ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ರ‍್ಯಾಂಕಿಂಗ್‌: ಅಗ್ರ 2ನೇ ಸ್ಥಾನದಲ್ಲಿ ಆರ್.ಅಶ್ವಿನ್

Last Updated 30 ನವೆಂಬರ್ 2015, 10:18 IST
ಅಕ್ಷರ ಗಾತ್ರ

ದುಬೈ (ಪಿಟಿಐ): ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಐಸಿಸಿ ಟೆಸ್ಟ್ ಕ್ರಿಕೆಟ್ ರ‍್ಯಾಂಕಿಂಗ್‌ನ ಬೌಲಿಂಗ್ ವಿಭಾಗದಲ್ಲಿ ಸೋಮವಾರ ಅಗ್ರ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಇದು ಅಶ್ವಿನ್ ಅವರ ವೃತ್ತಿಶ್ರೇಷ್ಠ ಕ್ರಮಾಂಕ ಸಾಧನೆ. ಐದನೇ ಸ್ಥಾನದಲ್ಲಿದ್ದ ಅಶ್ವಿನ್ 856 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇಯ್ನ್ 884 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಹಾಶಿಮ್ ಆಮ್ಲಾ ಬಳಗದ ವಿರುದ್ಧ ನಾಗಪುರದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಅಶ್ವಿನ್ 98ಕ್ಕೆ 12 ವಿಕೆಟ್ ಸಾಧನೆ ಮಾಡಿದ್ದರು. ಇದರಿಂದ ಭಾರತ ತಂಡ 124 ರನ್‌ಗಳ ಗೆಲುವು ಪಡೆದಿತ್ತು.

ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್‌ಸನ್‌ ಹಾಗೂ ಪಾಕಿಸ್ತಾನದ ಯಾಸೀರ್ ಷಾ ಕ್ರಮವಾಗಿ 3 ಹಾಗೂ 4ನೇ ಸ್ಥಾನಗಳಲ್ಲಿದ್ದಾರೆ. ಈ ಇಬ್ಬರೂ ತಲಾ 846 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. ಇಂಗ್ಲೆಂಡಿನ ಸ್ಟುವರ್ಟ್‌ ಬ್ರಾಡ್‌ ಐದನೇ ಸ್ಥಾನದಲ್ಲಿದ್ದಾರೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಬಿಡಿ ಕುಸಿತ: ಇನ್ನು, ಬ್ಯಾಟಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಎ.ಬಿ.ಡಿವಿಲಿಯರ್ಸ್ ಅವರು ಅಗ್ರಸ್ಥಾನದಿಂದ ಕುಸಿದು ಮೂರನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡಿನ್ ಜೋ ರೂಟ್‌ ಅವರು ಅಗ್ರಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ರೂಟ್‌ಗಿಂತಲೂ ಒಂಬತ್ತು ಪಾಯಿಂಟ್ಸ್‌ ಹಿನ್ನಡೆ ಹೊಂದಿರುವ ಎಬಿಡಿ, ದೆಹಲಿಯಲ್ಲಿ ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದರೆ ಮತ್ತೆ ಅಗ್ರಸ್ಥಾನಕ್ಕೆ ಮರಳುವ ಅವಕಾಶಗಳಿವೆ.

ಕೊಹ್ಲಿ, ಧವನ್, ಸಹಾ ಜಿಗಿತ: ಭಾರತದ ಪೈಕಿ ಮುರಳಿ ವಿಜಯ್‌ ಅಗ್ರ 12ನೇ ಕ್ರಮಾಂಕದಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ ಏರಿಕೆ ಕಂಡು 16ನೇ ಸ್ಥಾನದಲ್ಲಿ, ಆರಂಭಿಕ ಆಟಗಾರ ಶಿಖರ್ ಧವನ್ ಒಂದು ಸ್ಥಾನ ಜಿಗಿತ ಕಂಡು 32 ಸ್ಥಾನದಲ್ಲಿದ್ದಾರೆ.

ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 10 ಸ್ಥಾನ ಏರಿಕೆ ಕಂಡು 92 ಕ್ರಮಾಂಕದಲ್ಲಿದ್ದಾರೆ. ಇದು ಅವರ ವೃತ್ತಿಶ್ರೇಷ್ಠ ರ‍್ಯಾಂಕಿಂಗ್‌.
ಮತ್ತೊಂದೆಡೆ, ತಂಡ ವಿಭಾಗದಲ್ಲಿ ಕೊಹ್ಲಿ ಬಳಗ 100 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಆಮ್ಲಾ ಬಳಗದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ 110 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿತ ಕಾಣುವ ಅವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT