ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ‘ಕಾಮ’ಕ್ಕೆ ಕನ್ನಡಿ

Last Updated 7 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

‘ನಿತ್ಯಕರ್ಮ’–ಹೀಗೆಂದಾಗ ನೆನಪಾಗುವುದು ಜಪ–ತಪಾದಿ ಸಂಧ್ಯಾವಂದನೆ ಇಲ್ಲವೆ ದೈನಂದಿನ ಚಟುವಟಿಕೆಗಳು. ಆದರೆ ಬದುಕು ಬದಲಾದಂತೆ– ತಾಂತ್ರಿಕತೆಯ ಓಟಕ್ಕೆ ನಮ್ಮನ್ನು ತೆರೆಗೊಟ್ಟಂತೆ ನಿತ್ಯದ ಕರ್ಮಗಳಲ್ಲಿ ಮಾರ್ಪಾಡುಗಳಾಗಿವೆ.

ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟ್ಯಾಬ್‌ಗಳು, ಸಾಮಾಜಿಕ ಜಾಲತಾಣಗಳು ಹೀಗೆ ಅಂತರ್ಜಾಲವೂ ನಿತ್ಯಕರ್ಮದ–ಬದುಕಿನ ಭಾಗವೇ ಆಗಿವೆ. ಇವುಗಳಿಂದ ಒಳಿತು ಮತ್ತು ಕೆಡಕು ಸಮಾನಾಂತರವಾಗಿಯೇ ಆಗುತ್ತಿವೆ. ಅದು ಬಳಕೆದಾರನ್ನು ಆಧರಿಸಿದ್ದು.

ಪ್ರದೀಪ್ ಶಾಸ್ತ್ರಿ ನಿರ್ದೇಶನದ ‘ನಿತ್ಯಕರ್ಮ’ ಕಿರುಚಿತ್ರ ತಂತ್ರಜ್ಞಾನದ ದುರ್ಬಳಕೆಯನ್ನು ಸರಳವಾಗಿ, ನಾಟಕೀಯತೆ ಇಲ್ಲದೆ ಚಿತ್ರಿಸಿದೆ. ಈ ಅಗ್ಗಳಿಕೆಯ ಕಾರಣಕ್ಕೆ ಬೆಂಗಳೂರು ಐದನೇ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರದ ಪ್ರಶಸ್ತಿ ಪಡೆದಿದೆ.

ಕಥೆ
ಅವನು ವಿಶು. ಅಶ್ಲೀಲ ಸಿನಿಮಾಗಳಲ್ಲಿ ಅವನಿಗೆ ಆಸಕ್ತಿ. ಅವನ ಗೆಳೆಯ ರಘು ಕೂಡ ಈ ವಿಷಯದಲ್ಲಿ ಸಮಾನಮನಸ್ಕ. ಅಶ್ಲೀಲ ಚಿತ್ರಗಳನ್ನು ಸಿದ್ಧಮಾಡುವ, ಅಂಗಡಿಗಳಿಗೆ ತಲುಪಿಸುವ ಜಾಲವಿದು. ಹೀಗಿರುವಾಗ ರಘು ಕೊಟ್ಟ ನೀಲಿ ಚಿತ್ರದಲ್ಲಿ ತನ್ನ ತಂಗಿ ಮುಗ್ಧಾ ಇರುವುದನ್ನು ನೋಡುತ್ತಾನೆ ವಿಶು. ಪರರ ಕಾಮದಾಟ ನೋಡುತ್ತಿದ್ದವನು ಈ ಚಿತ್ರ ನೋಡಿ ತಾಳ್ಮೆ ಕಳೆದುಕೊಳ್ಳುವನು. ಪ್ರೀತಿಯ ಹೆಸರಿನಲ್ಲಿ ‘ಐ ಲವ್‌ ಯು...ಐ ಲವ್ ಯು...’ ಎನ್ನುತ್ತ ಆ ದೃಶ್ಯಗಳನ್ನು ಸೆರೆ ಹಿಡಿದಿರುವುದು ಮುಗ್ಧಾಳ ಅರಿವಿಗೂ ಬಂದಿಲ್ಲ. ಈ ಎಳೆಯನ್ನು ‘ನಿತ್ಯಕರ್ಮ’ದ ರೂಪಕ್ಕೆ ತಂದಿದ್ದಾರೆ ಪ್ರದೀಪ್.

ಇಂದಿನ ಹಲವು ಹೆಣ್ಣು ಮಕ್ಕಳು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಶ್ಲೀಲ ಚಿತ್ರಗಳಲ್ಲಿ ಬಳಕೆಯಾಗುತ್ತಿದ್ದಾರೆ. ಕೆಲವರು ನೀಲಿ ಚಿತ್ರಗಳಲ್ಲಿ ನಟಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದರೆ, ಕೆಲವು ಹೆಣ್ಣುಮಕ್ಕಳು ಕಾಮಪಿಪಾಸುಗಳು ತೋಡಿದ ಗುಂಡಿಯಲ್ಲಿ ಅರಿವಿಗೆ ಬರದಂತೆ ಸಿಲುಕುವರು. ಚಿತ್ರೀಕರಿಸಿದ ದೃಶ್ಯಗಳನ್ನು ಸಿ.ಡಿ.ಮಾಡಿ ಅಂಗಡಿಗಳಿಗೆ ಮಾರಿ ಹಣ ಮಾಡುವ ವರ್ಗವೂ ಇದೆ. ಇಷ್ಟೆಲ್ಲಾ ಅಂಶಗಳನ್ನು ಆಧರಿಸಿ ‘ನಿತ್ಯಕರ್ಮ’ ನಿರ್ದೇಶಿಸಿದ್ದಾರೆ ಪ್ರದೀಪ್. ಮುಗ್ಧಾಳ ತಾಯಿ ಯಾವಾಗಲೂ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ತಂತ್ರಜ್ಞಾನ, ಕುಟುಂಬದೊಳಗಿನ ಸಂಬಂಧಗಳ ನಡುವೆ ತೆಳುವಾದ ರೇಖೆ ಎಳೆಯುತ್ತಿರುವುದಕ್ಕೆ ನಿದರ್ಶನದಂತೆ ಕಾಣುತ್ತದೆ. 

ಈ ಕಥೆಯನ್ನು 2006–07ರಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಬೀದಿ ನಾಟಕ ರೂಪದಲ್ಲಿ ಪ್ರದರ್ಶಿಸಲಾಗಿತ್ತು. ಪ್ರಶಸ್ತಿ ಸಹ ಸಿಕ್ಕಿತ್ತು. ಈ ಹತ್ತು ನಿಮಿಷಗಳ ಬೀದಿ ನಾಟಕ ಚೆನ್ನೈ, ದೆಹಲಿ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನಗೊಂಡಿತ್ತು. ಬೀದಿ ನಾಟಕಗಳಿಗೆ ಸೇರುತ್ತಿದ್ದ ಜನರೂ ಕಡಿಮೆ. ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಜನರಿಗೆ ತಲುಪಿಸುವ ಕಾರಣಕ್ಕೆ ನಾಟಕವನ್ನು ಕಿರುಚಿತ್ರ ರೂಪಕ್ಕೆ ತರಲಾಯಿತು.

ವಿಶುಯಲ್ ಮೀಡಿಯಾಗಳಲ್ಲಿ ಕಥೆ ಹೇಳುವಾಗ ಭಾವುಕತೆ–ನಾಟಕೀಯತೆ ಮತ್ತಿತರ ಮಸಾಲೆ ಅಂಶಗಳತ್ತಲೂ ಗಮನ ನೀಡುವುದು ಸಾಮಾನ್ಯ. ಆದರೆ ‘ನಿತ್ಯಕರ್ಮ’ದ ಗೆಲುವು ಇರುವುದು ಸಹಜತೆಯಲ್ಲಿ. ಚಿಕ್ಕ ಚಿಕ್ಕ ಭಾವನೆಗಳನ್ನೇ ಸೂಕ್ಷ್ಮವಾಗಿ ಕಾಣಿಸಲಾಗಿದೆ. ಕಿರುಚಿತ್ರದಲ್ಲಿ ಗಮನಿಸುವ ಪ್ರಮುಖ ಅಂಶ ಎಂದರೆ ಆಡುಭಾಷೆ. ಇಂಥ ಜಾಲವನ್ನು ನಡೆಸುವವರು ಮತ್ತು ಪಾಲ್ಗೊಳ್ಳುವವರು ಕಾಲೇಜು ವಿದ್ಯಾರ್ಥಿಗಳು ಇಲ್ಲವೇ ಯುವ ಸಮುದಾಯ. ಚಿತ್ರದಲ್ಲಿ ಪಾತ್ರಗಳ ನಡುವೆ ಬಳಕೆಯಾಗಿರುವ ಸಂಭಾಷಣೆ ಆಡುಭಾಷೆಯಲ್ಲಿದೆ.

ಅಶ್ಲೀಲ ಚಿತ್ರಗಳ ಬಗ್ಗೆ ಯುವಕರು ಯಾವ ಶೈಲಿಯಲ್ಲಿ ಮಾತನಾಡುವರೋ ಅವೇ ಮಾತುಗಳನ್ನು ಬಳಸಿಕೊಳ್ಳಲಾಗಿದೆ. ಎರಡು ವಾರಗಳ ಪೂರ್ವತಯಾರಿ ಮಾಡಿಕೊಂಡು ‘ನಿತ್ಯಕರ್ಮ’ವನ್ನು ಚಿತ್ರೀಕರಿಸಲಾಗಿದೆ. ಎರಡೇ ಪರಿಸರದೊಳಗೆ ನಡೆಯುವ ‘ನಿತ್ಯಕರ್ಮ’ಕ್ಕೆ ಇದು ಮಿತಿ ಎನಿಸಿದರೂ, ಸೀಮಿತ ದೃಶ್ಯ ಮತ್ತು ಸ್ಥಳಗಳ ಬಳಕೆಯನ್ನು ಇಲ್ಲಿನ ಶಕ್ತಿಯನ್ನಾಗಿಯೂ ಗುರ್ತಿಸಬಹುದು.

ಅನಿರೀಕ್ಷಿತ ಗೆಲುವು
‘ಹೆಚ್ಚು ಜನರಿಗೆ ತಲುಪಿಸಬೇಕು ಮತ್ತು ಕಲಾವಿದರೂ ಜನರಿಗೆ ಗೊತ್ತಾಗುವರು ಎನ್ನುವ ಕಾರಣಕ್ಕೆ ನಾಟಕವನ್ನು ಕಿರುಚಿತ್ರ ರೂಪಕ್ಕೆ ತಂದೆವು. ಬೆಂಗಳೂರು ಕಿರುಚಿತ್ರೋತ್ಸವದಲ್ಲಿ ನಿತ್ಯಕರ್ಮಕ್ಕೆ ಪ್ರಶಸ್ತಿ ಸಿಕ್ಕುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಉತ್ಸವದಲ್ಲಿ 80ಕ್ಕೂ ಹೆಚ್ಚು ದೇಶಗಳ 3,500ಕ್ಕೂ ಹೆಚ್ಚು ಕಿರುಚಿತ್ರಗಳು ಬಂದಿದ್ದವು. ಕನ್ನಡದಲ್ಲಿ ಸುಮಾರು 600 ಚಿತ್ರಗಳು ಇದ್ದವು. ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದಾಗ ಅಚ್ಚರಿ.

ಅದಾಗಲೇ ಕಿರುಚಿತ್ರಗಳಲ್ಲಿ ಉತ್ತಮ ಹೆಸರು ಗಳಿಸಿಕೊಂಡ ಮತ್ತು ನನಗೆ ಅತ್ಯುತ್ತಮ ಎನಿಸಿದ ಕಿರುಚಿತ್ರಗಳು ಇದ್ದವು. ಸುಚಿತ್ರಾ ಫಿಲ್ಮ್ ಸೊಸೈಟಿ ಸಂಘಟಿಸಿದ್ದ ಉತ್ಸವದಲ್ಲಿ ಯುವಕರಂತೆ 60 ದಾಟಿದ ಹಿರಿಯರೂ ಇದ್ದರು. ಅವರಿಗೆ ‘ನಿತ್ಯಕರ್ಮ’ ಇಷ್ಟವಾಗುವುದಿಲ್ಲ ಎಂದುಕೊಂಡಿದ್ದೆವು. ಆದರೆ ತಂತ್ರಜ್ಞಾನದ ದುರ್ಬಳಕೆ ಹೇಳುವ ಚಿತ್ರವನ್ನು ಅವರೂ ಮುಕ್ತವಾಗಿ ಮೆಚ್ಚಿದರು’ ಎಂದು ಸಂತಸದಿಂದ ಹೇಳುವರು ನಿರ್ದೇಶಕ ಪ್ರದೀಪ್ ಶಾಸ್ತ್ರಿ.

‘ಚಿತ್ರೋತ್ಸವದಲ್ಲಿ ಒಳ್ಳೆಯ ವಿಮರ್ಶೆ ಸಿಕ್ಕಿತು. ಸಂಭಾಷಣೆ–ಚಿತ್ರಣವನ್ನು ಮೆಚ್ಚಿದರು. ಸಂಭಾಷಣೆ ಪೂರ್ಣ ಆಡುಮಾತಿನಲ್ಲಿರುವಂತೆ ಪ್ರಜ್ಞಾಪೂರ್ವಕವಾಗಿ ನೋಡಿಕೊಂಡೆವು. ಒಂದು ಗಂಟೆ ಮೈಮರೆತರೆ ಏನಾಗತ್ತದೆ? ಪಾಪಿಗಳು ಏನು ಮಾಡುತ್ತಾರೆ ಎನ್ನುವುದನ್ನು ಇಲ್ಲಿ ಹೇಳಿದ್ದೇವೆ. ವೈಯಕ್ತಿಕ ಸ್ವಾತಂತ್ರ್ಯವೇ ಹೇಗೆ ಸಾರ್ವಜನಿಕವಾಗುವಂತೆ ಮಾಡುತ್ತದೆ ಎನ್ನುವ ಅಂಶಗಳು ಇವೆ. ಕೆಲವು ಯುವಕರಿಗೆ ಇಂಥ ಕೃತ್ಯಗಳು ನಿತ್ಯದ ಕೆಲಸಗಳು ಎನ್ನುವಂತೆಯೇ ಆಗಿದೆ’ ಎಂದು ‘ನಿತ್ಯಕರ್ಮ’ವನ್ನು ನಿರ್ದೇಶಕರು ವಿಶ್ಲೇಷಿಸುವರು. 

ಮತ್ತಷ್ಟು ಫಲಿತಾಂಶದ ನಿರೀಕ್ಷೆ
ಪ್ರದೀಪ್, ಸಂಘ–ಸಂಸ್ಥೆಗಳಿಗೆ ಕಿರುಚಿತ್ರ–ಸಾಕ್ಷ್ಯಚಿತ್ರಗಳನ್ನು ಸಿದ್ಧಗೊಳಿಸಿಕೊಡುತ್ತಿದ್ದಾರೆ. ಸಂಘ–ಸಂಸ್ಥೆಗಳಿಗೆ ಕಿರುಚಿತ್ರ ಮಾಡಿಕೊಟ್ಟಿದ್ದರೂ ತಮ್ಮ ಲೇಬಲ್ ಹಚ್ಚಿ ಸ್ಪರ್ಧೆಗೆ ಕಳುಹಿಸಿದ್ದ ಮೊದಲ ಚಿತ್ರ ‘ನಿತ್ಯಕರ್ಮ’. ಅವರ ಎಡಿಟಿಂಗ್ ಟೇಬಲ್ಲಿನ ಮೇಲೆ ಹಲವು ಚಿತ್ರಗಳು ಇವೆಯಂತೆ. ಬೆರಳೆಣಿಕೆಯ ಪಾತ್ರಗಳಲ್ಲಿ ಅಭಿನಯಿಸಿದ ಬಹುತೇಕರು ರಂಗಭೂಮಿ ಹಿನ್ನೆಲೆಯವರು.

25 ನಿಮಿಷಗಳ ಚಿತ್ರದಲ್ಲಿ ಬಸಿತ್ ಖಾನ್, ಪುನೀತ್, ರೂಪಾ ರಾಯಪ್ಪ, ಪ್ರಣೀತಾ ಪ್ರಕಾಶ್, ಪ್ರದೀಪ್ ಶಾಸ್ತ್ರಿ ಪಾತ್ರಧಾರಿಗಳು. ಸಂದೀಪ್ ಪಿ.ಎಸ್. ಛಾಯಾಗ್ರಹಣ ಮತ್ತು ಸಂಕಲನ, ವಿನಾಯಕ್ ಮತ್ತು ನಟರಾಜ್ ಭಟ್ ಸಹ ನಿರ್ದೇಶನವಿದೆ. ರಿಚರ್ಡ್, ತೇಜಸ್‌, ಪ್ರಭಾಕರ್, ಅಭಿಷೇಕ್ ಭಾರ್ಗವ್‌ ಮತ್ತು ಭಜರಂಗ್ ಕೊನೋತ್ತಮ್ ‘ನಿತ್ಯಕರ್ಮ’ದ ತಂಡದಲ್ಲಿದ್ದಾರೆ. ಈಗಾಗಲೇ ಕೆಲವು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಇದನ್ನು ಕಳುಹಿಸಿಕೊಡಲಾಗಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT