ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಸಿ ವಿವಾಹ ಮಹತ್ವ

ಬರುವ ಸೋಮವಾರ ತುಳಸಿ ಮದುವೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು  ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು.

ತುಳಸಿ ಕಲ್ಯಾಣ ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೇ ಕಾರ್ತಿಕ ಮಾಸದ ವೈಭವ. ಇದನ್ನು ಮಾಡುವ ಹಿಂದಿನ ದಿವಸ ತುಳಸಿ ವೃಂದಾವನವನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಶೃಂಗರಿಸುತ್ತಾರೆ. ವೃಂದಾವನದಲ್ಲಿ ಕಬ್ಬು, ಚೆಂಡು ಹೂವು, ಹುಣಸೆ ಹಣ್ಣು, ನೆಲ್ಲಿಕಾಯಿ ಇವುಗಳನ್ನು ಇಡುತ್ತಾರೆ. ಈ ವಿವಾಹ ಸಮಾರಂಭವನ್ನು ಸಂಜೆಯ ಸಮಯದಲ್ಲಿ ನೆರವೇರಿಸುತ್ತಾರೆ.

ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಹುಟ್ಟುಹಾಕಿರುವುದೂ ಇದಕ್ಕಾಗಿಯೇ. ಉತ್ಥಾನ ದ್ವಾದಶಿಯಂದು ತುಳಸಿ ವೃಂದಾವನಕ್ಕೆ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತಾರೆ.  ವಿಶೇಷವಾಗಿ ಶಂಖದಿಂದ ಹಾಲಿನ ಅಭಿಷೇಕ ಮಾಡಬೇಕು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು.  ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು.

ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ತ್ರಿಮೂರ್ತಿಗಳೂ ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರೆ ದೇವತೆಗಳೂ ಉತ್ಥಾನ ದ್ವಾದಶಿಯಂದು ಒಟ್ಟಾಗಿ ಸೇರುತ್ತಾರೆಂದೂ, ಇಷ್ಟಾರ್ಥಗಳನ್ನು ಪೂರೈಸುತ್ತಾರೆಂದು, ಭಕ್ತಿಯಿಂದ ತುಳಸಿಗೆ ನಮಿಸಿ ಕೃತಾರ್ಥರಾಗುತ್ತಾರೆ. ತುಳಸಿಯ ಪೌರಾಣಿಕ ಹಿನ್ನೆಲೆಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು  ಪಡದುಕೊಳ್ಳುತ್ತಾನೆ.

ಆ ಸಂದರ್ಭದಲ್ಲಿ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.

ತುಳಸಿ ವಿವಾಹದ ಹಬ್ಬಕ್ಕೂ ಹಿನ್ನೆಲೆಯಿದೆ. ಆತನೊಬ್ಬ ಭಯಂಕರ ರಾಕ್ಷಸ. ಹೆಸರು ಜಲಂಧರ. ಆತನ ಪತ್ನಿ ವೃಂದಾ, ಪತಿವ್ರತೆ. ಅದಕ್ಕಾಗಿಯೇ ಜಲಂಧರನಿಗೆ ಸೋಲು ಎಂಬುದೇ ಇರಲಿಲ್ಲ. ಇದರಿಂದ ಅಹಂಕಾರದ ಮುದ್ದೆಯಾದ ಜಲಂಧರ ದೇವತೆಗಳ ಮೇಲೆ ಯುದ್ಧ ಮಾಡಿ ಸೋಲಿಸುತ್ತಾನೆ. ಈತನ ಉಪಟಳ ತಾಳಲಾಗದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಇದರಿಂದ ಜಲಂಧರನ ವೇಷಧರಿಸಿದ ವಿಷ್ಣು ವೃಂದಾಳ ಪಾತಿವ್ರತ್ಯವನ್ನು ಭಂಗ ಮಾಡುತ್ತಾನೆ. ಜಲಂಧರ ಯುದ್ಧದಲ್ಲಿ ಸಾಯುತ್ತಾನೆ. ಇದರಿಂದ ಕೋಪಗೊಂಡ ವೃಂದಾ, ವಿಷ್ಣುವಿಗೆ ಶಾಪನೀಡಿ ತನ್ನ ಪತಿಯ ಶವದೊಂದಿಗೆ ಅಗ್ನಿಗೆ ಹಾರುತ್ತಾಳೆ. ಆನಂತರ ವೃಂದಾ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಜನಿಸುತ್ತಾಳೆ. ಇವಳೇ ರುಕ್ಮಿಣಿಯಾಗಿ ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ವಿವಾಹವಾಗುತ್ತಾಳೆ ಎಂಬ ಪ್ರತೀತಿಯಿದೆ.

ತುಳಸಿ ಇಲ್ಲದೇ ಮಾಡಿದ ಪೂಜೆ ನಿಷ್ಫಲವಾಗುವುದು. ತುಳಸಿದಳಗಳು ದೊರೆಯದಿದ್ದರೆ, ತುಳಸಿ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸಿ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು. ಪೂಜೆ ಹೀಗೆ ಪುರಾಣ ಕಥೆ ಏನೇ ಇದ್ದರೂ, ಅದಕ್ಕೆ ಇಂಬುಕೊಡಲು ಎಂಬಂತೆ ತುಳಸಿ ಜೊತೆ ಅಂದು ಶ್ರೀಕೃಷ್ಣನ ವಿವಾಹ ನೆರವೇರಿಸಲಾಗುತ್ತದೆ.

ತುಳಸಿಯೆಂದರೆ ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ. ತುಳಸಿ ಮತ್ತು ಶ್ರೀಕೃಷ್ಣನ ವಿವಾಹವಾಗುವುದು ಎಂದರೆ ಈಶ್ವರನಿಗೆ ಜೀವದಲ್ಲಿರುವ ‘ಪಾವಿತ್ರ್ಯ’ ಎಂಬ ಗುಣವು ಅತಿಯಾಗಿ ಪ್ರಿಯವಾಗಿರುವುದು. ಇದರ ಪ್ರತೀಕವೆಂದು ಶ್ರೀಕೃಷ್ಣನು ‘ವೈಜಯಂತಿ ಮಾಲೆಯನ್ನು’ ಧರಿಸಿರುತ್ತಾನೆ. ಈ ದಿನದಿಂದ ಶುಭ ದಿನಗಳು ಅಂದರೆ ಮುಹೂರ್ತಗಳು ಉಳ್ಳ ದಿನಗಳ ಪ್ರಾರಂಭವಾಗುತ್ತದೆ. ‘ಈ ವಿವಾಹವು ಭಾರತೀಯ ಸಂಸ್ಕೃತಿಯ ಆದರ್ಶತ್ವವನ್ನು ದರ್ಶಿಸುವ ವಿವಾಹವಾಗಿದೆ’ ಎಂದು ನಂಬಿಕೆಯಿದೆ.

ಪದ್ಧತಿ: ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸ್ವಚ್ಛಗೊಳಿಸಬೇಕು. ತುಳಸಿ ಗಿಡವನ್ನು ನೆಟ್ಟಿದ ಮಡಕೆ ಅಥವಾ ವೃಂದಾವನಕ್ಕೆ ಬಿಳಿ ಬಣ್ಣವನ್ನು ಹಚ್ಚಬೇಕು. ಈಶ್ವರನ ಕಡೆಯಿಂದ ಪ್ರಕ್ಷೇಪಿಸುವ ಶಕ್ತಿಯನ್ನು ಬಿಳಿ ಬಣ್ಣವು ತನ್ನತ್ತ ಆಕರ್ಷಿಸುತ್ತದೆ. ತುಳಸಿಯ ಸುತ್ತ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ನಂತರ ಭಾವಪೂರ್ಣವಾಗಿ ತುಳಸಿಯ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.

ಪ್ರಾರ್ಥನೆ : ಹೇ ಶ್ರೀ ಕೃಷ್ಣಾ, ಹೇ ತುಳಸಿ ದೇವೀ, ಇಂದಿನ ದಿವಸ ನಿಮ್ಮಿಂದ ನಮಗೆ ದೊರಕುವ ಶಕ್ತಿಯು ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಉಪಯುಕ್ತವಾಗಲಿ. ಆಪತ್ತು ಬಂದಾಗ ನಿರಾಶರಾಗದೆ, ಈಶ್ವರನ ಮೇಲೆ ನಮಗೆ ಅಖಂಡ ಶ್ರದ್ಧೆ ಮತ್ತು ಭಕ್ತಿಯಿರಲಿ. ಈ ದಿನದಂದು ಕೃಷ್ಣ ತತ್ವವು ಪೃಥ್ವಿಯ ಮೇಲೆ ಹೆಚ್ಚು ಕಾರ್ಯರತವಾಗಿರುತ್ತದೆ. ತುಳಸಿಯ ಗಿಡದಿಂದಲೂ ಹೆಚ್ಚು ಪ್ರಮಾಣದಲ್ಲಿ ಕೃಷ್ಣ ತತ್ವವು ಕಾರ್ಯರತವಾಗಿರುತ್ತದೆ. ಆದುದರಿಂದ ಈ ದಿನ ಶ್ರೀ ಕೃಷ್ಣನ ನಾಮವನ್ನು ಜಪಿಸಬೇಕು. ಪೂಜೆಯಾದ ನಂತರ ವಾತಾವರಣ ತುಂಬಾ ಸಾತ್ವಿಕವಾಗುತ್ತದೆ. ಈ ಸಮಯದಲ್ಲಿ ಶ್ರೀಕೃಷ್ಣನ ನಾಮಜಪ ಮಾಡಬೇಕು.

ತುಳಸಿಯ ವೈಶಿಷ್ಟ್ಯಗಳು: ತುಳಸಿಯು ಸಾತ್ವಿಕವಾಗಿರುವುದರಿಂದ ತುಳಸಿ ಗಿಡದತ್ತ ಈಶ್ವರನ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ. ತುಳಸಿಯ ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ಆ ನೀರು ಶುದ್ಧ ಮತ್ತು ಸಾತ್ವಿಕ ಮಾತ್ರವಲ್ಲದೆ ಅದರಲ್ಲಿ ಶಕ್ತಿಯೂ ಸಮ್ಮಿಲಿತವಾಗುತ್ತದೆ.

ಸಂಜೀವಿನಿ: ವಿವಿಧ ಕಾಯಿಲೆ ವಾಸಿಮಾಡಿ ಜೀವ ನೀಡಬಲ್ಲ ಸಂಜೀವಿನಿಯೂ ಹೌದು. ಇದಕ್ಕಾಗಿಯೇ ಆಯುರ್ವೇದದಲ್ಲಿ ತುಳಸಿಗೆ ಪ್ರಥಮ ಸ್ಥಾನ. ಎಲೆ, ಬೇರು, ಬೀಜ ಸೇರಿದಂತೆ ಸಂಪೂರ್ಣ ಗಿಡವೇ ಔಷಧಯುಕ್ತ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ ಕೀಟ, ರೋಗಾಣುಗಳನ್ನು ದೂರವಿಡುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗ ನಿವಾರಣೆಯಾಗುತ್ತದೆ. ಇದರ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು. ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಿಗೆ ಇದು ರಾಮಬಾಣ.

ತುಳಸಿ ಗಿಡದ ಹತ್ತಿರ ಓದುವುದು, ಸಚ್ಚಿಂತನೆ ಮಾಡುವುದರಿಂದ, ದೀಪವನ್ನು ಹಚ್ಚುವುದರಿಂದ ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರಿಯಗಳ ವಿಕಾರಗಳು ದೂರವಾಗುತ್ತವೆ. ಇನ್ನೂ ಹಲವು ಅದ್ಭುತ ಔಷಧೀಯ ಗುಣ ಇದರಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT