ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

Last Updated 19 ಅಕ್ಟೋಬರ್ 2015, 9:55 IST
ಅಕ್ಷರ ಗಾತ್ರ

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ತುಳು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕನರಾಡಿ ವಾದಿರಾಜ ಭಟ್‌ ಅವರಿಗೆ, ನಾಟಕ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಎಂ. ಕೆ. ಸೀತಾರಾಮ್‌ ಕುಲಾಲ್‌ ಅವರಿಗೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ ರಾಮ್‌ ಶೆಟ್ಟಿ ಮುಂಬೈ ಅವರಿಗೆ ಗೌರವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಶನಿವಾರ ತುಳು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷರಾದ ಜಾನಕಿ ಬ್ರಹ್ಮಾವರ ಅವರು ತುಳು ಕವನ ವಿಭಾಗದಲ್ಲಿ ಶಾರದಾ ಎ. ಅಂಚನ್‌ ಅವರ ‘ಪಾಡ್ದನ’ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದರು.

ಪರಿಚಯ: ಉಡುಪಿಯ ಕನರಾಡಿಯಲ್ಲಿ 1951ರಲ್ಲಿ ಜನಿಸಿದ  ವಾದಿರಾಜ ಭಟ್, 1973ರಲ್ಲಿ ಎಂ. ಎ. (ಕನ್ನಡ) ಪದವೀಧ ರರಾಗಿ, 1974ರಿಂದ ಉಪನ್ಯಾಸಕರಾಗಿ ವೃತ್ತಿ ನಿರ್ವಹಿಸಿದರು. ವೃತ್ತಿಯ ಜತೆ ಯಲ್ಲೇ  ತುಳು-ಕನ್ನಡ ಸಾಹಿತ್ಯಕ್ಕೆ ಕೊಡುಗೆ ಸಲ್ಲಿಸಿದವರು. ತುಳುವಿನ ಸಾಹಿತ್ಯ, ಸಂಸ್ಕೃತಿ, ಜನಪದ ಅಧ್ಯಯನ, ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ 1974 ರಿಂದಲೂ ಪ್ರವೃತ್ತರಾದ ವಾದಿರಾಜರ ಮುಖ್ಯ ಕೃತಿಗಳು- ಜೋಕ್ಲೆ ಪದೊಕುಲು (ಎರಡು ವಿಭಾಗಗಳಲ್ಲಿ ) ‘ಜೀವನ ಪಾಡ್ದನ’ (ತುಳು ಕಬಿತೆಲು), ‘ಮಗೆ ಬರವು ಕಲ್ತೆ’ ಇತ್ಯಾದಿ. ‘ತುಳುಕೂಟ’ ಪತ್ರಿಕೆಯನ್ನು ಪ್ರಸಾರ ಪಡಿಸುವಲ್ಲೂ ಉತ್ಸಾಹದಿಂದ ದುಡಿದವರು. ತುಳು ಸಾಹಿತ್ಯ ಸಮ್ಮೇಳನ, ತುಳು ವಿಚಾರ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಧರ್ಮ ವಿಚಾರಗಳ ತೌಲನಿಕ ಅಧ್ಯಯನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಮಂಗಳೂರಿನ  ಸೀತಾರಾಮ ಕುಲಾಲ್ ಎಳವೆಯಿಂದಲೂ ನಾಟಕ ಸಾಹಿತ್ಯದ ಕೃಷಿಯನ್ನು ನಡೆಸುತ್ತಾ ಬಂದವರು. ಇವರ ಪ್ರಥಮ ನಾಟಕ ‘ದಾಸಿಪುತ್ರ’. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಅರುವತ್ತೊಂಬತ್ತು ನಾಟಕ  ಗಳನ್ನು ರಚಿಸಿದ್ದು, ‘ಮಣ್ಣ್‌ದ ಮಗಲ್ ಅಬ್ಬಕ್ಕ’ ನಾಟಕ  ಯಶಸ್ವಿ ಪ್ರಯೋಗ ಗಳನ್ನು ಕಂಡಿದೆ. ಕನ್ನಡದ ಅಬ್ಬಕ್ಕ ನಾಟಕ 1962ರಲ್ಲೇ ಆಗಿನ ಜಿಲ್ಲಾಧಿಕಾರಿ ಎಚ್. ನಾಗೇಗೌಡರಿಂದ ಪ್ರಥಮ  ಬಹುಮಾನ ಪಡೆದಿದೆ. ತುಳು– ಕನ್ನಡ ನಾಟಕಗಳಿಗೆ ಮುನ್ನೂರೈವತ್ತಕ್ಕೂ ಮೀರಿ ಹಾಡುಗಳನ್ನು ರಚಿಸಿ ಜನಮೆಚ್ಚುಗೆ ಗಳಿಸಿದ  ಕುಲಾಲ್  ‘ಶ್ರೀ ಕ್ಷೇತ್ರ ಕಟೀಲು’ ಭಕ್ತಿಗೀತೆಗಳ ಧ್ವನಿಸುರುಳಿ, ‘ತುಳುವ ಮಲ್ಲಿಗೆ’ ಧ್ವನಿಸುರುಳಿಯ ಹಾಡುಗಳು ತುಂಬ ಪ್ರಖ್ಯಾತವಾಗಿವೆ. ‘ಕಡಲನಾಡ ಕಲಾವಿದರು’ ಸಂಸ್ಥೆಯಲ್ಲಿದ್ದು 51 ವರ್ಷ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ.  ‘ಉಡಲ್ದ ತುಡರ್’ ತುಳು ಚಿತ್ರದ ಕಥೆ ಮತ್ತು ಸಂಭಾಷಣೆಗೆ ಪ್ರಶಸ್ತಿಗಳು ಸಂದಿವೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ‘ತುಳುಭವನ’ಕ್ಕೆ ಸರ್ಕಾರದಿಂದ ನಿವೇಶನವನ್ನು ಪಡೆದುದು, ತುಳು ಪಠ್ಯ ಯೋಜನೆಗೆ ಬುನಾದಿ ಹಾಕಿದ್ದು, ತುಳುಲಿಪಿ ಓಲೆಗಳ ಸಂಗ್ರಹದ ಪ್ರಯತ್ನ, ಕುಪ್ಪಂ ವಿಶ್ವವಿದ್ಯಾಲಯದ ಸಂಪರ್ಕದಲ್ಲಿ ಪಿಎಚ್.ಡಿ, ಎಂ. ಫಿಲ್. ಯೋಜನೆ ಆರಂಭಿಸಿದ್ದು ಹೀಗೆ ಹಲವು ಯೋಜನೆಗಳನ್ನು ಆರಂಭಿಸಿದ ಹಿರಿಮೆ ಅವರದು.

1951ರಲ್ಲಿ ಜನಿಸಿದ ರಾಮಶೆಟ್ಟಿಯವರು ಮಂಗಳೂರಿನ ತುಂಬೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮುಂಬೈ ಸೇರಿ, ಅಲ್ಲಿನ ‘ಶಾರದಾ’ ರಾತ್ರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದವರು. ಉತ್ತಮ ಕಬಡ್ಡಿ ಆಟಗಾರನಾಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿಕೊಂಡ ಇವರು ಪ್ರಖ್ಯಾತ ಸಾಹಸ ಸಂಯೋಜಕ ಫೈಟರ್ ಶೆಟ್ಟಿಯವರ ಗಮನಕ್ಕೆ ಬಂದು ಅವರ ಮಾರ್ಗದರ್ಶನದಲ್ಲಿ ಸಾಹಸ ಕಲಾವಿದ ನಾಗಿ ಚಿತ್ರರಂಗ ಪ್ರವೇಶಿಸಿ ತನ್ನ ಪ್ರಥಮ ಅಭಿನಯದ ‘ಹಮ್‍ರಾಹಿ’ ಚಿತ್ರದಿಂದಲೇ ಪ್ರಸಿದ್ಧಿಯ ಮೆಟ್ಟಲು ಹತ್ತತೊಡಗಿದರು. ‘ಶಬ್ದವೇದಿ’,‘ಕುಮಾರರಾಮ’, ‘ಸಿಂಹದ ಮರಿ’ ಮೊದಲಾದ ಮೂವತ್ತು ಚಿತ್ರಗಳ ಸಾಹಸ ಸರದಾರ ರಾಮ ಶೆಟ್ಟಿಯವರೇ. ‘ಬದ್ಕೆರೆ ಬುಡ್ಲೆ’ ‘ದಾರೆದ ಸೀರೆ’, ‘ಬಂಗಾರ್ದ ಕುರಲ್’ ಇವು ಇವರ ಯಶಸ್ವೀ ತುಳು ಚಿತ್ರಗಳು.

ಶಾರದಾ ಎ. ಅಂಚನ್ ಮುಂಬೈಯಲ್ಲಿ ಕೆಲಸ ನಿರ್ವಹಿಸುವವರು. ತುಳು ಸಂಸ್ಕೃತಿಯಲ್ಲಿ ತುಂಬ ಆಸಕ್ತಿ ಉಳಿಸಿಕೊಂಡಿರುವ ಇವರು ತುಳು ಸಂಸ್ಕೃತಿಯ ಬಗ್ಗೆ ತುಂಬ ತಿಳುವಳಿಕೆ ಉಳ್ಳವರು. ಪಾಡ್ದನ ಅವರ ಮೊದಲ ಕವನ ಸಂಕಲನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT