ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತ ಸೂಚ್ಯಂಕ: ಮುಂಚೂಣಿಯಲ್ಲಿ ಭಾರತ

ಸುದ್ದಿ ಹಿನ್ನೆಲೆ...
Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಆಧುನಿಕ ಸಮಾಜ­ದಲ್ಲಿಯೂ ಜೀತ  ಪದ್ಧತಿ ಚಾಲ್ತಿ­ಯಲ್ಲಿದ್ದು, ಭಾರ­ತದಲ್ಲಿ 1.40 ಕೋಟಿ­ಗಳಷ್ಟು ಜನರು ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿ­ದ್ದಾರೆ ಎಂದು ವಿಶ್ವದಾದ್ಯಂತ ನಡೆಸಿರುವ ಅಧ್ಯ­ಯನ ವರದಿಯೊಂದು ತಿಳಿಸಿದೆ.

ಭಾರತವು ಜಾಗತಿಕ ಜೀತ ಸೂಚ್ಯಂಕ­ದಲ್ಲಿ 5ನೆ ಮತ್ತು ಜನಸಂಖ್ಯೆ ಲೆಕ್ಕದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಆಧುನಿಕ ಜೀತಪದ್ಧತಿ ಕೊನೆಗೊಳಿ­ಸಲು ಶ್ರಮಿಸುತ್ತಿರುವ ಜಾಗತಿಕ ಮಾನವ ಹಕ್ಕುಗಳ ಸಂಘಟನೆ ‘ವಾಕ್ ಫ್ರೀ ಫೌಂಡೇಷನ್', ವಿಶ್ವದಾದ್ಯಂತ 167 ದೇಶಗಳನ್ನು ಲೆಕ್ಕಕ್ಕೆ ತೆಗೆದು­ಕೊಂಡು ನಡೆಸಿರುವ 2014ರ ‘ಜಾಗ­ತಿಕ ಜೀತ ಸೂಚ್ಯಂಕ’ದಲ್ಲಿ ಭಾರತವು ಮುಂಚೂಣಿ­ಯಲ್ಲಿ ಇದೆ ಎಂದು ತಿಳಿಸಿದೆ. ವರದಿ ಪ್ರಕಾರ ವಿಶ್ವದಾದ್ಯಂತ 3.60ಕೋಟಿ­ಗಳಷ್ಟು ಜನರು ಹಲವಾರು ಬಗೆಯ ಆಧುನಿಕ ಗುಲಾಮ­ಗಿರಿಗೆ ಒಳಪಟ್ಟಿ­ದ್ದಾರೆ.  ಇವ­ರಲ್ಲಿ ಪುರುಷರು, ಸ್ತ್ರೀಯರು ಮತ್ತು ಮಕ್ಕಳೂ ಇದ್ದಾರೆ. ಅಂತರ­ರಾಷ್ಟ್ರೀಯ ಸಂಘಟನೆ­ಗಳು, ಚಿಂತಕರ ಚಾವಡಿ ಮತ್ತು ಶೈಕ್ಷಣಿಕ ಸಂಸ್ಥೆಗಳ ನೆರವಿನಿಂದ ಈ ಅಧ್ಯಯನ ವರದಿ ಸಿದ್ಧಪಡಿ­ಸಲಾಗಿದೆ.

ಜನಸಂಖ್ಯೆ ಆಧರಿಸಿ ಲೆಕ್ಕ ಹಾಕಿರುವ ಜೀತಪದ್ಧತಿ ಪ್ರಕಾರ, ಮೌರಿ­ಟಾನಿಯಾ (ಶೇ 4), ಉಜ್ಬೆಕಿಸ್ತಾನ (ಶೇ 3.8), ಹೈತಿ (ಶೇ2.3) ಮತ್ತು ಕತಾರ್ (ಶೇ1.4) ದೇಶಗಳು ಮುಂಚೂಣಿ­ಯಲ್ಲಿ ಇವೆ.  ಭಾರತ ನಂತರದ ಸ್ಥಾನ­ದಲ್ಲಿ ಚೀನಾ (32 ಲಕ್ಷ) ಮತ್ತು ಪಾಕಿಸ್ತಾನ­ದಲ್ಲಿ 21 ಲಕ್ಷ ಜೀತದಾಳು­ಗಳಿದ್ದಾರೆ.

ಯೂರೋಪ್‌ನ ಮೋಲ್ಡಾವಾ (ಶೇ0.9)­ ಮತ್ತು ರಷ್ಯಾ (ಶೇ0.7) ಕ್ರಮವಾಗಿ 15 ಮತ್ತು 16ನೆ ಸ್ಥಾನದಲ್ಲಿ ಇವೆ. ವಿಶ್ವದಾದ್ಯಂತ ಅಸ್ತಿತ್ವದಲ್ಲಿ ಇರುವ ಜೀತಪದ್ಧತಿ­ ವ್ಯವಸ್ಥೆಯಲ್ಲಿ  ಭಾರತ ಮತ್ತು ಪಾಕಿಸ್ತಾನದ ಪಾಲು ಶೇ 45-­ರಷ್ಟಿದೆ. ಈ ಎರಡೂ ದೇಶಗಳಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಶೇ1.14 ಮತ್ತು ಪಾಕಿಸ್ತಾನದಲ್ಲಿ ಶೇ 1.13­ರಷ್ಟು ಜನರು ಜೀತಪದ್ಧತಿಗೆ ಒಳಪಟ್ಟಿದ್ದಾರೆ.
ಏಷ್ಯಾದ ದೇಶಗಳಲ್ಲಿ 2.35 ಕೋಟಿ­ಗಳಷ್ಟು ಜನರು ಆಧುನಿಕ ಜೀತ­ಪದ್ಧತಿಯಡಿ ಬದುಕುತ್ತಿದ್ದಾರೆ. ಇದು ವಿಶ್ವದಲ್ಲಿನ ಜೀತಪದ್ಧತಿಯ ಎರಡು ಮೂರಾಂಶದಷ್ಟಿದೆ.

ಆಧುನಿಕತೆಯ ಸ್ವರೂಪ
ಮಾನವ ಕಳ್ಳಸಾಗಣೆ, ಸಾಲದ ಜೀತ, ಒತ್ತಾಯದ ದುಡಿಮೆ, ಹೇರಿಕೆಯ ಅಥವಾ ದಾಸ್ಯದ ಮದುವೆ ಮತ್ತು ವಾಣಿಜ್ಯ ಉದ್ದೇಶದ ಲೈಂಗಿಕ ಶೋಷಣೆ ಮತ್ತಿತರ ರೂಪದಲ್ಲಿ ಆಧುನಿಕ ಜೀತ ಪದ್ಧತಿ ವಿಶ್ವದ ಬಹುತೇಕ ದೇಶಗಳಲ್ಲಿ ಜಾರಿಯಲ್ಲಿ ಇದೆ.

ಏನಿದು ಜೀತಪದ್ಧತಿ?
ವಿಶ್ವದ ಎಲ್ಲ ದೇಶಗಳಲ್ಲಿ ಜೀತ­ಪದ್ಧತಿಯು ಮೊದಲಿನಿಂದಲೂ ಚಾಲ್ತಿ­ಯಲ್ಲಿ ಇದೆ. ಕಾಲ ಬದಲಾದಂತೆ ಅದರ ಸ್ವರೂಪ ಬದಲಾಗಿದೆಯಷ್ಟೆ.

ಬಡವರು, ಭೂರಹಿತ ಕೃಷಿ ಕಾರ್ಮಿಕರು  ಜಮೀನ್ದಾರರು ಮತ್ತು ಉಳ್ಳವರಿಂದ ಸಾಲ ಪಡೆದು ಅವರ ಹೊಲ ಮನೆಗಳಲ್ಲಿ ಜೀವಮಾನಪೂರ್ತಿ ಅವರ ಅಡಿ­ಯಾಳಾಗಿ ಬದುಕು­ತ್ತಿದ್ದರು. ಜೀತಕ್ಕೆ ಇದ್ದ­ವ­ರನ್ನು ಶ್ರೀಮಂತರು ತಮಗೆ ಇಷ್ಟಬಂದಂತೆ ದುಡಿಸಿಕೊಂಡು ನಿರ್ದಯ­ವಾಗಿ ಶೋಷಿಸುತ್ತಿದ್ದರು. ಜೀತಕ್ಕೆ ಇದ್ದ­ವರ ಶ್ರಮಕ್ಕೆ ಸೂಕ್ತ ಕೂಲಿ ದೊರೆಯು­ತ್ತಿ­ರಲಿಲ್ಲ. ಇದರಿಂದ ಅವನು ಮತ್ತೆ ಮತ್ತೆ ಸಾಲ ಪಡೆ­ದು­ಕೊಳ್ಳುತ್ತ ನಿರಂತರ ಸಾಲಗಾರ­ನಾಗಿರುತ್ತಿದ್ದ. ವ್ಯಕ್ತಿಯೊಬ್ಬ ಪಡೆದ ಸಾಲವು ಅವನ ಜೀವನ­ಪರ್ಯಂತವೂ ತೀರುತ್ತಿರಲಿಲ್ಲ. ಅವನೊ­ಡನೆ ಅವನ ಕುಟುಂಬದ ಜನರೂ ಒಡೆಯರ ಮನೆಯಲ್ಲಿ ಅತಿ ಕಡಿಮೆ ಕೂಲಿಗೆ ಕೆಲಸ ಮಾಡುವ ಪರಿಸ್ಥಿತಿ ಇರುತ್ತಿತ್ತು.

ಈ ಅಮಾನವೀಯ ವ್ಯವಸ್ಥೆಯನ್ನು ನಿಷೇಧಿಸಿ ಸರ್ಕಾರ ಕಾಯ್ದೆ ಜಾರಿಗೆ ಮಾಡಿದ್ದರೂ ಗ್ರಾಮೀಣ ಭಾಗಗಳಲ್ಲಿ ಈ ಪದ್ಧತಿ ಇನ್ನೂ ಜೀವಂತ ಇದೆ. ಕಾಲ ಬದಲಾದಂತೆ ಅದರ ಸ್ವರೂಪವೂ ಬದಲಾಗಿದೆಯಷ್ಟೆ.

ನಿವಾರಣೆ ಹೇಗೆ
ಸಮರ್ಪಕ ಮಾಹಿತಿ ಆಧರಿಸಿ ಸರ್ಕಾರ, ನಾಗರಿಕ ಸಮಾಜ ಜತೆಯಾಗಿ ಜೀತಪದ್ಧತಿಗೆ ಒಳಗಾದವರನ್ನು ಜೀತಮುಕ್ತಗೊಳಿಸಬೇಕಾಗಿದೆ.

ಅಸ್ತಿತ್ವ ಸಾಬೀತು
ಜೀತ ಪದ್ಧತಿಯು ಗತ­ಕಾಲದ ಕಳಂಕ. ಯುದ್ಧ­ಗ್ರಸ್ತ ಮತ್ತು ಬಡತನ­ದಿಂದ ಬಳಲು­ತ್ತಿರುವ ದೇಶ­ಗಳಲ್ಲಿ ಮಾತ್ರ ಜೀತ ಪದ್ಧತಿ ಇದೆ ಎನ್ನುವ ಭಾವನೆ ತಪ್ಪು. ಪ್ರತಿಯೊಂದು ದೇಶದಲ್ಲಿಯೂ  ಈ ಆಧುನಿಕ ಜೀತಪದ್ಧತಿಯು ಒಂದಲ್ಲ ಒಂದು ರೂಪದಲ್ಲಿ ಅಸ್ತಿತ್ವ­ದಲ್ಲಿ ಇರುವು­ದನ್ನು ಈ ಅಧ್ಯಯನ ವರದಿ ಸಾಬೀತು­ಪಡಿಸಿದೆ' ಎಂದು ವಾಕ್ ಪ್ರೀ ಫೌಂಡೇಷನ್ ಸ್ಥಾಪಕ ಮತ್ತು ಅಧ್ಯಕ್ಷ ಆಂಡ್ರ್ಯೂ ಫಾರೆಸ್ಟ್ ಅಭಿಪ್ರಾಯ­ಪಡುತ್ತಾರೆ.

‘ನಮ್ಮ ಜತೆಗೆ ಇರುವವರೆ ಜೀತಪದ್ಧತಿಗೆ ಒಳಪಡುವಂತಹ ಹತಾಶೆಯ ದುಃಸ್ಥಿತಿ ನಿರ್ಮಾಣ­ವಾಗಲು  ನಾವೆಲ್ಲ ಹೊಣೆಗಾರರು. ಈ ದುರವಸ್ಥೆ ದೂರ ಮಾಡುವ ನಿಟ್ಟಿನಲ್ಲಿ ಅದರ ಸ್ವರೂಪ ತಿಳಿದುಕೊಳ್ಳುವುದೂ ಮುಖ್ಯವಾಗಿದೆ’  ಎಂದು ಫಾರೆಸ್ಟ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT