ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಚರ್ಚೆಗೆ ದಕ್ಕಿದ ಡಿಎನ್ನೆಯ ಕೀಲೆಣ್ಣೆ

ವಿಮರ್ಶೆ
Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಶಿಲಾಕುಲ ವಲಸೆ
ಲೇ:
ಡಾ. ಕೆ.ಎನ್. ಗಣೇಶಯ್ಯ
ಪು: 324
ರೂ. 225
ಪ್ರ: ಅಂಕಿತ ಪುಸ್ತಕ, ಬೆಂಗಳೂರು 

ಭಾರತದ ಮೇಲೆ 200 ವರ್ಷಗಳ ದಬ್ಬಾಳಿಕೆ ನಡೆಸಿದ್ದಕ್ಕೆ ಬ್ರಿಟಿಷರು ಪರಿಹಾರ ಕೊಡಬೇಕೆ ಎಂಬ ವಿಷಯದ ಮೇಲೆ ಈಚೆಗೆ ಇಂಗ್ಲೆಂಡಿನ ಆಕ್ಸ್‌ಫರ್ಡ್ ಯೂನಿಯನ್‌ನಲ್ಲಿ ಗಂಭೀರ ಚರ್ಚೆ ನಡೆಯಿತು. ನಮ್ಮ ಸಂಸದ ಶಶಿ ತರೂರ್ ಬ್ರಿಟಿಷರ ದುರಾಡಳಿತದ ಚಿತ್ರಣವನ್ನು ಅದೆಷ್ಟು ಚುರುಕಾಗಿ ಮುಂದಿಟ್ಟರೆಂದರೆ ಅವರ ಆ 14 ನಿಮಿಷಗಳ ವಾಗ್ಝರಿ ಅಂತರ್ಜಾಲದಲ್ಲಿ ಒಂದು ಮಹಾಪೂರವನ್ನೇ ಸೃಷ್ಟಿಸಿತು. ಸ್ವತಃ ಪ್ರಧಾನಿ ಮೋದಿಯವರೂ ತರೂರ್‌ಗೆ ಶಾಭಾಸ್ ಹೇಳಿದರು. ಭಾರತದ ಸಂಪತ್ತನ್ನು, ಶ್ರಮಶಕ್ತಿಯನ್ನು, ಕಲಾಕೌಶಲಗಳನ್ನು ಬ್ರಿಟಿಷರು ದೋಚಿದ್ದಷ್ಟೇ ಅಲ್ಲ; ಇಲ್ಲಿನ ಸಾಮಾಜಿಕ ಸಾಮರಸ್ಯವನ್ನು, ಕೋಮು ಸೌಹಾರ್ದವನ್ನು ಧ್ವಂಸ ಮಾಡಿ, ಜನಾಂಗೀಯ ವೈಷಮ್ಯವನ್ನು ಹೆಚ್ಚಿಸುವಂತೆ ಧಾರ್ಮಿಕ ವಿಷ ಬೆರೆಸಿ ಹೋದರೆಂದು ತರೂರ್ ಅಂದು ವಾದವನ್ನು ಮಂಡಿಸಿದರು.

ಬ್ರಿಟಿಷರು ಬಿತ್ತಿ ಹೋದ ಈ ಜನಾಂಗೀಯ ವೈಷಮ್ಯದ ಸಂಗತಿಗಳನ್ನು ಇನ್ನಷ್ಟು ವಿಸ್ತೃತವಾಗಿ, ಇನ್ನಷ್ಟು ರೋಚಕವಾಗಿ ಗ್ರಹಿಸಬೇಕೆಂದರೆ ಡಾ. ಕೆ.ಎನ್. ಗಣೇಶಯ್ಯನವರ ಈಚಿನ ಕಾದಂಬರಿ ‘ಶಿಲಾಕುಲ ವಲಸೆ’ಯನ್ನು ಓದಬೇಕು. ಕತೆ ದಿಢೀರಾಗಿ ಹೀಗೆ ಆರಂಭವಾಗುತ್ತದೆ: 1947ರ ಜೂನ್ 22ರಂದು ಬ್ರಿಟಿಷರು ಭಾರತದಿಂದ ಸಾಗಿಸುತ್ತಿರುವ ಅಪಾರ ಸಂಪತ್ತಿನ ಪೆಟ್ಟಿಗೆಗಳ ಪೈಕಿ ನಿಗೂಢ ದಾಖಲೆಯುಳ್ಳ ಒಂದು ಪೆಟ್ಟಿಗೆಯನ್ನು ಅವರದ್ದೇ ಅಧಿಕಾರಿಯೊಬ್ಬ ಚಾಣಾಕ್ಷತನದಿಂದ ಲಪಟಾಯಿಸಿ ಭಾರತದಲ್ಲೇ ಕಾಣೆ ಮಾಡುತ್ತಾನೆ.

ಉಳಿದೆಲ್ಲ ಸಂಪತ್ತು ಇಂಗ್ಲೆಂಡಿಗೆ ತಲುಪಿದರೂ ಇದೊಂದು ಪೆಟ್ಟಿಗೆ ಏಕೆ ಬಂದಿಲ್ಲವೆಂದು ಅಲ್ಲಿನವರು ರಹಸ್ಯ ತನಿಖೆಗೆ ತೊಡಗುತ್ತಾರೆ. ಅದರಲ್ಲೇನಿದೆ ಎಂಬುದು ಭಾರತೀಯರಿಗೆ ಸುತರಾಂ ಗೊತ್ತಾಗಬಾರದು. ಆದರೆ ಏನಿದೆ ಎಂಬುದು ಗೊತ್ತಿದ್ದ ಇಲ್ಲಿನ ಒಂದಿಬ್ಬರು ಅದನ್ನು ಇನ್ನಷ್ಟು ಗುಪ್ತವಾಗಿ ಬಚ್ಚಿಡಲು ಹೆಣಗುತ್ತಾರೆ; ಹೆಣವಾಗುತ್ತಾರೆ. ಆಗ ಭೂಗತವಾದ ಆ ರಹಸ್ಯಕ್ಕೆ ಈಗ 2014ರಲ್ಲಿ, ಎರಡನೇ ಅಧ್ಯಾಯದಲ್ಲಿ ಆಕಸ್ಮಿಕವಾಗಿ ಜೀವ ಬರುತ್ತದೆ. ಇಮೇಲ್, ಪೆನ್ ಡ್ರೈವ್, ಟೆಲಿಮೆಟ್ರಿ, ಪೆನ್ ಕ್ಯಾಮರಾ, ಜಿಪಿಎಸ್ ಮುಂತಾದ ಅತ್ಯಾಧುನಿಕ ಐಸಿಟಿ ತಂತ್ರಗಳ ನೆರವಿನಿಂದ 300 ಪುಟಗಳುದ್ದಕ್ಕೂ ಹಾವು ಏಣಿಯಾಟ ಮುಂದುವರೆಯುತ್ತದೆ. ಅದು ಗಣೇಶಯ್ಯ ಶೈಲಿ.   

ಸಸ್ಯವಿಜ್ಞಾನಿಯಾಗಿ, ಉಪಗ್ರಹಗಳ ಚಿತ್ರಗಳ ಮೂಲಕ ಭರತಖಂಡದ ಜೀವಸಂಕುಲಗಳ ತೌಲನಿಕ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿ ಗಣೇಶಯ್ಯ ಬೆಂಗಳೂರಿನ ಜಿಕೆವಿಕೆಯಲ್ಲಿ ಇಕಾಲಜಿ ಪ್ರೊಫೆಸರ್ ಆಗಿ, ಸಂಶೋಧಕರಾಗಿ, ದೇಶವಿದೇಶಗಳನ್ನು ಸುತ್ತುತ್ತಿರುವಾಗಲೂ ಇತಿಹಾಸದಲ್ಲಿ ಆಳ ಆಸಕ್ತಿ ಉಳಿಸಿಕೊಂಡವರು. ನಿರ್ವಂಶವಾಗುತ್ತಿರುವ ಸಸ್ಯಗಳ ಅಧ್ಯಯನ ನಡೆಸುತ್ತಲೇ ಮಾನವ ಚರಿತ್ರೆ, ಸಾಮ್ರಾಜ್ಯಗಳ ಏಳುಬೀಳು, ಮತಧರ್ಮಗಳ ಕದನಗಳ ಹಳೇ ದಾಖಲೆಗಳನ್ನು ಶಿಲ್ಪಗಳಲ್ಲಿ, ತಾಳೆಗರಿಗಳಲ್ಲಿ, ಶಾಸ್ತ್ರಗಳಲ್ಲಿ, ಜಾನಪದ ಕಥನಗಳಲ್ಲಿ ಹುಡುಕುವವರು. ಹೂತು ಹೋದ ಇತಿಹಾಸವನ್ನು ಕೆದಕಲೆಂದು ಸ್ವತಃ ಗುಹೆ ಗೋಪುರಗಳ, ಹಳೆ ಕೋಟೆಗಳ ಫೋಟೊ ತೆಗೆಯುತ್ತ ಅದಕ್ಕೆ ವರ್ತಮಾನದ ಮೆರುಗು ಕೊಟ್ಟು ಕತೆಯಾಗಿ, ಕಾದಂಬರಿಯಾಗಿ ನೇಯುವವರು. ಓದುಗರು ಊಟ ನಿದ್ದೆ ಮರೆಯುವಂತೆ ಮಾಡಬಲ್ಲವರು.

ಅಂದಹಾಗೆ, ‘ಶಿಲಾಕುಲ ವಲಸೆ’ಯ ಮೂಲವಸ್ತು ಬ್ರಿಟಿಷರ ದುರಾಡಳಿತವಲ್ಲ; ಅದು ದೇವರ ವಿಕಾಸವನ್ನು ಕುರಿತ ಕಾದಂಬರಿ. ಜೀವಿಗಳ ವಿಕಾಸದ ಹಾಗೆ, ಮನುಷ್ಯರೂ ವಿಕಾಸವಾಗುತ್ತ ದೇವರುಗಳನ್ನೂ ಸೃಷ್ಟಿಸಿದ್ದು ನಮಗೆ ಗೊತ್ತಿದೆ. ಆ ದೇವರನ್ನು ಮತಪ್ರಚಾರಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಹೇಗೆ ಬಳಸಿಕೊಂಡರು; ದೇವರ ರೂಪ ಬದಲಿಸಿದರು, ವೇಷ ಬದಲಿಸಿದರು, ಪರಕಾಯ ಪ್ರವೇಶ ಮಾಡಿಸಿದರು ಇವೆಲ್ಲ ಬರುತ್ತವೆ. ಉದಾಹರಣೆಗೆ: ವಾಮನನಾಗಿ ಮೂರು ಲೋಕವನ್ನೇ ಆಕ್ರಮಿಸಬಲ್ಲ ಸರ್ವಶಕ್ತ ದೇವರು ಯಃಕಶ್ಚಿತ ಮೀನಾಗಿ, ಆಮೆಯಾಗಿ, ಹಂದಿಯಾಗಿ ಯಾಕೆ ಅವತರಿಸಿದ ಎಂಬುದಕ್ಕೆ ನಿರೀಶ್ವರವಾದಿಗಳೂ ತಲೆದೂಗುವಂಥ ತಾರ್ಕಿಕ ಚರ್ಚೆಯೂ ಇದರಲ್ಲಿದೆ.

ಗಣೇಶಯ್ಯ ಕನ್ನಡ ಸಾಹಿತ್ಯಕ್ಕೆ ಆಕಸ್ಮಿಕವಾಗಿ ದಕ್ಕಿದವರು. ಹಿರಿಯ ವಿಜ್ಞಾನಿಯಾಗಿದ್ದ ಅವರು ಪತ್ನಿ ವೀಣಾ (ಪುರಾತತ್ತ್ವ ವಿಜ್ಞಾನಿ) ಜೊತೆ ಚರ್ಚಿಸುತ್ತ ಜೈನ ಪರಂಪರೆ ಕರ್ನಾಟಕಕ್ಕೆ ಹೇಗೆ ಬಂತು ಎಂಬುದರ ಬಗ್ಗೆ ‘ಕನಕ ಮುಸುಕು’ ಹೆಸರಿನ ಕಾದಂಬರಿಯನ್ನು ಬರೆದರು. ಅದರಲ್ಲಿ ಅವರು ಫೋಟೊ, ನಕಾಶೆ, ರೇಖಾಚಿತ್ರ, ಐತಿಹಾಸಿಕ ದಾಖಲೆಗಳ ಅಡಿಟಿಪ್ಪಣಿ ಎಲ್ಲ ಸೇರಿಸಿ ಪ್ರಕಟಣೆಗೆ ಕಳಿಸಿದರು. ಕಾದಂಬರಿಗಳಲ್ಲಿ ಅವಕ್ಕೆಲ್ಲ ಸ್ಥಾನವೆಲ್ಲಿ? ಎಲ್ಲೆಡೆ ತಿರಸ್ಕೃತವಾಗಿ ಅದು ಕೊನೆಗೆ ‘ಸುಧಾ’ದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿರುವಾಗಲೇ ಅಪಾರ ಜನಪ್ರಿಯತೆ ಗಳಿಸಿತು.

ಇಂಗ್ಲಿಷ್ ಸಾಹಿತ್ಯದಲ್ಲೂ ಹೀಗೆ ಅನೇಕ ಪ್ರಕಾಶಕರಿಂದ ತಿರಸ್ಕೃತಗೊಂಡು ಖ್ಯಾತಿಯ ಉತ್ತುಂಗಕ್ಕೇರಿದ ಲೇಖಕರ ದೊಡ್ಡ ಯಾದಿಯೇ ಇದೆ: ಜಾರ್ಜ್ ಆರ್ವೆಲ್ (ಅನಿಮಲ್ ಫಾರ್ಮ್), ಹರ್ಮನ್ ಮೆಲ್ವಿಲ್ (ಮೋಬಿ ಡಿಕ್), ವ್ಲಾಡಿಮೀರ್ ನೊಬೊಕೊವ್ (ಲೋಲಿಟಾ), ಡಿ.ಎಚ್. ಲಾರೆನ್ಸ್ (ಲೇಡಿ ಚಾಟರ್ಲೀಸ್ ಲವರ್), ಅರ್ನೆಸ್ಟ್ ಹೆಮಿಂಗ್ವೇ (ದಿ ಸನ್ ಆಲ್ಸೋ ರೈಸಿಸ್), ಜೆ.ಕೆ. ರೌಲಿಂಗ್ (ಹ್ಯಾರಿ ಪಾಟರ್) ಇತ್ಯಾದಿ. ಕನ್ನಡದಲ್ಲಿ ತೇಜಸ್ವಿಯವರ ‘ಕರ್ವಾಲೊ’ ಕೂಡ ಅದೇ ಬಗೆಯ ಖ್ಯಾತಿ ಪಡೆದಿದೆ.

‘ಕನಕ ಮುಸುಕು’ ಪ್ರಕಟಣೆಯ ಹಾದಿಯಲ್ಲಿದ್ದಾಗಲೇ ಗಣೇಶಯ್ಯ ಕೆಲವು ಐತಿಹಾಸಿಕ ಮತ್ತು ವೈಜ್ಞಾನಿಕ ಕತೆಗಳನ್ನು ಬರೆದರು. ಅವರ ಮೊದಲ ಕತೆ ‘ಶಾಲಭಂಜಿಕೆ’ ನಾಟಕವಾಗಿ ಪ್ರಸಿದ್ಧಿ ಪಡೆದ ನಂತರ ಇತರ ಮೂರು ಕತೆಗಳೂ ರಂಗಪ್ರದರ್ಶನ ಕಂಡಿವೆ. ಇದುವರೆಗೆ ಆರು ಥ್ರಿಲ್ಲರ್ ಕಾದಂಬರಿಗಳನ್ನು ಬರೆದ ಡಾ. ಗಣೇಶಯ್ಯನವರನ್ನು ‘ಕನ್ನಡದ ಡ್ಯಾನ್ ಬ್ರೌನ್’ ಎಂತಲೇ ಅವರ ಅನೇಕ ಅಭಿಮಾನಿಗಳು ಗುರುತಿಸುತ್ತಾರೆ.     

‘ಶಿಲಾಕುಲ ವಲಸೆ’ ಇತಿಹಾಸತಜ್ಞರ ಚಾವಡಿಗಳಲ್ಲಿ ಗಂಭೀರ ಚರ್ಚೆಯಾಗಬಹುದಾದ ಅನೇಕ ಬಗೆಯ ಸ್ಫೋಟಕ ವಸ್ತುಗಳನ್ನೊಳಗೊಂಡಿದೆ. ಪ್ರಾಚೀನ ಇತಿಹಾಸವನ್ನು ಕೆದಕಲು ಹೊರಟ ಸಂಶೋಧಕಿಯ ಅಪಹರಣ, ಕೊಲೆಯತ್ನದ ಕಥಾಹಂದರದಲ್ಲಿ ಆರ್ಯ-ದ್ರಾವಿಡ ಸಂಬಂಧಗಳ ಬಗೆಗಿನ ಜನಪ್ರಿಯ ಅಂತೆಕಂತೆಗಳನ್ನು ಬುಡಮೇಲು ಮಾಡುವ ಅಂಶಗಳಿವೆ. ನಮ್ಮಲ್ಲಿನ ಮೂಲನಿವಾಸಿಗಳೂ 65 ಸಾವಿರ ವರ್ಷಗಳ ಹಿಂದೆ ವಲಸೆ ಬಂದ ಪರಕೀಯರೇ ಎಂಬ ಪಾಠ ಅದರಲ್ಲಿದೆ. ಅವರ ನಂತರ ಅದೆಷ್ಟೊ ಸಾವಿರ ವರ್ಷಗಳ ನಂತರ ಎರಡನೆಯ ಮೂರನೆಯ ಅಲೆಗಳಲ್ಲಿ ಬಂದ ವಲಸಿಗರು ಮೂಲನಿವಾಸಿಗಳ ನಾಟಿ ದೇವರುಗಳಿಗೆ ಹೊಸ ರೂಪ, ಹೊಸ ಹೆಸರು ಕೊಟ್ಟು ತಮ್ಮ ಪುರಾಣಗಳಲ್ಲಿ ತೂರಿಸಿ ಹೇಗೆ ತಮ್ಮದೆಂದೇ ಸಾಧಿಸಿದರು ಎಂಬ ವಿವರಗಳಿವೆ.

ಆರ್ಯರು ಹೊರಗಿನಿಂದ ಬಂದವರಲ್ಲ; ಭಾರತದ ಈಗಿನ ಎಲ್ಲ ಜಾತಿಗಳ ಮಧ್ಯೆ ರಕ್ತ ಸಂಬಂಧವು ಹಿಂದಿನಿಂದಲೂ ನಡೆಯುತ್ತಲೇ ಇತ್ತು ಎಂಬುದನ್ನು ಡಿಎನ್‌ಎ ಪರೀಕ್ಷೆಗಳ ಆಧಾರದಲ್ಲಿ ಈ ಕಾದಂಬರಿಯ ಪಾತ್ರಗಳು ಹೇಳುತ್ತವೆ (ಅಡಿ ಟಿಪ್ಪಣಿಗಳಲ್ಲಿ ಅದಕ್ಕೆ ದಾಖಲೆಗಳು ಇರುತ್ತವೆ). ದುರ್ಬಲ ಪಂಗಡಗಳನ್ನು ಆರ್ಯರೂ ಶೋಷಣೆ ಮಾಡುತ್ತಿದ್ದರು; ದ್ರಾವಿಡರೂ ಶೋಷಣೆ ಮಾಡುತ್ತಿದ್ದರು. ಆ ಶೋಷಣೆ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ– ಅಂದೂ ಇಂದೂ ಬಹುಶಃ ಮುಂದೂ ಸಹ. ಹಾಗೆ ಆಧಿಪತ್ಯ ಸಾಧಿಸುವ ಹಾದಿಯಲ್ಲಿ ಕೆಲವರು ಧರ್ಮಪಾಲಕರಾಗಿ, ಮತ್ತೆ ಕೆಲವರು ರಾಜ್ಯಪಾಲಕರಾಗಿ ನೆಲೆಯಾದರು.

ಅಂತಹ ವರ್ಗಗಳನ್ನು, ಅಂತಹ ಶೋಷಣಾಪ್ರೇರಿತ ವರ್ಗ ನಿರ್ಮಾಣಗಳನ್ನು ಇಂದಿಗೂ ಎಲ್ಲೆಲ್ಲಿಯೂ ಕಾಣಬಹುದು– ರಾಜಕೀಯದಲ್ಲಿ, ಧರ್ಮದಲ್ಲಿ, ವ್ಯಾಪಾರದಲ್ಲಿ ಎಂದು ಪಾತ್ರವೊಂದರ ಬಾಯಲ್ಲಿ (ಪುಟ 272) ಹೇಳಿಸುತ್ತಾರೆ. ಬ್ರಿಟಿಷರು ಜನ ಸಮುದಾಯಗಳನ್ನು ಒಡೆಯಲೆಂದೇ ಜಾತಿ ಎಂಬ ಗೋಡೆಯನ್ನು ಆಳ ಅಡಿಪಾಯ ಹಾಕಿ ಹೇಗೆ ಹೊಸದಾಗಿ ನಿರ್ಮಿಸಿದರೆಂಬುದು ಓದುಗರಿಗೆ ನಿಚ್ಚಳವಾಗುತ್ತ ಹೋಗುತ್ತದೆ. ತರೂರ್ ಹೇಳಿದ್ದಕ್ಕೆ ತಾಳೆಯಾಗುತ್ತದೆ.   

ಜಾತಿ ಧರ್ಮಗಳ ಕುರಿತು ಭಾರತೀಯರ ಮಿದುಳಿನಲ್ಲಿ ಹಾಗೂ ಪಠ್ಯಪುಸ್ತಕಗಳಲ್ಲಿ ಅಚ್ಚಾಗಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕುವಂತೆ ಹರಪ್ಪ, ಮೊಹೆಂಜೊದಾರೊ ಉತ್ಖನನಗಳ ಹೊಸ ದೊಂದಿಯೊಂದಿಗೆ, ವೇದಗಳ ಮರು ಓದಿನೊಂದಿಗೆ, ಚಾರಿತ್ರಿಕ/ ವೈಜ್ಞಾನಿಕ ದಾಖಲೆಗಳೊಂದಿಗೆ ತೋರಿಸುವ ಇಂಥ ಕಾದಂಬರಿಗಳನ್ನು ನಮ್ಮ ವಿಶ್ವವಿದ್ಯಾಲಯಗಳ ಇತಿಹಾಸಕಾರರು, ಸಮಾಜ ವಿಜ್ಞಾನಿಗಳು ಯಾಕೆ ಚರ್ಚಿಸುತ್ತಿಲ್ಲವೊ? ಥ್ರಿಲ್ಲರ್ ಮಾದರಿಯ ನಿರೂಪಣೆ ಚರ್ಚೆಗೆ ಅನರ್ಹ ಎಂತಲೊ ಅಥವಾ ನಮ್ಮದೇ ರಕ್ತದಲ್ಲಿರುವ ಡಿಎನ್‌ಎ ಸಾಕ್ಷ್ಯಗಳು ತಮ್ಮ ಸೀಮೆಯಾಚಿನದೆಂಬ ಕಡೆಗಣನೆಯೊ?

ಏನೊ, ಅಂತೂ ಗಂಭೀರ ಅಕಾಡೆಮಿಕ್ ಚರ್ಚೆಯಾಗಬೇಕಿದ್ದ ಸಂಗತಿಗಳನ್ನು ಹೊಸ ಪೀಳಿಗೆಯ ಓದುಗರು ಕಾಫಿಹೌಸ್‌ಗಳಲ್ಲಿ, ವಾಟ್ಸ್‌ಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಚರ್ಚಿಸುತ್ತಾರೆ. ಕಾದಂಬರಿಕಾರರನ್ನೇ ದಂತಕತೆಗಳನ್ನಾಗಿಸುತ್ತಾರೆ. ಗಣೇಶಯ್ಯನವರ ಉತ್ಕಟ ಅಭಿಮಾನಿಯೊಬ್ಬ ಅವರ ಹೆಸರಿನಲ್ಲೇ ಫೇಕ್‌ಬುಕ್ ಖಾತೆಯನ್ನು ತೆರೆದು, ಅವರ ಎಲ್ಲ 12 ಕೃತಿಗಳ ಬಗ್ಗೆ ಓದುಗರ ಪ್ರಶ್ನೆಗಳಿಗೆ ತಾನೇ ಉತ್ತರಿಸುತ್ತಿದ್ದುದೂ ಇದೆ.

ಎಂಬತ್ತರ ವಯಸ್ಸಿನ ಅಭಿಮಾನಿ ಅಜ್ಜಿಯೊಬ್ಬಳು ಆಸ್ಪತ್ರೆಯಲ್ಲಿ ಇವರ ‘ಮೂಕಧಾತು’ ಕಾದಂಬರಿಯನ್ನು ಎದೆಯ ಮೇಲಿಟ್ಟುಕೊಂಡೇ ಕಣ್ಮುಚ್ಚಿದ್ದೂ ಇದೆ. ಕನ್ನಡ ಕಾದಂಬರಿಗಳನ್ನು ಓದುವುದನ್ನೇ ಬಿಟ್ಟಿದ್ದವರು ಕೆಎನ್‌ಜಿಯಿಂದಾಗಿ ಮತ್ತೆ ಓದತೊಡಗಿದ್ದಾರೆ. ಫಾರ್ಮಸಿ ಓದುತ್ತಿದ್ದ ಹುಡುಗಿಯೊಬ್ಬಳು ಇವರ ಕಾದಂಬರಿ ಯಿಂದಾಗಿಯೇ ತನ್ನ ಆಸಕ್ತಿಯನ್ನು ಬದಲಿಸಿಕೊಂಡು ಈಗ ಚರಿತ್ರೆಯಲ್ಲಿ ಓದು ಮುಂದುವರೆಸಿದ್ದಾಳೆ (ಪ್ರಾಚೀನ ಔಷಧ ಪರಂಪರೆ ಕುರಿತ ‘ಕಪಿಲಿಪಿ ಸಾರ’ವನ್ನು ಆಕೆ ಓದಿಲ್ಲವೆಂದು ಕಾಣುತ್ತದೆ).

ಚಲನಚಿತ್ರ ನಿರ್ಮಾಣದ ಹಾಗೆ ಗಣೇಶಯ್ಯ ಕಾದಂಬರಿ ರಚನೆಗೆಂದು ತಂಡ ಕಟ್ಟಿಕೊಂಡು ಓಡಾಡುತ್ತಾರೆ. ಮಡದಿ, ಮಗಳು ಮತ್ತು ಸಹೋದ್ಯೋಗಿ ಸಂಶೋಧಕರ ಪುಟ್ಟ ದಂಡೇ ಇವರೊಂದಿಗೆ ಸ್ಥಳ ಪರಿಶೀಲನೆ, ಪಾತ್ರ ನಿರ್ಣಯ, ಸಾಕ್ಷ್ಯ ಸಂಗ್ರಹ, ಕಥಾಹಂದರಗಳನ್ನು ನಿರ್ಧರಿಸುವಲ್ಲಿ ತೊಡಗುತ್ತದೆ. ಜಿಕೆವಿಕೆಯ ಕಾಫಿಹೌಸ್‌ನಲ್ಲಿ ಎಂಥದ್ದೋ ಅವಸರದ ಚರ್ಚೆ ನಡೆದಿದೆ ಎಂದರೆ ಹೊಸ ಕಾದಂಬರಿ ಅಚ್ಚಿಗೆ ಹೊರಡಲಿದೆ ಎಂದರ್ಥ.

ಓಟ ಗಣೇಶಯ್ಯನವರ ಕಾದಂಬರಿಗಳ ಸ್ಥಾಯೀ ಲಕ್ಷಣ. ಅವರ ನಿರೂಪಣಾ ಶೈಲಿಯ ಏಕತಾನತೆ ಬೆರಗು ಹುಟ್ಟಿಸುವಂಥದು. ಫೋಟೊ ಕಾಮಿಕ್ಸ್‌ನಂಥ, ಸಿನಿಮಾ ಚಿತ್ರಕಥೆಯಂಥ ಶೈಲಿ; ಪಾತ್ರಗಳೆಲ್ಲ ಒಣ ರೋಬಾಟ್‌ಗಳಂತಿರುತ್ತವೆ. ಅವಕ್ಕೆ ಗುಣ, ರೂಪ, ಬಣ್ಣ, ಬಟ್ಟೆಗಳ ವಿವರಣೆ ಇರುವುದಿಲ್ಲ. ದಿನಾಂಕ, ಗಂಟೆ, ನಿಮಿಷಗಳ ಲೆಕ್ಕದಲ್ಲಿ ಪಾತ್ರಗಳು ಧಾವಿಸುತ್ತಿರುತ್ತವೆ. ಅಂಥ ನಿರ್ಭಾವು-ಕತೆಯಲ್ಲೂ ಅಭಿಮಾನಿಗಳ ದಂಡನ್ನೇ ಕಟ್ಟಿಕೊಂಡ ಇವರು ಧಾವಂತದ ಈ ದಿನಗಳಲ್ಲಿ ತಮ್ಮ ಪಾತ್ರಗಳನ್ನೂ ಸದಾ ಓಡಿಸುತ್ತಲೇ ಇರುವುದರ ಹಿಂದೆ ಸೂಕ್ತ ಲೆಕ್ಕಾಚಾರವೂ ಇದ್ದಿರಲಿಕ್ಕೆ ಸಾಕು. ಅಲ್ಲಿ ಅಲ್ಪವಿರಾಮ ಎಂಬುದೇ ಇಲ್ಲ!
ಕನ್ನಡಕ್ಕೆ ದಕ್ಕಿದ ಅಪರೂಪದ ವಿಜ್ಞಾನ ಕಥನಕಾರ ಗಣೇಶಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT