ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪ್ತಿ ವಾಹನಗಳಿಗೆ ರಸ್ತೆಯೇ ನಿಲುಗಡೆ ತಾಣ!

ಇಕ್ಕಟ್ಟಾದ ರಸ್ತೆಯಿಂದ ಸುಗಮ ಸಂಚಾರಕ್ಕೆ ತೊಂದರೆ: ಸಾರ್ವಜನಿಕರ ದೂರು
Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಬಸವನಗುಡಿಯಲ್ಲಿ ದಟ್ಟಣೆ ನಿವಾರಣೆಗಾಗಿ ನಿರ್ಮಿಸಿರುವ ಕೆಳಸೇತುವೆ ಮೇಲ್ಭಾಗ ಈಗ ಪೊಲೀಸರ ಜಪ್ತಿ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ.

‘ಬಸವನಗುಡಿಯ ಕೆ.ಆರ್‌. ರಸ್ತೆಯ ರವೀಂದ್ರನಾಥ್‌ ಟ್ಯಾಗೋರ್‌ ವೃತ್ತದ ಕೆಳಸೇತುವೆ ಮೇಲೆ ಕಳೆದ ವರ್ಷದಿಂದ  ಲಾರಿ, ಟ್ರಕ್‌್ ಸೇರಿದಂತೆ 6 ವಾಹನಗಳನ್ನು ನಿಲ್ಲಿಸಿದ್ದು, ಅದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂಬುದು ಸ್ಥಳೀಯರ ದೂರು.

ಸಿಟಿ ಮಾರ್ಕೆಟ್‌ನಿಂದ ಬನಶಂಕರಿಗೆ ಹೋಗುವ ವಾಹನಗಳು  ರವೀಂದ್ರನಾಥ್‌ ಟ್ಯಾಗೋರ್‌ ವೃತ್ತದಿಂದ ಹಾಯ್ದು ಹೋಗುತ್ತವೆ. ಬಸವನಗುಡಿಗೆ ಬರುವ ವಾಹನಗಳು ಇದೇ ವೃತ್ತದಲ್ಲಿ ತಿರುವು ಪಡೆದು ಗಾಂಧಿ ಬಜಾರ್‌ ಮುಖ್ಯ ರಸ್ತೆಗೆ ಪ್ರವೇಶಿಸುತ್ತವೆ. ಗಾಂಧಿ ಬಜಾರ್‌ನಿಂದ ಬರುವ ವಾಹನಗಳು ಇದೇ ವೃತ್ತದಿಂದ ಕೆ.ಆರ್‌.ರಸ್ತೆ ಸೇರುತ್ತವೆ. ರಸ್ತೆ ದೊಡ್ಡದಾಗಿದ್ದರೂ ಪೊಲೀಸರು ಅತಿಕ್ರಮಿಸಿರುವ ರಸ್ತೆಯ ಜಾಗವನ್ನು ಬಿಟ್ಟು ಉಳಿದ ಇಕ್ಕಟ್ಟಾದ ಜಾಗದಲ್ಲೇ ವಾಹನಗಳು ಸಂಚರಿಸಬೇಕಾಗಿದೆ.

ಅಕ್ರಮ ಚಟುವಟಿಕೆಗೆ ದಾರಿ: ವಾಹನ ನಿಲ್ಲಿಸಿರುವ ಜಾಗವು ಅಕ್ರಮ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ. ವೃತ್ತದಲ್ಲಿ ಸಮರ್ಪಕ ವಿದ್ಯುತ್‌ ದೀಪಗಳಿಲ್ಲ. ರಾತ್ರಿ  ಕಿಡಿಗೇಡಿಗಳು ಇದೇ ಜಾಗವನ್ನು ತಮ್ಮ ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದು, ಸ್ಥಳದಲ್ಲೇ ಮದ್ಯದ ಬಾಟಲಿಗಳು ಬಿದ್ದಿವೆ.
ಜತೆಗೆ ವೃತ್ತವು ಬಯಲು ಶೌಚಾಲಯವಾಗಿ ಮಾರ್ಪಟ್ಟಿದ್ದು, ಗಬ್ಬುವಾಸನೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಅಪಘಾತ ವಲಯ: ಜಪ್ತಿ ವಾಹನ ನಿಲ್ಲಿಸಿದ್ದರಿಂದ ರಸ್ತೆ ಇಕ್ಕಟ್ಟಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ.

ಬಾಲಕಿಯರ ಪದವಿಪೂರ್ವ ಕಾಲೇಜು, ಎಂ.ಎನ್‌. ಕೃಷ್ಣರಾವ್‌ ಪಾರ್ಕ್‌್  ರವೀಂದ್ರನಾಥ್‌ ಟ್ಯಾಗೋರ್‌ ಪಾರ್ಕ್‌ ವೃತ್ತದ ಪಕ್ಕದಲ್ಲೇ ಇದ್ದು, ಅಲ್ಲಿಗೆ ಪ್ರತಿದಿನ ಬರುವ ಪಾದಚಾರಿಗಳ ಸಂಖ್ಯೆ ಹೆಚ್ಚು. ಹಲವರಿಗೆ ವಾಹನ ಡಿಕ್ಕಿ ಹೊಡೆದಿದ್ದು, ಆಸ್ಪತ್ರೆ ಕಂಡು ಬಂದಿದ್ದಾರೆ. 

‘ರಸ್ತೆಯಲ್ಲಿರುವ ವಾಹನ ತೆರವು ಕುರಿತು ಜನಪ್ರತಿನಿಧಿಗಳು ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬೇರೆಡೆ ವಾಹನ ನಿಲ್ಲಿಸಿದರೆ ಕಳ್ಳರು ಬಿಡಿಭಾಗ ಕಳವು ಮಾಡುತ್ತಾರೆ. ಅದಕ್ಕೆ ವೃತ್ತದಲ್ಲಿ ನಿಲ್ಲಿಸಿದ್ದೇವೆಂದು ಪೊಲೀಸರು ಹೇಳುತ್ತಿದ್ದಾರೆ’ ಎಂದು ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಎಸ್‌. ಶೇಖರ್‌ ತಿಳಿಸಿದರು.

‘ವಾಹನಗಳಿದ್ದ ಮೇಲ್ಸೇತುವೆ ಮೇಲೆ ಭಾರ ಬೀಳುತ್ತಿದೆ. ಜತೆಗೆ ವಾಹನ ಸುತ್ತಲೂ ಬ್ಯಾರಿಕೇಡ್‌್ ಹಾಕಿ ರಸ್ತೆಯೇ ತಮ್ಮದೆಂಬಂತೆ ಪೊಲೀಸರು ವರ್ತಿಸುತ್ತಿದ್ದಾರೆ’ ಎಂದು ಅವರು ದೂರಿದರು.

ವಾರಸುದಾರರಿಗೆ ಹುಡುಕಾಟ: ‘ಕದ್ದ ವಾಹನಗಳ ನೋಂದಣಿ ಸಂಖ್ಯೆ ಬದಲಾಯಿಸಿ ಓಡಿಸುತ್ತಿದ್ದ ವೇಳೆ 2015ರಲ್ಲಿ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಠಾಣೆ ಬಳಿ ಸೂಕ್ತ ಜಾಗವಿಲ್ಲ. ಅದಕ್ಕೆ ವೃತ್ತದಲ್ಲಿ ನಿಲ್ಲಿಸಿದ್ದೇವೆ’ ಎಂದು ಬಸವನಗುಡಿ ಠಾಣೆ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಾರಸುದಾರರು  ಸಿಕ್ಕ ಕೂಡಲೇ ವಾಹನ ಹಸ್ತಾಂತರಿಸಲಾಗುವುದು.  ವೃತ್ತದಲ್ಲಿ ವಾಹನ ನಿಲ್ಲಿಸುವುದಕ್ಕೂ ಮುನ್ನ ಸಾರ್ವಜನಿಕರ ವಾಹನಗಳೇ ಹೆಚ್ಚು ನಿಲ್ಲುತ್ತಿದ್ದವು. ಅವರನ್ನು ಪ್ರಶ್ನಿಸದ ಕೆಲವರು ಪೊಲೀಸರ ವಿರುದ್ಧ ದೂರು ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

* ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ಕೂಡಲೇ ತೆರವುಗೊಳಿಸಬೇಕು. ರಸ್ತೆಯನ್ನು ಸಂಚಾರಮುಕ್ತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಸಬೇಕು
-ಬಿ.ಎಸ್‌. ಮನೋಹರ
ಉಪಾಧ್ಯಕ್ಷ,
ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ

ಮುಖ್ಯಾಂಶಗಳು
* ಬಸವನಗುಡಿ  ಪೊಲೀಸರಿಂದ ರಸ್ತೆ ಅತಿಕ್ರಮಣ ಆರೋಪ

* ವಾಹನ ತೆರವಿಗೆ ನಿವಾಸಿಗಳ ಆಗ್ರಹ 
* ವಾಹನಗಳ ಬಿಡಿಭಾಗ ಕಳ್ಳತನದ ಭೀತಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT