌ ಅಭಿನಯದ ‘ಇರು ಕೋಡುಗಳ್’ (1969) ರಾಷ್ಟ್ರೀಯ ಪ್ರಶಸ್ತಿ ಗಳಿಸಿತು.

ಕನ್ನಡದಿಂದ ಹೊಸ ದಿಕ್ಕು: ಬಾಲ­ಚಂದರ್‌ ತಮ್ಮ ಸಿನಿಮಾ ಅಭಿರುಚಿಯ ದಿಕ್ಕು ಬದಲಿಸಲು ಪ್ರೇರೇಪಣೆ ನೀಡಿದ್ದು ಕನ್ನಡ ಚಿತ್ರರಂಗ. 1970ರ ದಶಕದಲ್ಲಿ ಕನ್ನಡದಲ್ಲಿ ತಯಾರಾಗುತ್ತಿರುವ ಹೊಸ ಅಲೆಯ ಚಿತ್ರಗಳು ತಮಿಳಿನಲ್ಲಿ ಏಕೆ ಸೃಷ್ಟಿಯಾಗುತ್ತಿಲ್ಲ ಎಂಬ ಪ್ರಶ್ನೆಯನ್ನೆತ್ತಿದ್ದ ಅವರು, ಸ್ವತಃ ಆ ದಿಕ್ಕಿನತ್ತ ಹೊರಳಿದರು. ಮನರಂಜನೆಗಿಂತ, ಕೌಟುಂಬಿಕ ಮತ್ತು ಸಾಮಾಜಿಕ ಸಂಗತಿಗಳು ಅವರ ಚಿತ್ರಗಳ ವಸ್ತುಗಳಾಗಿ ಸ್ಥಾನ ಪಡೆದವು. 70ರ ದಶಕದಲ್ಲಿ ಅವರು ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದು ಇದಕ್ಕೆ ಸಾಕ್ಷಿ.

1971ರಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದರು. ‘ಅರಂಗೆಟ್ರಂ’ (1973) ಬಡತನ ಮತ್ತು ವೇಶ್ಯಾ­ವಾಟಿಕೆಯ ಕುರಿ­ತಾದ ವಸ್ತುವುಳ್ಳ ಚಿತ್ರ. ಕುಟುಂಬವನ್ನು ಸಾಕಲು ಬ್ರಾಹ್ಮಣ ಕುಟುಂಬದ ಹಿರಿಯ ಮಗಳು ವೇಶ್ಯಾ­ವಾಟಿಕೆಗೆ ಇಳಿಯುವ ಕಥನದ ಈ ಚಿತ್ರ ತಮಿಳುನಾಡಿನಲ್ಲಿ ತೀವ್ರ ವಿವಾದದ ಕಿಡಿ ಹಚ್ಚಿಸಿತು. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ನಟ ಕಮಲ ಹಾಸನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿ­ಕೊಂಡ ಮೊದಲ ಚಿತ್ರವಿದು. ಈ ಚಿತ್ರದಿಂದ ಕಮಲ ಹಾಸನ್‌ ಮತ್ತು ಕೆ.ಬಿ. ಜೋಡಿ 35 ಚಿತ್ರಗಳನ್ನು ನೀಡಿತು.

1975ರಲ್ಲಿ ತೆರೆಕಂಡ ವಿವಾದಾತ್ಮಕ ವಸ್ತುವುಳ್ಳ ‘ಅಪೂರ್ವ ರಾಗಂಗಳ್‌’ ತಮಿಳು ಚಿತ್ರರಂಗಕ್ಕೆ ಹೊಸ ತಾರೆಯನ್ನು ಪರಿಚಯಿಸಿದ ಚಿತ್ರ. ರಜನಿಕಾಂತ್‌ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಈ ಚಿತ್ರ ರಾಷ್ಟ್ರ ಪ್ರಶಸ್ತಿಗೂ ಭಾಜನವಾಯಿತು.

1976ರಲ್ಲಿ ‘ಮನ್ಮದನ್‌ ಲೀಲೈ’, ‘ಅಂತುಲೆನಿ ಕಥಾ’ ಮತ್ತು ‘ಮೂಂಡ್ರು ಮುಡಿಚು’, ಕಮಲಹಾಸನ್‌ ಮತ್ತು ರಜನಿಕಾಂತ್‌ ಅವರ ಪ್ರತಿಭೆಯನ್ನು ಮತ್ತಷ್ಟು ಪ್ರಖರಗೊಳಿಸಿದವು. 

ರಜನೀಕಾಂತ್‌ ಪರಿಚಯ: ತಮ್ಮದೇ ತಮಿಳು ಚಿತ್ರಗಳನ್ನು ತೆಲುಗಿನಲ್ಲಿಯೂ ನಿರ್ದೇಶಿಸಿದ ಬಾಲಚಂದರ್‌, ‘ತಪ್ಪಿದ ತಾಳ’ (1978) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದು ಮಾತ್ರವಲ್ಲ, ಕನ್ನಡಿಗ ರಜನಿಕಾಂತ್‌ ಅವರನ್ನು ಕನ್ನಡ ಪ್ರೇಕ್ಷರಿಗೆ ಪರಿಚಯಿಸಿ­ದರು. 1983ರಲ್ಲಿ ‘ಅವಳ್‌ ಒರು ತೊಡರ್‌ ಕಥೈ’ ಕನ್ನಡದಲ್ಲಿ ‘ಬೆಂಕಿಯಲ್ಲಿ ಅರಳಿದ ಹೂ’ ಆಗಿ ತಯಾರಾಯಿತು. ಕಮಲಹಾಸನ್‌ ಬಸ್‌ ಕಂಡಕ್ಟರ್‌ ಪಾತ್ರದಲ್ಲಿ ನಟಿಸಿದ ಚಿತ್ರವಿದು. ‘ಎರಡು ರೆಕ್ಕೆಗಳು’, ‘ಸುಂದರ ಸ್ವಪ್ನಗಳು’, ಮತ್ತು ‘ಮುಗಿಲ ಮಲ್ಲಿಗೆ’ ಅವರು ನಿರ್ದೇಶಿಸಿದ ಕನ್ನಡ ಚಿತ್ರಗಳು.

1956ರಲ್ಲಿ ರಾಜಮ್‌ ಅವ­ರೊಂದಿಗೆ ವೈವಾಹಿಕ ಬದುಕಿಗೆ ಅಡಿ­ಯಿಟ್ಟ ಅವರಿಗೆ ಕೈಲಾಸಂ, ಪ್ರಸನ್ನ ಮತ್ತು ಪುಷ್ಪಾ ಕಂದಸ್ವಾಮಿ ಎಂಬ ಮೂರು ಮಕ್ಕಳು. 

‘ಆ 15 ನಿಮಿಷದ ಭೇಟಿ’: ‘ಒಮ್ಮೆ ಅವರೊಂದಿಗಾದ 15 ನಿಮಿಷದ ಮೊದಲ ಭೇಟಿ ಮುಂದೆ ಎರಡೂವರೆ ಗಂಟೆ ಅವರೊಂದಿಗೆ ಕಳೆಯುವಂತೆ ಮಾಡಿತು. ಆ ಅವಧಿಯಲ್ಲಿಯೇ ನನ್ನ ಕಣ್ಣನ್ನು ನೋಡಿ ಪ್ರತಿಭೆಯನ್ನು ಅಳೆದರು. ಇಷ್ಟು ದಿನ ಎಲ್ಲಿ ಇದ್ದೆಯೋ ಎಂದು ಪ್ರೀತಿಯಿಂದ ಬೈಯ್ದು ಬೆನ್ನುತಟ್ಟಿದರು. ಜಾತಿ ನೋಡಲಿಲ್ಲ, ಭಾಷೆ ನೋಡಲಿಲ್ಲ, ಸಂಬಂಧ ಎಂದು ನೋಡಲಿಲ್ಲ. ನಮ್ಮ ಪ್ರತಿಭೆಯನ್ನು ನಮಗೇ ತೋರಿಸಿದ ವ್ಯಕ್ತಿ ಅವರು. ಅವರೇ ನನ್ನ ತಂದೆ, ಗುರು, ಬ್ರಹ್ಮ. ನಾನು ಈಗ ನಿಂತಿರುವ ದಿಗಂತ ಅವರದು. ಅವರ ಜತೆ ಕಳೆದ ಕ್ಷಣಗಳು, ಪಾಠಗಳು, ಅವರೊಂದಿಗಿನ  ವಿಶಿಷ್ಟ ಬಂಧ ಮರೆಯಲಾಗದು’ ಎಂದು ಗದ್ಗದಿತರಾದರು ಪ್ರಕಾಶ್‌ ರೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT