ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರಲ್ಲಿಯೇ ಕ್ರೀಡಾಂಗಣದ ಕೊರತೆ

Last Updated 2 ಸೆಪ್ಟೆಂಬರ್ 2014, 11:27 IST
ಅಕ್ಷರ ಗಾತ್ರ

ರಾಮನಗರ:  ಜಿಲ್ಲೆಯಾಗಿ ಎಂಟನೇ ವರ್ಷಕ್ಕೆ ಕಾಲಿ­ಟ್ಟಿದ್ದರೂ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂ­ಗಣ ಇಲ್ಲ ಎಂಬ ಕೊರಗು ಇಲ್ಲಿನ ಜನರನ್ನು ಬಹುವಾಗಿ ಕಾಡು-­ತ್ತಿದೆ. ಈ ಕಾರಣದಿಂದಾಗಿಯೇ ಜಿಲ್ಲೆ­ಯ ಕ್ರೀಡಾ ಪ್ರತಿಭೆಗಳು ನರಳುವಂ­ತಾಗಿವೆ.

ಹಾಲಿ ಇರುವ ಕ್ರೀಡಾಂಗಣದಲ್ಲಿ ಕ್ರೀಡಾಪಟು­ಗಳು ಮತ್ತು ಕ್ರೀಡಾ­ಕೂಟಗಳಿಗೆ ಸೂಕ್ತ ಸೌಲಭ್ಯ, ಸೌಕರ್ಯ ಇಲ್ಲದ ಕಾರಣಕ್ಕೆ ಕೆಲ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಆಡಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಮತ್ತು ಕಾಲೇಜುಗಳ ತಾಲ್ಲೂ­ಕು, ಜಿಲ್ಲಾ ಮಟ್ಟದ ಕ್ರೀಡಾ­ಕೂಟಗಳನ್ನು ಆಯೋಜಿ­ಸುವ ಶಿಕ್ಷಣ ಇಲಾಖೆ ಹಾಗೂ ಯುವ ಸಬ­ಲೀಕರಣ ಮತ್ತು ಕ್ರೀಡಾ ಇಲಾಖೆ ಹರಸಾಹಸ ಪಡುತ್ತಿವೆ.

ಜಿಲ್ಲೆಯಲ್ಲಿ ಹಾಕಿ, ಷಟಲ್‌ ಬ್ಯಾಡ್ಮಿಂ­ಟನ್‌, ಈಜು ಕ್ರೀಡೆಗಳನ್ನು ಆಡಲು ಸೂಕ್ತ ಸ್ಥಳಾವ­ಕಾಶವೇ ಇಲ್ಲವಾಗಿದೆ. ಇದ­ಕ್ಕಾಗಿ ಖಾಸಗಿ ಕ್ಲಬ್‌ ಮತ್ತು ಖಾಸಗಿ ಕಾಲೇಜುಗಳನ್ನು ಅವಲಂಬಿಸ­ಬೇಕಾದ ಅನಿವಾರ್ಯತೆ ಎದುರಾಗಿದೆ.

ಸೂಕ್ತ ಕ್ರೀಡಾಂಗಣ ಇಲ್ಲದ ಕಾರಣಕ್ಕೆ ಜಿಲ್ಲೆಯಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟ­ದ­ಲ್ಲಿ ಹಾಕಿ, ಬ್ಯಾಸ್ಕೆಟ್‌ ಬಾಲ್‌ ಮತ್ತು ಈಜು ಸ್ಪರ್ಧೆಗಳೇ ನಡೆಯುತ್ತಿಲ್ಲ !!

ಅನುಮತಿ ಪಡೆಯುವುದೇ ಕಷ್ಟ: ಇನ್ನು ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಖಾಸಗಿ ಸಂಸ್ಥೆ ಅಥವಾ ಕ್ಲಬ್‌ಗಳಲ್ಲಿ ಹಾಗೂ ಕೆಲ ಎಂಜಿನಿಯರಿಂಗ್‌ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಷಟಲ್‌ ಬ್ಯಾಡ್ಮಿಂಟನ್‌ಗೆ ಒಳಾಂಗಣ ಕ್ರೀಡಾಂ­ಗಣ ಇದೆ. ಆದರೆ ಅಲ್ಲಿ ಆಡು­ವುದಕ್ಕೆ ಅನುಮತಿ ಪಡೆಯುವುದೇ ಶಿಕ್ಷಣ ಇಲಾಖೆ ಮತ್ತು ಯುವ ಸಬಲೀ­ಕರಣ ಮತ್ತು ಕ್ರೀಡಾ ಇಲಾಖೆಗೆ ತಲೆ­ನೋವಾಗಿ ಪರಿಣಮಿಸಿದೆ.
ಹಾಗಾಗಿ ಜಿಲ್ಲಾ ಕೇಂದ್ರದಲ್ಲಿ ನಡೆ­ಯುವ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟ­ದಲ್ಲಿ ಷಟಲ್‌ ಬ್ಯಾಡ್ಮಿಂ­ಟನ್‌ ಪಂದ್ಯಾವಳಿಗಳನ್ನು ಹೊರಾಂ­ಗಣದಲ್ಲಿಯೇ ಆಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಾಂಶಗಳು
*ಈಜು ಕೊಳ ಮತ್ತು ಲಾನ್‌ ಟೆನಿಸ್‌ ಅಂಕಣವೂ ಇಲ್ಲ
*ಕೆಲ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಆಡಿಸಲಾಗದಂತಹ ಪರಿಸ್ಥಿತಿ ನಿರ್ಮಾಣ
*ಹಾಕಿ, ಷಟಲ್‌ ಬ್ಯಾಡ್ಮಿಂಟನ್‌, ಕರಾಟೆ, ಜೂಡೊಗಿಲ್ಲ ಸ್ಥಳಾವಕಾಶ

ಜಿಲ್ಲೆಯಲ್ಲಿ ಶಾಲಾ ಹಂತದಲ್ಲಿ ಫುಟ್‌­ಬಾಲ್‌ ಆಡುವ ತಂಡಗಳು ಕಡಿಮೆ ಇವೆ. ಹಾಗಾಗಿ ಕೆಲ ತಾಲ್ಲೂಕು ಮಟ್ಟದಲ್ಲಿ ಫುಟ್‌ಬಾಲ್‌ ಪಂದ್ಯ­ಗಳೇ ನಡೆಯುವುದಿಲ್ಲ. ಹೇಗಾದರೂ ಮಾಡಿ ತಾಲ್ಲೂಕಿನಿಂದ ಒಂದೊಂದು ತಂಡ­ವನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾ­ಗು­ತ್ತದೆ. ಜಿಲ್ಲಾ ಮಟ್ಟದ ಫುಟ್‌ಬಾಲ್‌ ಪಂದ್ಯಗಳನ್ನು ಆಡಿಸಲು ಮೈದಾನ­ಕ್ಕಾಗಿ ಖಾಸಗಿ ಎಂಜಿನಿಯರ್‌ ಕಾಲೇಜುಗಳನ್ನು ಕೋರಬೇಕಾದ ದುಸ್ಥಿತಿ ಇದೆ.
ಅಧಿಕಾರಿ ಹೇಳುವುದೇನು : ‘ಜಿಲ್ಲಾ ಕೇಂದ್ರದಲ್ಲಿ ಕ್ರೀಡೆಗೆ ಸೂಕ್ತ ಸೌಲಭ್ಯಗಳು ಇಲ್ಲವಾಗಿದೆ. ಆಟದ ಮೈದಾನ, ಒಳಾಂ­ಗಣ ಮತ್ತು ಹೊರಾಂಗಣ ಕ್ರೀಡಾಂ­­ಗಣ ಇಲ್ಲದ ಕಾರಣಕ್ಕೆ ಕ್ರೀಡಾಪಟುಗಳು ತೊಂದರೆ ಅನುಭವಿಸುತ್ತಿದ್ದಾರೆ.

ಸೂಕ್ತ ತರಬೇತಿ ಪಡೆಯುವಲ್ಲಿಯೂ ವಿಫಲ­ರಾ­­ಗು­ತ್ತಿದ್ದಾರೆ. ಕ್ರೀಡಾ­ಕೂಟಗಳನ್ನು ಆಯೋ­ಜನೆ ಮಾಡುವಾ­ಗಲೂ ಸಾಕಷ್ಟು ಕಷ್ಟ ಎದುರಾಗುತ್ತಿದೆ’ ಎಂದು ಜಿಲ್ಲಾ ಕ್ರೀಡಾ ಅಧೀಕ್ಷಕ ನಾಗರಾಜು  ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊರಾಂಗಣದಲ್ಲಿ ಷಟಲ್‌ ಪಂದ್ಯ’
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಷೆಟಲ್‌ ಬ್ಯಾಡ್ಮಿಂಟನ್‌ನಲ್ಲಿ ಭಾರ­ತೀಯ ಕ್ರೀಡಾಪಟುಗಳು ಮಿಂಚುತ್ತಿದ್ದರೆ, ಬೆಂಗಳೂರಿಗೆ ಕೂಗಳತೆ ದೂರ­ದಲ್ಲಿಯೇ ಇರುವ ರಾಮನಗರದ ಶಾಲಾ ಮಕ್ಕಳಿಗೆ ಒಳಾಂಗಣ ಕ್ರೀಡಾಂಗಣದ ಕೊರತೆ ತೀವ್ರವಾಗಿ ಕಾಡುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಒಂದು ಒಳಾಂಗಣ ಕ್ರೀಡಾಂಗಣ ಇದೆಯಾದರು ಅದು ಖಾಸಗಿಯದ್ದಾಗಿದೆ. ಅಲ್ಲಿ ಮರದ ಹಾಸಿನ ಅಂಕ­ಣಗಳಿದ್ದು, ಆಡಲು ‘ರಬ್ಬರ್‌ ಶೂ’ಗಳನ್ನು ಹಾಕಿಕೊಳ್ಳಲೇಬೇಕು ಎಂಬ ಷರತ್ತು ಇದೆ. ಜಿಲ್ಲೆಯ ಗ್ರಾಮೀಣ ಭಾಗದ ಕ್ರೀಡಾಪಟುಗಳು ‘ರಬ್ಬರ್‌ ಶೂ’­ಗಳನ್ನು ಖರೀದಿಸಿ, ಆಡುವುದು ದುಬಾರಿಯಾಗುತ್ತದೆ. ಹಾಗಾಗಿ ಜಿಲ್ಲಾ ಕೇಂದ್ರ­ದಲ್ಲಿ ನಡೆಯುವ ಶಾಲಾ ಮಟ್ಟದ ತಾಲ್ಲೂಕು ಮತ್ತು ಜಿಲ್ಲಾ ಷಟಲ್‌ ಪಂದ್ಯಗಳನ್ನು ಹೊರಾಂಗಣದಲ್ಲಿಯೇ ಆಡಿಸಲಾಗುತ್ತದೆ ಎಂದು ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಸೌಲಭ್ಯಗಳಿಲ್ಲದ ಕಾರ­ಣಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆ­ಸುವ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾ­ಕೂಟಗಳಲ್ಲಿ ಹಾಕಿ, ಬ್ಯಾಸ್ಕೆ­ಟ್‌ಬಾಲ್‌, ಈಜು, ಲಾನ್‌ ಟೆನಿಸ್‌, ಕರಾಟೆ, ಜೂಡೊ ಪಂದ್ಯಗಳು ನಡೆ­ಯುವುದೇ ಇಲ್ಲ. ಈ ಪಂದ್ಯಗಳಿಗೆ ತಂಡ­ಗಳು ಬರುವುದೂ ಇಲ್ಲ. ಬಂದರೆ ಆಡಿಸಲು ಸೂಕ್ತ ವ್ಯವಸ್ಥೆಯೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪ­ಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹೊರತು ಪಡಿಸಿ ನಡೆಯುವ ಪೈಕಾ, ದಸರಾ ಮತ್ತಿತರ ಕ್ರೀಡಾಕೂಟಗಳ ಸಂದ­ರ್ಭದಲ್ಲಿಯೂ ಈ ಪಂದ್ಯಗಳಿಗೆ ತಂಡಗಳ ಕೊರತೆ ಇರುತ್ತದೆ. ಒಂದೊಂದು ತಂಡ ಬಂದರೆ ಅವು­ಗ­ಳನ್ನೇ ವಿಭಾ­ಗೀಯ ಮಟ್ಟದ ಕ್ರೀಡಾ­ಕೂಟಕ್ಕೆ ಕಳುಹಿಸಲಾ­ಗುತ್ತದೆ. ಎರಡು–ಮೂರು ತಂಡಗಳು ಬಂದರೆ ಖಾಸಗಿ ಸಂಸ್ಥೆಗಳನ್ನು ಪರಿ ಪರಿಯಾಗಿ ಕೋರಿ­ಕೊಂಡು ಸ್ಪರ್ಧೆಗಳನ್ನು ಆಯೋಜಿಸಬೇ­ಕಾದ ಅನಿವಾರ್ಯತೆ ಇದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾ­ಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT