ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದ ತೂಗುಯ್ಯಾಲೆ

ಹಳೆಯದಕ್ಕೆ ಜೋತುಬಿದ್ದ ಮನಸ್ಸು, ಹೊಸತಿಗೆ ತೆರೆದುಕೊಳ್ಳಲು ಸಾಧ್ಯವಾಗದಿದ್ದಾಗ...
Last Updated 6 ಡಿಸೆಂಬರ್ 2015, 19:56 IST
ಅಕ್ಷರ ಗಾತ್ರ

ನೆಲದ ಮೇಲೆ ಓಡಿದ ಬರಿಗಾಲಿಗೆ, ಸಿಂಥೆಟಿಕ್ ಟ್ರ್ಯಾಕ್ ಎಂಬುದು ಅನಗತ್ಯ ಹೊದಿಕೆಯಾಗಿ ತೋರುವ ಸಾಧ್ಯತೆಯೂ ಇದೆ. ಹಳೆಯದಕ್ಕೆ ಜೋತುಬಿದ್ದ ಮನ, ಹೊಸತಿಗೆ ಮುಕ್ತವಾಗಿ ತೆರೆದುಕೊಳ್ಳಲು ಸಾಧ್ಯವಾಗದಿದ್ದಾಗ, ಹಿಂದಿನದ್ದನ್ನೇ ಮುಂದುವರಿಸಿಕೊಂಡು ಹೋಗುವ ನಿಲುವಿಗೆ ಅಂಟಿಕೊಳ್ಳುತ್ತದೆ.

ತಂತ್ರಜ್ಞಾನದ ನಾಗಾಲೋಟಕ್ಕೆ ಸಿಲುಕಿದ ನಮ್ಮಂತಹವರು ಸಹ ‘ಔಟ್‌ಡೇಟೆಡ್’ ಆದುದರ ಬಳಕೆಯನ್ನೇ ಮುಂದುವರಿಸುತ್ತ ‘ಅಪಡೇಟ್’ ಆದವರ ವಾರೆಗಣ್ಣ ನೋಟಕ್ಕೆ ತುತ್ತಾಗುತ್ತೇವೆ ಅಥವಾ ನಾವೇ ‘ಅಪ್‌ಡೇಟ್’ ವಲಯದಲ್ಲಿದ್ದರೆ ‘ಔಟ್‌ಡೇಟೆಡ್’ ಆದವರ ಮೇಲೊಂದು ವ್ಯಂಗ್ಯದ ನಗೆ ಬೀರುತ್ತೇವೆ. ಈ ‘ಅಪ್ ಟು ಡೇಟ್’ ಮತ್ತು ‘ಔಟ್‌ಡೇಟೆಡ್‌’ಗಳ ನಡುವೆ ಯಾವುದು ಮೇಲೆಂಬ ಚರ್ಚೆ ಚಾಲ್ತಿಯಲ್ಲಿರುತ್ತದೆ. ಎರಡೂ ಬದಿಯಲ್ಲಿರುವ ಒಳಿತು ಕೆಡುಕುಗಳ ಪರಾಮರ್ಶೆಯ ನಂತರವೂ ಎರಡರ ಬಳಕೆಯೂ ಮುಂದುವರಿಯುತ್ತದೆ; ಈಗಿನ ಅಪ್‌ಡೇಟ್ ಮತ್ತೊಂದು ಮೆಟ್ಟಿಲೇರುವವರೆಗೂ!

ಇದಕ್ಕೆ ಪೂರಕವೆಂಬಂತೆ ತೋರುವ ಒಂದಷ್ಟು ಅನುಭವಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಬಂದು ನನ್ನ ಬಳಿ ಇರುವ ಪಠ್ಯಪುಸ್ತಕ  ನೀಡುವಂತೆ ಕೇಳಿದ. ಪರೀಕ್ಷೆ ಹತ್ತಿರವಾದಾಗ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಪಡೆದು ಜೆರಾಕ್ಸ್ ಪ್ರತಿ ಮಾಡಿಸಿಕೊಂಡು ಹಿಂತಿರುಗಿಸುವುದು ಸರ್ವೇಸಾಮಾನ್ಯ. ಇವನೂ ಹಾಗೆ ಫೋಟೊಕಾಪಿ ಮಾಡಿಸಿಕೊಂಡು ಕೊಡಬಹುದೇನೊ ಎಂದು ಭಾವಿಸಿ, ಅವನಿಗೂ ‘ಜೆರಾಕ್ಸ್ ಮಾಡಿಸಿ ಆದಷ್ಟು ಬೇಗ ಬುಕ್ ವಾಪಸ್ ಮಾಡು’ ಎಂದು ಸೂಚಿಸಿದೆ. ಅದಕ್ಕವನು ‘ಸರ್, ನಂಗೆ ಜೆರಾಕ್ಸ್ ಏನೂ ಬೇಕಾಗಿಲ್ಲ. ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿಕೊಳ್ಳೋಕೆ ಪರ್ಮಿಷನ್ ಕೊಡ್ತೀರಾ?’ ಅಂತ ಕೇಳಿದ.

ನನಗೆ ಅಚ್ಚರಿಯಾದರೂ, ‘ಆಯ್ತು ತಗೋ’ ಅಂದೆ. ಅವನು ತನಗೆ ಅಗತ್ಯವೆನಿಸಿದ ಪುಟಗಳ ಫೋಟೊ ತೆಗೆದು ಆಪ್ ಮೂಲಕ ಸ್ಕ್ಯಾನ್ ಫೈಲ್‌ಗಳಾಗಿ ಪರಿವರ್ತಿಸಿಕೊಂಡ. ಆನಂತರ ನನ್ನೊಳಗಿನ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ ಅವನಿಗೆ ಒಂದಷ್ಟು ಪ್ರಶ್ನೆಗಳನ್ನು ಒಡ್ಡಿದೆ.

‘ಮೊಬೈಲ್‌ನಲ್ಲಿ ಓದೋಕೆ ಕಷ್ಟ ಆಗಲ್ವೇನೊ, ಕಣ್ಣಿಗೆ ತ್ರಾಸ ಆಗಲ್ವ?’ ಎಂಬುದು ನನ್ನ ಮೊದಲ ಪ್ರಶ್ನೆಯಾಗಿತ್ತು. ‘ನಂಗೇನೂ ಕಷ್ಟ ಆಗಲ್ಲ ಸರ್’ ಅಂತೇಳಿ ತನ್ನ ಮೊಬೈಲ್‌ನಲ್ಲಿರುವ ಇ-ಬುಕ್‌ಗಳನ್ನು ತೋರಿಸಿದ. ‘ಸರಿ ಬಿಡಪ್ಪ’ ಅಂತಂದು ಅವನನ್ನು ಕಳುಹಿಸಿದೆ.

ಇಂದಿಗೂ ಕಂಪ್ಯೂಟರ್, ಮೊಬೈಲುಗಳ ಸ್ಕ್ರೀನುಗಳ ಮೂಲಕ ಓದುವ ಕ್ರಿಯೆಯನ್ನು ಅನಗತ್ಯ ಕಿರಿಕಿರಿ ಎಂದೇ ಭಾವಿಸುವ ನನಗೆ, ಚಿಕ್ಕಂದಿನಿಂದಲೂ ಮೊಬೈಲು, ಲ್ಯಾಪ್‌ಟಾಪುಗಳ ಬಳಕೆಯಲ್ಲಿ ಪಳಗಿದ ಈ ಹುಡುಗನಂತಹವರೂ ನನ್ನದೇ ನಿಲುವಿಗೆ ಜೋತು ಬಿದ್ದಿರಬಹುದೇನೋ ಎಂಬ ನಂಬಿಕೆಯಿತ್ತು. ಆದರೆ ವಾಸ್ತವ ‘ಅಪ್‌ಡೇಟ್’ ಆಗಿತ್ತು.

ಕೆಲ ದಿನಗಳ ಹಿಂದೆ ಮಾತಿಗೆ ಸಿಕ್ಕ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿರುವ ಸ್ನೇಹಿತರೊಬ್ಬರು ಸಹ, ಇಂದಿನ ಹುಡುಗ-ಹುಡುಗಿಯರ technosavy ಮನಸ್ಥಿತಿಯಿಂದಾಗಿ ತಮ್ಮ ವ್ಯವಹಾರಕ್ಕೆ ಕುತ್ತು ಒದಗಿರುವ ಕುರಿತು ಅಳಲು ತೋಡಿಕೊಂಡರು.

ಶುರುವಿನಲ್ಲಿ ವಾಚು, ಅಲಾರ್ಮ್, ಕ್ಯಾಮೆರಾಗಳ ಸ್ಥಾನ ತುಂಬಿದ್ದ ಮೊಬೈಲು ಇದೀಗ ಫೋಟೊಕಾಪಿ ಮೆಷಿನ್ನಿಗೂ ಪೈಪೋಟಿ ಒಡ್ಡುತ್ತಿರುವುದು ಅವರ ಮಾತಿನಿಂದ ಮತ್ತು ನನಗಾದ ಅನುಭವದಿಂದ ಖಾತ್ರಿಯಾಯಿತು. ತಂತ್ರಜ್ಞಾನದ ರೇಸಿನಲ್ಲಿ ಒಂದು ಕಾಲಕ್ಕೆ ಅನಿವಾರ್ಯವೆನಿಸಿದ್ದ ಯಂತ್ರಗಳು ಮತ್ತವುಗಳ ಒಡಲಿಗಿಳಿದ ತಂತ್ರಗಳು ಅದೆಷ್ಟು ಬೇಗ ಅಸ್ತಿತ್ವ ಕಳೆದುಕೊಳ್ಳುತ್ತವೆಂಬ ಪ್ರಶ್ನೆ ಹಾಗೆ ಸರಿದು ಹೋಯಿತು.

ಬೋಧಿಸುವವರ ನಡುವೆ ಕೂಡ ಚಾಲ್ತಿಯಲ್ಲಿರುವ ಕಪ್ಪು ಹಲಗೆ ಮತ್ತು ಸೀಮೆಸುಣ್ಣದ ಬಳಕೆ ಸೂಕ್ತವೋ ಅಥವಾ ಪ್ರೊಜೆಕ್ಟರ್‌ಗಳ ಮೂಲಕ ನೀಡುವ ‘ಪವರ್ ಪಾಯಿಂಟ್ ಪ್ರೆಸೆಂಟೇಷನ್’ ಉತ್ತಮವೋ ಎಂಬ ಚರ್ಚೆಯೂ ಇದರ ಮುಂದುವರಿದ ಭಾಗವಾಗಿಯೇ ಇದೆ. ಕೆಲವೊಮ್ಮೆ ಎರಡರೊಳಗಿನ ಅನುಕೂಲತೆಗಳನ್ನು ಗಮನಿಸಿ ಅಗತ್ಯಕ್ಕೆ ತಕ್ಕಂತೆ ಎರಡರ ಬಳಕೆಯೂ ಸಮರ್ಪಕವೆನಿಸುತ್ತದೆ.

ಒಂದಷ್ಟು ದಿನಗಳ ಹಿಂದೆ ನಮ್ಮ ಪ್ರಕಾಶನದಿಂದ ಪ್ರಕಟಿಸಿರುವ ಕನ್ನಡ ಪುಸ್ತಕಗಳನ್ನು ಮಾರಾಟಕ್ಕೆ ನೀಡುವ ಸಲುವಾಗಿ ಮೈಸೂರಿನ ಪುಸ್ತಕ ವ್ಯಾಪಾರಿಯೊಬ್ಬರನ್ನು ಭೇಟಿ ಮಾಡಿದೆ. ‘ಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಪುಸ್ತಕದಂಗಡಿಯತ್ತಲೂ ಮೊದಲಿನಷ್ಟು ಜನ ಬರುತ್ತಿಲ್ಲ’ ಅಂತ ಅಳಲು ತೋಡಿಕೊಂಡರು. ‘ಸರ್ ಈಗ ಫ್ಲಿಪ್‌ಕಾರ್ಟ್ ಅಮೆಜಾನ್ ಮೂಲಕ ಆನ್‌ಲೈನ್‌ನಲ್ಲೇ ಜನ ಪುಸ್ತಕಗಳನ್ನು ಕೊಳ್ಳೋಕೆ ಶುರು ಮಾಡಿದ್ದಾರೆ.

ನಮ್ಮ ಪ್ರಕಾಶನದ ಪುಸ್ತಕಗಳನ್ನು ಕೂಡ ನಾವು ಆನ್‌ಲೈನ್ ತಾಣಗಳ ಮೂಲಕ ಮಾರುತ್ತಿದ್ದೇವೆ. ನಿಮ್ ಅಂಗ್ಡಿಗೆ ಬರೋ ಜನ ಕಡಿಮೆಯಾಗಿರೋದಕ್ಕೆ ಅದೂ ಕಾರಣವಾಗಿರಬಹುದೇನೊ’ ಎಂದ ನನ್ನ ಮಾತಿನಿಂದ ಅವರು ಸಿಡಿಮಿಡಿಗೊಂಡರು. ‘ಅಲ್ಲಾ ಕಣ್ರಿ, ಪುಸ್ತಕನಾ ಮುಟ್ಟಿ ನೋಡಿ ಪುಟಗಳನ್ನ ತಿರುವಿ, ಅಂಗಡಿಯೊಳಗೆ ತಿರುಗಾಡ್ತಾ ಕೊಳ್ಳೋದ್ರಲ್ಲಿ ಇರೋ ಸುಖ ಆನ್‌ಲೈನ್‌ನಲ್ಲಿ ಕೊಳ್ಳೋದ್ರಲ್ಲಿ ಇದ್ಯೇನ್ರಿ? ನೀವೂ ಅಷ್ಟೇ, ಅದೇನೋ ಆನ್‌ಲೈನ್‌ನಲ್ಲೇ ಪುಸ್ತಕಗಳನ್ನ ಮಾರ್ತೀವಿ ಅಂತ ಬೀಗೋಕೆ ಹೋಗ್ಬೇಡಿ’ ಅಂತ ಎಚ್ಚರಿಕೆ ನೀಡಿದರು. ಅವರ ಮಾತಿಗೆ ಸಮಜಾಯಿಷಿ ನೀಡಲು ಮುಂದಾದೆನಾದರೂ, ನನ್ನ ಮಾತು ಅವರಿಗೆ ಹಿಡಿಸಿದಂತೆ ತೋರಲಿಲ್ಲ.

ವೈಯಕ್ತಿಕವಾಗಿ ನಾನು ಕೂಡ ಪುಸ್ತಕದ ಅಂಗಡಿಗಳಲ್ಲಿ ಅಲೆದಾಡಿ ಮುಟ್ಟಿ ನೋಡಿ, ಪುಟ ತಿರುವಿಯೇ ಪುಸ್ತಕ ಕೊಳ್ಳುತ್ತೇನೆ. ಮತ್ತದರಲ್ಲಿ ಸಿಗುವ ಆನಂದವನ್ನು ಅನುಭವಿಸಲು ಬಯಸುತ್ತೇನೆ. ಆದರೆ ನನ್ನದೇ ನಿಲುವು ಮತ್ತು ಆಯ್ಕೆ ಎಲ್ಲರದ್ದೂ ಆಗಿರಬಹುದೆಂದು ಖಂಡಿತ ಭಾವಿಸಲಾರೆ. ಒಬ್ಬ ಪ್ರಕಾಶಕನ ದೃಷ್ಟಿಕೋನದಿಂದ ನೋಡುವುದಾದರೂ, ಫ್ಲಿಪ್‌ಕಾರ್ಟ್ ಅಮೆಜಾನ್ ತಾಣಗಳ ಮೂಲಕ ಓದುಗರಿಗೆ ನೇರವಾಗಿ ಪುಸ್ತಕ ತಲುಪಿಸುವ ಸಾಧ್ಯತೆಯಿಂದ ಆಗುವ ಅನುಕೂಲಗಳು ಹೆಚ್ಚೇ.

ಇತ್ತೀಚೆಗೆ ಇ-ಬುಕ್ ಓದುವ ಟ್ರೆಂಡ್ ಕೂಡ ಬೆಳೆಯುತ್ತಿದೆ. ಇದು ಹೆಚ್ಚೆಚ್ಚು ಓದುಗರ ಆಯ್ಕೆಯಾದಂತೆಲ್ಲ ಪುಸ್ತಕ ಪ್ರಕಟಣಾ ವೆಚ್ಚ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಯಲಿದೆ. ಓದುಗರಿಗೆ ಕಡಿಮೆ ಬೆಲೆಗೆ ಪುಸ್ತಕ ತಲುಪಿಸುವ ಅವಕಾಶವೂ ತೆರೆದುಕೊಳ್ಳುತ್ತದೆ. ಬರಹಗಾರರು ಹೆಚ್ಚು ಬಂಡವಾಳ ಹೂಡದೆಯೂ ಸ್ವತಃ ತಾವೇ ಪ್ರಕಾಶಕರಾಗಬಹುದು.

ತಂತ್ರಜ್ಞಾನದ ಬೆಳವಣಿಗೆಯಿಂದ ಆಗುವ ಒಳಿತುಗಳೆಡೆಗೆ ಮಾತ್ರ ಬೆರಳು ತೋರಿಸಿ, technosavy ಆಗುವುದೆಂದರೆ ನೆಮ್ಮದಿ ಅಥವಾ ಆರಾಮದಾಯಕ ಬದುಕಿನೆಡೆಗೆ ದಾಪುಗಾಲಿಡುವುದೆಂಬುದೂ ಭ್ರಮೆಯೇ. ಅದೇ ವೇಳೆಗೆ ಕಾಲದ ಅಗತ್ಯತೆಯಿಂದಾಗಿ ಮುಂಚೂಣಿಗೆ ಬರುವ ಬದಲಾವಣೆಗಳಿಗೆ ತೆರೆದುಕೊಳ್ಳಲು ಹಿಂಜರಿಯುತ್ತಲೇ, ಹಿಂದಿನದ್ದೇ ಶ್ರೇಷ್ಠವೆಂಬ ನಂಬಿಕೆಗೆ ಜೋತು ಬೀಳುವುದೂ ಅಪ್ರಸ್ತುತವೇ. ಸುಸ್ಥಿರತೆಯ ತಳಹದಿಯ ಮೇಲೆ ಎದ್ದು ನಿಲ್ಲುವ ಮತ್ತು ಮನುಷ್ಯನ ಜೀವನಮಟ್ಟವನ್ನು ಅಸಲಿಗೂ ಎತ್ತರಕ್ಕೇರಿಸುವ ಆಶಯವುಳ್ಳ ತಂತ್ರಜ್ಞಾನಗಳನ್ನು ಅವು ನಮಗೆ ಅಗತ್ಯವೆನಿಸಿದಷ್ಟು ಮಾತ್ರ ಬಳಸಿಕೊಳ್ಳುವುದು ಸಮಂಜಸವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT