ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತು ಸುಂದರ ಮತ್ತು ವಿಶಾಲ...

Last Updated 25 ನವೆಂಬರ್ 2015, 19:46 IST
ಅಕ್ಷರ ಗಾತ್ರ

ಇಮ್ರಾನ್‌ ಖಾನ್‌
ನವೆಂಬರ್‌ ತಿಂಗಳ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಪ್ರವಾಸ ಕೈಗೊಂಡಿದ್ದರು. ಕಿಕ್ಕಿರಿದು ಸೇರಿದ್ದ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು   ವೆಂಬ್ಲೆಯಲ್ಲಿ ಮಾತನಾಡುತ್ತ ‘ಮುಸ್ಲಿಂ ಸಮುದಾಯದ  ಇಮ್ರಾನ್‌ ಖಾನ್‌ ಎಂಬ ಯುವ ಸಂಸ್ಕೃತ ಶಿಕ್ಷಕ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ 50ಕ್ಕೂ ಹೆಚ್ಚು ಶಿಕ್ಷಣ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಡಿಜಿಟಲ್‌ ಇಂಡಿಯಾಗೆ ಕೈ ಜೋಡಿಸಿದ್ದಾರೆ’ ಎಂದರು.  ರಾತ್ರೋರಾತ್ರಿ ಇಮ್ರಾನ್‌ ಖಾನ್‌ ಎಂಬ ಪ್ರತಿಭಾವಂತ ಯುವಕನನ್ನು ಮೋದಿ ಅವರು ಇಡೀ ವಿಶ್ವಕ್ಕೆ ಪರಿಚಯಿಸಿದರು.

ಇಮ್ರಾನ್‌ ಖಾನ್‌ ಮೂಲತಃ ರಾಜಸ್ತಾನದ ಅಲ್ವಾರದವರು. ಇಮ್ರಾನ್‌ ಕಲಾ ವಿದ್ಯಾರ್ಥಿಯಾಗಿದ್ದರೂ ಆ್ಯಪ್‌ ಅಭಿವೃದ್ಧಿಪಡಿಸುವ ವಿಧಾನವನ್ನು ಗೂಗಲ್‌ ಮತ್ತು ಸಹೋದರನ  ಮೂಲಕ  ಕಲಿತು ಹಲವು ಶಿಕ್ಷಣ ಆ್ಯಪ್‌ಗಳನ್ನು  ಸಿದ್ಧಪಡಿಸಿ ವಿಶ್ವದ ಗಮನ ಸೆಳೆದರು.
ಇಮ್ರಾನ್‌ ಹುಟ್ಟಿದ್ದು ಬಡ ರೈತ ಕುಟುಂಬದಲ್ಲಿ. ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಇದ್ದರೂ ಪ್ರೋತ್ಸಾಹ ಮತ್ತು ಹಣಕಾಸಿನ ಕೊರೆತೆಯಿಂದಾಗಿ ಕಲಾ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ಸಂಸ್ಕೃತ ಕಲಿತಿರುವ ಇಮ್ರಾನ್‌ ಖಾನ್‌ ಇಂಗ್ಲಿಷ್‌ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ರಾಜಸ್ತಾನ ಶಿಕ್ಷಣ ಇಲಾಖೆಯಲ್ಲಿ ಇಮ್ರಾನ್‌ ಸಂಸ್ಕೃತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯಜ್ಞಾನದ ಆ್ಯಪ್‌ ಅನ್ನು ದೇಶದಾದ್ಯಂತ 50ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್‌ ಮಾಡಿಕೊಂಡಿರುವುದು ವಿಶೇಷ. ವಿಜ್ಞಾನ, ಇತಿಹಾಸ, ಹಿಂದಿ, ಭೂಗೋಳ, ಗಣಿತ, ವಿಜ್ಞಾನ, ತಂತ್ರಜ್ಞಾನ, ಮಾನವೀಕ ಶಾಸ್ತ್ರಗಳು ಸೇರಿದಂತೆ ಒಟ್ಟು 50 ವಿಷಯಗಳ ಆ್ಯಪ್‌ಗಳನ್ನು ತಯಾರಿಸಿದ್ದಾರೆ. ಹಿಂದಿ ಭಾಷೆಯಲ್ಲಿರುವ ಈ ಆ್ಯಪ್‌ಗಳನ್ನು ಗೂಗಲ್‌ ಪ್ಲೇಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಮತ್ತು ಎಲ್ಲಾ ಹಂತದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಬಹು ಉಪಯುಕ್ತವಾಗಿವೆ.

ಡಿಜಿಟಲ್‌ ಇಂಡಿಯಾದ ಒಂದು ಭಾಗವಾಗಿ ದೇಶದ ಶೈಕ್ಷಣಿಕ ವಲಯಕ್ಕೆ ತಂತ್ರಾಂಶಗಳ ಕೊಡುಗೆ ನೀಡುವ ಮೂಲಕ ಇಮ್ರಾನ್‌ ಖಾನ್‌ ನಮ್ಮ ಯುವ ಜನಾಂಗಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.
gktalk-imran.android.informer.com/

ಖಾಲಸಾ ಸಂಸ್ಥೆ

ಕಳೆದ ನಾಲ್ಕೈದು ವರ್ಷಗಳಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ನಾಗರಿಕ ಯುದ್ಧ ನಡೆಯುತ್ತಿದ್ದು ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಿರಿಯಾ ಮತ್ತು ಲೆಬನಾನ್‌ನಲ್ಲಿ ಹೆಚ್ಚು ಜನರು ಅನ್ನ ನೀರು ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ.

ಹಸಿದವರ ಹೊಟ್ಟೆ ತುಂಬಿಸುವ ಸಲುವಾಗಿ ಭಾರತೀಯ ಮೂಲದ ಸಿಖ್‌ ಸಮುದಾಯದ ಖಾಲಸಾ ಸಂಸ್ಥೆ ಲೆಬನಾನ್‌ ಮತ್ತು ಸಿರಿಯಾ ಗಡಿಯಲ್ಲಿರುವ ಸಾವಿರಾರು ಜನರಿಗೆ ಅನ್ನ ದಾಸೋಹ ನೀಡುತ್ತಿದೆ.

ಬ್ರಿಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಲಾಭದಾಯಕ ಬೇಕರಿ ಉದ್ಯಮವನ್ನು ನಡೆಸುತ್ತಿದೆ. ಇಲ್ಲಿ ಕೆಲಸ ಮಾಡುವ  ಯುವಕರು ಸಿರಿಯಾ ಗಡಿಯಲ್ಲಿ ಹಸಿವಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಾರೆ. ಹೀಗೆ ಸಣ್ಣದಾಗಿ ಆರಂಭವಾದ ಆಹಾರ ವಿತರಣೆ ಯೋಜನೆ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆಯಿತು. ಅಲ್ಲಿ ಕಳೆದ ಎರಡು ವರ್ಷಗಳಿಂದ ಅನ್ನ ದಾಸೋಹ ನಡೆಯುತ್ತಿದೆ.

ಆರಂಭದಲ್ಲಿ ಸಿರಿಯಾ ಗಡಿ ಭಾಗಕ್ಕೆ ವಿಮಾನದಲ್ಲಿ ಆಹಾರವನ್ನು ತೆಗೆದುಕೊಂಡು ಹೋಗುವುದೇ ದುಸ್ತರವಾಗಿತ್ತು.  ನಿರಾಶ್ರಿತರಿಗೆ ಆಹಾರ ನೀಡುವುದಕ್ಕೆ ಉಗ್ರರು ಅಡ್ಡಿಪಡಿಸಿದ್ದರಂತೆ.  ನಂತರದ ದಿನಗಳಲ್ಲಿ ಅವರ ಮನಸ್ಸು ಕೂಡ ಕರಗಿ ಅಲ್ಲಿಯೇ ಶಿಬಿರವೊಂದನ್ನು ಸ್ಥಾಪಿಸಿ ಆಹಾರ  ತಯಾರಿಸುವುದಕ್ಕೆ ಸಹಕರಿಸಿದರು ಎನ್ನುತ್ತಾರೆ ಸಂಸ್ಥೆಯ ಯುವ ಮುಖ್ಯಸ್ಥ ಬಲ್‌ವೀರ್‌ ಸಿಂಗ್‌.

ನಮ್ಮ ಸೇವಾಕಾರ್ಯವನ್ನು ಮೆಚ್ಚಿ ಹಲವಾರು ಸಂಘಸಂಸ್ಥೆಗಳು ಆಹಾರ ಧಾನ್ಯಗಳು ಮತ್ತು ದೇಣಿಗೆಯನ್ನು ನೀಡುತ್ತಿವೆ ಎನ್ನುತ್ತಾರೆ ಅವರು.

ಖಾಲಸಾ ಶಿಬಿರದಲ್ಲಿ ಪ್ರತಿನಿತ್ಯ ಐದು ಸಾವಿರಕ್ಕೂ ಹೆಚ್ಚು ಜನರು ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ಯುವಕರು ಸಣ್ಣ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿ ಆರಂಭಿಸಿದ ಈ ಯೋಜನೆಗೆ  ವಿಶ್ವಸಂಸ್ಥೆಯು ಹಣಕಾಸು ನೆರವು ನೀಡುತ್ತಿದೆ ಎಂದು ಸಿಂಗ್‌ ಹೇಳುತ್ತಾರೆ. 

ಧರ್ಮ ಮತ್ತು ಜಾತಿಯ ಎಲ್ಲೆಯನ್ನು ಮೀರಿ ಮಾನವೀಯತೆ ಮೆರೆಯುತ್ತಿರುವ  ಖಾಲಸಾ ಸಂಸ್ಥೆಯ ಯುವಕರ ಸಾಧನೆ ಅನನ್ಯವಾದುದು.
­www.khalsaaid.org

ಡಾ.ಗಣೇಶ್‌ ರಾಖ

ಭಾರತೀಯ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗತಾರತಮ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿದ್ದರೂ ಭ್ರೂಣ ಹತ್ಯೆ ಈಗಲೂ ಜೀವಂತವಾಗಿದೆ. ಲಿಂಗತಾರತಮ್ಯ  ಕೂಡ ಹೆಚ್ಚಾಗುತ್ತಿದೆ.  ಈ ಅಸಮಾನತೆಯನ್ನು ಹೋಗಲಾಡಿಸಲು ದೇಶದ ಪ್ರತಿಯೊಬ್ಬ ಪ್ರಜೆಯೂ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಈ ಸಂದಿಗ್ಧತೆ ನಡುವೆಯೂ ಯುವ ವೈದ್ಯರೊಬ್ಬರು ಸದ್ದಿಲ್ಲದೆ ಹೆಣ್ಣು ಶಿಶುಗಳ ರಕ್ಷಣೆಗಾಗಿ  ಟೊಂಕಕಟ್ಟಿ ನಿಲ್ಲುವ ಮೂಲಕ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ಅವರೇ ಡಾಕ್ಟರ್‌ ಗಣೇಶ್‌ ರಾಖ.

ಗಣೇಶ್‌ ಮೂಲತಃ ಮಹಾರಾಷ್ಟ್ರ ರಾಜ್ಯದವರು. ಕೂಲಿ ಕಾರ್ಮಿಕನ ಮಗನಾಗಿ ಹುಟ್ಟಿದ ಗಣೇಶ್‌ ಕಷ್ಟಪಟ್ಟು ಓದಿ ವೈದ್ಯಕೀಯ ಪದವಿ ಪಡೆದರು. ತಮ್ಮ ಹಳ್ಳಿಯ ಪರಿಸರ ಮತ್ತು ಕಾಲೇಜು ಜೀವನದಲ್ಲಿ ಹೆಣ್ಣು ಶಿಶು ಹತ್ಯೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದವರು. ಆಗಲೇ ಮಹಿಳೆಯರ ಏಳಿಗೆಗೆ ತಮ್ಮ ಕೈಲಾದ ಸೇವೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದರು.  ಅದರಂತೆ ಇಂದು ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಎಂಬಿಬಿಎಸ್‌ ಪದವಿ ಪಡೆದ ಬಳಿಕ ಗಣೇಶ್‌ ಒಂದೆರಡು ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರು. ನಂತರ ಪುಣೆಯಲ್ಲಿ 25 ಹಾಸಿಗೆಯ ಜನರಲ್‌ ಆಸ್ಪತ್ರೆಯನ್ನು ಆರಂಭಿಸಿದರು. ಇಲ್ಲಿ  ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಯರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಗಣೇಶ್‌ ದೇಶದ ಗಮನ ಸೆಳೆದಿದ್ದಾರೆ.  ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಅಂದು ಹಬ್ಬದ ವಾತಾವರಣ. ಆಸ್ಪತ್ರೆಯ ಸಿಬ್ಬಂದಿಗಳು ಸಿಹಿ ಹಂಚಿ ಸಂಭ್ರಮಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಒಂದು ವೇಳೆ ಸಿಜೇರಿಯನ್‌ ಮೂಲಕ ಹೆಣ್ಣು ಶಿಶು ಜನಿಸಿದರೂ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ.

ಇಲ್ಲಿಯವರೆಗೂ ನೂರಾರು ಉಚಿತ ಹೆರಿಗೆಗಳನ್ನು ಮಾಡಿಸಿದ್ದಾರೆ. ಹೆಣ್ಣು ಶಿಶು ಹತ್ಯೆ ಹಾಗೂ ಲಿಂಗತಾರತಮ್ಯದ ವಿರುದ್ಧ ಜನರಲ್ಲಿ  ಜಾಗೃತಿ ಮೂಡಿಸುವುದಕ್ಕಾಗಿ   ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಗಣೇಶ್‌.
twitter.com/medicare_hosp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT