ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌ ಕಡೆಗಣನೆ ಏಕೆ?

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನೊವಾಕ್‌ ಜೊಕೊವಿಚ್‌ ಬರುತ್ತಾರೆ... ವಿಶ್ವದ ಪ್ರಮುಖ ಸ್ಪರ್ಧಿ ಯೊಬ್ಬನ ಆಟವನ್ನು ನೋಡುವ ಅವಕಾಶ ದೊರೆಯಲಿದೆ... ಅವರು ಬಂದರೆ ಇಲ್ಲಿನ ಯುವ ಆಟಗಾರರಿಗೆ ಉತ್ತೇಜನ ಲಭಿಸಲಿದೆ... ಹೋದ ವಾರದ ಆರಂಭದಲ್ಲಿ ಬೆಂಗಳೂರಿನ ಟೆನಿಸ್‌ ಪ್ರೇಮಿಗಳಲ್ಲಿ ಇಂತಹ ಮಾತುಗಳು ಸಾಮಾನ್ಯವಾಗಿತ್ತು.

ಭಾರತ-ಸರ್ಬಿಯ ನಡುವಿನ ಡೇವಿಸ್‌ ಕಪ್‌ ವಿಶ್ವ ಗುಂಪಿನ ‘ಪ್ಲೇ ಆಫ್‌’ ಪಂದ್ಯಕ್ಕೆ ಮುನ್ನ ಉದ್ಯಾನ ನಗರಿಯ ಟೆನಿಸ್‌ ಪ್ರೇಮಿಗಳು ಜೊಕೊವಿಚ್‌ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು. ಆದರೆ ಅವರು ಹಿಂದೆ ಸರಿದ ಕಾರಣ ಎಲ್ಲರ ಉತ್ಸಾಹ ಇದ್ದಕ್ಕಿದ್ದಂತೆ ಕುಗ್ಗಿ ಹೋಗಿತ್ತು. ಯುಎಸ್‌ ಓಪನ್‌ ಟೂರ್ನಿಯ ಬೆನ್ನಲ್ಲೇ ಈ ಪಂದ್ಯ ನಡೆಯಲಿದ್ದ ಕಾರಣ ಜೊಕೊವಿಚ್‌ ಭಾರತಕ್ಕೆ ಬರುವುದು ಬಹುತೇಕ ಅನುಮಾನ ಎನಿಸಿತ್ತು. ಆದರೂ ಸರ್ಬಿಯ ತಂಡದಲ್ಲಿ ಅವರ ಹೆಸರು ಕಾಣಿಸಿಕೊಂಡಾಗ ಅಭಿಮಾನಿಗಳಿಗೆ ಉಂಟಾಗಿದ್ದ ಸಂತಸ ಅಷ್ಟಿಷ್ಟಲ್ಲ.

ಜೊಕೊವಿಚ್‌ ಯುಎಸ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೊರಿ ಕೈಯಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿದ್ದರು. ಈ ಸೋಲು ಅವರಿಗೆ ಇನ್ನಿಲ್ಲದ ನಿರಾಸೆ ಉಂಟುಮಾಡಿತ್ತು. ಕೊನೆಯ ಕ್ಷಣದಲ್ಲಿ ‘ಬಳಲಿಕೆಯ’ ಕಾರಣ ನೀಡಿ ಭಾರತಕ್ಕೆ ಬರುವುದಿಲ್ಲ ಎಂದರು. ಜೊಕೊವಿಚ್‌ ಬರುವಿಕೆಗಾಗಿ ಕಾದುಕುಳಿತಿದ್ದ ಅಭಿಮಾನಿಗಳು ನಿರಾಸೆಯ ಕಡಲಲ್ಲಿ ತೇಲಿದರು. ಅವರ ಅನುಪಸ್ಥಿತಿಯಲ್ಲೂ ಸರ್ಬಿಯ-–ಭಾರತ ನಡುವಿನ ಡೇವಿಸ್‌ ಕಪ್‌ ಪಂದ್ಯ ಟೆನಿಸ್‌ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡಿದ್ದು ನಿಜ.

ಕೆಲ ದಿನಗಳ ಹಿಂದೆ ವಿಶ್ವದ ಅತಿವೇಗದ ಓಟಗಾರ ಉಸೇನ್‌ ಬೋಲ್ಟ್‌ ಅವರು ಬೆಂಗಳೂ­ರಿನಲ್ಲಿ ಮಿಂಚು ಹರಿಸಿದ್ದರು. ಅದರ ಬೆನ್ನಲ್ಲೇ ಇನ್ನೊಬ್ಬ ಶ್ರೇಷ್ಠ ತಾರೆ ಮಿಂಚು ಹರಿಸುವ ನಿರೀಕ್ಷೆ ಇತ್ತಾದರೂ ಅದು  ಹುಸಿಯಾಗಿದೆ. ಡೇವಿಸ್‌ ಕಪ್‌ ಟೂರ್ನಿಗೆ ಟೆನಿಸ್‌ ಕ್ರೀಡೆಯ ‘ವಿಶ್ವಕಪ್‌’ ಎನ್ನಬಹುದು.  ಒಲಿಂಪಿಕ್ಸ್‌ನಂತಹ  ಕೂಟಗಳನ್ನು ಹೊರತುಪಡಿಸಿ ವಿವಿಧ ದೇಶಗಳ ಟೆನಿಸ್‌ ತಂಡಗಳು ಪರಸ್ಪರ ಪೈಪೋಟಿ ನಡೆಸುವುದು ಡೇವಿಸ್‌ ಕಪ್‌ನಲ್ಲಿ ಮಾತ್ರ.

ಇಲ್ಲಿ ಆಟಗಾರರಿಗೆ ತಮ್ಮ ದೇಶದ ಪರ ಆಡಲು ಅವಕಾಶ ಲಭಿಸುತ್ತದೆ. ಗ್ರ್ಯಾಂಡ್‌ ಸ್ಲಾಮ್‌ ಮತ್ತು ಎಟಿಪಿ ಟೂರ್ನಿಗಳಲ್ಲಿ ಗೆದ್ದರೆ ಆಟಗಾರರಿಗೆ ವೈಯಕ್ತಿಕವಾಗಿ ಹೆಸರು, ಗೌರವ ದೊರೆಯುತ್ತದೆಯೇ ಹೊರತು, ಅವರು ಪ್ರತಿನಿಧಿಸುವ ದೇಶಕ್ಕೆ ಹೆಚ್ಚಿನ ಲಾಭ ಲಭಿಸದು. ಪ್ರಮುಖ ಆಟಗಾರರು ಡೇವಿಸ್‌ ಕಪ್‌ನಿಂದ ಹಿಂದೆ ಸರಿಯುವುದು ಸಾಮಾನ್ಯ.

ಈ ಹಿಂದೆ ಕೂಡಾ ಪ್ರಮುಖ ಆಟಗಾರರು ಇದೇ ರೀತಿ ವಿವಿಧ ಕಾರಣಗಳನ್ನು ನೀಡಿ ಹಿಂದೆ ಸರಿದಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದೆ ಸರಿದ ಹಲವು ಉದಾಹರಣೆಗಳೂ ಇವೆ. ಏಕೆಂದರೆ ಗ್ರ್ಯಾಂಡ್‌ ಸ್ಲಾಮ್‌ ಮತ್ತು ಇತರ ಎಟಿಪಿ ಟೂರ್ನಿಗಳಿಗೆ ಹೋಲಿಸಿದರೆ ಡೇವಿಸ್‌ ಕಪ್‌ ಅಷ್ಟೊಂದು ‘ಆಕರ್ಷಣೀಯ’ ಟೂರ್ನಿಯಾಗಿ ಕಾಣಿಸುವುದಿಲ್ಲ. ಈ ಟೂರ್ನಿಯಲ್ಲಿ ಆಡಿದರೆ ಆಟಗಾರರಿಗೆ ಹೆಚ್ಚಿನ ಲಾಭವಿಲ್ಲ. ಭಾರಿ ಹಣ ಕೂಡಾ ದೊರೆಯುವುದಿಲ್ಲ.

ಅದರ ಬದಲು ಯಾವುದಾದರೂ ಎಟಿಪಿ ಟೂರ್ನಿಯಲ್ಲಿ ಆಡಿ ಗೆದ್ದರೆ ಕೈತುಂಬಾ ಹಣ ದೊರೆಯುತ್ತದೆ. ಜೊಕೊವಿಚ್‌ ಹಿಂದೆ ಸರಿದಿದ್ದರ ಹಿಂದೆ ಬೇರೆ ಹಲವು ಕಾರಣಗಳು ಇರಬಹುದು. ‘ಬಳಲಿಕೆ’ ಎಂಬುದು ಒಂದು ನೆಪ ಅಷ್ಟೆ. ಅವರು ಡೇವಿಸ್‌ ಕಪ್‌ ಪಂದ್ಯವನ್ನು ಕಡೆಗಣಿಸುವ ಮೂಲಕ ಬೆಂಗಳೂರಿನ ಸಾವಿರಾರು ಟೆನಿಸ್‌ ಪ್ರೇಮಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ.

ಸುದೀರ್ಘ ಇತಿಹಾಸ
ಡೇವಿಸ್‌ ಕಪ್‌ ಟೂರ್ನಿ ಇಂದು, ನಿನ್ನೆ ಆರಂಭವಾದುದಲ್ಲ. ಅದಕ್ಕೆ ಸುದೀರ್ಘ ಇತಿಹಾಸವಿದೆ. 1900 ರಲ್ಲಿ ಮೊದಲ ಟೂರ್ನಿ ನಡೆದಿತ್ತು. ಆ ಬಳಿಕ ಕಾಲಕ್ಕೆ ತಕ್ಕಂತೆ ಟೂರ್ನಿಯ ಮಾದರಿಯಲ್ಲಿ ಬದಲಾವಣೆಗಳಾಗಿವೆ. ಪ್ರಸಕ್ತ 100 ಕ್ಕೂ ಅಧಿಕ ದೇಶಗಳು ಪಾಲ್ಗೊಳ್ಳುವ ಪ್ರಮುಖ ಟೂರ್ನಿಯಾಗಿ ಬದಲಾಗಿದೆ. 2013ರ ಋತುವಿನಲ್ಲಿ ಒಟ್ಟು 130 ತಂಡಗಳು ಈ ಟೂರ್ನಿಯ ವಿವಿಧ ಹಂತಗಳಲ್ಲಿ ಆಡಿದ್ದವು.

ಡೇವಿಸ್‌ ಕಪ್‌ನಲ್ಲಿ ಅತಿಹೆಚ್ಚು ಸಲ ಪ್ರಶಸ್ತಿ ಗೆದ್ದ ಶ್ರೇಯ ಅಮೆರಿಕದ ಹೆಸರಲ್ಲಿದೆ.  ಈ ದೇಶದ ತಂಡ ಒಟ್ಟು 32 ಸಲ ಚಾಂಪಿಯನ್‌ ಆಗಿದೆ. ಆಸ್ಟ್ರೇಲಿಯ (28) ಬಳಿಕದ ಸ್ಥಾನದಲ್ಲಿದೆ. 10ಕ್ಕಿಂತ ಹೆಚ್ಚಿನ ಸಲ ಚಾಂಪಿಯನ್‌ಪಟ್ಟ ಅಲಂಕರಿಸಿದ್ದು ಈ ಎರಡು ತಂಡಗಳು ಮಾತ್ರ. ಫ್ರಾನ್ಸ್‌ ಮತ್ತು ಬ್ರಿಟನ್‌ (ತಲಾ 9) ಬಳಿಕದ ಸ್ಥಾನಗಳಲ್ಲಿವೆ.

ಹಿಂದಡಿ ಇಡುತ್ತಿರುವ ಭಾರತ
ಭಾರತ ತಂಡ ಡೇವಿಸ್‌ ಕಪ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. 1987 ರಲ್ಲಿ ಕೊನೆಯದಾಗಿ ಫೈನಲ್‌ ಪ್ರವೇಶಿಸಿತ್ತು. ಆ ಬಳಿಕದ ಎರಡೂವರೆ ದಶಕದಲ್ಲಿ ಭಾರತ ಸಾಕಷ್ಟು ಏರಿಳಿತಗಳನ್ನು ಕಂಡಿದೆ.   ಸಿಂಗಲ್ಸ್‌ ವಿಭಾಗದಲ್ಲಿ ಗೆಲುವು ತಂದುಕೊಡ ಬಲ್ಲ ಸಮರ್ಥ ಆಟಗಾರ ಇಲ್ಲದೇ ಇರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ವಿಜಯ್‌ ಅಮೃತ್‌ರಾಜ್‌, ಆನಂದ್‌ ಅಮೃತ್‌ರಾಜ್‌, ರಾಮ ನಾಥನ್‌ ಕೃಷ್ಣನ್‌ ಮತ್ತು ರಮೇಶ್‌ ಕೃಷ್ಣನ್‌ ಅವರು ಆಡುತ್ತಿದ್ದ ಅವಧಿಯಲ್ಲಿ ಭಾರತ ಹಲವು ಸ್ಮರಣೀಯ ಗೆಲುವುಗಳನ್ನು ಪಡೆದಿತ್ತು. ಪ್ರಬಲ ತಂಡಗಳಿಗೆ ಆಘಾತ ನೀಡಿತ್ತು.

ಆದರೆ ಸಿಂಗಲ್ಸ್‌ ವಿಭಾಗದ ವಿಶ್ವ ರ್‍್ಯಾಂಕಿಂಗ್‌­­ನಲ್ಲಿ ಅಗ್ರ 50 ರೊಳಗೆ ಕಾಣಿಸಿ­ಕೊಳ್ಳಬಲ್ಲ ಆಟಗಾ­ರನನ್ನು ಬೆಳೆಸಲು ಭಾರತಕ್ಕೆ ಆಗಿಲ್ಲ. ಲಿಯಾಂಡರ್‌ ಪೇಸ್‌ ಹಲವು ವರ್ಷ­ಗಳಿಂದ ಡೇವಿಸ್‌ ಕಪ್‌ ಆಡು­ತ್ತಿದ್ದಾರೆ. ಸಾಕಷ್ಟು ಜಯ­ಗಳನ್ನು ಪಡೆದಿ ದ್ದಾರೆ. ಆದರೆ ಡೇವಿಸ್‌ ಕಪ್‌ ಎಂಬುದು ‘ತಂಡ’ ಕ್ರೀಡೆ. ಯಶಸ್ಸು ಪಡೆಯಲು ಎಲ್ಲರೂ ಉತ್ತಮ ಆಟ ತೋರುವುದು  ಅಗತ್ಯ.

41ರ ಹರೆಯದ ಪೇಸ್‌ ಇನ್ನು ಅಧಿಕ ವರ್ಷ ಆಡಲು ಸಾಧ್ಯವಿಲ್ಲ. ಅವರ ನಿವೃತ್ತಿಯ ಬಳಿಕ ಡಬಲ್ಸ್‌ ವಿಭಾಗ ತನ್ನ ಬಲ ಕಳೆದುಕೊಳ್ಳಲಿದೆ. ಆದ್ದರಿಂದ ಸೋಮದೇವ್‌ ದೇವವರ್ಮನ್‌, ಯೂಕಿ ಭಾಂಬ್ರಿ ಮತ್ತು ರೋಹನ್‌ ಬೋಪಣ್ಣ ಅವರ ಮೇಲಿರುವ ಜವಾಬ್ದಾರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. 

ಏಷ್ಯನ್‌ ಕ್ರೀಡಾಕೂಟ ಮುಖ್ಯವಲ್ಲವೇ?
ಭಾರತದ ಪ್ರಮುಖ ಟೆನಿಸ್‌ ಆಟಗಾರರು ಏಷ್ಯನ್‌ ಕ್ರೀಡಾಕೂಟದಿಂದ ಹಿಂದೆ ಸರಿದದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ‘ದೇಶಕ್ಕಾಗಿ ಆಡುವುದಕ್ಕಿಂತ ಹಣ ಗಳಿಕೆಯೇ ಮುಖ್ಯ’ ಎಂಬ ಟೀಕೆ ಕೇಳಿ ಬಂದಿದೆ. ಲಿಯಾಂಡರ್‌ ಪೇಸ್‌, ಸೋಮದೇವ್‌ ದೇವವರ್ಮನ್‌ ಮತ್ತು ರೋಹನ್‌ ಬೋಪಣ್ಣ ದಕ್ಷಿಣ ಕೊರಿಯದ ಇಂಚೋನ್‌ ನಲ್ಲಿ ಇದೇ ವಾರ ಆರಂಭವಾಗಲಿರುವ ಏಷ್ಯನ್‌ ಕ್ರೀಡಾ ಕೂಟದಲ್ಲಿ ಆಡುತ್ತಿಲ್ಲ.

ಈ ಅವಧಿಯಲ್ಲಿ ಎಟಿಪಿ ಮತ್ತು ಡಬ್ಲ್ಯುಟಿಎ ಟೂರ್ನಿಗಳು ನಡೆಯಲಿರುವುದೇ ಇದಕ್ಕೆ ಕಾರಣ. ಈ ಆಟಗಾರರಿಗೆ ರ್‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಲು ಎಟಿಪಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ. ಸರ್ಬಿಯ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಎಟಿಪಿ ಟೂರ್ನಿಗಳು ಇರುತ್ತಿದ್ದಲ್ಲಿ, ಭಾರತದ ಆಟಗಾರರು ಡೇವಿಸ್‌ ಕಪ್‌ನಿಂದಲೂ ಹಿಂದೆ ಸರಿಯುತ್ತಿದ್ದರೇ ಎಂಬುದು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.

ಡೇವಿಸ್‌ ಕಪ್‌ನಲ್ಲಿ ಭಾರತದ ಸಾಧನೆ...
ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳ ಸಿಂಗಲ್ಸ್‌ ವಿಭಾಗದಲ್ಲಿ ಭಾರತಕ್ಕೆ ಹೆಚ್ಚಿನ ಯಶಸ್ಸು ದೊರೆತಿಲ್ಲ. ಆದ್ದರಿಂದ ಭಾರತದ ಟೆನಿಸ್‌ ಪ್ರೇಮಿಗಳು ‘ವಿಶ್ವಕಪ್‌’ ಎನಿಸಿರುವ ಡೇವಿಸ್‌ ಕಪ್‌ ಪಂದ್ಯಗಳನ್ನು ಕುತೂಹಲದಿಂದ ನೋಡುತ್ತಾರೆ. ಭಾರತ ಒಮ್ಮೆಯೂ ಡೇವಿಸ್‌ ಕಪ್‌ ಎತ್ತಿಹಿಡಿದಿಲ್ಲ. ಆದರೆ ಮೂರು ಸಲ ‘ರನ್ನರ್‌ ಅಪ್‌’ ಆಗಿದೆ. 1966, 1974 ಮತ್ತು 1987 ರಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಭಾರತದ ಅತ್ಯುತ್ತಮ ಪ್ರದರ್ಶನ 1966ರಲ್ಲಿ ಬಂದಿತ್ತು. ಕೋಲ್ಕತ್ತದಲ್ಲಿ ನಡೆದಿದ್ದ ಅಂತರ ವಲಯ ಫೈನಲ್‌ನಲ್ಲಿ ಭಾರತ 3–2 ರಲ್ಲಿ ಬ್ರೆಜಿಲ್‌ ತಂಡವನ್ನು ಮಣಿಸಿತ್ತು. ಈ ಹಣಾಹಣಿಯ ಮೊದಲ ನಾಲ್ಕು ಪಂದ್ಯಗಳ ಬಳಿಕ ಉಭಯ ತಂಡಗಳು 2–2 ರಲ್ಲಿ ಸಮಬಲ ಸಾಧಿಸಿದ್ದವು. ಇದರಿಂದ ನಿರ್ಣಾಯಕ ಸಿಂಗಲ್ಸ್‌ ಎರಡೂ ತಂಡಗಳಿಗೆ ಮಹತ್ವದ್ದಾಗಿತ್ತು. ರಾಮನಾಥನ್‌ ಕೃಷ್ಣನ್‌ ಅವರು ಕೊನೆಯ ಸಿಂಗಲ್ಸ್‌ನಲ್ಲಿ 3–6, 6–4, 10–12, 7–5, 6–2 ರಲ್ಲಿ ಬ್ರೆಜಿಲ್‌ನ ಥಾಮಸ್‌ ಕಾಶ್‌ ಅವರನ್ನು ಮಣಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಕಾಶ್‌ ಅಂದು ವಿಶ್ವ ರ್‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿದ್ದರು. ಆದರೆ ಚಾಲೆಂಜ್‌ ರೌಂಡ್‌ ಫೈನಲ್‌ನಲ್ಲಿ ಭಾರತ 1–4 ರಲ್ಲಿ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿತ್ತು.

1974 ರಲ್ಲಿ ಭಾರತ ಕನಸಿನ ಓಟ ನಡೆಸಿತ್ತು. ಪ್ರಬಲ ಆಸ್ಟ್ರೇಲಿಯ ತಂಡವನ್ನು 3–1 ಮತ್ತು ಯುಎಸ್‌ಎಸ್‌ಆರ್‌ ವಿರುದ್ಧ 3–1ರ ಜಯ ಸಾಧಿಸಿ ವಿಶ್ವ ಗುಂಪಿನ ಫೈನಲ್‌ ಪ್ರವೇಶಿಸಿತ್ತು. ಪ್ರಶಸ್ತಿಗಾಗಿ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ ನಡೆಸಬೇಕಿತ್ತು. ಆದರೆ ಅಲ್ಲಿ ನಡೆಯುತ್ತಿದ್ದ ವರ್ಣಭೇದ ಸಂಘರ್ಷದಿಂದಾಗಿ ಭಾರತ ಫೈನಲ್‌ ಆಡಲಿಲ್ಲ. ಇದರಿಂದ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದಿದ್ದರೆ, ಭಾರತ ‘ರನ್ನರ್‌ ಅಪ್‌’ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT