ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿದ್ದಾಜಿದ್ದಿಯಲ್ಲಿ ಮಂಕಾದ ಜನಹಿತ

Last Updated 29 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದರೂ ಇಲ್ಲಿ ಶಾಸಕರಿಗೆ ಕರೆ ಹೋಗುತ್ತದೆ. ವೆಟರ್ನರಿ ಆಸ್ಪತ್ರೆಗೆ ಜಾನುವಾರುಗಳನ್ನು ಚಿಕಿತ್ಸೆಗೆ ಕರೆದೊಯ್ಯಲೂ ಶಾಸಕರ ಶಿಫಾರಸು ಪತ್ರ ಬೇಕು. ಪಕ್ಕದ ಮನೆಯವರು, ಎದುರು ಮನೆಯವರ ನಡುವಿನ ಕ್ಷುಲ್ಲಕ ಜಗಳ ಇತ್ಯರ್ಥವಾಗುವುದು ಪೊಲೀಸ್ ಠಾಣೆಯಲ್ಲಿ. ಒಂದು ಗುಂಪಿನವರು ಹಾಲಿ ಶಾಸಕರನ್ನು ಕರೆ ತಂದರೆ, ಅವರ ಎದುರಾಳಿ ಗುಂಪಿನವರು ಅವರ ಪ್ರತಿಸ್ಪರ್ಧಿಯಾದ ಮಾಜಿ ಶಾಸಕರಿಗೆ ಬುಲಾವ್ ನೀಡುತ್ತಾರೆ.

ಇಂಥದ್ದೊಂದು ವಿಚಿತ್ರ ರಾಜಕೀಯ ಸನ್ನಿವೇಶ ಕಾಣುವುದು ಉಕ್ಕಿನ ನಗರ ಭದ್ರಾವತಿಯಲ್ಲಿ. ಹಾಲಿ ಶಾಸಕರು, ಮಾಜಿ ಶಾಸಕರ ನಡುವಿನ ವೈಯಕ್ತಿಕ ದ್ವೇಷ, ಜಿದ್ದಾಜಿದ್ದಿಯಲ್ಲಿ ಇಡೀ ನಗರ ಹಾಗೂ ಭದ್ರಾವತಿ ಕ್ಷೇತ್ರ ಹೋಳಾಗಿದೆ. ಒಂದು ಶಾಸಕರ ಬಣ, ಮತ್ತೊಂದು ಮಾಜಿ ಶಾಸಕರದ್ದು. `ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು' ಎಂಬಂತೆ ಈ ಎರಡೂ ಬಣಗಳ ನಡುವಿನ ಸಂಘರ್ಷದ ರಾಜಕಾರಣದ ನಡುವೆ ಬಡವಾಗಿರುವುದು ಕ್ಷೇತ್ರ.

ಸರ್ಕಾರಿ ಸ್ವಾಮ್ಯದ ಎರಡು ಕಾರ್ಖಾನೆಗಳನ್ನು ಹೊಂದಿರುವ, ಹಿಂದೊಮ್ಮೆ ಕಾರ್ಮಿಕ ಶಕ್ತಿಯ ಪ್ರತೀಕವಾಗಿದ್ದ ಈ ನಗರದಲ್ಲಿ ಕಾರ್ಮಿಕರು ಈಗ ಬಲ ಕಳೆದುಕೊಂಡಿದ್ದಾರೆ. ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮತ್ತು ಕಾಗದ ಕಾರ್ಖಾನೆ ಎರಡೂ ನಷ್ಟದ ಹಾದಿಯಲ್ಲಿದ್ದು, ಇರುವ ಕಾರ್ಮಿಕರನ್ನು ಸಾಕಲು ಏದುಸಿರು ಬಿಡುತ್ತ ಸಾಗಿವೆ.

ಎಡವಿ ಬಿದ್ದರೆ ಸಿಗುವ ಶಿವಮೊಗ್ಗಕ್ಕೆ ಹೋಲಿಸಿದರೆ ಭದ್ರಾವತಿಯ ಪಾಡು ಕಣ್ಣಿಗೆ ರಾಚುತ್ತದೆ. ಶಿವಮೊಗ್ಗದ ಅವಳಿ ನಗರವಾದರೂ ತಾಲ್ಲೂಕು ಕೇಂದ್ರವೂ ಆಗಿರುವ ಭದ್ರಾವತಿಯಲ್ಲಿ ಸರ್ಕಾರಿ ಪದವಿ ಕಾಲೇಜು ಹೊರತುಪಡಿಸಿ ಬೇರೆ ಶಿಕ್ಷಣ ಸಂಸ್ಥೆಗಳೇ ಇಲ್ಲ. ಬಿಬಿಎಂ, ಎಂಸಿಎ, ಮೆಡಿಕಲ್, ಎಂಜನಿಯರಿಂಗ್, ಆಯುರ್ವೇದ ಶಿಕ್ಷಣ ಯಾವುದೇ ಇರಲಿ ಭದ್ರಾವತಿಯ ವಿದ್ಯಾರ್ಥಿಗಳಿಗೆ ಶಿವಮೊಗ್ಗದ ಯಾತ್ರೆ ಅನಿವಾರ್ಯ. ನಿತ್ಯವೂ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಾರೆ.

ನಗರದಲ್ಲಿ ಓಡಾಡಿದರೆ ಉತ್ತಮ ಆಸ್ಪತ್ರೆಗಳೂ ಕಾಣುವುದಿಲ್ಲ. 'ರಾತ್ರಿ 12 ಗಂಟೆ ನಂತರ ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಭದ್ರಾವತಿಯ ವೈದ್ಯರು ಚಿಕಿತ್ಸೆ ನೀಡಲು ಹಿಂದೆ ಮುಂದೆ ನೋಡುತ್ತಾರೆ. ಇಲ್ಲಿ ಅತ್ಯಾಧುನಿಕ ಸೌಲಭ್ಯದ ಒಂದೇ ಒಂದು ಆಸ್ಪತ್ರೆ ಇಲ್ಲ' ಎಂದು ವಿಷಾದ ವ್ಯಕ್ತಪಡಿಸುತ್ತಾರೆ ವಕೀಲ ಮಂಜುನಾಥ್.

ಕಳೆದ 20 ವರ್ಷಗಳಿಂದ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಈ ಬಣ ರಾಜಕೀಯದ ಚಿತ್ರಣ ಹಾಗೂ ಅಭಿವದ್ಧಿಯ ಓಟದಲ್ಲಿ ಭದ್ರಾವತಿ ಹಿಂದುಳಿದಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತದೆ.

1994ರಿಂದ 2004ರವರೆಗೆ ಹತ್ತು ವರ್ಷಗಳ ಕಾಲ ಭದ್ರಾವತಿ ಕ್ಷೇತ್ರ ಎಂ.ಜೆ. ಅಪ್ಪಾಜಿ ಅವರ ಹಿಡಿತದಲ್ಲಿತ್ತು. 2004ರಿಂದ ಎರಡು ಅವಧಿಗೆ ಸಂಗಮೇಶ್ವರ ಶಾಸಕರಾಗಿದ್ದಾರೆ. 1999ರ ಚುನಾವಣೆಯ ನಂತರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಅಪ್ಪಾಜಿ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಸೀಟು ಪಡೆಯುವಲ್ಲಿ ಸಫಲರಾದರು. ಆಗ ಕಾಂಗ್ರೆಸ್‌ನಿಂದ ಹೊರಬಿದ್ದ ಬಿ.ಕೆ. ಸಂಗಮೇಶ್ವರ ಪಕ್ಷೇತರರಾಗಿ ಸ್ಪರ್ಧಿಸಿ 18,000 ಮತಗಳ ಅಂತರದಿಂದ ಅಪ್ಪಾಜಿ ಅವರನ್ನು ಸೋಲಿಸಿದ್ದರು.

2008ರ ಚುನಾವಣೆಯ ಹೊತ್ತಿಗೆ ಸಂಗಮೇಶ್ವರ ಕಾಂಗ್ರೆಸ್ ಸೇರಿ ಆ ಪಕ್ಷದ ಸೀಟು ಗಿಟ್ಟಿಸಿಕೊಂಡರು. ಜೆ.ಡಿ.ಎಸ್.ನಿಂದ ಸ್ಪರ್ಧಿಸಿದ್ದ ಅಪ್ಪಾಜಿ ಅವರನ್ನು ಕೆಲವೇ ಮತಗಳ ಅಂತರದಿಂದ ಪರಾಜಿತಗೊಳಿಸಿದರು.

ಒಂದು ಚುನಾವಣೆಯಲ್ಲಿ ಅಪ್ಪಾಜಿ ಮೇಲುಗೈ ಸಾಧಿಸಿದರೆ ಮುಂದಿನ ಚುನಾವಣೆಯಲ್ಲಿ ಸಂಗಮೇಶ್ವರ ಪ್ರಭಾವ ಗಾಢವಾಗಿರುತ್ತದೆ. 2008ರ ಚುನಾವಣೆಯಲ್ಲಿ ಸಂಗಮೇಶ್ವರ ವಿರುದ್ಧ ಆಡಳಿತ ವಿರೋಧಿ ಅಲೆ ದಟ್ಟವಾಗಿದ್ದರೂ ಅವರು ಜಯ ಗಳಿಸಿದ್ದರು. ಆದರೆ, ಆಗ ಗೆಲುವಿನ ಅಂತರ 487 ಮತಗಳಿಗೆ ಕುಗ್ಗಿದ್ದು ಗಮನಾರ್ಹ. ಈ ಕ್ಷೇತ್ರದ ಜನರಿಗೆ ಪಕ್ಷ ನಿಷ್ಠೆ, ತತ್ವ-ಸಿದ್ಧಾಂತಗಳಿಗಿಂತ ವ್ಯಕ್ತಿ ನಿಷ್ಠೆಯೇ ಮುಖ್ಯ.

ಅಪ್ಪಾಜಿ- ಸಂಗಮೇಶ್ವರ ಜಿದ್ದಾಜಿದ್ದಿ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಿ. ಇಂ. ಇಬ್ರಾಹಿಂ ರಂಗ ಪ್ರವೇಶ ಚುನಾವಣೆಗೆ ಹೊಸ ಖದರ್ ಕೊಟ್ಟಿದೆ.

ಈ ಬಾರಿ 10 ವರ್ಷಗಳಿಂದ ಶಾಸಕರಾಗಿದ್ದ ಸಂಗಮೇಶ್ವರಗಿಂತ ಅಪ್ಪಾಜಿ ಅವರತ್ತ ಮತದಾರರ ಒಲವು ಎದ್ದು ಕಾಣುತ್ತಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದು ಅದಕ್ಕೆ ಸಾಕ್ಷಿ. 2009ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು, ಇತ್ತೀಚೆಗೆ ಬಿ. ಎಸ್. ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದು ಹಾಗೂ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಸಿ. ಎಂ. ಇಬ್ರಾಹಿಂ ತಂದ ಒತ್ತಡದಿಂದಾಗಿ ಸಂಗಮೇಶ್ವರ್‌ಗೆ ಕಾಂಗ್ರೆಸ್ ಟಿಕೆಟ್ ತಪ್ಪಿತು. ಅವರೀಗ ಪಕ್ಷೇತರ ಅಭ್ಯರ್ಥಿ.

ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು ಅವರ ವಿರುದ್ಧದ ಅಲೆ ಈಗ ಅನುಕಂಪವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ.
ಇಬ್ರಾಹಿಂ, ಅಪ್ಪಾಜಿ ಹಾಗೂ ಸಂಗಮೇಶ್ವರ ನಡುವಿನ ತ್ರಿಕೋನ ಸ್ಪರ್ಧೆ ಈಗ ತೀವ್ರ ಕುತೂಹಲ ಕೆರಳಿಸಿದೆ. ಅಪ್ಪಾಜಿ ಮತ್ತು ಸಂಗಮೇಶ್ವರ ಎಂದಿನಂತೆ ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ.

ಇದೇ ಊರಿನವರಾದರೂ ಎಂದೂ ನೇರವಾಗಿ ಚುನಾವಣೆಗೆ ಇಳಿಯದಿದ್ದ ಸಿ.ಎಂ. ಇಬ್ರಾಹಿಂ ಮಾತ್ರ ಪ್ರಚಾರ ಸಭೆಗಳಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ತಮ್ಮ ವಿಶಿಷ್ಟ ಮಾತಿನ ಮೋಡಿಗೆ ಹೆಸರಾಗಿರುವ ಅವರು, ಭದ್ರಾವತಿಯಲ್ಲಿ ಹಲವು ವರ್ಷಗಳಿಂದ ಬೇಡಿಕೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವುದಾಗಿ, ಬೆಂಗಳೂರಿನಲ್ಲಿ ಇರುವ ತಮ್ಮದೇ ಶಿಕ್ಷಣ ಸಂಸ್ಥೆಗಳನ್ನು ಇಲ್ಲಿಗೆ ತರುವುದಾಗಿ ಹೇಳುತ್ತಿದ್ದಾರೆ.

ನಷ್ಟದಲ್ಲಿರುವ ವಿಎಸ್‌ಐಎಲ್ ಮತ್ತು ಎಂಪಿಎಂಗೆ ಪುನಶ್ಚೇತನ ಕಲ್ಪಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮಾತನಾಡುತ್ತಿದ್ದಾರೆ.

ಹತ್ತು ವರ್ಷಗಳ ಕಾಲ ವಿಎಸ್‌ಐಎಲ್ (ಉಕ್ಕಿನ ಕಾರ್ಖಾನೆ) ಕಾರ್ಮಿಕ ನಾಯಕರಾಗಿದ್ದ ಅಪ್ಪಾಜಿ ಆ ಮೂಲಕ ರಾಜಕೀಯಕ್ಕೆ ಬಂದವರು. ಮೂಲತಃ ವ್ಯಾಪಾರಸ್ಥರಾದ ಸಂಗಮೇಶ್ವರ್‌ಗೆ ಆ ಸಮುದಾಯದ ಬೆಂಬಲವಿದೆ. ಆದರೆ, ಕಾಗದದ ಕಾರ್ಖಾನೆ ಕಾರ್ಮಿಕರೆಲ್ಲ ಈ ಬಾರಿ ತಮ್ಮ ಕಷ್ಟಕಾಲದಲ್ಲಿ ನೆರವಾದ ಸಂಗಮೇಶ್ವರ ಬೆಂಬಲಿಸುವ ಮಾತನಾಡುತ್ತಿದ್ದಾರೆ.

ಇಬ್ರಾಹಿಂ ಆಯ್ಕೆಯಾದಲ್ಲಿ ಕ್ಷೇತ್ರಕ್ಕೆ ಶಿಕ್ಷಣ ಸಂಸ್ಥೆಗಳು ಬರಬಹುದು. ದೆಹಲಿ ಮಟ್ಟದಲ್ಲಿ ಪ್ರಭಾವ ಬೀರಿ ಕಾರ್ಖಾನೆಗಳಿಗೆ ಹೂಡಿಕೆಯನ್ನು ತರಬಹುದು. ಈ ಕ್ಷೇತ್ರಕ್ಕೂ ಬದಲಾವಣೆ ಬೇಕಿದೆ. ಆದರೆ, ಅಪ್ಪಾಜಿ ಮತ್ತು ಸಂಗಮೇಶ್ವರ ಬೆಂಬಲಿಗರು `ಇಬ್ರಾಹಿಂ ಆಯ್ಕೆಯಾದಲ್ಲಿ ಕ್ಷೇತ್ರದಲ್ಲಿ ಉಳಿಯುವುದಿಲ್ಲ. ಜನರ ಕೈಗೆ ಸಿಗುವುದಿಲ್ಲ' ಎನ್ನುವಂತೆ  ಬಿಂಬಿಸುತ್ತಿದ್ದಾರೆ ಎನ್ನುತ್ತಾರೆ ವಕೀಲ ಸೈಯದ್ ನಿಯಾಜ್.

ಎರಡು ದಶಕಗಳ ಬಣ ರಾಜಕೀಯದಲ್ಲಿ ನಲುಗಿ, ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಭದ್ರಾವತಿಗೆ ಖಂಡಿತವಾಗಿ ಪರಿವರ್ತನೆ ಬೇಕಾಗಿದೆ. ಆದರೆ, ಶಾಸಕರ ಮೇಲೆ ಅತಿ ಅವಲಂಬಿತವಾಗಿರುವ ಮತ್ತು ಸಣ್ಣ,ಪುಟ್ಟ ಜಗಳವನ್ನೂ ಶಾಸಕರೇ ಇತ್ಯರ್ಥಪಡಿಸಲಿ ಎಂದು ಬಯಸುವ ಮತದಾರರು ಇಬ್ರಾಹಿಂ ಅವರಂತಹ `ದೂರ'ದ ನಾಯಕನನ್ನು ಆರಿಸಿ ತರುತ್ತಾರೆಯೇ ಎಂಬ ಪ್ರಶ್ನೆಗೆ ಮೇ 8ರಂದು ಉತ್ತರ ದೊರಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT