ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಭಾವದಲ್ಲಿ ಯುಗಳ ನಿರುಪಮಾ–ರಾಜೇಂದ್ರ

ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ
Last Updated 7 ಮಾರ್ಚ್ 2016, 19:59 IST
ಅಕ್ಷರ ಗಾತ್ರ

ಕಥಕ್‌ ಮತ್ತು ಭರತನಾಟ್ಯ ಕ್ಷೇತ್ರದ ಬಹುದೊಡ್ಡ ಹೆಸರಾಗಿರುವ ನಿರುಪಮಾ –ರಾಜೇಂದ್ರರ ನಡುವೆ ‘ಮತ್ತು’, ‘ಹಾಗೂ’ ಪದಗಳಿಗೆ ಜಾಗವೇ ಇಲ್ಲ. ಅವರು ‘ನಿರುಪಮಾ–ರಾಜೇಂದ್ರ’. ಹೆಸರಿನಂತೆ ಜೀವ–ಭಾವದಲ್ಲೂ, ನೃತ್ಯ–ನೃತ್ತದಲ್ಲೂ ಮಿಳಿತಗೊಂಡಿರುವ  ಅವರ ದಾಂಪತ್ಯಕ್ಕೆ 27ರ ಯೌವ್ವನ. ಕನಸಿನ ಕೂಸು ‘ಅಭಿನವ’ ಡಾನ್ಸ್‌ ಕಂಪೆನಿಗೆ ಈಗ 20ರ ತಾರುಣ್ಯ. ಏಕಭಾವ, ಪರಸ್ಪರ ಪ್ರೀತಿ, ಗೌರವ ಮತ್ತು ಸಮರ್ಪಣಾ ಭಾವ ಎಂಬ ನಾಕುತಂತಿಗಳು ಅವರ ದಾಂಪತ್ಯಗೀತೆಯನ್ನು ಸುಮಧುರವಾಗಿಸಿವೆ. ನಿರುಪಮಾ ಮತ್ತು ರಾಜೇಂದ್ರ ಅವರ ಯುಗಳ ನೃತ್ಯದ ಕಥೆಯನ್ನು ನಿರುಪಮಾ ಮಾತುಗಳಲ್ಲೇ ಕೇಳಿ...

ನಮ್ಮಿಬ್ಬರಲ್ಲಿ ನಾನೇ ಸ್ವಲ್ಪ ಜೋರು. ರಾಜೇಂದ್ರ ತುಂಬಾ ಸಾಫ್ಟ್‌. ಮಾತು, ನಡೆ ಎಲ್ಲವೂ ಸಾಫ್ಟ್‌... ಮಗುವಿನ ಹಾಗೆ. ಹಾಗಂತ ನಾನು ‘ಡಾಮಿನೇಟ್‌’ ಮಾಡುತ್ತೇನೆ ಅಂದ್ಕೋಬೇಡಿ.

ಕಲಾವಿದರಾಗಿಯೂ, ದಂಪತಿಯಾಗಿಯೂ ನಮ್ಮಿಬ್ಬರಲ್ಲಿ ಹಲವಾರು ಸಮಾನ ಆಸಕ್ತಿಗಳಿವೆ. ನಮ್ಮ ಕಥಕ್‌ ನೃತ್ಯ ಗುರು ಮಾಯಾರಾವ್‌ ಅವರು ಇದನ್ನು ಮೊದಲು ಗುರುತಿಸಿದ್ರು.  ನಮ್ಮ ಮದುವೆಯಾಗಿ 27 ವರ್ಷಗಳಾದರೂ ನಮ್ಮಿಬ್ಬರ ನಡುವೆ ‘ಐಡೆಂಟಿಟಿ’ ಅಥವಾ ‘ನಾನು ಹೆಚ್ಚು’ ಅಥವಾ ‘ನನ್ನಿಂದಲೇ ನೀನು’ ಎಂಬ ಭಾವವೇ ಬಂದಿಲ್ಲ. ಹಾಗಾಗಿ ಮೊದಲು ಯಾರ ಹೆಸರು ಬರಬೇಕು ಎಂಬುದು ನಮ್ಮಿಬ್ಬರ ಮಧ್ಯೆ ‘ಇಶ್ಯೂ’ ಆಗಲೇ ಇಲ್ಲ.

ತ್ಯಾಗದ ದುರುಪಯೋಗ
ಹೆಣ್ಣಿಗೆ ಸಮರ್ಪಣಾ ಭಾವ ಅಥವಾ ತ್ಯಾಗ ಮನೋಭಾವವಿದೆ. ಅದು ಆಕೆಯನ್ನು ‘ಬಿಟ್ಟುಕೊಡುವ’ ಹಾಗೆ ಪ್ರೇರೇಪಿಸುತ್ತದೆ. ಅದನ್ನು ಪುರುಷರು ಅದನ್ನು ಹಕ್ಕು ಎಂದು ಪರಿಭಾವಿಸುತ್ತಾರೆ.  ನನ್ನಿಂದಲೇ ನೀನು ಎಂಬ, ಅವರ ಪುರುಷಾಹಂಕಾರವನ್ನು  ಆಕೆಯ ಮೇಲೆ ಹೇರುತ್ತಾರೆ.

ವಿಶೇಷವಾಗಿ ಮದುವೆಯಾದ ತಕ್ಷಣ ಅಥವಾ ಯಾವುದೇ ರೂಪದ ಸಾಂಗತ್ಯದ ಸಂದರ್ಭದಲ್ಲಿ ಹೆಣ್ಣನ್ನು ಓವರ್‌ಟೇಕ್‌ ಮಾಡುವ ಯತ್ನ ನಡೆಯುತ್ತದೆ. ಇದು ಸಹಜ ಎಂಬಂತೆ ಆಗಿಹೋಗಿದೆ. ಆದರೆ ಯಾವಾಗ ಹೆಣ್ಣನ್ನು ತಮ್ಮ ಪ್ರತಿಸ್ಪರ್ಧಿ ಅಥವಾ ತಮಗಿಂತ ಪ್ರಬಲೆ ಅಂತ ಪುರುಷ ಅಥವಾ ಗಂಡ ಪರಿಗಣಿಸುತ್ತಾನೋ ಆಗ ಮಾತ್ರ ಓವರ್‌ಟೇಕ್‌ ಮಾಡೋ ಹಂಬಲವಾಗುತ್ತದೆ. ಮುಂದೆ ಅದು ಹಠವಾಗಿ ಬೆಳೆದು ಅಂತಿಮವಾಗಿ  ಪೋಟಿಯಾಗಿಬಿಡುತ್ತದೆ.

ಈ ಒಟ್ಟು ಬೆಳವಣಿಗೆಗೆ ಹೆಣ್ಣು ಮತ್ತು ಗಂಡಿನ ನಡುವೆ ಇರುವ ಅಹಂ ಕಾರಣ. ಅಸ್ತಿತ್ವದ ಅಹಂಕಾರವನ್ನು ಕಿತ್ತು ಪ್ರೀತಿಯನ್ನು ಸಮರ್ಪಿಸಿಕೊಂಡಾಗ ‘ನಾನು–ನೀನು’ ಎಂಬ ಮಾತೇ ಬರುವುದಿಲ್ಲ. ರಾಜೇಂದ್ರ ಮತ್ತು ನನ್ನ ನಡುವೆ ಅಹಂಗೆ ಎಂದೂ ನಾವು ‘ಸ್ಪೇಸ್‌’ ಕೊಟ್ಟಿಲ್ಲ. ಹಾಗಾಗಿ ಸ್ಪರ್ಧೆ ಏರ್ಪಡಲು ಸಾಧ್ಯವೇ ಆಗಿಲ್ಲ.

ಮತ್ತೊಂದು ವಿಷಯ... ಮಹಿಳೆ ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಆಕೆ ತನ್ನನ್ನು ತನ್ನ ಗಂಡನ ಮೂಲಕವೇ ಗುರುತಿಸಿಕೊಳ್ಳಲು ಬಯಸುವುದು ಸುತಾರಾಂ ಸರಿಯಲ್ಲ. ಸಾಧನೆ ಮಾಡಲು ನಿಮ್ಮಿಂದ ಸಾಧ್ಯವಾದರೆ ಅದೇ ನಿಮ್ಮತನದಿಂದ ನಿಮ್ಮನ್ನು ಗುರುತಿಸಿಕೊಳ್ಳಲು ಯಾಕೆ ಸಾಧ್ಯವಿಲ್ಲ?

ಹೆಣ್ಣಾಗಿರುವುದು ಭಾಗ್ಯ
ಏಕಕಾಲಕ್ಕೆ ಬಹು ಆಯಾಮದಲ್ಲಿ ಕರ್ತವ್ಯಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ಹೆಣ್ಣಿಗೆ ಮಾತ್ರ ಇರೋದು. ಹೆಣ್ಣು ಅನ್ನೋ ‘ಶಕ್ತಿ’ ನಾನಾಗಿರುವುದು ನನ್ನ ಪಾಲಿನ ಸಂಭ್ರಮ ಮತ್ತು ಪರಮಾನಂದ.  

ನಿಮ್ಮ ಯುಗಳ ನೃತ್ಯದಲ್ಲೂ ಯಾಕೆ ‘ನಿರುಪಮಾ–ರಾಜೇಂದ್ರ’ ಆಗಿರುತ್ತದೆ? ‘ರಾಜೇಂದ್ರ–ನಿರುಪಮಾ’ ಆಗಬಹುದಲ್ಲಾ? ಯಶಸ್ಸು ಮತ್ತು ಸಾಧನೆಯನ್ನು ಹೇಗೆ ಹಂಚಿಕೊಳ್ಳುತ್ತೀರಿ ಎಂದು ಕೇಳಿದರೆ ‘ನಾನೆಂದರೆ ಅವರು, ಅವರೆಂದರೆ ನಾನು ಎಂಬುದು ನಮ್ಮ ದಾಂಪತ್ಯ ಮತ್ತು ವೃತ್ತಿ ಕ್ಷೇತ್ರದ ಗೆಲುವಿನ ಮಂತ್ರ’ ಎಂದು ಜೋರಾಗಿ ನಗುತ್ತಾರೆ ನಿರುಪಮಾ.

***
ಸಬಲೀಕರಣ ಎಂದರೆ...
ಪ್ರತಿಯೊಬ್ಬ ಹೆಣ್ಣಿನಲ್ಲಿ ಆತ್ಮವಿಶ್ವಾಸ ಮತ್ತು ಶಕ್ತಿ ಕಟ್ಟಿಕೊಟ್ಟರೆ ಆಕೆಯ ಸಬಲೀಕರಣವಾದಂತೆ ಎಂಬುದು ನನ್ನ ಬಲವಾದ ನಂಬಿಕೆ. ಸರ್ಕಾರ ಹೇಳಬಹುದು, ಆರ್ಥಿಕ ಸ್ವಾವಲಂಬನೆಯೇ ಮಹಿಳಾ ಸಬಲೀಕರಣ ಎಂದು. ಆದರೆ ಅದು ಭ್ರಮೆ. ಆರ್ಥಿಕ ಶಕ್ತಿಯನ್ನು ಯಾವ ರೂಪದಲ್ಲಾದರೂ ತುಂಬಿಕೊಳ್ಳಬಹುದು. ಆದರೆ ನೆಮ್ಮದಿ ತರುವ ಕೆಲಸ ಮಾಡಿದರೆ ಅದುವೇ ಸಬಲೀಕರಣ.    
- ನಿರುಪಮಾ–ರಾಜೇಂದ್ರ                 
***
ಮಹಿಳೆಯರ ಸಬಲೀಕರಣಕ್ಕೆ ಯಾರೋ ಹೋರಾಡಬೇಕು ಎನ್ನುವುದಕ್ಕಿಂತ ಆ ಹೋರಾಟ ಮೊದಲು ನಮ್ಮಿಂದ ಆರಂಭವಾಗಬೇಕು. ಮಹಿಳೆ ತನ್ನ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದಾಗ ಸುತ್ತಮುತ್ತಲಿನವರೂ ಸೇರಿಕೊಳ್ಳುತ್ತಾರೆ. ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದಲ್ಲಿ ನಾನು ಇದನ್ನೇ ಹೇಳಿದ್ದೇನೆ. ಈ ಚಿತ್ರ ಮಾಡುವವರೆಗೂ ಒಗ್ಗಟ್ಟನಲ್ಲಿ ಬಲವಿದೆ ಎಂಬ ಮಾತಿನ ಮಹತ್ವ ನನಗೆ ಮನದಟ್ಟಾಗಿರಲಿಲ್ಲ.

ಚಿತ್ರದಲ್ಲಿ ಮಹಿಳೆಯರು ಒಟ್ಟಾಗಿ ಜಾತಿ, ಧರ್ಮ, ಮೌಢ್ಯ ಎಲ್ಲವನ್ನೂ ಒಡೆಯುವುದನ್ನು ಕಾಣುತ್ತೇವೆ. ನಗರದ ಮಹಿಳೆಯರು ವಿಮುಖರಾಗುತ್ತಿದ್ದು, ಗ್ರಾಮೀಣ ಮಹಿಳೆಯರಂತೆ ಎಲ್ಲರೊಂದಿಗೆ ಒಗ್ಗೂಡುವ ವಿಶಾಲ ಮನೋಭಾವದ ಬೇರುಗಳನ್ನು ಗಟ್ಟಿಗೊಳಿಸಬೇಕು.
-ಸುಮನಾ ಕಿತ್ತೂರು, ಚಲನಚಿತ್ರ ನಿರ್ದೇಶಕಿ      
            
***
ಮಹಿಳೆ ಮುಂಚೆಯಿಂದಲೂ ಸಬಲೆಯೇ. ಅವಳು ಎಂದಿಗೂ ಅಬಲೆಯಲ್ಲ. ಆದರೆ, ಅವಳಿಗೆ ಅವಕಾಶಗಳನ್ನು ಬಳಸಿಕೊಳ್ಳುವ ವೇದಿಕೆ ಕೊಡಬೇಕಷ್ಟೇ. ಸಾಧನೆ ಮಾಡಲು ಧೈರ್ಯ ತುಂಬಬೇಕು; ಕೊಂಚ ಪ್ರೋತ್ಸಾಹ ಇರಬೇಕು. ಇದಿಷ್ಟು ಮಾಡಿದರೆ, ಆಕೆ ಪುರುಷನಿಗಿಂತ ಮಹತ್ತರವಾದ ಸಾಧನೆಯನ್ನೇ ಮಾಡುತ್ತಾಳೆ.
-ವಸುಂಧರಾ ದೊರೆಸ್ವಾಮಿ ಹಿರಿಯ ನೃತ್ಯ ಕಲಾವಿದೆ

***

ಸ್ವಾತಂತ್ರ್ಯ ಬಂದು 60 ವರ್ಷ ದಾಟಿದ್ದರೂ, ಮಹಿಳಾ ಸಬಲೀಕರಣ ಆಗಬೇಕು ಎಂದು ಹೇಳುವುದು ಬೇಸರದ ಸಂಗತಿ. ಸ್ವಾತಂತ್ರ್ಯ, ಸಮಾನತೆ, ಸದವಕಾಶ  ಎಂಬ ಅಂಶಗಳ ಮೇಲೆ ರಚಿತಗೊಂಡಿರುವ ನಮ್ಮ ಸಂವಿಧಾನ ಸರಿಯಾಗಿ ಜಾರಿಯಾಗಿಲ್ಲವೇನೋ ಎಂದನ್ನಿಸುತ್ತಿದೆ. ಮಹಿಳೆಗೆ ಬೇಕಿರುವುದು ಮೇಲಿನ ಈ ಮೂರು ಅಂಶಗಳಷ್ಟೇ. ಅದರ ಜತೆಗೆ, ಅವಳಿಗೆ ಸಾಕ್ಷರತೆಯು ಸಾಧನೆಯತ್ತ ಕರೆದೊಯ್ಯುತ್ತದೆ.
-ಮೀರಾ ನಾಯಕ , ವಿಮರ್ಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT