ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿಗೊಬ್ಬ ಶಿಕ್ಷಕರ ನೇಮಕ ಸಾಧ್ಯ

Last Updated 20 ಜೂನ್ 2016, 19:30 IST
ಅಕ್ಷರ ಗಾತ್ರ

ನಮ್ಮ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಬಡವಾಗುವುದರ ಹಿಂದಿರುವ ಪ್ರಧಾನ ಕಾರಣ ಶಿಕ್ಷಕರ ಕೊರತೆ. ಇದು ಎಲ್ಲರೂ ಎತ್ತಿ ಆಡುವ ಅಂಶ. ಇದನ್ನು ಪರಿಹರಿಸದೆ ಮಾಡುವ ಶಿಕ್ಷಣದ ಸುಧಾರಣೆಯ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತಿವೆ. ಆದರೆ ಸರ್ಕಾರ ಈ ದಿಸೆಯಲ್ಲಿ ಯಾಕೆ ಯತ್ನಿಸುತ್ತಿಲ್ಲ ಎಂಬುದಕ್ಕೆ ಇದ್ದುದೊಂದೇ ಉತ್ತರ.

ಅದೇ ಅಪಾರವಾದ ವೇತನದ ಹೊರೆ. ಬಹುಶಃ ಈ ಕುರಿತು ನಡೆದಿರುವುದು ಅಂದಾಜು ಲೆಕ್ಕವೇ ಹೊರತು ಕೂಡಿಸಿ ಗುಣಿಸಿ ಮಾಡಿದ ಲೆಕ್ಕವಲ್ಲ. ಅಲ್ಲದೆ ಸದ್ಯದ ಪ್ರಾಯೋಗಿಕ ಸಾಧ್ಯತೆಗಳ ಚಿಂತನೆಯೂ ನಡೆದಿಲ್ಲ. ಈ ಕುರಿತು ನಾನು ಕಂಡುಕೊಂಡ ಪರಿಹಾರವನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದೇನೆ. ಒಂದು ವೇಳೆ ಅದನ್ನು ಜಾರಿ ಮಾಡಿದರೆ ಅದರಿಂದಾಗಿ ಎರಡು ಲಾಭಗಳಾಗಲಿವೆ.

ಒಂದನೆಯದಾಗಿ, ರಾಜ್ಯದ ಎಲ್ಲ ಶಾಲೆಗಳಲ್ಲಿ ತರಗತಿಗೊಬ್ಬರಂತೆ ಶಿಕ್ಷಕರು ಸಿಗಲಿದ್ದಾರೆ. ಎರಡನೆಯದಾಗಿ, ಕರ್ನಾಟಕವು ‘ಡಿ.ಇಡಿ. ಹಾಗೂ ಬಿ.ಇಡಿ. ಪದವೀಧರರ ನಿರುದ್ಯೋಗ ಮುಕ್ತ’ ರಾಜ್ಯವಾಗಲಿದೆ. ಏಕೆಂದರೆ ಎಲ್ಲಾ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವಾಗ ಲಭ್ಯ ಇರುವ ಉದ್ಯೋಗಾಕಾಂಕ್ಷಿಗಳು ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಲಿದ್ದಾರೆ.

ಅಂತರ್ಜಾಲದಲ್ಲಿ ದೊರಕುತ್ತಿರುವ ಕರ್ನಾಟಕದ ಶಿಕ್ಷಣ ಕುರಿತಾದ ಮಾಹಿತಿ ಪ್ರಕಾರ ರಾಜ್ಯದ ಒಟ್ಟು ಕಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ 25,951.  ಆ ಶಾಲೆಗಳಲ್ಲಿ ತರಗತಿಗೊಬ್ಬರಂತೆ ತಲಾ ಐವರು ಶಿಕ್ಷಕರನ್ನು ನೇಮಿಸುವುದಾದರೆ, ಬೇಕಾಗುವ ಶಿಕ್ಷಕರ ಸಂಖ್ಯೆ ಒಟ್ಟು 1,29,755. ಇನ್ನು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ಇರುವುದು 33,604. ಈ ಶಾಲೆಗಳಿಗೆ ತಲಾ 7 ಮಂದಿ ಶಿಕ್ಷಕರಂತೆ ನೇಮಿಸುವುದಾದರೆ ಬೇಕಾಗುವ ಶಿಕ್ಷಕರ ಸಂಖ್ಯೆ ಒಟ್ಟು 2,35,228. ಹಾಗಾಗಿ ರಾಜ್ಯದಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟು ಬೇಕಾಗುವ ಶಿಕ್ಷಕರ ಸಂಖ್ಯೆ 3,64,983.

ಆದರೆ ಈಗಾಗಲೇ ಶಾಲೆಗಳಲ್ಲಿ ನೇಮಕಾತಿಗೊಂಡು ದುಡಿಯುತ್ತಿರುವ ಶಿಕ್ಷಕರ ಸಂಖ್ಯೆ 2,97,156 ಇದೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿ ಶಾಲೆಯಲ್ಲಿ ತರಗತಿಗೊಬ್ಬರಂತೆ ಶಿಕ್ಷಕರನ್ನು ನೀಡುವುದಾದರೆ ಲಭ್ಯವಿರುವ ಹುದ್ದೆಗಳು 67,827. ಇಷ್ಟೊಂದು ಶಿಕ್ಷಕರನ್ನು ನೇಮಿಸಲು ಸರ್ಕಾರದಲ್ಲಿರುವ ಅಧಿಕಾರಿಗಳು ವೇತನದ ಲೆಕ್ಕಾಚಾರ ಹಾಕಿದರೆ ಅದು ಭಾರಿ ಮೊತ್ತವಾಗಿ  ಕಾಣುವುದು ಸಹಜ. ಆದರೆ ಈಗಾಗಲೇ ಶಿಕ್ಷಣ ಇಲಾಖೆಯೇ ಅನುಸರಿಸುತ್ತಿರುವ ಇನ್ನೊಂದು ದಿಕ್ಕಿನಿಂದ ನೋಡಿದರೆ ಅದಕ್ಕೆ ಪರಿಹಾರ ಸಾಧ್ಯವಿದೆ.

ಪ್ರಸ್ತುತ ಸರ್ಕಾರವು ತೀರಾ ಅಗತ್ಯವಿರುವಲ್ಲಿ ಶಾಲೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಂಡು ಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯನ್ನು ಹೆಚ್ಚಿಸಿದೆ.ಡಿ.ಇಡಿ. ತರಬೇತಿ ಹೊಂದಿದ ಶಿಕ್ಷಕರಿಗೆ ಮಾಹೆಯಾನ ₹ 5,500ರಂತೆ ಹಾಗೂ ಬಿ.ಇಡಿ. ಪದವೀಧರರಿಗೆ ₹ 6000 ವೇತನ ನೀಡುತ್ತಿದೆ.  ವಾರ್ಷಿಕವಾಗಿ ಹತ್ತು ತಿಂಗಳ ಮಟ್ಟಿಗೆ ನೇಮಕವಾಗುವ ಇವರಿಂದಾಗಿ ಶಾಲೆಗಳು ಸ್ವಲ್ಪ ಮಟ್ಟಿಗೆ ಉಸಿರಾಡುವಂತಾಗಿದೆ.

ಆದರೆ ಪೂರ್ಣಾವಧಿಗೆ  ಪ್ರತಿ ತರಗತಿಗೊಬ್ಬರಂತೆ ಶಿಕ್ಷಕರು ಬೇಕೇ ಬೇಕು. ಈ ಅವಶ್ಯಕತೆಯನ್ನು ಪೂರೈಸಲು ಇದೇ ವೇತನ ಶ್ರೇಣಿಯನ್ನು ನೀಡುವುದರ ಮೂಲಕ ಸಾಧ್ಯವಿದೆ. ಅಂದರೆ ಸುಮಾರು 67,827 ಶಿಕ್ಷಕರಿಗೆ ವೇತನ ನೀಡಲು ಬೇಕಾಗುವ ಹಣ ಮಾಸಿಕ ಅಂದಾಜು ₹ 40  ಕೋಟಿ ಮಾತ್ರ. ವರ್ಷದಲ್ಲಿ ಹತ್ತು ತಿಂಗಳಿಗೆ ಸುಮಾರು ₹ 400 ಕೋಟಿ  ಬೇಕಾಗುತ್ತದೆ. ಆದರೆ ಸರ್ಕಾರವು ಈಗಾಗಲೇ ಬಡ ಮಕ್ಕಳ ಶಿಕ್ಷಣ ಹಕ್ಕಿನ ನೆಪದಲ್ಲಿ ಇಂಗ್ಲಿಷ್‌ ಮಾಧ್ಯಮದ ಖಾಸಗಿ ಶಾಲೆಗಳಿಗೆ ₹ 480 ಕೋಟಿ ನೀಡಿದೆ.

ಹೀಗೆ ಕೆಲವೇ ಮಕ್ಕಳಿಗೆ ‘ಉತ್ತಮ ಶಿಕ್ಷಣ’ ಎಂಬ ನೆಪದಲ್ಲಿ ಸರ್ಕಾರವು ತನ್ನ ಹಕ್ಕಿನ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿ ಸರ್ಕಾರಿ ಶಾಲೆಗಳ ಶಕ್ತಿಗುಂದಿಸುವುದೇಕೆ? ಎಲ್ಲಾ ಮಕ್ಕಳನ್ನೂ ತನ್ನತ್ತ ಸೆಳೆಯುವ ಎಲ್ಲಾ ಸಾಧ್ಯತೆಗಳಿರುವಾಗ ಅದನ್ನು ಬಿಟ್ಟುಕೊಡುವುದೇಕೆ?  ಪ್ರಸ್ತುತ ಹತ್ತು ಮಕ್ಕಳಿಗಿಂತ ಕಡಿಮೆ ವಿದ್ಯಾರ್ಥಿಗಳ ಸಂಖ್ಯೆ ಇರುವ ಶಾಲೆಗಳಲ್ಲಿ ಕನಿಷ್ಠ ಇಬ್ಬರಾದರೂ ಶಿಕ್ಷಕರನ್ನು ನೇಮಿಸಿದರೆ ಮತ್ತೆ ಮಕ್ಕಳನ್ನು ಶಾಲೆಗೆ ಆಕರ್ಷಿಸಬಹುದು.

ಮಕ್ಕಳ ಸಂಖ್ಯೆ ಹೆಚ್ಚಾದಂತೆ ಹೆಚ್ಚು ಶಿಕ್ಷಕರ ನೇಮಕಾತಿ ಮಾಡಿದರೆ ಜನರಿಗೆ ಸರ್ಕಾರಿ  ಶಾಲೆಗಳ ಬಗ್ಗೆ ವಿಶ್ವಾಸ ಮೂಡುತ್ತದೆ. ಈಗ ಅಗತ್ಯವಿರುವಷ್ಟು, ಅಂದರೆ ವಾರ್ಷಿಕ ₹ 400 ಕೋಟಿಯಷ್ಟು ಖರ್ಚು ಮಾಡಿದರೆ ಸದ್ಯ ಮುಳುಗುತ್ತಿರುವ ಹಡಗನ್ನು ಬಚಾವು ಮಾಡಬಹುದು.

ಮಕ್ಕಳ ಶಿಕ್ಷಣದ ಹಕ್ಕಿನ ಅಡಿಯಲ್ಲಿ ಬರುವ ಮಕ್ಕಳನ್ನು ಸರ್ಕಾರಿ  ಶಾಲೆಗಳಿಗೇ ಸೇರಿಸಿ ಉತ್ತಮ ವಿದ್ಯಾಭ್ಯಾಸ ನೀಡಲು ಸಾಧ್ಯವಾದರೆ ಆಗ ಆರ್.ಟಿ.ಇ. ಲೆಕ್ಕಾಚಾರದಲ್ಲಿ ಖಾಸಗಿ ಶಾಲೆಗಳಿಗೆ ನೀಡಬೇಕಾದ್ದಕ್ಕಿಂತ ಕಡಿಮೆ ಹಣದಲ್ಲಿ ಸರ್ಕಾರಿ  ಶಾಲೆಗಳ ನಿರ್ವಹಣೆ ಆಗಲಿದೆ. ಶಿಕ್ಷಣದಲ್ಲಿ ಇಂತಹದ್ದೊಂದು ಸುಧಾರಣೆಯಾದ ಇತಿಹಾಸ ನಿರ್ಮಾಣವಾಗಲಿದೆ. ಜೊತೆಯಲ್ಲೇ ಇದು ಕನ್ನಡ ಶಾಲೆಗಳ ಉಳಿಸುವಿಕೆಯ ಪ್ರಯತ್ನವೂ ಆಗಲಿದೆ.

ಒಮ್ಮೆ ಒಟ್ಟು ಶಿಕ್ಷಣ ವ್ಯವಸ್ಥೆಯನ್ನು ಹಳಿಗೆ ತರುವ ತನಕ ಸರ್ಕಾರವು ಈ  ಪ್ರಯೋಗ ಮಾಡುವುದು ಅಗತ್ಯವೆನಿಸುತ್ತದೆ. ಈ ಪ್ರಯೋಗ ನಷ್ಟದ್ದೇನಲ್ಲ ಎನ್ನುವುದಕ್ಕೆ ಇನ್ನೊಂದು ಪುರಾವೆ ಅಂತರ್ಜಾಲ ಮಾಹಿತಿಯಲ್ಲಿಯೇ ಇದೆ. ಅಂದರೆ ಪ್ರಸ್ತುತ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿ ತನಕ 74.90 ಲಕ್ಷ ವಿದ್ಯಾರ್ಥಿಗಳಿದ್ದಾರೆ.

ತರಗತಿಗೊಬ್ಬರಂತೆ ಬೇಕಾದ 3,64,983 ಶಿಕ್ಷಕರನ್ನು ನೇಮಿಸಿಕೊಂಡರೂ ಶಿಕ್ಷಕ ವಿದ್ಯಾರ್ಥಿ ಅನುಪಾತ 1:20 ಇರುತ್ತದೆ. ಇದು ಅತ್ಯಂತ ಪ್ರಶಸ್ತವಾದ ಅನುಪಾತವೇ ಸರಿ. ಇನ್ನು, ಈ ಪ್ರಕ್ರಿಯೆಯಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವುದಂತೂ ನಿಶ್ಚಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT