ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ವರ್ತಮಾನ ಹಾಗೂ ಭವಿಷ್ಯ

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೃಹತ್ ನೀರಾವರಿ, ಶಾಶ್ವತ ನೀರಾವರಿ ಯೋಜನೆಯ ನಕ್ಷೆಯ ಮೂಲಕ ನದಿ ನೋಡುವುದು ಕಲಿತ ಬಳಿಕ ನೆಲದ ನೀರಿನ ಪರಿಸ್ಥಿತಿ  ಮರೆತಿದ್ದೇವೆ. ಮೂರು ದಶಕಗಳ ಹಿಂದೆ ಮನೆ ಮನೆಯಲ್ಲಿ ಬಾವಿಯಿತ್ತು, ಊರಿನ ಕೆರೆಯಲ್ಲಿ ನೀರಿತ್ತು. ಪಂಚಾಯಿತಿ ಕುಡಿಯುವ ನೀರಿನ ಯೋಜನೆಯಿಂದ ಸುಲಭದಲ್ಲಿ ಸರ್ಕಾರಿ ನೀರು ಸಿಕ್ಕ ಸಂಭ್ರಮ ದೊರಕಿತು. ಗುಡ್ಡದೆತ್ತರದಲ್ಲಿ ಕಾಲೊನಿ ನಿರ್ಮಿಸಿದರೂ ನೀರು ಸಿಕ್ಕಿತು. ಬಾವಿಕಟ್ಟೆಯಲ್ಲಿ ಮಾತಾಡಿಕೊಂಡು, ಕೆರೆದಂಡೆಯಲ್ಲಿ ಕುಳಿತು ನಾಳಿನ ನೀರು ನೋಡುತ್ತಿದ್ದವರಿಗೆ ತಮ್ಮೂರ ಕೊಳವೆ ಬಾವಿಯ ಆಳ ಎಷ್ಟಿದೆಯೆಂದು ತಿಳಿಯಲಿಲ್ಲ, ಕುಸಿದ ನೀರು ಕಾಣಿಸಲಿಲ್ಲ.

ಮತ ಕೊಟ್ಟು ಕೂಡ್ರುವ ಗ್ರಾಮ ಆಡಳಿತದಲ್ಲಿ ನೀರು ಪಡೆಯುವುದು ಹಕ್ಕಾಯಿತು, ನಲ್ಲಿಯೆದುರು ನಿಲ್ಲುವುದು ಅಭ್ಯಾಸವಾಯಿತು. ಬಯಲುಸೀಮೆಯಷ್ಟೇ ಅಲ್ಲ ನದಿನಾಡು ಕರಾವಳಿಗೂ ಕೊಳವೆಬಾವಿ ಬಂತು. ಸುರಿವ ಮಳೆ, ನೀರು ಹಿಡಿಯುವ ಕೆರೆ, ಕಾಡಿನ ಬಗ್ಗೆ ಸಮುದಾಯವನ್ನು ಜಾಗೃತಗೊಳಿಸಿ ಜಲಸಾಕ್ಷರತೆ ಹೆಚ್ಚಿಸಿ ನೈಸರ್ಗಿಕ ಸಂಪತ್ತು ಸಂರಕ್ಷಣೆಗೆ ಎಚ್ಚರಿಸಬೇಕಾದ ವ್ಯವಸ್ಥೆ ಗಾಢ ನಿದ್ದೆಹೋಯ್ತು.

ಒಂದು ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ₹ 40 ಕೋಟಿ ಮೊತ್ತ ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾದರೆ ಮಾರ್ಚ್‌ದೊಳಗೆ ಕಾಮಗಾರಿ ಮುಗಿದು ಅಷ್ಟೂ ಹಣ ಖರ್ಚಾಗಬೇಕು. ಒಮ್ಮೆ ₹ 20 ಕೋಟಿ ಉಳಿದರೆ? ಹಣ ಸರ್ಕಾರಕ್ಕೆ ಮರಳುತ್ತದೆ. ಮುಂದಿನ ವರ್ಷದ ಅನುದಾನದಲ್ಲಿ ಅಷ್ಟು ಹಣ ಕಡಿತವಾಗಿ ಆ ಜಿಲ್ಲೆಗೆ ₹ 20 ಕೋಟಿ ಮಾತ್ರ ದೊರೆಯುತ್ತದೆ. ಹಣ ಖರ್ಚು ಮಾಡದಿದ್ದರೆ ಅನುದಾನ ನೀಡಿ ಪ್ರಯೋಜನವೇನು? ತೀರ್ಮಾನ ಸರ್ಕಾರದ್ದು.  ₹ 40 ಕೋಟಿ ಖರ್ಚು ಮಾಡಿದರೆ ಇನ್ನೂ ಹೆಚ್ಚು ಹಣಕ್ಕೆ ಬೇಡಿಕೆ ಸಲ್ಲಿಸಬಹುದೆಂದು ಜಿಲ್ಲಾ ಆಡಳಿತ ನಂಬಿದೆ. ಯೋಜನೆ ಹೇಗೆ ಕಾರ್ಯಗತವಾಗಿದೆ? ಕಾಮಗಾರಿ ಮುಗಿದು ನಲ್ಲಿಯಲ್ಲಿ ನೀರು ಬಂದಿದೆಯೇ? ನೋಡುವುದಕ್ಕೆ ಯಾರಿಗೂ ಕಣ್ಣಿಲ್ಲ. ಅಸಡಾಬಸಡಾ ದರ್ಬಾರಿನಲ್ಲಿ ಕೆಲಸ ನಡೆದಿದೆ.

ನೀರಿನ ಟ್ಯಾಂಕ್ ಕಟ್ಟಲು ₹ 15 ಲಕ್ಷದಿಂದ ₹ 20 ಲಕ್ಷ  ಖರ್ಚಾಗುತ್ತದೆ, ಬಾವಿ ತೆಗೆಯಲು ಹಣವಿಲ್ಲದೇ ನೀರಿಲ್ಲದ ಟ್ಯಾಂಕ್ ನಿಲ್ಲುತ್ತದೆ. ನೀರಿನ ಬಗ್ಗೆ ಯೋಜನೆ ರೂಪಿಸುವ ಎಂಜಿನಿಯರ್‌ಗಳು ಟ್ಯಾಂಕ್, ಪೈಪ್‌ಲೈನ್, ಪಂಪ್ ಹೌಸ್‌ಗಳ ನಿರ್ಮಾಣ ಪ್ಲಾನ್‌ನಲ್ಲಿ ಬಹಳ ನುರಿತವರು. ನಿರ್ಮಾಣದ ಬಗೆಗಿರುವ ಆಸಕ್ತಿ ನೀರಿನ ಬಗೆಗಿಲ್ಲ. ಮಳೆ ನೀರನ್ನು ಇಂಗಿಸಿ ನೀರಿನ ಮೂಲವನ್ನು ಉಳಿಸುವ ಕನಿಷ್ಠ ಪ್ರಜ್ಞೆಯಿಲ್ಲದವರ ದಂಡು ಯೋಜನೆ ಜಾರಿಗೊಳಿಸುತ್ತದೆ. ಹಣ ಖರ್ಚು ಮಾಡುವ ಹೊಡೆತದಲ್ಲಿ 3,500 ಮಿಲಿ ಮೀಟರ್ ಮಳೆ ಸುರಿಯುವ ಮಲೆನಾಡಿನ ಪ್ರದೇಶದಲ್ಲಿಯೂ ಸುಸ್ಥಿರ ನೀರಿನ ಯೋಜನೆ ರೂಪಿಸಲಾಗದ ಬಡತನ ಜಲ ತಾಂತ್ರಿಕತೆಗೆ ಬಂದಿದೆ.

ಉತ್ತರ ಕನ್ನಡದ ಯಲ್ಲಾಪುರದಲ್ಲಿ ₹ 15 ಕೋಟಿ ಖರ್ಚು ಮಾಡಿದ ಬೇಡ್ತಿ ಕುಡಿವ ನೀರಿನ ಯೋಜನೆಯಲ್ಲಿ ಜಲ ಯೋಜನೆಗಳ ಸತ್ಯದರ್ಶನವಾಗುತ್ತದೆ. ಹುಬ್ಬಳ್ಳಿಯ ಕೊಳಚೆ ನೀರಿಗೆ ಈ ಯೋಜನೆ ಜಾರಿಯಾಗಿದೆ! ಒಳ್ಳೆಯ ನೀರಿನ ಮೂಲ ಗುರುತಿಸುವಲ್ಲಿ ಎಡವಿ, ಹೊಲಸು ನೀರಿನ  ಶುದ್ಧೀಕರಣಕ್ಕೆ ಹಣ ಖರ್ಚು ಮಾಡುವ ವ್ಯವಸ್ಥೆಯಿದು.

ಬೃಹತ್ ನೀರಾವರಿ ಯೋಜನೆಗಳು ಜಾರಿಯಾದರೆ ಯೋಜನಾ ವ್ಯಾಪ್ತಿಯ ರೈತರಿಗೆಲ್ಲ ನೀರು ಸಿಗುವುದು ಕಷ್ಟದ ಮಾತು. ಒಂದು ಲಕ್ಷ ಎಕರೆಗೆ ನೀರು ನೀಡುವ ಉದ್ದೇಶದ ಯೋಜನೆ 40 ಸಾವಿರ ಎಕರೆಗೂ ನೀರುಣಿಸದ ನಿದರ್ಶನಗಳಿವೆ. ಇಂದು ಕೇಂದ್ರೀಕೃತ ಬೃಹತ್ ನೀರಾವರಿ ಯೋಜನೆಗಳನ್ನು ಕರ್ನಾಟಕ ಬಹಳ ಇಷ್ಟಪಡುತ್ತಿದೆ, ಜಲ ಸಂಕಟ ನಿವಾರಣೆಯ ಏಕೈಕ  ದಾರಿಯಂತೆ ಎಲ್ಲರಿಗೂ  ಕಾಣಿಸುತ್ತಿದೆ. ಕೇಂದ್ರೀಕೃತ ನೀರಾವರಿ ವ್ಯವಸ್ಥೆ ನಮಗೆ ಹೊಸತು, ಶತಮಾನಗಳಿಂದಲೂ ನಾವು ಕೆರೆಗಳ ಮೂಲಕ ನೀರಾವರಿಯ ಫಲ ಅನುಭವಿಸಿದವರು. ಬಯಲುಸೀಮೆಯಲ್ಲಿ ಹಿರಿಯರು ಸರಣಿ ಕೆರೆಗಳನ್ನು ನಿರ್ಮಿಸಿದ್ದಾರೆ. ಮೈಸೂರು ರಾಜ್ಯದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಜಾಗ ಹುಡುಕುವುದು ಕಷ್ಟವೆಂದು ಕ್ರಿ.ಶ. 1884ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಹೇಳಿಕೆ ನೀಡಿದ್ದರೆಂದು ದಾಖಲೆಗಳು ಸಾರುತ್ತಿವೆ.

ಹವಾಮಾನ ವೈಪರೀತ್ಯದ ಪರಿಣಾಮಗಳಲ್ಲಿ ಅಕಾಲಿಕ ಮಳೆಯೂ ಒಂದು. ಮಳೆಗಾಲದಲ್ಲಿ ಸುರಿಯದ ಮಳೆ ಬೇಸಿಗೆಯಲ್ಲಿ ಪ್ರವಾಹವಾಗಿ ನುಗ್ಗಬಹುದು. ಬರಪೀಡಿತ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ನೀರನ್ನು ಸುರಕ್ಷಿತವಾಗಿ ಕೆರೆಗಳತ್ತ ತಿರುಗಿಸುವುದು ಮುಖ್ಯ. ಕೆರೆಯ ಕಾಲುವೆಗಳನ್ನು ಸರಿಪಡಿಸಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡುವುದು, ಕೆರೆ ಪಾತ್ರದ ಹೂಳು ತೆಗೆಯುವ ಕೆಲಸ ನಡೆಯಬೇಕು. ಮುಂಗಾರು, ಹಿಂಗಾರು ಸರಿಯಾಗಿ ಸುರಿಯುವ ಕಾಲ ಹೋಯಿತು. ಪರಿಸರ ಬದಲಾವಣೆಯ ಘಟ್ಟದಲ್ಲಿ ಹೊಂದಿ ಬದುಕಬೇಕು.

ಕೆರೆ ಕಾಲುವೆಗಳೆಲ್ಲ ಅತಿಕ್ರಮಣವಾಗಿವೆ, ಕಾಲುವೆ ಮರುನಿರ್ಮಾಣ ಸಾಧ್ಯವಿಲ್ಲವೆಂದು ವಾದಿಸುವವರಿದ್ದಾರೆ. ಬಡವರು ಕಾನೂನನ್ನು ತಲೆಯಲ್ಲಿ ಹೊತ್ತು ತಿರುಗುವುದು, ಶ್ರೀಮಂತರಿಗೆ ಅದೇ ಕಾನೂನು ಕಾಲ ಕಸವಾಗುವುದು ನಡೆದಿದೆ. ನಮಗೆ ಬೇಕಾದ ನೀರಿಗಾಗಿ ಪಕ್ಕದ ತಾಲ್ಲೂಕು, ಜಿಲ್ಲೆ, ರಾಜ್ಯಗಳ ಜೊತೆ ಹೋರಾಡಲು ಗೊತ್ತಿರುವ ನಮಗೆ ಊರಿನ ಕೆರೆಯ  ಕಾಲುವೆ ನಿರ್ಮಾಣಕ್ಕೆ ಇಷ್ಟೇ ಸಂಘಟಿತವಾಗಿ ಪ್ರಯತ್ನಿಸಲು ಸಾಧ್ಯವಿಲ್ಲವೇ?

ಹೋರಾಟದ ದಾರಿಯಲ್ಲಿ ಸ್ವಲ್ಪ ನಿಂತು ಯೋಚಿಸಬೇಕು. ನೀರಿನ ಕುರಿತ ಕರ್ತವ್ಯ ಮರೆಯಬಾರದು. ಎಲ್ಲವನ್ನೂ ಸರ್ಕಾರವೇ ಮಾಡಬೇಕಾಗಿಲ್ಲ, ನಮ್ಮ ಕೈಲಾದ ಕೆಲಸ ಆರಂಭಿಸಬೇಕು. ಜಲಕ್ಷಾಮದ ನಡುವೆಯೂ ನೀರ ನೆಮ್ಮದಿಯಲ್ಲಿ ಬದುಕಿದವರು ರಾಜ್ಯದ ಎಲ್ಲೆಡೆ ಸಿಗುತ್ತಾರೆ. ಬಿದ್ದಹನಿಯನ್ನು ಭೂಮಿಗೆ ಇಂಗಿಸಿ, ಕೆರೆಯಲ್ಲಿ ಸಂಗ್ರಹಿಸಿ, ಕೊಳವೆಬಾವಿಗೆ ಸೇರಿಸಿ ಜಲಮರುಪೂರಣದ ಮೂಲಕ ಯಶಸ್ಸು ಕಂಡಿದ್ದಾರೆ. ನೀರು ಕಡಿಮೆ ಬಳಸುವ ಬೆಳೆ ಬೆಳೆಯುವ ದಾರಿ ಹುಡುಕಿದ ಪ್ರಯತ್ನವಿದೆ. ಬರನಿರೋಧಕ ಬೆಳೆಗಳತ್ತ ಗಮನ ಹರಿಸಿದವರಿದ್ದಾರೆ. ದಶಕದಲ್ಲಿ ಸರಣಿ ಕಣಿವೆ ಕೆರೆಗಳನ್ನು ನಿರ್ಮಿಸಿ ನೀರ ನೆಮ್ಮದಿಯ ಹಲವು ಮಾದರಿ ನಿರ್ಮಿಸಿದ ಗ್ರಾಮ ನಮ್ಮ ಕಳವೆ.

ಕೃಷಿಮೇಳ, ಜಲಜಾಗೃತಿ ಕಾರ್ಯಕ್ರಮಕ್ಕೆ ಜಲತಜ್ಞರನ್ನು ಆಹ್ವಾನಿಸುತ್ತಾರೆಯೇ ಹೊರತು ಜನಪರ ಯೋಜನೆ ಚರ್ಚಿಸುವ, ರೂಪಿಸುವ ಸರ್ಕಾರಿ ಒಳಮನೆಗೆ ಯಾರಿಗೂ ಪ್ರವೇಶವಿಲ್ಲ. ಕೋಟ್ಯಂತರ ರೂಪಾಯಿ ಯೋಜನೆ ರೂಪಿಸುವಾಗ ಪೈಪು, ಸಿಮೆಂಟು, ಕಬ್ಬಿಣ ಮಾರುವವರ ಸ್ನೇಹ ಬೇಕಾಗಬಹುದು. ಕೆಲಸ ನಡೆಯುವುದು ನೆಲದಲ್ಲಿ, ನೆಲದ ಅನುಭವ ಪಡೆಯಬೇಕೆಂಬ ಪರಿಕಲ್ಪನೆ ಇನ್ನೂ ತಂತ್ರಜ್ಞರಿಗೆ ಬೆಳೆದಿಲ್ಲ.

ಧಾರವಾಡದ ಕಲಘಟಗಿಯಲ್ಲಿ 800 ಮಿ.ಮೀ. ಮಳೆ ಸುರಿಯುತ್ತದೆ. ಹೊಲದಲ್ಲಿ ಬದು ನಿರ್ಮಿಸಿ, ಬದುವಿನಲ್ಲಿ ಮರಗಿಡ ಬೆಳೆಸಿ, ಮಳೆ ನೀರು ಹಿಡಿಯಲು ಕೆರೆ, ಕೃಷಿ ಹೊಂಡ ರೂಪಿಸಿದ ಬಳಿಕ ಬಡವರ ಜೀವನದಲ್ಲಿ ಮಹತ್ತರ ಬದಲಾವಣೆಯಾಗಿದೆಯೆಂದು ಈ ಕಾರ್ಯಕ್ಕೆ ಶ್ರಮಿಸಿದ ಡಾ.ಪ್ರಕಾಶ್ ಭಟ್ ಹೇಳುತ್ತಾರೆ. ಆದರೆ ಕಟ್ಟಿನಿಲ್ಲಿಸಿದ ಇಂಥ ಮಾದರಿ ಅನುಭವಗಳ ಮೂಲಕ ನಾಡಿನ ಇತರೆಡೆ ಜಾಗೃತಿ ಹಂಚಲು ಸರ್ಕಾರಿ ವ್ಯವಸ್ಥೆಗೆ ಸ್ವಲ್ಪವೂ ಆಸಕ್ತಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT