ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಮ್ ಸಿನಿಮಾ ಸಂಸ್ಕಾರ

Last Updated 10 ಜುಲೈ 2014, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗಕ್ಕೆ ಮೊದಲ ಸ್ವರ್ಣಕಮಲ ಪುರಸ್ಕಾರ ತಂದುಕೊಟ್ಟ ಚಿತ್ರ ‘ಸಂಸ್ಕಾರ’. ಈ ಚಿತ್ರದ ಛಾಯಾಗ್ರಾಹಕ ಟಾಮ್‌ ಕೊವೆನ್‌ ಆಸ್ಟ್ರೇಲಿಯಾದವರು. ಕಳೆದ ವಾರ ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ಆಹ್ವಾನದ ಮೇರೆಗೆ ಬೆಂಗಳೂರಿಗೆ ಬಂದಿದ್ದ ಅವರು ‘ಸಿನಿಮಾ ರಂಜನೆ’ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ. ‘ದಿ ಮೇಕಿಂಗ್ ಆಫ್ ಸಂಸ್ಕಾರ’ ಕಿರುಚಿತ್ರವನ್ನು ಎಡಿಟ್‌ ಮಾಡುತ್ತಾ ಕುಳಿತಿದ್ದ ಎಪ್ಪತ್ತೆರಡರ ಟಾಮ್‌ ಅವರ ಮಾತುಗಳಲ್ಲಿ ಬತ್ತದ ಉತ್ಸಾಹವಿತ್ತು.

‘ಸಂಸ್ಕಾರ’ದ ನೆನಪುಗಳನ್ನು ಹಂಚಿಕೊಳ್ಳಿ. ಅನಂತಮೂರ್ತಿ, ಪಿ.ಲಂಕೇಶ್, ಕಲಾವಿದ ವಾಸುದೇವ್ ಅವರಂಥ ಘಟಾನುಘಟಿಗಳ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಕ್ಯಾಂಪ್ ಫೈರ್ ಉರಿಯುತ್ತಿದ್ದ ಹೊತ್ತಿನಲ್ಲಿ ಕಲಾವಿದ ಎಸ್.ಜಿ. ವಾಸುದೇವ್ ನನಗೆ ಯು.ಆರ್. ಅನಂತಮೂರ್ತಿ ಬರೆದಿದ್ದ ‘ಸಂಸ್ಕಾರ’ ಕಾದಂಬರಿಯ ಕಥೆಯನ್ನು ನಿರೂಪಣೆ ಮಾಡಿದರು. ಅದರಲ್ಲಿ ಇದ್ದ ಡ್ರಾಮಾ ನನ್ನ ಮನಸ್ಸಿಗೆ ತುಂಬಾ ಹಿಡಿಸಿತು.

ಅದು ಸಿನಿಮಾ ಆದಲ್ಲಿ ಟೀ ಬಾಯ್ ಆಗಲು ಕೂಡ ನಾನು ರೆಡಿ ಎಂದೆ. ವಾಸುದೇವ್ ನನ್ನನ್ನು ನಿರ್ದೇಶಕ ಪಟ್ಟಾಭಿ (ಪಟ್ಟಾಭಿರಾಮ ರೆಡ್ಡಿ) ಅವರಿಗೆ ಪರಿಚಯಿಸಿದರು. ಅವರಿಂದ ಗಿರೀಶ್ ಕಾರ್ನಾಡ್ ಪರಿಚಿತರಾದರು. ಆ ಮೂವರೂ ನನ್ನ ಮೇಲೆ ಪ್ರಭಾವ ಬೀರಿದರು. ನಾನು ಅವರ ಪ್ರೀತಿಯಲ್ಲಿ ಸೆರೆಯಾದೆ.

‘ಸಂಸ್ಕಾರ’ದ ಕಥೆಯಲ್ಲಿ ನಿಮ್ಮನ್ನು ಬಹಳ ಕಾಡಿದ ಅಂಶ ಯಾವುದು?
ಮುಖ್ಯವಾಗಿ ಅದು ಕ್ಲಾಸಿಕ್ ಆಗಿತ್ತು. ವ್ಯಕ್ತಿಯ ಸ್ವಯಂಶೋಧದ ಕಥೆ ಅದು. ಹಾಗೆ ನೋಡಿದರೆ ಅದರ ವಸ್ತು ವಿಶ್ವವ್ಯಾಪಿ. ಅದಕ್ಕೂ ಮೊದಲು ಸ್ಕ್ರಿಪ್ಟ್ ಬರೆದ ಅನುಭವ ಇದ್ದ ನನಗೆ ಸಂಸ್ಕಾರದ ಸಂರಚನೆ ಸುಂದರವಾಗಿದೆ ಎನಿಸಿತು.

ಮೃತ ದೇಹದ ಸಂಸ್ಕಾರ ಮಾಡುವ ಹಾದಿಯಲ್ಲಿ ವ್ಯಕ್ತಿ ಎದುರಿಸುವ ಕಷ್ಟಗಳು, ತಾನೇ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ಬಹುತೇಕ ತಪ್ಪುಗಳೇ ಆಗುತ್ತವೆ. ಕೊನೆಗೆ ಅವನಲ್ಲಿ ಆಗುವ ಸತ್ಯದ ಅರಿವು ವಿಶ್ವವ್ಯಾಪಿಯಾದ ಸಂಗತಿ. ಕೃಷ್ಣ ಅರ್ಜುನನಿಗೆ ಬೋಧಿಸಿದ ಕರ್ಮ ಸಿದ್ಧಾಂತವೂ ಅದೇ; ಮಾಡಬೇಕಾದದ್ದನ್ನು ನೀನು ಮಾಡು ಎನ್ನುವುದು.

ಸಂಸ್ಕಾರಕ್ಕೆ ನೀವು ಯಾವ ರೀತಿ ಹೋಂವರ್ಕ್ ಮಾಡಿಕೊಳ್ಳಬೇಕಾಯಿತು? ಬೇರೆ ದೇಶದಿಂದ ಬಂದಿದ್ದ ನಿಮಗೆ ಇಲ್ಲಿನ ಸಂಸ್ಕೃತಿಯ ಅರಿವಿನ ಅಗತ್ಯವಿತ್ತಲ್ಲ?
ಸಂಸ್ಕಾರಕ್ಕೆ ಮೊದಲ ಎಂಟೊಂಬತ್ತು ವರ್ಷ ನಾನು ಸಿನಿಮಾಟಾಗ್ರಫರ್‌ ಆಗಿ ಅನುಭವ ಪಡೆದುಕೊಂಡಿದ್ದೆ. ಆ ಸಿನಿಮಾ ಮಟ್ಟಿಗೆ ಸ್ಕ್ರಿಪ್ಟ್ ಸಿದ್ಧಪಡಿಸುವ ಹಂತದಲ್ಲೇ ಪಟ್ಟಾಭಿ ಅವರ ಜೊತೆಗೆ ಇದ್ದೆ. ಸಂಭಾಷಣೆ ಮೂಡಿದ ಕ್ಷಣಗಳಿಗೂ ಸಾಕ್ಷಿಯಾದೆ.   

ಚಿತ್ರದ ಪ್ರತಿ ಮಾತು, ಶಾಟ್‌ನ ಅರಿವು ನನಗೆ ಇತ್ತು. ಸಹಾಯಕ ನಿರ್ದೇಶಕರಾಗಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರಿಗೆ ಕನ್ನಡ ಗೊತ್ತಿತ್ತಾದರೂ ಅದನ್ನು ಓದುವುದು, ಬರೆಯುವುದು ತಿಳಿದಿರಲಿಲ್ಲ. ಭಾಷೆ ಸಿನಿಮಾಗೆ ಮುಖ್ಯ ಅಲ್ಲವೇ ಅಲ್ಲ ಎನಿಸುವುದು ಇಂಥ ಅನುಭವಗಳಿಂದಲೇ.

ಗಿರೀಶ ಕಾರ್ನಾಡರು ತಮ್ಮ ಆತ್ಮಕಥೆ ‘ಆಡಾಡತಾ ಆಯುಷ್ಯ’ದಲ್ಲಿ ಸಂಸ್ಕಾರ ತಯಾರಾದ ಬಗೆಯ ಕುರಿತು ಬರೆದಿದ್ದಾರೆ. ಅದನ್ನು ನೀವೂ ಓದಿದ್ದೀರಾ?
ಹೌದು, ಅದರ ಒಂದು ಪ್ರತಿಯನ್ನು ಅವರು ಕಳುಹಿಸಿಕೊಟ್ಟಿದ್ದರು. ಸಂಸ್ಕಾರ ಕಾದಂಬರಿ ಸಿನಿಮಾ ಆಗುವಲ್ಲಿ ಅವರ ಪಾತ್ರ ದೊಡ್ಡದು. ಪಾತ್ರಗಳ ಆಯ್ಕೆಯಿಂದ ಹಿಡಿದು ರಿಹರ್ಸಲ್ ಮಾಡಿಸುವವರೆಗೆ ಅವರು ಶ್ರಮಪಟ್ಟರು. ಸಂಭಾಷಣೆಯನ್ನು ನನ್ನಂಥವರಿಗೆ ಅನುವಾದ ಮಾಡಿ ತಿಳಿಸುವ ಕಷ್ಟವನ್ನೂ ಮೈಮೇಲೆ ಎಳೆದುಕೊಂಡರು. ಅವೆಲ್ಲವನ್ನೂ ಅವರು ಕೃತಿಯಲ್ಲಿ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ.

ಕನ್ನಡದ ಸಂಸ್ಕಾರ ಸಿನಿಮಾದ ನಟ–ನಟಿಯರಿಗೂ, ನೀವು ಕೆಲಸ ಮಾಡಿದ ಇಂಗ್ಲಿಷ್ ಚಿತ್ರಗಳ ನಟ-ನಟಿಯರಿಗೂ ಏನಾದರೂ ವ್ಯತ್ಯಾಸವಿತ್ತೆ?
ಕಮರ್ಷಿಯಲ್ ಚಿತ್ರಗಳ ನಟ-ನಟಿಯರ ಅಭಿನಯ ಒಂದು ರೀತಿಯಲ್ಲಿ ಅತಿರೇಕದ್ದೂ, ಕಾಮಿಕಲ್ ಆದದ್ದೂ ಆಗಿರುತ್ತದೆ. ಸಂಸ್ಕಾರ ಮಾಡಿದಾಗ ಗಿರೀಶ್ ಕಾರ್ನಾಡರೂ ಸೇರಿದಂತೆ ಕೆಲವು ತರಬೇತುಗೊಂಡ ನಟ-ನಟಿಯರಿದ್ದರು.

ಉಳಿದವರಲ್ಲಿ ಅಲ್ಲೊಬ್ಬರು ಇಲ್ಲೊಬ್ಬರದು ಅತಿರೇಕದ ಅಭಿನಯವೇ ಆಗಿತ್ತು. ಆದರೆ, ಅದನ್ನು ಗಿರೀಶ್ ಹತ್ತಿಕ್ಕಿ, ಸಹಜಾಭಿನಯಕ್ಕೆ ಪ್ರೇರೇಪಿಸಿದರು. ಸಂಸ್ಕಾರದಲ್ಲಿ ಅಭಿನಯಿಸಿದ ಹಳ್ಳಿಯ ಜನರಂತೂ ತುಂಬಾ ಸಹಜವಾಗಿ ಇದ್ದರು. ನಾನು ಕಮರ್ಷಿಯಲ್ ಚಿತ್ರಗಳ ಶೈಲಿಯ ಅಭಿನಯವನ್ನು ಮೊದಲಿನಿಂದಲೂ ಇಷ್ಟಪಡುವುದಿಲ್ಲ.

ಸಿನಿಮಾ ನೈಜ ದೃಶ್ಯಗಳನ್ನೇ ಒಳಗೊಂಡಿರಬೇಕು ಎಂದು ನೀವು ತೀರ್ಮಾನಿಸಿದ್ದು ಯಾವಾಗ?
ಸಿನಿಮಾ ವ್ಯಾಕರಣ ಗೊತ್ತಾದಾಗಿನಿಂದಲೇ ಆ ನಿಲುವು ನನ್ನದಾಗಿತ್ತು. 1962ರಲ್ಲಿ ನಾನು ಡ್ರಾಮಾ ಇದ್ದಂಥ ಸಿನಿಮಾ ಮಾಡಿದೆ. ಒಂದು ಗ್ಯಾಂಗ್‌ನ ಜನರ ಭಿನ್ನಾಭಿಪ್ರಾಯವೇ ಅದರ ಜೀವಾಳ. ಅದನ್ನೂ ನಾನು ನೈಜವಾಗಿರುವಂತೆಯೇ ಚಿತ್ರೀಕರಿಸಿದ್ದೆ.

ಸಂಸ್ಕಾರ ಆ ವಿಷಯದಲ್ಲಿ ನನ್ನ ಪಾಲಿಗೆ ಇನ್ನೊಂದು ಜಿಗಿತದಂತೆ ಆಯಿತು. ಆ ಸಿನಿಮಾದಲ್ಲಿ ಬಂಡವಾಳಶಾಹಿಗಳಿರಲಿಲ್ಲ, ವಿತರಕರು ಇರಲಿಲ್ಲ. ಎಲ್ಲರೂ ನಮ್ಮ ನಮ್ಮ ಕೆಲಸಗಳನ್ನು ತುಂಬಾ ಶ್ರದ್ಧೆಯಿಂದ ಮಾಡಿದೆವು. ಚಿತ್ರದ ಉದ್ದೇಶದ ವಿಷಯದಲ್ಲಿ ಎಲ್ಲರೂ ಸಮಾನ ಮನಸ್ಕರೇ ಆಗಿದ್ದದ್ದು ಮತ್ತೊಂದು ವಿಶೇಷ.

‘ಸಂಸ್ಕಾರ’ದ ನಂತರ ಕನ್ನಡದಲ್ಲಿ ನಿಮಗೆ ಸಿನಿಮಾಟಾಗ್ರಫರ್‌ ಆಗಿ ಕೆಲಸ ಮಾಡುವ ಅವಕಾಶಗಳು ಹುಡುಕಿಕೊಂಡು ಬರಲಿಲ್ಲವೇ?
ಅನೇಕರು ನನ್ನಲ್ಲಿಗೆ ಬಂದು ಕಥೆ ಹೇಳಿದರು. ನನಗೆ ಯಾವ ಕಥೆಯೂ ರುಚಿಸಲಿಲ್ಲ. ಆಮೇಲೆ  ಲಂಡನ್‌ಗೆ ಹೋಗಲು ತೀರ್ಮಾನಿಸಿದೆ. 

ನಿಮ್ಮ ಕೆಲವು ಚಿತ್ರಗಳು ಮಹಿಳಾ ಪ್ರಧಾನ ಎನ್ನುವುದು ಅವುಗಳ ಶೀರ್ಷಿಕೆಗಳಿಂದಲೇ (ಉದಾಹರಣೆಗೆ: ಪ್ರಾಮಿಸ್ಡ್‌ ವುಮನ್, ಜರ್ನಿ ಅಮಾಂಗ್‌ ವುಮೆನ್) ಗೊತ್ತಾಗುತ್ತದೆ. ಮಹಿಳೆಯರ ಕುರಿತ ವಸ್ತು ಅಷ್ಟು  ಕಾಡಿದ್ದು ಏಕೆ?
ನನಗೆ ಮಹಿಳೆಯರೆಂದರೆ ಇಷ್ಟ. ಮಹಿಳೆಯರ ಜಗತ್ತು ಒಡ್ಡುವ ಸವಾಲುಗಳನ್ನು ನಿಭಾಯಿಸಲು ಆಗದೆ ಪುರುಷರು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ಸ್ವಪ್ರತಿಷ್ಠೆಯಿಂದಾಗಿ ಮಹಿಳೆಯರಷ್ಟು ಮನೋಬಲ ಅವರಿಗೆ ಇರುವುದಿಲ್ಲ. ಇದರಿಂದ ಆಗುವ ಹತಾಶೆಯೇ ಎಲ್ಲಾ ರೀತಿಯ ಹಿಂಸೆಗಳಿಗೆ ಕಾರಣ. ಅದು ಯುದ್ಧಕ್ಕೆ ದಾರಿ ಮಾಡಿಕೊಡುವಷ್ಟು ತೀವ್ರವಾದುದು. ಮಹಿಳೆಯರ ಮಟ್ಟಕ್ಕೆ ಪುರುಷರು ಮಾನಸಿಕವಾಗಿ ಬೆಳೆಯಲು ಯತ್ನಿಸುವ ವಸ್ತುಗಳನ್ನೇ ನನ್ನ ಚಿತ್ರಗಳು ಹೆಚ್ಚಾಗಿ ಒಳಗೊಂಡಿವೆ.

ನಿರ್ದೇಶಕರಾಗಿ, ಸಿನಿಮಾಟಾಗ್ರಫರ್‌ ಆಗಿ ನಿಮ್ಮನ್ನು ಬಹುವಾಗಿ ಕಾಡಿದ ನೀವು ಕೆಲಸ ಮಾಡಿರುವ ಚಿತ್ರಗಳು ಯಾವುವು?
ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿರುವ ಚಲನಚಿತ್ರವೊಂದರ ವಸ್ತು ಕಾಡುತ್ತಿದೆ. ಈಗ ಆ ಚಿತ್ರವನ್ನು ಎಡಿಟ್ ಮಾಡುತ್ತಿದ್ದೇನೆ. ಚಿತ್ರಕ್ಕೆ ಅಂತ್ಯ ಒದಗಿಸುವುದು ನನಗೆ ಪರಮ ಕಷ್ಟದ ಕೆಲಸ. ಅದಕ್ಕಾಗಿ ನಾನು ತುಂಬಾ ಕಷ್ಟ ಪಡುತ್ತೇನೆ. ‘ಮೇಕಿಂಗ್ ಆಫ್ ಸಂಸ್ಕಾರ’ ಕಿರುಚಿತ್ರ ಮಾಡುತ್ತಿದ್ದು, ಅದರ ಕೆಲಸವೂ ಕಾಡುತ್ತಿದೆ.

1960ರ ದಶಕದ ಕೊನೆಯಲ್ಲಿ ಸಂಸ್ಕಾರ ಚಿತ್ರೀಕರಣದ ಸಂದರ್ಭದಲ್ಲಿ ನೋಡಿದ ಸ್ಥಳಗಳಿಗೆ ಮತ್ತೆ ಭೇಟಿ ನೀಡಿದಾಗ (ಮೇಕಿಂಗ್ ಆಫ್ ಸಂಸ್ಕಾರ ಕಿರುಚಿತ್ರಕ್ಕಾಗಿ) ಏನನ್ನಿಸಿತು?
ಜಗತ್ತು ಬದಲಾಗಿದೆ. ಜನ ಇನ್ನಷ್ಟು ಚಿಪ್ಪಿನೊಳಗೆ ಬದುಕತೊಡಗಿದ್ದಾರೆ. ಸುಂದರವಾದ ಆ ಪರಿಸರ ಈಗಲೂ ಅಷ್ಟೇ ಸುಂದರವಾಗಿದೆ. ನದಿ ಇಂದಿಗೂ ಚೆನ್ನಾಗಿ ಹರಿಯುತ್ತಿದೆ. ಕಲಾವಿದ ವಾಸುದೇವ್ ಅವರನ್ನು ಕೇಳಬೇಕಾದ ಒಂದು ಪ್ರಶ್ನೆ ಬಹುದಿನಗಳಿಂದ ನನ್ನಲ್ಲೇ ಉಳಿದಿದೆ.

ಒಂದು ಸಿನಿಮಾಕ್ಕೂ ಕೆಲಸ ಮಾಡಿದ ಅನುಭವ ಇಲ್ಲದ ಅವರು ಸಂಸ್ಕಾರಕ್ಕಾಗಿ ಅಷ್ಟೆಲ್ಲಾ ಕೆಲಸಗಳನ್ನು ಅದು ಹೇಗೆ ಮಾಡಿದರೋ? ನನಗೆ ಅದು ಬೆರಗಿನ ಸಂಗತಿ. ಕಾಸ್ಟ್ಯೂಮ್‌ಗಳನ್ನು ಹೊಂದಿಸುವುದು, ಹಳ್ಳಿಯ ಚಿತ್ರಣ ಕಟ್ಟಿಕೊಡುವುದು, ಶೂದ್ರರ ಗುಡಿಸಲುಗಳನ್ನು ನಿರ್ಮಿಸುವುದು ಇತ್ಯಾದಿ ಕಠಿಣ ಕೆಲಸಗಳನ್ನು ಅವರು ಆಗ ಮಾಡಿದ್ದರು.

ಈಗಿನ ಸಿನಿಮಾಗಳನ್ನು ನೀವು ನೋಡುತ್ತೀರಾ? ಭಾರತೀಯ ಭಾಷೆಯ ಚಿತ್ರಗಳನ್ನು ನೋಡಿದರೆ ಏನನ್ನಿಸುತ್ತದೆ?
ಅವಕಾಶ ಸಿಕ್ಕಾಗ ನೋಡುತ್ತೇನೆ. ‘ಲೂಸಿಯಾ’ ಕನ್ನಡ ಸಿನಿಮಾ ನೋಡಿದೆ. ಮಿಸ್ಟರಿ ಕಥೆಯನ್ನು ನಿರ್ದೇಶಕರು ಮನಮುಟ್ಟುವಂತೆ ಹೇಳಿದ್ದಾರೆ. ಅಂಥ ಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ ಎನ್ನುವುದೇ ಮೆಚ್ಚತಕ್ಕ ವಿಷಯ.

ಕೆಲವು ಹಿಂದಿ ಚಿತ್ರಗಳನ್ನು ಆಗಾಗ ನೋಡುತ್ತಿರುತ್ತೇನೆ. ‘ಥ್ರೀ ಈಡಿಯಟ್ಸ್’ ಅದಕ್ಕೊಂದು ಉದಾಹರಣೆ. ಬಾಲಿವುಡ್ ನಟ ಅಮೀರ್ ಖಾನ್ ಹೋಗುತ್ತಿರುವ ಹಾದಿ ನನಗೆ ಇಷ್ಟ. ಒಂದು ಕಡೆ ಕಮರ್ಷಿಯಲ್ ಚಿತ್ರಗಳನ್ನು ಮಾಡುತ್ತಾ, ಇನ್ನೊಂದು ಕಡೆ ತಮ್ಮಿಷ್ಟದ ಸೂಕ್ಷ್ಮ ಸಂವೇದನೆಯ ಸಿನಿಮಾಗಳತ್ತಲೂ ಗಮನ ಹರಿಸುವ ಅವರ ಧೋರಣೆ ಆಸಕ್ತಿಕರವಾಗಿದೆ.

ಆಸ್ಟ್ರೇಲಿಯಾದ ಕನ್‌ಸ್ಟ್ರಕ್ಷನ್ ಕಂಪೆನಿಯೊಂದು ಭಾರತೀಯ ಚಿತ್ರರಂಗದ ಜೊತೆ ಒಪ್ಪಂದ ಮಾಡಿಕೊಂಡು, ನಿರ್ಮಾಣದಲ್ಲಿ ತೊಡಗುವ ಉತ್ಸಾಹ ತೋರಿಸಿದೆ. ಅಲ್ಲಿಗೆ ಬಂದು ಭಾರತೀಯ ಚಿತ್ರಗಳ ಶೂಟಿಂಗ್ ಮಾಡುವುದನ್ನೂ  ಗಮನಿಸಿದ್ದೇನೆ. ಭಾರತೀಯ ಚಿತ್ರರಂಗ ಜಾಗತಿಕವಾಗಿ ಎಷ್ಟು ಮುಖ್ಯವಾಗುತ್ತಿದೆ ಎನ್ನುವುದಕ್ಕೆ ಇವೆಲ್ಲಾ ಉದಾಹರಣೆಗಳು.

ತಾಂತ್ರಿಕ ಕೌಶಲಕ್ಕೆ ಈಗ ಆದ್ಯತೆ ಸಿಕ್ಕಿದೆ. ಇದರಿಂದ ಸಿನಿಮಾಟಾಗ್ರಫರ್‌ಗಳ ಸೃಜನಶೀಲತೆಯಲ್ಲಿ ಎಂಥ ಬದಲಾವಣೆ ಆಗಿದೆ? ಲೆನ್ಸ್ ಫಿಲಾಸಫಿ ಎನ್ನುವುದೇನಾದರೂ ಈಗ ಇದೆಯೇ?
ತಾಂತ್ರಿಕ ಕೌಶಲದಲ್ಲಿ ಗಮನ ಸೆಳೆಯುವ ಹಲವು ಪ್ರತಿಭೆಗಳು ನಮ್ಮ ನಡುವೆ ಇದ್ದಾರೆ. ಕಳೆದ ಒಂದು ದಶಕದಲ್ಲಿ ಆಸ್ಟ್ರೇಲಿಯಾದ ಮೂವರು ಸಿನಿಮಾಟಾಗ್ರಫರ್‌ಗಳಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ದೊಡ್ಡ ಬಜೆಟ್‌ನ ಚಿತ್ರಗಳು ತಾಂತ್ರಿಕ ಪ್ರಭೆಯಿಂದ ಕೋರೈಸುತ್ತವೆ. ಡಿಜಿಟಲ್ ಇಂಟರ್‌ಮೀಡಿಯೇಷನ್, ಸಿ.ಜಿ.ಐ, ಮಾಂಟೇಜ್ ಇತ್ಯಾದಿ ಮುಂಚೂಣಿಯಲ್ಲಿವೆ. ವೈಯಕ್ತಿಕವಾಗಿ ನಾನು ನೈಜತೆಯನ್ನು ಬಯಸುವವನು. ಚಿತ್ರೀಕರಿಸಿದ ದೃಶ್ಯಗಳಿಗೆ ಪ್ರಭೆಯ ಲೇಪ ಕೊಟ್ಟು ಜನರಿಗೆ ತೋರಿಸುವುದು ಅರ್ಥಾತ್ ಜನರ ಮೇಲೆ ಎರಗುವುದು ನನಗಂತೂ ಇಷ್ಟವಿಲ್ಲ.

ಸಿನಿಮಾ ಅಲ್ಲದೆ ನಿಮ್ಮ ಆಸಕ್ತಿಗಳೇನು?
ಸಮುದ್ರದ ತಟದಲ್ಲಿ ನಡೆಯುವುದು, ಸಮುದ್ರದ ನೀರಿಗೆ ಧುಮುಕಿ ಈಜುವುದು ಇಷ್ಟ. ಕೆಲವು ದೇಶಗಳ ಪ್ರವಾಸ ಮಾಡಿದ್ದೇನೆ. ಹಾಗೆ ಸುತ್ತುವುದೇ ಮಜಾ. ಛಾಯಾಚಿತ್ರಗಳನ್ನು ತೆಗೆಯುವುದು ಕೂಡ ನನ್ನ ಹವ್ಯಾಸ. ನಾನು ತೆಗೆದ ಕೆಲವು ಚಿತ್ರಗಳ ಪ್ರದರ್ಶನವೊಂದನ್ನು ಕೂಡ ಆಯೋಜಿಸಿದ್ದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT