ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣ-ತಾಕಲಾಟಗಳ ಚಿತ್ರಣ ‘`ವೇಷ’

ರಂಗಭೂಮಿ
Last Updated 18 ಜೂನ್ 2015, 19:30 IST
ಅಕ್ಷರ ಗಾತ್ರ

ಯಕ್ಷಗಾನ ಕಲಾವಿದರಿಬ್ಬರ ಮನಸ್ಸಿನ ಸಂಕೀರ್ಣ ಭಾವನೆ-ತೊಳಲಾಟಗಳನ್ನು ಸಮರ್ಥವಾಗಿ ಕಟ್ಟಿಕೊಡುವ `‘ವೇಷ’ ರಂಗಪ್ರಯೋಗವನ್ನು ಇತ್ತೀಚೆಗೆ  ಬೆಂಗಳೂರು ನಗರದ ಕೆ.ಎಚ್.ಕಲಾಸೌಧದಲ್ಲಿ `‘ರಂಗವರ್ತುಲ’ ತಂಡ ಪ್ರದರ್ಶಿಸಿತು.

ನಾಟಕದ ರಚನೆ ಉತ್ತಮ ಯುವಕಥೆಗಾರರಾಗಿ ಗುರುತಿಸಿಕೊಂಡಿರುವ ವಿಕಾಸ್ ನೇಗಿಲೋಣಿ ಅವರದು. ನಾಟಕದ ಆಳ-ಹರವುಗಳನ್ನು ಹರಳುಗಟ್ಟಿಸಿ, ಹೃದಯಸ್ಪರ್ಶಿ ಚಿತ್ರಣವಾಗಿ ರಂಗದ ಮೇಲೆ ಹೊಸ ವಿನ್ಯಾಸದಲ್ಲಿ ತಂದವರು ನಿರ್ದೇಶಕ ನಿತೀಶ್ ಶ್ರೀಧರ್.

ಯಕ್ಷಗಾನದ ಆಟದಲ್ಲಿ ಸ್ತ್ರೀವೇಷಕ್ಕೆ ಪ್ರಸಿದ್ಧನಾಗಿದ್ದ ಕಲಾವಿದ ರಾಧಾಕೃಷ್ಣ ಜೋಯಿಸನ ಅಂತರಂಗದ ಒಳದನಿಗಳನ್ನು ಸೂಕ್ಷ್ಮವಾಗಿ ಬಿಚ್ಚಿಡುವ ಈ ಪ್ರಯೋಗಶೀಲ ನಾಟಕದಲ್ಲಿ ರಂಗದ ಮೇಲೆ ಪ್ರಮುಖವಾಗಿ ಕಾಣಿಸಿಕೊಳ್ಳುವುದು ಎರಡೇ ಪಾತ್ರಗಳಾದರೂ ಎಲ್ಲೂ ಯಾಂತ್ರಿಕತೆ ಇಣುಕದು. ಮೇಳದ ಆಟದಲ್ಲಿ ರಾಧಾಕೃಷ್ಣ ‘ಸ್ತ್ರೀ’ ಪಾತ್ರ ಮಾಡುವುದೇ ಅವನ ಸಂತೋಷಕ್ಕೆ ಮುಳುವಾಗಿ ಕಾಡುತ್ತದೆ.

ಜನ ಅವನ `‘ಅಸ್ಮಿತೆ’ಯನ್ನು ಗುರುತಿಸುವುದು ಹೆಣ್ಣಾಗಿ ಮಾತ್ರ. ರಂಗದ ಮೇಲೆ ಹೆಣ್ಣಾಗಿ ವೈಭವೀಕರಣಗೊಳ್ಳುವ ಪಾತ್ರ, ಅವನ ವೈಯಕ್ತಿಕ ಬದುಕಿನಲ್ಲಿ ಗಂಡಸು ತನಕ್ಕೇ ಸವಾಲೆಂದುಕೊಳ್ಳುತ್ತಾನೆ. ವೇಷದಲ್ಲಷ್ಟೇ ಅವನ ಯಶಸ್ಸು. ಹೆಣ್ಣಿನ ವೇಷದೊಳಗಿನ ಅವನ ಪುರುಷಪ್ರಜ್ಞೆ ಅತೃಪ್ತಿ ಕಾಮನೆಗಳನ್ನು ಈಡೇರಿಸಿಕೊಳ್ಳಲಾರದ ಅಸಹಾಯಕತೆಯಿಂದ ಚಡಪಡಿಸುತ್ತದೆ. ಎಲ್ಲರೂ ಅವನನ್ನು ಹೆಣ್ಣಾಗಿಯೇ ಗುರುತಿಸಿ ಇಷ್ಟಪಡುವುದರಿಂದ, ಅವನು ಇಷ್ಟಪಡುವ ಹುಡುಗಿಯೂ ಇದರಿಂದ ಹೊರತಾಗುಳಿಯುವುದಿಲ್ಲ.

ರಂಗದ ಮೇಲಷ್ಟೇ ಮೆಚ್ಚಿಕೊಂಡ ಅವಳು ವ್ಯಕ್ತಿಯಾಗಿ ಅವನನ್ನು ಬಯಸುವುದಿಲ್ಲ. ‘ಹೆಣ್ಣುವೇಷ’ ತನ್ನತನವನ್ನು ಅಳಿಸಿ ಹಾಕಿದ್ದರ ಬಗ್ಗೆ ಅವನಿಗೆ ತೀವ್ರ ಕೊರಗು-ಪಶ್ಚಾತ್ತಾಪ. ಆಟದಲ್ಲಿ ಗಂಡು ವೇಷಧಾರಿಯಾಗಿ ಜೊತೆಯಲ್ಲಿ ಭಾಗವಹಿಸುವ ವತ್ಸಲಾ ಭಟ್ ಕೂಡ ಅವನನ್ನು ರಂಗದ ಮೇಲೆ ಮೆಚ್ಚಿಕೊಳ್ಳುವವಳು. ನೇಪಥ್ಯದ `‘ಚೌಕಿ’ಗೆ ಬಂದಾಗ ಅವನನ್ನು ಕಾಣುವ ಬಗೆಯೇ ಭಿನ್ನವಾಗುತ್ತದೆ. ವಾಸ್ತವ ಚೌಕಟ್ಟಿನಲ್ಲಿ ಅವಳಿಗೆ ಅವನ ಬಗ್ಗೆ ಅಂಥ ಯಾವ ಭಾವನೆಗಳೂ ಇರುವುದಿಲ್ಲ. ಈ ಕಠೋರ ಸತ್ಯವೇ ಅವನನ್ನು ವಿಪರ್ಯಾಸವಾಗಿ ಕಾಡುವ ಸಂಗತಿ.

ನಿಜ ಬದುಕಿನಲ್ಲಿ ಕೆಟ್ಟ ಗಂಡನೊಡನಾಟದ ಬಾಳಿನಿಂದ ಬೇಸತ್ತ ಅವಳು, ಗಂಡನಿಗೆ ಪ್ರತಿರೋಧ ವ್ಯಕ್ತಪಡಿಸಲಾರದ ಅಬಲೆಯಾದರೂ ಅವಳ ಅಂತರಂಗದ ರೋಷಜ್ವಾಲೆ ವೇಷದಲ್ಲಿ ಹೊರ ಆರ್ಭಟಿಸುತ್ತದೆ. ತನ್ನ ಕೆರಳಿದ ಭಾವನೆಗಳನ್ನು, ಗಂಡುವೇಷದಲ್ಲಿ ರಾಜಾರೋಷ ಅಭಿವ್ಯಕ್ತಿಸುತ್ತ ತನ್ಮೂಲಕ ಸಮಾಧಾನ ಕಾಣುತ್ತಾಳೆ. ಮತ್ತೆ ರಂಗಬಿಟ್ಟು ಚೌಕಿಮನೆಗೆ ಬಂದೊಡನೆ ಅವಳು ಮೊದಲಿನ ಸಹಜತೆಗೆ ಮರಳುತ್ತಾಳೆ. ಅದು ಅವಳಿಗಿದ್ದ ಮನಸ್ಸಿನ ಹತೋಟಿ.

ತಾನು ಹಾಕುವ ವೇಷ ಮತ್ತು ವಾಸ್ತವತೆಯ ನಡುವಿನ ವ್ಯತ್ಯಾಸದ ಗೆರೆಯನ್ನವಳು ಚೆನ್ನಾಗಿ ಅರಿತವಳು. ಆದ್ದರಿಂದ ಅವಳಿಗೆ ರಾಧಾಕೃಷ್ಣನಂತೆ ಗೊಂದಲವಿಲ್ಲ. ಅವಳಿಗೆ ತದ್ವಿರುದ್ಧವಾಗಿದ್ದ ರಾಧಾಕೃಷ್ಣ, ವ್ಯರ್ಥ ತೊಳಲಾಟಗಳಲ್ಲಿ ಬಂಧಿ. ರಂಗದ ಮೇಲೆ ವೇಷದೊಳಗಿರುವ ನಾನು ನಾನೇ? ಅಥವಾ ಚೌಕಿಗೆ ಮರಳಿದ ನಂತರ ಇರುವ ವ್ಯಕ್ತಿ ನಾನೇ? ಎಂಬ ಗೊಂದಲ-ಜಿಜ್ಞಾಸೆಗೆ ಬೀಳುತ್ತಾನೆ. ಸುಳ್ಳು-ಸತ್ಯಗಳ ಅಥವಾ ಬಿಂಬ-ಪ್ರತಿಬಿಂಬಗಳ ಕಲಸು ಮೇಲೋಗರದಲ್ಲಿ ವಿಹ್ವಲಿತನಾಗುತ್ತ ನಿಜವಾದ ತನ್ನ ವ್ಯಕ್ತಿತ್ವದ ಅರಸುವಿಕೆಯಲ್ಲಿ ಗಲಿಬಿಲಿಗೊಳ್ಳುತ್ತಾನೆ. 

   ಕನ್ನಡಿಯ ಮುಂದೆ ನಿಂತು ತನ್ನ ಪ್ರತಿರೂಪದೊಡನೆ ಒಡಲಾಳದ ಸ್ವಗತ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಸುಪ್ತಭಾವನೆಗಳ ಶೋಧನೆಗೆ ತೊಡಗುತ್ತಾನೆ. ಕಡೆಗೆ ರಂಗದ ಮೇಲವನು ಹತಾಶೆಯಿಂದ ತನ್ನ ಮೈಗಂಟಿದ ಹೆಣ್ಣಿನ ರೂಪವನ್ನು  ಸುಲಿದೆಸೆವಂತೆ ಮೈಮೇಲಿನ ವೇಷವನ್ನು ಜುಗುಪ್ಸೆಯಿಂದ ಕಿತ್ತೊಗೆಯುವ ದೃಶ್ಯದಲ್ಲಿ ನಾಟಕ ಮುಗಿಯುತ್ತದೆ. ಇಡೀ ನಾಟಕ ರಂಗಪ್ರವೇಶಕ್ಕೆ ಮುನ್ನ ಬಣ್ಣದ ಚೌಕಿಯಲ್ಲೇ ಮುಗಿದು ಬಿಡುವುದು ಈ ರಂಗಪ್ರಯೋಗದ ವೈಶಿಷ್ಟ್ಯ.

ನಾಟಕದಲ್ಲಿನ  ಎರಡು ವಿರುದ್ಧ ಪಾತ್ರಗಳು ಬದುಕಿನ ಸಿದ್ಧಾಂತಗಳಿಗೆ ಧ್ವನಿಯಾಗಿವೆ. ನಾಟಕದ ರಾಧಾಕೃಷ್ಣ ತನ್ನ ರಾಧೆಯ ಪಾತ್ರಕ್ಕೂ ನಿಜಜೀವನದ ಕೃಷ್ಣನ ಬದುಕಿಗೂ ಇರುವ ಸ್ಪಷ್ಟ ಅಂತರವನ್ನು ಗುರುತಿಸಿಕೊಂಡಿದ್ದೇ ಆಗಿದ್ದರೆ ಅವನಿಷ್ಟು ಹತಾಶೆ-ಖಿನ್ನತೆಗಳಿಂದ ತೊಳಲಾಡಬೇಕಿರಲಿಲ್ಲ. ಇಲ್ಲಿ   ಕನ್ನಡಿಯಲ್ಲಿನ ಅವನ ಪ್ರತಿಬಿಂಬ ಹೊರಬೀಳುವ ಸೊಗಸಾದ ಪರಿಕಲ್ಪನೆ ಹಾಗೂ ಅಳವಡಿಸಿಕೊಂಡಿರುವ ತಂತ್ರ ಚೆನ್ನಾಗಿದೆ.

ಕೊನೆಯಲ್ಲವನು ‘ವೇಷ’ದಿಂದ ಹೊರಬರುವ ನಿರ್ಧಾರದಿಂದ ತೊಟ್ಟ ವೇಷ-ಆಭರಣಗಳನ್ನು ಒಂದೊಂದಾಗಿ ಕಳಚುತ್ತ ಅದರಿಂದ ಹೊರಬಂದೆನೆಂದು ಭ್ರಮಿಸುತ್ತಾನೆ. ದೇಹದಾರ್ಢ್ಯವಿದ್ದರೂ ಮಾನಸಿಕ ದೃಢತೆ ರೂಢಿಸಿಕೊಳ್ಳದರ ಫಲವನ್ನು ಅವನು ಅನುಭವಿಸಬೇಕಾಗಿಬರುವುದು ಇಲ್ಲಿನ ದುರಂತ. ಅವನ ದ್ವಂದ್ವ-ತಲ್ಲಣಗಳ ಅಭಿವ್ಯಕ್ತಿಗೆ ಬಳಸಿಕೊಂಡಿರುವ ಕನ್ನಡಿಯಲ್ಲಿ ಬಿಂಬ-ಪ್ರತಿಬಿಂಬಗಳ ಸೃಷ್ಟಿ   ಮತ್ತವನ ಪ್ರತಿಬಿಂಬ ಹೊರಬೀಳುವ, ಸಂವಹನ ನಡೆಸುವ ಸೊಗಸಾದ ಪರಿಕಲ್ಪನೆ ಹಾಗೂ ಅಳವಡಿಸಿಕೊಂಡಿರುವ ತಂತ್ರ ಚೆನ್ನಾಗಿದೆ.   

ಮಲೆನಾಡಿನವರಾದ ನಾಟಕಕಾರ ವಿಕಾಸ್, ಯಕ್ಷಗಾನ ಮೇಳಗಳ ಒಳಹೊರಗನ್ನು ಬಲ್ಲವರು. ವೈರುಧ್ಯ ವ್ಯಕ್ತಿತ್ವ-ಮನೋಭಾವಗಳನ್ನು ಸಾಂಕೇತಿಕರಿಸಿ, ನಾಟಕವನ್ನು ಅರ್ಥಪೂರ್ಣ ಹೃದ್ಯ ಸಂಭಾಷಣೆಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ವಾಸ್ತವ ಬದುಕಿನಲ್ಲಿ ನೊಂದ ವತ್ಸಲಾ, ರಂಗ(ನಾಟಕ) ಹಾಗೂ ಚೌಕಿ (ನಿಜ ಬದುಕು)ಯ ಮೌಲ್ಯಗಳನ್ನು ವಿಂಗಡಿಸಿಕೊಂಡು ಬಾಳುವ ಹುರುಪು ಉಳಿಸಿಕೊಂಡದ್ದನ್ನು ಕುಣಿತ ಹಾಕುವ ಪರಿಯಲ್ಲಿ ಚಿತ್ರಿಸಿರುವ ನಿರ್ದೇಶಕ ನಿತೀಶ್ ತೋರಿರುವ ನಿರ್ದೇಶನ ಕ್ಷಮತೆ ಶ್ಲಾಘನೀಯ. ಹಾಗೆಯೇ ರಾಧಾಕೃಷ್ಣನ ದ್ವಂದ್ವ ಹೊಯ್ದಾಟಗಳ ಪ್ರತಿ ನಡೆ-ನುಡಿ, ಭಾವಾಭಿವ್ಯಕ್ತಿಯ ನಿವೇದನೆಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ದೇಶಿಸಿರುವ ಕಾರ್ಯದಕ್ಷತೆ ಖುಷಿ ಕೊಡುತ್ತದೆ.

ಅಂಕದ ಪರದೆ ತೆರೆದೊಡನೆ ಕಣ್ತುಂಬುವ ಯಕ್ಷಗಾನದ ಸೂಕ್ತ ರಂಗಪರಿಕರಗಳೊಡನೆ, ಅಚ್ಚುಕಟ್ಟಾಗಿ ಮೂಡಿದ್ದ ಕಂಬಗಳ ಚೌಕಿಯ ರಂಗಸಜ್ಜಿಕೆ  ಆಕರ್ಷಕವಾಗಿತ್ತು. ಸಣ್ಣ-ಪುಟ್ಟ ವಿವರಗಳ ಬಗ್ಗೆಯೂ ಗಮನ ನೀಡಿದ್ದು ವಿಶೇಷ. ಇಡೀ ನಾಟಕಕ್ಕೆ ರಂಗು ಮೂಡಿಸಿದ ಅಂಶವೆಂದರೆ ಕಣ್ಮನ ತಣಿಸಿದ ವೇಷಭೂಷಣ, ಅರ್ಥಪೂರ್ಣವಾಗಿದ್ದ ಭಾಗವತಿಕೆ (ಸುಬ್ಬರಾಯ ಹೆಬ್ಬಾರ್), ಯಕ್ಷಗಾನದ ಮಟ್ಟು-ಕುಣಿತ, ತಲೆದೂಗುವಂತಿದ್ದ ಚೆಂಡೆಯ ಸದ್ದು, ಮದ್ದಳೆಯ ಲಯ ನೋಡುಗರನ್ನು ಸೆರೆಹಿಡಿದು ಕೂರಿಸಿದ್ದವು.

ಕಲಾವಿದರ ಭಾವಾಭಿವ್ಯಕ್ತಿಯ ಉತ್ತಮ ಕ್ಷಣಗಳನ್ನು ಸೂಕ್ತವಾಗಿ ಹಿಡಿದಿಟ್ಟ ಬೆಳಕಿನ ವಿನ್ಯಾಸ(ಮಂಜು ನಾರಾಯಣ) ಪರಿಪೂರ್ಣವಾಗಿತ್ತು. ರಾಧಾಕೃಷ್ಣನ ಪ್ರತಿಬಿಂಬ ಕನ್ನಡಿಯಿಂದ ಹೊರ ನಡೆದು ಬಂದು ವತ್ಸಲಳ ಕನಸುಗಳ ಸಾಕಾರರೂಪವಾಗಿ (ಸೌರಭ್ ಕುಲಕರ್ಣಿ) ಅವಳನ್ನು ರಮಿಸುವ ಪರಿ ಮನನೀಯವಾಗಿತ್ತು. ನಾಟಕದಲ್ಲಿನ ಇಬ್ಬರು ಪಾತ್ರಧಾರಿಗಳ ಅಭಿನಯವೂ ಅಷ್ಟೇ ಪರಿಣಾಮಕಾರಿಯಾಗಿದ್ದು ಪ್ರದರ್ಶನದ ಯಶಸ್ಸಿಗೆ ಕಾರಣವಾಯಿತು.

ಸ್ತ್ರೀ ವೇಷಧಾರಿಯಾಗಿ ನಿತೀಶ್, ತಮ್ಮ ಹಾವ-ಭಾವ, ಕೋಪ-ತಾಪಗಳ ಕರುಣಾದ್ರ್ರ, ವಿಭಿನ್ನ ಭಾವಾಭಿವ್ಯಕ್ತಿಯ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ವತ್ಸಲಳಾಗಿ ನಂದಿನಿಮೂರ್ತಿ ತಮ್ಮ ಅಸ್ಖಲಿತ ವಾಕ್ಚಾತುರ್ಯ, ಪಾದರಸದ ದೇಹಭಾಷೆ, ಪರಿಣಾಮಕಾರಿ ಅಭಿನಯದಿಂದ ತಾವೊಬ್ಬ ಉತ್ತಮ ನಟಿಯೆಂಬುದನ್ನು ಸಾಬೀತುಗೊಳಿಸಿದರು. ಇವರೀರ್ವರೂ ತಮ್ಮ ಚೆಂದದ ಹೆಜ್ಜೆ ಕುಣಿತಗಳಿಂದ ಲವಲವಿಕೆಯ, ಗರಿಗಟ್ಟಿದ ವಾತಾವರಣ ಮೂಡಿಸಿದರು. ಇಬ್ಬರ ನಡುವಣ ಅಭಿನಯದ ಸಾಂಗತ್ಯ ಸೊಗಸಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT