ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಸ್ಫೂರ್ತಿ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆಕಾಂಕ್ಷ ಭಾರ್ಗವ
ಬದುಕಿನಲ್ಲಿ ನಡೆಯುವ ಕೆಲವೊಂದು ಅಚಾನಕ್‌ ಘಟನೆಗಳು ಜೀವನದ ದಿಕ್ಕನೇ ಬದಲಿಸುತ್ತವೆ. ಇಂತಹ ನೈಜ ಘಟನೆಗಳೇ ಬದಲಾವಣೆಗೆ ಸ್ಫೂರ್ತಿಯಾಗಿರುತ್ತವೆ. ಇಂಥ ಘಟನೆಗಳ ಎಳೆಗಳನ್ನೇ ಹಿಡಿದು ತಮ್ಮ ಯಶಸ್ಸಿನ ಹಾದಿ ಕಂಡುಕೊಂಡ ಮೂವರು ಸಾಧಕರ ಕಥೆಗಳು ಈ ಬಾರಿ. 

ಏಳು ವರ್ಷಗಳ ಹಿಂದೆ ಆಕಾಂಕ್ಷ ಪಿಎಂಆರ್‌ (ಪಿ.ಎಂ.ರೀಲೊಕೇಷನ್‌)ಕಂಪೆನಿಯ ಚುಕ್ಕಾಣಿ ಹಿಡಿದಾಗ ಅದರ ವಾರ್ಷಿಕ ವಹಿವಾಟು 3 ಕೋಟಿ ರೂಪಾಯಿಗಳನ್ನು ದಾಟಿರಲಿಲ್ಲ. ಇಂದು 30 ಕೋಟಿ ರೂಪಾಯಿ ವಹಿವಾಟು ದಾಖಲಿಸುವ ಮೂಲಕ ವಿದೇಶಗಳಲ್ಲೂ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಇದು ಸಾಧ್ಯವಾಗಿದ್ದು ಆಕಾಂಕ್ಷ ಭಾರ್ಗವ ಎಂಬ 21 ಹರೆಯದ ಯುವತಿಯಿಂದ.

ಆಕಾಂಕ್ಷ ಮೂಲತಃ ಗುರ್‌ಗಾಂವ್‌ನವರು. ಅಪ್ಪ 30 ವರ್ಷಗಳ ಹಿಂದೆ ಪಿಎಂಆರ್‌ ಕಂಪೆನಿ ಕಟ್ಟಿದ್ದರು. ಕಂಪೆನಿ ಕುಂಟುತ್ತಾ ಸಾಗುತ್ತಿತ್ತು. 47 ಜನ ನೌಕರರು ಮತ್ತು ವರ್ಷಕ್ಕೆ  2 ಅಥವಾ 3 ಕೋಟಿ ರೂಪಾಯಿಗಳ ವಹಿವಾಟಿಗೆ ಮಾತ್ರ ಕಂಪೆನಿ ಸೀಮಿತವಾಗಿತ್ತು.
ಎಂಬಿಎ ಮುಗಿದ ಬಳಿಕ ಆಕಾಂಕ್ಷ ಕಂಪೆನಿಯ ಸಿಇಓ ಆಗಿ ಅಧಿಕಾರ ವಹಿಸಿಕೊಂಡರು. ಸರಕುಗಳನ್ನು ಮಾತ್ರ ಸಾಗಿಸುತ್ತಿದ್ದ ಕಂಪೆನಿಯ ಸ್ವರೂಪವನ್ನು ಬದಲಾಯಿಸಿದರು. ನೂತನ ವ್ಯಾವಹಾರಿಕ ಯೋಜನೆಗಳನ್ನು ಪರಿಚಯಿಸಿದರು. ಇದರಲ್ಲಿ ಮನೆ, ಕಚೇರಿ ಸ್ಥಳಾಂತರ ಮತ್ತು ಹುಡುಕಾಟ ಹಾಗೂ ಫೈನ್‌ ಆರ್ಟ್ಸ್‌ ಸಾಗಣೆ ಮುಖ್ಯವಾದವು.

‘ಗ್ರಾಹಕರಿಗೆ ಮನೆ ಮತ್ತು ಕಚೇರಿ ಸ್ಥಳಾಂತರದ ತಲೆ ಬಿಸಿ ಇಲ್ಲದಂತೆ ಸೇವೆ ಒದಗಿಸಲಾಗುತ್ತದೆ. ಕಂಪೆನಿ ಕಾರ್ಯ ನಿರ್ವಹಿಸುತ್ತಿರುವ 13 ನಗರಗಳಲ್ಲಿ ಮಾತ್ರ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ನಗರಗಳಿಗೂ ವಿಸ್ತರಿಸಲಾಗುತ್ತದೆ’ ಎನ್ನುತ್ತಾರೆ ಆಕಾಂಕ್ಷ. ಸಾಗಣೆ ಸಂದರ್ಭದಲ್ಲಿ ಗ್ರಾಹಕರ ಸರಕುಗಳಿಗೆ ಹಾನಿಯಾದರೆ ಆ ಸರಕಿನ ನೈಜ ಬೆಲೆಯನ್ನು ಭರಿಸಲಾಗುತ್ತದೆ.
ಇಂದು 370 ಜನರು ಕೆಲಸ ಮಾಡುತ್ತಿದ್ದಾರೆ. ಶೆಲ್‌, ಅಮೆರಿಕನ್‌ ಎಂಬಸಿ, ಅಮೆರಿಕನ್‌ ಸ್ಕೂಲ್‌, ಎಚ್‌ಪಿ, ಬ್ರಿಟಾನಿಯ, ಎಸ್‌ಎಪಿ, ಬಾಸ್ಕೊ, ಐಟಿಸಿ, ಸಿಟಿ ಬ್ಯಾಂಕ್‌, ನೋಕಿಯಾ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಪಿಎಂಆರ್‌ ಗ್ರಾಹಕರು ಎಂಬುದು ವಿಶೇಷ. 

‘ನನಗೆ ಕಂಪೆನಿಯನ್ನು ದೊಡ್ಡದಾಗಿ ಬೆಳೆಸುವ ಕನಸಿತ್ತು. ಅನೇಕ ಸವಾಲುಗಳನ್ನು ಎದುರಿಸಿ ಕೆಲವೇ ವರ್ಷಗಳಲ್ಲಿ ಕಂಪೆನಿಯ ವಹಿವಾಟನ್ನು ಹೆಚ್ಚಿಸಿದ್ದೇನೆ. ಇದು ಸಾಧ್ಯವಾಗಿದ್ದು ಇಚ್ಛಾಶಕ್ತಿಯಿಂದ’ ಎನ್ನುತ್ತಾರೆ ಆಕಾಂಕ್ಷ. www.pmrelocations.com

ರಾಘವ ಕೆ.ಕೆ.
ಬೆಂಗಳೂರಿನ ರಾಘವ ಅವರದ್ದು ಬಹುಮುಖ ಪ್ರತಿಭೆ. ಕಲೆಯನ್ನು ತಂತ್ರಜ್ಞಾನದ ಮೂಲಕ ಸಮಾಜಕ್ಕೆ ಪರಿಚಯಿಸುವ ನೂತನ ಪ್ರಯತ್ನ ಮಾಡಿದ್ದಾರೆ. ರಾಘವ ಚಿತ್ರ ಕಲಾವಿದ. ತಂತ್ರಜ್ಞಾನದ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ಆದರೂ ಫ್ಲಿಪ್‌ಸಿಕಲ್ ಎಂಬ ಸಾಮಾಜಿಕ ಆಪ್‌ ಅಭಿವೃದ್ಧಿಪಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಫೇಸ್‌ಬುಕ್‌, ಇನ್‌ಸ್ಟ್ರಾಗ್ರಾಂನಂತೆ  ಫ್ಲಿಪ್‌ಸಿಕಲ್ (Flipsicle) ಜನಪ್ರಿಯ ಜಾಲತಾಣವಾಗಿದೆ.

ಚಿತ್ರಗಳ ಮೂಲಕ ಜನರಲ್ಲಿ ಮಾನವೀಯತೆ ಬಗ್ಗೆ ಅರಿವು ಮೂಡಿಸುವುದೇ ಫ್ಲಿಪ್‌ಸಿಕಲ್‌ನ ಮುಖ್ಯ ಉದ್ದೇಶ. ಭಾರತದಲ್ಲಿ ಹುಟ್ಟಿ ಬೆಳೆಯುವುದು ಇಡೀ ವಿಶ್ವವನ್ನೇ ಸುತ್ತಿದಂತೆ. ಹಿಂದೂವಾಗಿ ಹುಟ್ಟಿ,  ಮುಸ್ಲಿಂ ಸಮುದಾಯದವರ ಜೊತೆ ಬೆಳೆದು, ಕ್ರೈಸ್ತ ಶಾಲೆಯಲ್ಲಿ ಓದಿದೆ. ಇಂತಹ ವಾತಾವರಣ ಯಾವ ದೇಶದಲ್ಲಿ ಸಿಗುತ್ತದೆ? ನಾನು ಕಂಡಂತೆ ಇಲ್ಲಿ ಧರ್ಮಗಳಿಲ್ಲ, ಇರುವುದು ಮಾನವೀಯತೆ. ಫ್ಲಿಪ್‌ಸಿಕಲ್‌ಈ ಪರಿಕಲ್ಪನೆಯೊಂದಿಗೆ ಜನ್ಮತಳೆದಿದೆ ಎನ್ನುತ್ತಾರೆ ರಾಘವ. ಈ ಸೋಶಿಯಲ್‌ ಆಪ್ ಮೂಲಕ ಬಳಕೆದಾರರು ಮನರಂಜನೆ ಜೊತೆಗೆ ಮಾನವೀಯ ಮುಖಗಳನ್ನು ನೋಡಬಹುದು. ಇಲ್ಲಿ ಚಿತ್ರಗಳೇ ಮಾತನಾಡುತ್ತವೆ.

ಫ್ಲಿಪ್‌ಸಿಕಲ್ ಹುಟ್ಟಿನ ಹಿಂದೆ ಒಂದು ಕಥೆ ಇದೆ. ಒಮ್ಮೆ ರಾಘವನ್‌ಗೆ ಕಾರ್ಯಕ್ರಮವೊಂದರಲ್ಲಿ ಗೆಳೆಯರೊಬ್ಬರು ‘ಐಪ್ಯಾಡ್‌’ ನೋಟ್‌ ಉಡುಗೊರೆ ನೀಡಿದರಂತೆ. ಅದನ್ನು ಬಳಸಲು ಗೊತ್ತಿಲ್ಲದಿದ್ದರಿಂದ ತನ್ನ ಪುಟ ಮಗನಿಗೆ ಆಡಲು ಕೊಟ್ಟರಂತೆ. ಪತ್ನಿ ನೇತ್ರಾ ಆ ಐಪ್ಯಾಡ್‌ನಲ್ಲಿ ಹಲವು ಚಿತ್ರಗಳನ್ನು ಅಪ್‌ಲೋಡ್‌ ಮಾಡಿ ಮಗನಿಗೆ ನೀಡಿದರಂತೆ. ಆ ಚಿತ್ರಗಳನ್ನು ಮಗು ಭಾರಿ ಕುತೂಹಲದಿಂದ ನೋಡುತ್ತಿತ್ತಂತೆ. ಇದೇ ಪರಿಕಲ್ಪನೆಯಲ್ಲಿ ಪೊಪ್‌–ಇಟ್‌ ಐಪ್ಯಾಡ್‌ ಆರ್ಟ್‌ ಪುಸ್ತಕ ರಚಿಸಿದರು. ಇದು ವಿಶ್ವದಾದ್ಯಂತ ಸಾಕಷ್ಟು ಹೆಸರು ಮಾಡಿತು. ಹಲವು ಸಾಫ್ಟ್‌ವೇರ್‌ ಕಂಪೆನಿಗಳು ರಾಘವನ್‌ ಅವರನ್ನು ಗುರುತಿಸಿದವು. ಈ ಯಶಸ್ಸು ಫ್ಲಿಪ್‌ಸಿಕಲ್ ಆಪ್‌ ಹುಟ್ಟಿಗೆ  ಮೆಟ್ಟಿಲಾಯಿತು. www.flipsicle.com

ಅಪರ್ಣಾ ಅತ್ರೇಯಾ
ಕಥೆ, ಸಂಗೀತ, ಚಿತ್ರಕಲೆ, ನಾಟಕಗಳ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವುದೇ ಕಿಡ್‌ ಅಂಡ್‌ ಪೇರೆಂಟ್ಸ್‌ ಫೌಂಡೇಶನ್‌ನ ಮುಖ್ಯ ಉದ್ದೇಶ ಎನ್ನುತ್ತಾರೆ ಅಪರ್ಣಾ ಅತ್ರೇಯಾ. ಬೆಂಗಳೂರಿನವರಾದ ಅಪರ್ಣಾ ಕಿಡ್‌ ಅಂಡ್‌ ಪೇರೆಂಟ್ಸ್‌ ಫೌಂಡೇಶನ್‌ ಸ್ಥಾಪಕರು. ಮಕ್ಕಳು ಬಲವಂತವಾಗಿ ಓದಬಾರದು. ಇಷ್ಟಪಟ್ಟು ಆಡುತ್ತಾ ನಲಿಯುತ್ತಾ ಕಲಿಯಬೇಕು. ಆಗ ಮಾತ್ರ  ಅವರಲ್ಲಿ ಕ್ರಿಯಾಶೀಲತೆ ಬೆಳೆಯುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತ.

ಈ ಪರಿಕಲ್ಪನೆಯೊಂದಿಗೆ ಹುಟ್ಟಿದ ಸಂಸ್ಥೆ  ಕಿಡ್‌ ಅಂಡ್‌ ಪೇರೆಂಟ್ಸ್‌ ಫೌಂಡೇಶನ್‌. ಮಕ್ಕಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ  ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಸಂಸ್ಥೆಯ ಮುಖ್ಯ ಆದ್ಯತೆ. ವಿವಿಧ ಕ್ಷೇತ್ರಗಳ ನುರಿತ ತಜ್ಞರು ಮಕ್ಕಳಿಗೆ ಮುದ ನೀಡುವ ಯೋಜನೆಗಳ ಮೂಲಕ ಶಿಕ್ಷಣ ಕೊಡುವುದು ಈ ಫೌಂಡೇಶನ್‌ನ ಮುಖ್ಯ ಉದ್ದೇಶವಾಗಿದ್ದು, ಇದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎನ್ನುತ್ತಾರೆ ಅಪರ್ಣಾ.

ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಬೌದ್ಧಿಕ ಬೆಳವಣಿಗೆಗೆ 3ಸಿ ಸೂತ್ರ (3c-Connect, Change and Consequence) ಅಂದರೆ ಬಾಂಧವ್ಯ, ಬದಲಾವಣೆ, ಪರಿಣಾಮ ಹಾಗೂ 3ಆರ್‌ ಸೂತ್ರಗಳು (3r-Read, Reinvent and Responsibility) ಅಂದರೆ  ಓದು, ಮರು ಆವಿಷ್ಕಾರ, ಜವಾಬ್ದಾರಿ ಹೆಚ್ಚು ಸಹಕಾರಿಯಾಗಿವೆ. ಈ ಪರಿಕಲ್ಪನೆಗಳ ಮೂಲಕ ಶಿಕ್ಷಣ ನೀಡಿದರೆ ಮಕ್ಕಳು ಸರ್ವತೋಮುಖವಾಗಿ ಬೆಳವಣಿಗೆ ಕಾಣುತ್ತಾರೆ ಎಂಬುದು ಇದರ ಹಿಂದಿನ ಆಶಯ.

ಮೂಲತಃ ಮನಶಾಸ್ತ್ರಜ್ಞರು ಆಗಿರುವ ಅಪರ್ಣಾ ಅವರು, ‘ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಯಬೇಕಾದರೆ ಅವರಿಗೆ ಕಥೆಗಳನ್ನು ಹೇಳಬೇಕು. ಆ ಮೂಲಕ ಆಸಕ್ತಿ ಮತ್ತು ಕುತೂಹಲ ಉಂಟಾಗಿ ಕ್ರಿಯಾಶೀಲತೆ ಬೆಳೆಯುತ್ತದೆ’ ಎನ್ನುತ್ತಾರೆ. 
www.kiddywiki.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT