ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಸಿ ಪಡೆದ ವಿದ್ಯಾರ್ಥಿಗಳು, ಮುಚ್ಚಿದ ಶಾಲೆ

ಆಡಳಿತ ಮಂಡಳಿ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ: ಅತಂತ್ರರಾದ ಅತಿಥಿ ಶಿಕ್ಷಕರು
Last Updated 29 ಜುಲೈ 2016, 11:35 IST
ಅಕ್ಷರ ಗಾತ್ರ

ತುಮಕೂರು: ‘ಕನ್ನಡ ಶಾಲೆ ಉಳಿಸಿ’ ಎಂಬ ಹೋರಾಟಗಾರರ ಕೂಗು ಅನುದಾನಿತ ಶಾಲೆ ಆಡಳಿತ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕೇಳಿಸಿಯೇ ಇಲ್ಲದಂತಿದೆ.

ಕಳೆದ ವರ್ಷ ಪೂರ್ಣ ಹಾಜರಾತಿ ಹೊಂದಿದ್ದ ಜಯನಗರ ಪೂರ್ವ ಬಡಾವಣೆಯ  ಮಾರುತಿ ಅನುದಾನಿತ ಪ್ರೌಢಶಾಲೆ ಈಗ ವಿದ್ಯಾರ್ಥಿಗಳ ಪ್ರವೇಶವಿಲ್ಲದೇ ಬಾಗಿಲು ಮುಚ್ಚಿದ್ದು, ಶಾಲಾ ಕಟ್ಟಡ ನೆಲಸಮವಾಗುತ್ತಿದೆ. ಇಲ್ಲಿರುವ ಇಬ್ಬರು ಕಾಯಂ ಶಿಕ್ಷಕರು ಪಾಠ ಮಾಡದೆಯೂ ವೇತನ ಪಡೆಯುತ್ತಿದ್ದು, ಮೂವರು ಅತಿಥಿ ಶಿಕ್ಷಕರು ಅತಂತ್ರರಾಗಿದ್ದಾರೆ.

ಆಡಳಿತ ಮಂಡಳಿಯ ಧೋರಣೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಸ್ಥಳೀಯ ವಿದ್ಯಾರ್ಥಿಗಳು 15–20 ಕಿ.ಮೀ ದೂರವಿರುವ ಹೆಗ್ಗೆರೆ, ಕರಡಿಗೆರೆ ಕಾವಲ್‌ ಸೇರಿದಂತೆ ಹಲವು ಶಾಲೆಗಳಿಗೆ ದಾಖಲಾಗಿದ್ದಾರೆ.

74 ರಲ್ಲಿ ಉಳಿದವರೇ ಐವರು; ಕಳೆದ ವರ್ಷ ಪ್ರೌಢಶಾಲೆಯ ಹಾಜರಾತಿ 70 ದಾಟಿತ್ತು. ಈ ವರ್ಷ ಕೇವಲ 5 ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಐವರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಪ್ರವೇಶವೇ ಪಡೆದಿಲ್ಲ.

2015– 16ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾರುತಿ ಪ್ರೌಢಶಾಲೆ ಶೇ 52 ರಷ್ಟು ಫಲಿತಾಂಶ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. 8 ರಿಂದ 9ನೇ ತರಗತಿಗೆ ಉತ್ತೀರ್ಣರಾದ 39 ವಿದ್ಯಾರ್ಥಿಗಳಲ್ಲಿ 35 ಮಂದಿ ವರ್ಗಾವಣೆ ಚೀಟಿ ಪಡೆದು, ಬೇರೆ ಶಾಲೆಗಳಿಗೆ ಹೋಗಿದ್ದಾರೆ. 9ರಿಂದ 10ನೇ ತರಗತಿಗೆ ಪಾಸಾಗಿರುವ 25 ವಿದ್ಯಾರ್ಥಿಗಳಲ್ಲಿ 24 ಮಂದಿಯನ್ನು ಬೇರೆ ಶಾಲೆಗಳಿಗೆ ಹೋಗಿದ್ದಾರೆ.

ಸ್ಥಳಾಂತರ ಭೀತಿಗೆ ಶಾಲೆ ಬಂದ್‌: ‘ಶಾಲೆಯಿಂದ ಮಕ್ಕಳು ಹೊರಹೋಗಲು ಆಡಳಿತ ಮಂಡಳಿ ಬದಲಾವಣೆ ಹಾಗೂ ವಿಷಯ ಶಿಕ್ಷಕರ ಕೊರತೆಯೇ ಪ್ರಮುಖ ಕಾರಣ’ ಎಂಬುವುದು ಶಾಲಾ ಶಿಕ್ಷಕರ ಮಾತು.

‘ಶಾಲೆಯ ಆಡಳಿತ ವಿಜಯಪುರದ ಪಾಟೀಲ್‌ ಎಂಬುವರಿಗೆ ಹಸ್ತಾಂತರವಾಗಲಿದೆ ಎಂಬ ಸುದ್ದಿ ತಿಳಿದ ಪೋಷಕರು, ಶಾಲೆ ಸ್ಥಳಾಂತರವಾಗುವ ಭೀತಿಯಲ್ಲಿ ಬಲವಂತವಾಗಿ ಮಕ್ಕಳ ಟಿ.ಸಿ ಪಡೆದು ಬೇರೆ ಶಾಲೆಗಳಿಗೆ ಸೇರಿಸಿದರು’ ಎಂದು ಶಾಲೆಯ ಪ್ರಭಾರ ಪ್ರಾಂಶುಪಾಲ ಲಕ್ಷ್ಮಯ್ಯ ಅಳಲು ತೋಡಿಕೊಂಡರು.

‘ಪ್ರೌಢಶಾಲೆಯಲ್ಲಿ 2011ರಿಂದಲೂ ವಿಷಯ ಶಿಕ್ಷಕರ ಕೊರತೆ ಇತ್ತು. ಆಡಳಿತ ಮಂಡಳಿಯವರು ಕೂಡ ಪೋಷಕರು ಟಿಸಿ ಕೇಳಿದರೆ ಕೊಟ್ಟು ಕಳುಹಿಸಿ ಎಂದು ಮೌಖಿಕ ಸೂಚನೆ ನೀಡಿದ್ದರು. ಅದರಂತೆ ಕೇಳಿದವರಿಗೆ ವರ್ಗಾವಣೆ ಚೀಟಿ ಕೊಟ್ಟೆವು. ಈಗ ನೋಡಿದರೆ ಆಡಳಿತ ಮಂಡಳಿಯವರು ನಮ್ಮ ಗಮನಕ್ಕೆ ತರದೇ ಟಿ.ಸಿ.ಕೊಟ್ಟಿದ್ದೀರಾ ಎಂದು ದೂರಿ ನೋಟಿಸ್‌ ನೀಡಿದ್ದಾರೆ. ತಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದರು.

‘ಶಾಲೆ ಸ್ಥಳಾಂತರಕ್ಕೆ ಅನುಮತಿ ಹಾಗೂ ಕನ್ನಡ ಶಾಲೆ ಮುಚ್ಚದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಅವರಿಗೆ ನಾಲ್ಕೈದು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಮತ್ತೊಬ್ಬ ಶಿಕ್ಷಕ ವೀರಣ್ಣ ಹೇಳಿದರು.

‘ನಾಲ್ಕೈದು ವರ್ಷದಿಂದ ಶಾಲೆ ಉತ್ತಮವಾಗಿ ನಡೆಯುತ್ತಿತ್ತು. ನಾವು ಎಂಟನೇ ತರಗತಿಯಲ್ಲಿ ಇದ್ದಾಗ ಶಾಲೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದೆವು. ಐವರು ಶಿಕ್ಷಕರಿದ್ದರು.

ಉತ್ತಮ ಬೋಧನೆ, ಮಧ್ಯಾಹ್ನದ ಬಿಸಿಯೂಟ ಎಲ್ಲವೂ ಚೆನ್ನಾಗಿತ್ತು. ಈಗ ದಿಢೀರ್‌ ಶಾಲೆ ಹೊಡೆದು ಹಾಕುತ್ತಿರುವುದು ಆತಂಕ ಮೂಡಿಸಿದೆ’ ಎಂದು ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಾದ, ಪ್ರಸ್ತುತ ವರದರಾಜು ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿರುವ ಶಿವಕುಮಾರ್‌, ನವೀನ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಪಾಲಿಕೆಯಿಂದ ಅನುಮತಿ
‘ಜೂನ್‌ 31ರೊಳಗೆ ವಿದ್ಯಾರ್ಥಿಗಳ ಪ್ರವೇಶ ಆಗಬೇಕಿತ್ತು. ಆದರೆ ಯಾರೂ ಪ್ರವೇಶ ಪಡೆದಿಲ್ಲ. ಆರು ಶಿಕ್ಷಕರಲ್ಲಿ ಐವರು ನಿವೃತ್ತಿಯಾ ಗಿದ್ದು, ಒಬ್ಬರೇ ಇದ್ದಾರೆ. ಶಿಕ್ಷಕರ ನೇಮಕಾತಿಗೆ ಇಲಾಖೆ ಅನುಮತಿ ಕೊಟ್ಟಿಲ್ಲ. ಹಾಗಾಗಿ ಪೋಷಕರು ಬಂದು ಗಲಾಟೆ ಮಾಡಿದ್ದಾರೆ. ಈ ಕಾರಣಕ್ಕೆ ಪ್ರಭಾರ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಟಿ.ಸಿ. ಕೊಟ್ಟು ಕಳುಹಿಸಿದ್ದಾರೆ’ ಎಂದು ತಿಳಿಸಿದರು.

‘ಶಾಲೆಯ ಕಟ್ಟಡ ಕೆಲವೆಡೆ ಬಿರುಕು ಬಿಟ್ಟಿತ್ತು. ಕಟ್ಟಡದ ಮೇಲ್ಭಾಗದಲ್ಲಿ ವಿದ್ಯಾರಣ್ಯ ಪಿಯು ಕಾಲೇಜಿಗೆ ಬಾಡಿಗೆ ಕೊಟ್ಟಿದ್ದೇವೆ. ಅವರನ್ನು ಪಕ್ಕದಲ್ಲಿರುವ ಕೊಠಡಿಗಳಿಗೆ ಸ್ಥಳಾಂತರಿಸಿ, ಕಟ್ಟಡ ಕೆಡವುತ್ತಿದ್ದೇವೆ. ಇದಕ್ಕಾಗಿ ಪಾಲಿಕೆಯಿಂದ ಅನುಮತಿ ಪಡೆಯಲಾಗಿದೆ’ ಎಂದರು.

ಅನುದಾನ ನಿಲ್ಲಿಸಿ, ಕ್ರಮ
ಬಹುತೇಕ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಬೇರೆಡೆ ಹೋಗಿದ್ದಾರೆ. ಶಾಲೆಯಿಂದ ಹೊರಗುಳಿದ ಐವರನ್ನು ಪತ್ತೆ ಹಚ್ಚಿ, ಶಾಲೆಗೆ ಕಳುಹಿಸಬೇಕು. ಶಾಲೆಗೆ ನೀಡುತ್ತಿರುವ ಅನುದಾನ ನಿಲ್ಲಿಸಿ, ಆಡಳಿತ ಮಂಡಳಿ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಜರುಗಿಸಬೇಕು.
–ಬಾ.ಹ.ರಮಾಕುಮಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ

ಸ್ಥಳಾಂತರಕ್ಕೆ ಅನುಮತಿ ಕೊಟ್ಟರೆ ಶಾಲೆ ಆರಂಭ
‘ಶಾಲೆ ಸ್ಥಳಾಂತರಕ್ಕೆ ಅನುಮತಿ ಕೋರಿ ಶಿಕ್ಷಣ ಇಲಾಖೆಗೆ ₹ 80 ಸಾವಿರ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರ ಸ್ಥಳಾಂತರಕ್ಕೆ ಅನುಮತಿ ನೀಡಿದರೆ ಶಾಲೆ ಪುನರಾರಂಭಿಸುತ್ತೇವೆ. ಕೊಡದಿದ್ದರೆ ಶಾಲೆ ಮುಚ್ಚುತ್ತೇವೆ’ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT