ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಲಿಪಿಗೂ ಯೂನಿಕೋಡ್‌

ತುಳು ಸಾಹಿತ್ಯ ಅಕಾಡೆಮಿ ಚಿಂತನೆ
Last Updated 3 ಜುಲೈ 2014, 11:11 IST
ಅಕ್ಷರ ಗಾತ್ರ

ಮಂಗಳೂರು: ತುಳು ಭಾಷೆಯ ಲಿಪಿಯನ್ನೂ ಯೂನಿ­ಕೋಡ್‌­ನಲ್ಲಿ ಅಳವಡಿಸಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮುಂದಾಗಿದೆ. ತುಳು ಅಕಾಡೆಮಿ ಈಗಾಗಲೇ ಒಪ್ಪಿಕೊಂಡಿರುವ 48 ಅಕ್ಷರಗಳನ್ನೊಳಗೊಂಡ ತುಳು ವರ್ಣಮಾಲೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಅಕಾಡೆಮಿಯು ಉದ್ದೇಶಿಸಿದೆ.

‘ತುಳು ಲಿಪಿಯ ಬಳಕೆ ಸಾವಿರಾರು ವರ್ಷಗಳ ಹಿಂದೆಯೂ ಬಳಕೆಯಲ್ಲಿತ್ತು. ಕಾರಣಾಂತರಗಳಿಂದ ಈ ಲಿಪಿಯ ಬಳಕೆ ನಿಂತು ಹೋಗಿದೆ. ಸದ್ಯಕ್ಕೆ ಕನ್ನಡ ಲಿಪಿಯಲ್ಲೇ ತುಳು ಸಾಹಿತ್ಯ ರಚನೆಗೊಳ್ಳುತ್ತಿದೆ. ಕ್ರಮೇಣ ತುಳು ಲಿಪಿಯ ಬಳಕೆಯನ್ನು ಹೆಚ್ಚಿಸುವುದು ಅಕಾಡೆಮಿಯ ಉದ್ದೇಶ ಎನ್ನುತ್ತಾರೆ‘ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ್‌.

‘ಶಾಲೆಗಳಲ್ಲಿ ನಾವು ಕನ್ನಡ ಲಿಪಿಯಲ್ಲೇ ತುಳುವನ್ನು ಕಲಿಸುತ್ತಿದ್ದೇವೆ. ಕಾಲೇಜುಗಳಲ್ಲಿ ತುಳು ಲಿಪಿ ಕಲಿಸುವ ಚಿಂತನೆಯೂ ಇದೆ. ಇದಕ್ಕೆ ಸಮಾನಾಂತರವಾಗಿ ತುಳು­ಲಿಪಿಯನ್ನು ಯೂನಿಕೋಡ್‌ನಲ್ಲಿ ಅಳವಡಿಸಿದರೆ ಲಿಪಿಯ ಬಳಕೆ ವ್ಯಾಪಕಗೊಳಿಸುವುದು ಸುಲಭವಾಗುತ್ತದೆ’ ಎನ್ನುತ್ತಾರೆ ಅವರು.

‘ತುಳು ಲಿಪಿಯನ್ನು ಯೂನಿಕೋಡ್‌ನಲ್ಲಿ ಅಳವಡಿಸುವ ಕುರಿತು ಚರ್ಚಿಸುವ ಸಲುವಾಗಿ ಜೂನ್‌ 15ರಂದು ತುಳು ವಿದ್ವಾಂಸರು ಹಾಗೂ ಕಂಪ್ಯೂಟರ್‌ ಕ್ಷೇತ್ರದ ಸಾಧಕರ ಸಭೆಯನ್ನು ಅಕಾಡೆಮಿ ಚಾವಡಿಯಲ್ಲಿ ನಡೆಸಲಾಗಿದೆ. ದೇಶದ ವಿವಿಧ ಭಾಷೆಗಳ ವರ್ಣಮಾಲೆಯನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಿರುವ ಲಿಪಿತಜ್ಞ ಕೆ.ಪಿ.ರಾವ್‌, ತುಳು ಲಿಪಿಯ ಬಗ್ಗೆ ಸಂಶೋಧನೆ ನಡೆಸಿರುವ ವಿಘ್ನರಾಜ, ತುಳು ವಿದ್ವಾಂಸರಾದ ಕೃಷ್ಣಯ್ಯ ಉಡುಪಿ, ಪದ್ಮನಾಭ ಕೇಕುಣ್ಣಾಯ, ಜಿ.ವಿ.ಎಸ್‌. ಉಳ್ಳಾಲ, ಮಹೇಶ್ವರಿ ಯು. ಮತ್ತಿತರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಇನ್ನಷ್ಟು ಚರ್ಚಿಸಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು.  ಈ ಬಗ್ಗೆ ಸಮಗ್ರವಾದ ರೂಪರೇಷೆ ತಯಾರಿಸುವಂತೆ, ಅನೇಕ ಭಾರತೀಯ ಭಾಷೆಗಳ ಲಿಪಿಯನ್ನು ಯೂನಿಕೋಡ್‌ನಲ್ಲಿ ಅಳವಡಿಸುವುದಕ್ಕೆ ನೆರವಾಗಿರುವ ತಜ್ಞ ಕೆ.ಪಿ.ರಾವ್‌ ಅವರನ್ನು ಕೇಳಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು. 

ಏನಿದು ಯೂನಿಕೋಡ್‌?
ಕಂಪ್ಯೂಟರ್‌ ಅಂಕಿಗಳ ಭಾಷೆಯನ್ನು ಬಳಸುತ್ತದೆ. ಕಂಪ್ಯೂಟರ್‌ನಲ್ಲಿ ಮೂಡುವ ಪ್ರತಿ ಅಕ್ಷರಕ್ಕೂ ನಿರ್ದಿಷ್ಟ ಸಂಖ್ಯೆಯನ್ನು ಗುರುತುಪಡಿಸಲಾಗುತ್ತದೆ. ಯೂನಿಕೋಡ್‌ ಎಂದರೆ ನಿರ್ದಿಷ್ಟ ಅಕ್ಷರಕ್ಕೆ ನಿರ್ದಿಷ್ಟ ಸಂಖ್ಯೆಯನ್ನು ನಿಗದಿಪಡಿಸುವುದು. ಯೂನಿಕೋಡ್‌ ಚಾಲ್ತಿಗೆ ಬರುವ ಮುನ್ನ ನಿರ್ದಿಷ್ಟ ಅಕ್ಷರವನ್ನು ಕಂಪ್ಯೂಟರ್‌ನಲ್ಲಿ ಮೂಡಿಸುವುದಕ್ಕೆ ಬೇರೆ ಬೇರೆ ರೀತಿಯ ಅಂಕಿಯ ಸಂಕೇತಗಳನ್ನು ಬಳಸಲಾಗುತ್ತಿತ್ತು. ಯೂನಿಕೋಡ್‌ ಬಳಕೆಗೆ ಬಂದ ಬಳಿಕ ವಿಶ್ವದಾದ್ಯಂತ ಲಿಪಿಯ ವಿಷಯದಲ್ಲಿ ಏಕರೂಪತೆ ಸಾಧಿಸಲು ಸಾಧ್ಯವಾಗಿದೆ. ವಿಶ್ವದಾದ್ಯಂತ ಯೂನಿಕೋಡ್‌ ಬಳಕೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಯೂನಿಕೋಡ್‌ ಕನ್ಸೊರ್ಶಿಯಂ (ಒಕ್ಕೂಟ) ಅನ್ನು 1991ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ರೂಪಿಸಲಾಯಿತು. ಈ ಲಾಭರಹಿತ ಸಂಸ್ಥೆಯು ವಿಶ್ವದಾದ್ಯಂತ ವಿವಿಧ ಭಾಷೆಗಳನ್ನು ಯೂನಿಕೋಡ್‌ಗೆ ಅಳವಡಿಸುವ, ಅದನ್ನು ನಿರ್ವಹಿಸುವ ಇದರ ಬಳಕೆಯನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತಿದೆ.  ಅತ್ಯಾಧುನಿಕ ಸಾಫ್ಟ್‌ವೇರ್‌ಗಳು ಮಾರುಕಟ್ಟೆಗೆ ಪ್ರವೇಶಿಸುವಾಗ ಅಲ್ಲೂ ಭಾಷೆ ಹಾಗೂ ಲಿಪಿಯ ಬಳಕೆ ವಿಷಯದಲ್ಲಿ ಸಾಮರಸ್ಯ ಕಾಪಾಡುವ ಕಾರ್ಯವನ್ನು ಈ ಒಕ್ಕೂಟವು ನಿರ್ವಹಿಸುತ್ತಿದೆ.



‘ತುಳು ಲಿಪಿಯ ಬಗ್ಗೆ ನಾನಾ ಅಭಿಪ್ರಾಯಗಳಿವೆ. ಆದರೆ, ಅಕಾಡೆಮಿಯು ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲೇ ತಜ್ಞರೊಂದಿಗೆ ಸಮಾಲೋಚನೆ ನಡೆಸಿ,  ಒಮ್ಮತದ ನಿರ್ಧಾರಕ್ಕೆ ಈ ಹಿಂದೆಯೇ ಬಂದಿದೆ. ಹಾಗಾಗಿ ಯೂನಿಕೋಡ್‌ನಲ್ಲಿ ಅಳವಡಿಸುವುದಕ್ಕೆ ನಾವು, ಅಕಾಡೆಮಿ ಈಗಾಗಲೇ ಸಮ್ಮತಿಸಿರುವ ತುಳು ಲಿಪಿಯನ್ನೇ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ’ ಎಂದು ಅವರು ತಿಳಿಸಿದರು.
ತುಳು ಲಿಪಿ ಬಳಕೆಯೇ ಅಪೂರ್ವವಾಗಿರುವ ಸಂದರ್ಭದಲ್ಲಿ ಆ ಭಾಷೆಯನ್ನು ಯೂನಿಕೋಡ್‌ನಲ್ಲಿ ಅಳವಡಿಸುವ ಔಚಿತ್ಯದ ಬಗ್ಗೆಯೂ ಆರಂಭದಲ್ಲೇ ಅಪಸ್ವರವೂ ಎದ್ದಿದೆ.

‘ತುಳು ಮತ್ತು ಮಲಯಾಳ ಲಿಪಿಗಳಲ್ಲಿ ಗಮನಾರ್ಹ ವ್ಯತ್ಯಾಸಗಳೇನಿಲ್ಲ.  ಮಲಯಾಳ ಲಿಪಿಗೆ ಈಗಾಗಲೇ ಯೂನಿಕೋಡ್‌ ಅಳವಡಿಸಲಾಗಿದೆ. ಅದನ್ನೇ ತುಳುವಿಗೂ ಅಳವಡಿಸಿಕೊಳ್ಳುವ ಅವಕಾಶವಿದೆ. ಅಕಾಡೆಮಿ ಕೇಳಿಕೊಂಡಿರುವ ಕಾರಣ ನಾನು ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದೇನೆ. ತುಳುವಿಗೆ ಪ್ರತ್ಯೇಕ ಯೂನಿಕೋಡ್‌ ರೂಪಿಸುವುದು ಕಷ್ಟವೇನಲ್ಲ. ತುಳು ಮತ್ತು ಮಲಯಾಳ ಎರಡೂ ಭಾಷೆಗಳ ಲಿಪಿಯ ಕಾಗುಣಿತ (Orthography) ಹೆಚ್ಚು ಕಡಿಮೆ ಒಂದೇ ರೀತಿ ಇದೆ. ತುಳು ಲಿಪಿ ಹಾಗೂ ಮಲಯಾಳ ಲಿಪಿಯಲ್ಲಿ ಅಕ್ಷರಗಳು ಒಂದಕ್ಕೊಂದು ಜೋಡಣೆಯಾಗುವ ವಿಧಾನದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಆದರೆ ಈ ಎರಡು ಭಾಷೆಗಳ ಕಾಗುಣಿತದಲ್ಲಿ ವ್ಯತ್ಯಾಸವಿದ್ದರೆ ಮಾತ್ರ ಪ್ರತ್ಯೇಕ ಯೂನಿಕೋಡ್‌ ಅಳವಡಿಕೆಯಿಂದ ಪ್ರಯೋಜನ ಆಗುತ್ತದೆ. ಹಾಗಾಗಿ ನನಗೆ ಇದು ಅಷ್ಟೇನೂ ಅಗತ್ಯ ಎಂದು ತೋರುತ್ತಿಲ್ಲ’ ಎನ್ನುತ್ತಾರೆ ಕೆ.ಪಿ.ರಾವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT