ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಮೀರಿ ವಿವಾಹಕ್ಕೆ ಹವ್ಯಕ ಯುವಕರು!

ಮಹಿಳಾ ನಿಲಯದ ನಿವಾಸಿಗಳಿಗೆ ಬಾಳು ಕೊಡುವ ಔದಾರ್ಯ
Last Updated 20 ಮೇ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಶ್ರೀರಾಮನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ರಾಜ್ಯ ಮಹಿಳಾ ನಿಲಯದಲ್ಲಿನ ಯುವತಿಯರನ್ನು ಮದುವೆಯಾಗಲು ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮಗಳ ಹವ್ಯಕ ಸಮಾಜದ ಯುವಕರು ಮುಂದೆ ಬರುತ್ತಿದ್ದಾರೆ. ಜಾತಿ ಮೀರಿ ವಿವಾಹ ಬಂಧನಕ್ಕೆ ಒಳಗಾಗುವ ಔದಾರ್ಯ ಕಂಡುಬರುತ್ತಿದೆ.

ಪೋಷಕರನ್ನು ಕಳೆದುಕೊಂಡ ಅಥವಾ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾರಣದಿಂದ ಮನೆಬಿಟ್ಟು ಬಂದು ಬಾಲಮಂದಿರಕ್ಕೆ ಸೇರಿದವರಿಗೆ ಮಹಿಳಾ ನಿಲಯದಲ್ಲಿ ಆಶ್ರಯ ನೀಡಲಾಗುತ್ತದೆ. ರಾಜ್ಯದ ವಿವಿಧ ಬಾಲಮಂದಿರದಲ್ಲಿ ಬೆಳೆದು ಯೌವನಾವಸ್ಥೆಗೆ ಕಾಲಿರಿಸಿದವನ್ನು ಇಲ್ಲಿಗೆ ವರ್ಗಾವಣೆ ಮಾಡಲಾಗುತ್ತದೆ. ಇಲ್ಲಿಂದ ಇತರೆಡೆಗೂ ವರ್ಗಾಯಿಸಲಾಗುತ್ತದೆ. ಇಂಥ ನಿಲಯಗಳಲ್ಲಿರುವ ಅನಾಥ ಯುವತಿಯರನ್ನು ಮದುವೆಯಾಗಲು ಆಸಕ್ತಿ ತೋರುತ್ತಿರುವವರಲ್ಲಿ ಉತ್ತರ ಕನ್ನಡ ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ; ಅದರಲ್ಲೂ ಹವ್ಯಕ ಬ್ರಾಹ್ಮಣ ಸಮಾಜಕ್ಕೆ ಸೇರಿದವರು ಹೆಚ್ಚಿದ್ದಾರೆ.

`ಹವ್ಯಕ ಸಮಾಜದಲ್ಲಿ ಯುವತಿಯರ ಕೊರತೆ ಇದೆ. ಇರುವ ಹುಡುಗಿಯರು ನಗರ ಪ್ರದೇಶ ಅಥವಾ ವಿದೇಶಗಳಲ್ಲಿ ನೆಲೆಸಲು ಇಚ್ಛಿಸುತ್ತಾರೆ. ಉನ್ನತ ಹುದ್ದೆಯಲ್ಲಿರುವವರನ್ನು ಮದುವೆಯಾಗಲು ಬಯಸುತ್ತಾರೆ. ಹೀಗಾಗಿ ಕೃಷಿ ಮಾಡಿಕೊಂಡಿರುವ, ಮನೆಯಲ್ಲಿದ್ದುಕೊಂಡು ಸ್ವ ಉದ್ಯೋಗ ಕಂಡುಕೊಂಡಿರುವ ಹವ್ಯಕ ಯುವಕರು ಮಹಿಳಾ ನಿಲಯದ ನಿವಾಸಿಗಳನ್ನು ಮದುವೆಯಾಗಲು ಮುಂದೆ ಬರುವಂತಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಅನಾಥೆಯರಿಗೆ ಬಾಳು ಕೊಡುತ್ತಿದ್ದಾರೆ. ಯಲ್ಲಾಪುರ ತಾಲ್ಲೂಕಿನ ಹಲವು ಮಂದಿ ಇಲ್ಲಿಗೆ ಬಂದು ಮದುವೆಯಾಗಿದ್ದಾರೆ. ಆಗಾಗ ಅಲ್ಲಿನವರು ವಿಚಾರಿಸುತ್ತಿರುತ್ತಾರೆ' ಎನ್ನುತ್ತಾರೆ ಮಹಿಳಾ ನಿಲಯದ ಅಧೀಕ್ಷಕಿ ಗಂಗಮ್ಮ.

`ದಾವಣಗೆರೆಯಲ್ಲಿ 1977ರಲ್ಲಿ ಆರಂಭವಾದ ಮಹಿಳಾನಿಲಯದಲ್ಲಿ, 33 ನಿವಾಸಿಗಳು, 3 ಮಕ್ಕಳು ಆಶ್ರಯ ಪಡೆದಿದ್ದಾರೆ. ಸೋಮವಾರ ಇಬ್ಬರು ನಿವಾಸಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಬ್ರಾಹ್ಮಣ ಯುವಕರು ಮದುವೆಯಾದರು. ಇದರೊಂದಿಗೆ ಇಲ್ಲಿ ಒಟ್ಟು 23 ಮದುವೆಯಾದಂತಾಗಿದೆ. ಮದುವೆ ಮಾಡಿಕೊಂಡವರಲ್ಲಿ ಬಹುತೇಕ ಉತ್ತರ ಕನ್ನಡದ ಹವ್ಯಕ ಯುವಕರೇ ಇದ್ದಾರೆ. ನಿಲಯದಲ್ಲಿ ನಾಲ್ಕು ಯುವತಿಯರು ಮದುವೆ ವಯಸ್ಸಿಗೆ ಬಂದಿದ್ದಾರೆ. ಮುಂದಿನ ವರ್ಷ ಅವರಿಗೆ ಮದುವೆ ಮಾಡಲಾಗುವುದು' ಎಂದರು.

`ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಹವ್ಯಕ ಸಮಾಜದ ಯುವಕರು ಜಾತಿ, ಮೇಲು-ಕೀಳು ಬದಿಗಿಟ್ಟು ಮಹಿಳಾ ನಿಲಯದ ನಿವಾಸಿಗಳನ್ನು ಮದುವೆಯಾಗಲು ಆಸಕ್ತಿ ತೋರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ' ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ವಾಸುದೇವ.

`ನಿಲಯದ ನಿವಾಸಿಗಳನ್ನು ಮದುವೆ ಮಾಡಲು ಬಹಳ ಎಚ್ಚರ ವಹಿಸಲಾಗುತ್ತದೆ. ಬಯಸಿದವರಿಗೆಲ್ಲಾ ಮದುವೆ ಮಾಡುವುದಿಲ್ಲ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರಿಗೆ ಒಪ್ಪಿಗೆ ನೀಡಲಾಗುವುದು. ಪ್ರಸ್ತಾವಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಅಂಕಿತ ಹಾಕಿದ ನಂತರವಷ್ಟೇ ಪ್ರಕ್ರಿಯೆ ನಡೆಯುತ್ತದೆ. ಮದುವೆ  ಕಡ್ಡಾಯವಾಗಿ ನೋಂದಣಿ ಮಾಡಿಸಲಾಗುವುದು. ವಿಚ್ಛೇದಿತರಿಗೆ ಇಲ್ಲಿನ ಯುವತಿಯರನ್ನು ಮದುವೆಯಾಗಲು ಅವಕಾಶವಿಲ್ಲ' ಎಂದು ಸ್ಪಷ್ಟಪಡಿಸಿದರು.

`ಮದುವೆಯಾದ ಮಹಿಳಾ ನಿಲಯದವರಿಗೆ ಪ್ರೋತ್ಸಾಹಧನವಾಗಿ ಪ್ರಸ್ತುತ ರೂ15 ಸಾವಿರ ನೀಡಲಾಗುತ್ತಿದೆ. ಇದನ್ನು ರೂ1 ಲಕ್ಷಕ್ಕೆ ಏರಿಸುವಂತೆ ಕೋರಲಾಗಿದೆ' ಎಂದು ತಿಳಿಸಿದರು.

`ಹವ್ಯಕರಲ್ಲಿ ಯುವತಿಯರಿಗೆ ಕೊರತೆ ಕಂಡುಬಂದಿದೆ. ಹೀಗಾಗಿ, ನಾನು ಮಹಿಳಾನಿಲಯದ ಯುವತಿಯನ್ನು ಮದುವೆಯಾದೆ. ಪತ್ನಿ ಸುಮಾ, ಬಯಲು ಸೀಮೆಯವರಾದರೂ ನಮ್ಮ ಆಚಾರ, ಆಹಾರ ಸಂಸ್ಕೃತಿಗೆ ಒಗ್ಗಿದ್ದಾರೆ.

ನಮ್ಮೂರಿನ ಸುತ್ತಮುತ್ತ ಇಂಥ ಹಲವು ಉದಾಹರಣೆಗಳಿವೆ' ಎಂದು ಕಳೆದ ವರ್ಷ ಮದುವೆಯಾದ ಯಲ್ಲಾಪುರ ತಾಲ್ಲೂಕಿನ ಗಜಾನನ ಭಟ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT