ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದ ಮನೆಯ ಹಸಿರು ಗೀತ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಆರತಿ ಹಾಗೂ ನವೀದ್‌ ನಗರದ ಹೊರವಲಯದ ಹೆಸರುಘಟ್ಟ ಹತ್ತಿರ ತೋಟದ ಮನೆ ಕಟ್ಟಿದ್ದಾರೆ. ಹಸಿರು ಪ್ರೀತಿಸುವ ಇಂಥವರ ಸಂಖ್ಯೆ ಹೆಚ್ಚಾಗುತ್ತಿದೆ.

ಹಳ್ಳಿಗಳಲ್ಲಿ ತೋಟದ ಮನೆ ಇರೋದು ಸಾಮಾನ್ಯ. ಆದರೆ  ನಗರದ  ಸಮೀಪದಲ್ಲೇ ಒಂದು ತೋಟದ ಮನೆ ಇದೆ. ಆರತಿ ವೆಂಕಟ್‌ ಎಂಬುವವರು ಅದರ ರೂವಾರಿ. ತಮ್ಮಿಷ್ಟದ ಮನೆ ಕಟ್ಟಿ, ಒಳಾಂಗಣ ವಿನ್ಯಾಸವನ್ನು ಇವರೇ  ಮಾಡಿದ್ದಾರೆ. ಇದನ್ನು ನೋಡಲು ಸಾರ್ವಜನಿಕರಿಗೂ  ಅವಕಾಶವಿದೆ.

ವಾರಾಂತ್ಯದಲ್ಲಿ ಇಲ್ಲಿಗೆ ಬಂದು ಮನೆ, ತೋಟದಲ್ಲಿ ಸುತ್ತಾಡಬಹುದು. ‘ಅರ್ಥ್‌ ಕಿಚನ್‌’ ಹೆಸರಿನ ಅಡುಗೆಮನೆ ಇದೆ. ಮೊದಲೇ ಬುಕ್ ಮಾಡಿದರೆ  ನೀವು ಹೋಗುವ ದಿನ ಸಮಯಕ್ಕೆ ಸರಿಯಾಗಿ ಊಟ ಸಿದ್ಧವಾಗಿರುತ್ತದೆ.

‘ಕೆಟ್ಟು ಪಟ್ಟಣ ಸೇರು’  ಎಂಬ ಮಾತಿದೆ. ಯಾವುದಾದರೂ ಕೆಲಸ ಮಾಡಿ ಕೈಸುಟ್ಟುಕೊಂಡರೆ, ಉದ್ಯೋಗದಲ್ಲಿ ನಷ್ಟ ಅನುಭವಿಸಿದರೆ ತಪ್ಪಿಸಿಕೊಳ್ಳಲು ಸರಿಯಾದ ದಾರಿ ಎಂದರೆ ಪಟ್ಟಣಕ್ಕೆ ಹಾರುವುದು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದೂ ಹೇಳುತ್ತಾರೆ. ಪಟ್ಟಣದ ಬದುಕಿನ ಮುಖದ ಅರಿವಿರದ ಹಲವು ಮಂದಿ ತೊಂದರೆ ಅನುಭವಿಸುತ್ತಾರೆ.

ಈಗ ಇದೆಲ್ಲ ಹಳೆಯದಾಗಿದೆ. ‘ಕೆಟ್ಟು ಹಳ್ಳಿ ಸೇರು’ ಎಂಬ ಮಾತು ಬಳಕೆಗೆ ಬಂದಿದೆ. ಪಟ್ಟಣಗಳಲ್ಲಿರುವ ಜನ ಹಳ್ಳಿಯ ಕಡೆಗೆ ಸಾಗುತ್ತಿದ್ದಾರೆ. ನಗರದ ಏಕತಾನತೆಯ ಬದುಕಿನಿಂದ ತಪ್ಪಿಸಿಕೊಳ್ಳಲು  ಹಸಿರು ಪರಿಸರ, ಶುದ್ಧಗಾಳಿ, ನೀರು ಹುಡುಕಿಕೊಂಡು ಹಳ್ಳಿಗಳಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಾರೆ.

ಹಣವಿದ್ದವರು ಜಾಗ ಖರೀದಿಸಿ, ತಮ್ಮಿಷ್ಟದ ಸುಂದರವಾದ ಮನೆ ಕಟ್ಟಿಸಿ ಹೊಸ ಜೀವನದ ತುಡಿತಕ್ಕೆ ಸ್ಪಂದಿಸಲು ಯತ್ನಿಸುತ್ತಾರೆ. ಇದೇ ಹಾಯ್‌ ಎನಿಸುವ ಬದುಕು ಎಂದು ನಿಟ್ಟುಸಿರು ಬಿಡುತ್ತಾರೆ.

ಹೀಗೆ ನಗರದ ಕೆಲಸ, ಕೈತುಂಬಾ ಸಂಬಳ ಬಿಟ್ಟು ಹಸಿರಿನೆಡೆಗೆ ಪ್ರೀತಿ ಬೆಳೆಸಿಕೊಂಡವರ ಕಥೆಯೊಂದು ಇಲ್ಲಿದೆ. ನಗರದ ಜಂಜಾಟ, ಹೊಗೆ–ದೂಳಿನ ವಾತಾವರಣ, ಕಲಬೆರಕೆ ನೀರು ಎಲ್ಲವನ್ನೂ ಬಿಟ್ಟು ದೂರದಲ್ಲಿ ಅಂದರೆ ನಗರದ ಸನಿಹದಲ್ಲೇ ಒಂದು ಮನೆ ಕಟ್ಟಿ, ಮನೆಯ ಸುತ್ತ ತೋಟ ಮಾಡಿದ್ದಾರೆ.

ಈ ಮನೆ ಕೇವಲ ಗೋಡೆಗಳ ಗೂಡು ಅಲ್ಲ. ಇಲ್ಲೊಂದು ಪ್ರೀತಿಯ ವಾತಾವರಣ ಇದೆ, ಕುಶಲ ಕಲೆ, ಒಳಾಂಗಣ ವಿನ್ಯಾಸ ನೋಡುಗರನ್ನು ಮನಸೆಳೆಯುತ್ತದೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಬಹುದು. ಮನೆಯ ಬಗ್ಗೆ,  ಅದನ್ನು ಕಟ್ಟಿದ ಸಾಹಸದ ಬಗ್ಗೆ ಕೇಳಿ ತಿಳಿಯಬಹುದು. ಸುಂದರ ಮನೆಯ ಸಾಕಾರಮೂರ್ತಿ ಆರತಿ ವೆಂಕಟ್‌ ಅವರ ಮಾತುಗಳಲ್ಲೇ  ಕೇಳೋಣ...

‘ನಾನು ಮೂಲತಃ ಬೆಂಗಳೂರಿನವಳು. ಬೆಂಗಳೂರಿನ ನ್ಯಾಷನಲ್‌ ಕಾನೂನು ಕಾಲೇಜಿನಲ್ಲಿ ಓದಿದ್ದು. ಆಮೇಲೆ ಸ್ವಲ್ಪ ಅವಧಿ ಪ್ರಾಕ್ಟೀಸ್‌ ಮಾಡಿದೆ. ಹೈಕೋರ್ಟ್ ಮತ್ತು ಸಿವಿಲ್‌ ಕೋರ್ಟ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದೆ. ನಂತರ ಲಂಡನ್‌ಗೆ ಹೋಗಿ ಎಂಬಿಎ ಮಾಡಿ ಆನಂತರ ದುಬೈಗೆ ಹೋಗಿದ್ದೆ. ಅಲ್ಲಿ 12 ವರ್ಷ ಕೆಲಸ ಮಾಡಿ ವಾಪಸ್‌ ಬಂದೆ. ಇಲ್ಲಿಗೆ ಬಂದು 5 ವರ್ಷವಾಯಿತು. ನನ್ನ ಪತಿ ನವೀದ್‌ ಅವರು ಪಿ.ಆರ್‌. ಬ್ರ್ಯಾಂಡಿಂಗ್ ಕನ್ಸಲ್ಟೆಂಟ್‌. ಈಗ   ನನ್ನೊಂದಿಗೆ ಮನೆ   ನೋಡಿಕೊಂಡಿದ್ದಾರೆ.

ನಾನು ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಇದ್ದೆ. 12 ವರ್ಷ ದುಬೈನಲ್ಲಿದ್ದಾಗ ವರ್ಷಕ್ಕೊಮ್ಮೆ ಮನೆಗೆ ಬರುತ್ತಾ ಇದ್ದೆ. ವಿದೇಶಕ್ಕೆ ಹೋದ ನಂತರ ಅಲ್ಲೆಲ್ಲಾ ನೋಡಿದ ಮೇಲೆ ಬೆಂಗಳೂರು ಎಷ್ಟು ಕೆಟ್ಟು ಹೋಗಿದೆ ಎಂಬುದು ತಿಳಿಯಿತು. ಟ್ರಾಫಿಕ್‌ ಮಧ್ಯೆ ಸಿಕ್ಕಿಹಾಕಿಕೊಳ್ಳುವ ಸಿಟಿಯಲ್ಲಿ ಇರಲು ಇಷ್ಟವಾಗಲಿಲ್ಲ. ಏನು ಮಾಡೋದು ಎಂದು ಯೋಚನೆ ಮಾಡ್ತಾ ಇದ್ದೆ.

ಒಂದು ಒಳ್ಳೆಯ ಮನೆ ಕಟ್ಟಬೇಕು, ನನ್ನ ಇಷ್ಟದ ಹಾಗೆ ಗಾರ್ಡನ್‌ ಮಾಡಬೇಕು ಎಂದು ಬಯಸಿದ್ದೆ. ಜಮೀನು ಹೇಗೂ  ಅಪ್ಪ ಅಮ್ಮನ ಹೆಸರಿನಲ್ಲಿ ಇತ್ತು. ಆದರೆ ಇದನ್ನು ಅಭಿವೃದ್ಧಿ ಮಾಡಿರಲಿಲ್ಲ. ಆಗ ‘ಅಲ್ಲಿ ಮನೆ ಕಟ್ಟಿಕೊ’ ಅಂತ ನನ್ನ ತಂದೆ ತಾಯಿ  ಸಲಹೆ ನೀಡಿದರು.

ಆನಂತರ ಇಲ್ಲಿಗೆ ಬಂದು ನೋಡಿದೆ. ಸಿಟಿಯಲ್ಲಿ ಆದರೆ ನನಗೆ ಇಷ್ಟವಾಗೋ ಹಾಗೆ ಮನೆ ಕಟ್ಟಲು ಸಾಧ್ಯವಿಲ್ಲ ಅಂತ ಗೊತ್ತಿತ್ತು. ಅದಕ್ಕೆ ಇಲ್ಲೇ ಒಂದು ಚೆಂದದ ಮನೆ ಕಟ್ಟಲು ನಿರ್ಧರಿಸಿದೆ.

ಇಲ್ಲಿ 6 ಎಕರೆ ಜಾಗವಿದೆ. ಇದನ್ನು ‘ಡೆವಲಪ್’ ಮಾಡೋದು ಅಷ್ಟೊಂದು ಕಷ್ಟವಾಗಲಿಲ್ಲ.  ಮೊದಲಿಗೆ ಎರಡು ಕಡೆ  ಬೇಲಿ ಮಾಡಿದೆವು.  ಆಮೇಲೆ ಬೋರ್‌ ಕೊರೆಸಿದೆವು. ಮೊದಲಿಗೆ 10 ಲಕ್ಷ ಖರ್ಚಾಯಿತು. ಆನಂತರ ರಸ್ತೆ ಬದಿ ಸಾವಿರ ಸಸಿ ನೆಟ್ಟೆವು. 

ಮನೆ ಕಟ್ಟಿದ ನಂತರ ಪ್ರತಿ ವರ್ಷ ಸಸಿ ನೆಟ್ಟಿದ್ದೇವೆ. ಈಗ ಒಟ್ಟು ಮೂರು ಸಾವಿರ ಮರಗಳಿವೆ. ಇದರ ಕೆಲಸ ಮಾಡೋಕೆ ನಾಲ್ಕು ಜನ ಇದಾರೆ. 10  ವರ್ಷದಲ್ಲಿ ಇಲ್ಲಿ ದೊಡ್ಡ ಕಾಡು ಇರಬೇಕು ಎಂಬ ನಿರೀಕ್ಷೆ ನಮ್ಮದು. ಮೂರು ಎಕರೆಯಲ್ಲಿ ಮರಗಳಿವೆ. ಅರ್ಧ ಎಕರೆಯಲ್ಲಿ ವಿವಿಧ ಹಣ್ಣಿನ ಗಿಡಗಳಿವೆ.  ಮನೆ ಹಿಂದೆ ತರಕಾರಿ ಹಾಕಿದ್ದೇವೆ.  ಮನೆಗೆ ಸಾಕಾಗುವಷ್ಟು  ಬೆಳಿತೇವೆ.

ಅಂದದ ಅರ್ಥ್‌ ಕಿಚನ್‌ 
ಅದು ಸುಮ್ಮನೆ ಇಟ್ಟ ಹೆಸರು. ಅದಕ್ಕೇನು ಭಾರಿ ಕಥೆ ಇಲ್ಲ. ನನ್ನ ಗಂಡನೇ ಎಲ್ಲವನ್ನು ನೋಡಿಕೊಳ್ತಾರೆ. ಅವರೇ ಎಲ್ಲ ಲೋಗೊ ಡಿಸೈನ್ ಮಾಡಿದ್ದಾರೆ. ನನಗೂ ಅಡುಗೆ ಮಾಡೋದು ಇಷ್ಟ. ಇಂಡಿಯನ್‌ ಕುಕಿಂಗ್ ಅಷ್ಟು ಗೊತ್ತಿಲ್ಲ. ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಟ್ರಾವೆಲ್‌ ಮಾಡಿರೋದರಿಂದ ಅಲ್ಲಿನ ಅಡುಗೆ ಕಲ್ತಿದ್ದೀನಿ. ಇಟಾಲಿಯನ್, ಅರೇಬಿಕ್‌, ಮೆಡಿಟರೇನಿಯನ್‌ ಫುಡ್ ಮಾಡ್ತೀನಿ.

ವಾರಾಂತ್ಯದಲ್ಲಿ ಇಲ್ಲಿಗೆ ಬರೋ ಅತಿಥಿಗಳಿಗೆ ಈ ಊಟ ಸಿಗುತ್ತೆ.  ಒಂದು ವಾರ ಮೊದಲೇ ಬುಕ್ ಮಾಡಬೇಕು. ಶನಿವಾರ ಮತ್ತು ಭಾನುವಾರ ಇಲ್ಲಿಗೆ ಜನ ಬರ್ತಾರೆ. ಒಟ್ಟು 10ರಿಂದ 12 ಜನರಿಗೆ ಅವಕಾಶ ಇದೆ. ತುಂಬಾ ತುರ್ತು ಸಂದರ್ಭದಲ್ಲಾದರೆ,  ಅಂದರೆ 4ರಿಂದ 5 ದಿನ ಮುಂಚೆ ತಿಳಿಸಬೇಕು.

ನಮ್ಮ ಕಿಚನ್‌ನಲ್ಲಿ ಬಳಸೊ ಎಲ್ಲ ತರಕಾರಿ ಸಂಪೂರ್ಣ ಸಾವಯವ. ಯಾವುದೇ ರಾಸಾಯನಿಕ ಬಳಸಿ ಬೆಳೆದಿಲ್ಲ.  ಏನಾದರೂ ಕಾಯಿಲೆ ಬಂದರೆ ನೀಮ್‌ ಆಯಿಲ್‌ ಮಾತ್ರ ಸಿಂಪಡಿಸುತ್ತೇವೆ. ಈಗ ಟೊಮೆಟೊ, ಬೆಂಡೆಕಾಯಿ, ಬೀನ್ಸ್, ಕ್ಯಾರೆಟ್‌, ಮೂಲಂಗಿ ಬೆಳೆದಿದ್ದೇವೆ.

ನೀರಿಗೆ ಕೊಳವೆ ಬಾವಿ ಇದೆ. ಅಲ್ಲದೆ ಮಳೆ ನೀರು ಸಂಗ್ರಹ ಮಾಡ್ತೀವಿ. ಮಳೆ   ನೀರು ಸ್ವಲ್ಪವೂ ವ್ಯರ್ಥವಾಗದಂತೆ ಮಾಡ್ತೀವಿ. ನೀರು ಸಂಗ್ರಹಿಸಲು ಗುಂಡಿ ಮಾಡಿದ್ದೇವೆ. ನೂರು ಅಡಿಯ ಎರಡು  ಕೆರೆ  ಇದೆ. ಅಲ್ಲಿ ಮಳೆ ನೀರು ಸಂಗ್ರಹ ಮಾಡ್ತೀವಿ.

ನಾವೇ ವಾಸ್ತುಶಿಲ್ಪಿಗಳು
ಈ ಮನೆಯ ವಾಸ್ತುಶಿಲ್ಪಿಗಳೇ ನಾವಿಬ್ಬರು.  ಕಂಟ್ರ್ಯಾಕ್ಟರ್‌ ಕಟ್ಟಿ ಕೊಟ್ಟಿದ್ದರು. ಆನಂತರ ಸ್ಟೇರ್‌ಕೇಸ್‌ನಿಂದ  ಹಿಡಿದು ಒಳಾಂಗಣವನ್ನು ನಾವೇ ವಿನ್ಯಾಸ ಮಾಡಿದ್ದೇವೆ.  ಮನೆ ಸರಳವಾಗಿ ಇರಬೇಕು ಅನ್ನೋದು ನಮ್ಮ ಆಸೆ.

ಜಾಗ ಹೆಚ್ಚು ಕಾಣ್ತಾ ಇರಬೇಕು. ಏಕೆಂದರೆ ಪಟ್ಟಣದಲ್ಲಿ ಈ ರೀತಿ ಮನೆ ಕಟ್ಟಲು ಆಗಲ್ಲ. ಓಪನ್‌ ಹೌಸ್‌ನಿಂದ ಹಿಡಿದು ಎಲ್ಲವನ್ನೂ ಇಲ್ಲೇ ಕಾರ್ಪೆಂಟರ್‌ ಮೂಲಕ ಸಿದ್ಧಪಡಿಸಿದ್ದೇವೆ. ಎಲ್ಲವನ್ನೂ ನಾವಿಬ್ಬರು ನಿಂತು ಮಾಡಿಸಿದ್ದೇವೆ.  ಗೆಳೆಯರಿಂದ ಆ್ಯಂಟಿಂಕ್‌ ಫರ್ನಿಚರ್‌ ತಗೊಂಡೆ. ಹೀಗೆ ಸ್ವಲ್ಪ ಸ್ವಲ್ಪವೇ ಖರೀದಿ ಮಾಡಿ ಸೆಟ್‌ ಮಾಡಿದ್ದೇವೆ.

ಎರಡು ಹಸುವನ್ನೂ ಕಟ್ಟಿಕೊಂಡಿದ್ದೇವೆ. ಇನ್ನು ಕುರಿ ಮತ್ತು ಕೋಳಿ ಸಾಕುವ ಯೋಚನೆಯೂ ಇದೆ. ಅದಕ್ಕೆ ಈಗ ಚಿಕ್ಕ ಚಿಕ್ಕ ಮನೆ ಕಟ್ತಾ ಇದ್ದೇವೆ. ಎಲ್ಲ ನಾಟಿ ಇರಬೇಕು. ಹಸುವೂ ನಾಟಿ. ಕುರಿ ಸಾಕೋದಾದರೆ ಬನ್ನೂರು ಕುರಿ. ಏಕೆಂದರೆ ಬೇರೆ ಕಡೆಯಿಂದ ತಂದರೆ ಕಾಯಿಲೆ ಬಂದರೆ ತಡೆಯೋದಿಲ್ಲ.

ಟ್ಯಾಂಕ್‌ ಕಟ್ಟುವುದರಿಂದ ಹಿಡಿದು ಮನೆಗೆ ಏನೆಲ್ಲ ಬೇಕೋ ಎಲ್ಲವನ್ನೂ ಗಂಡನೇ ನೋಡಿಕೊಳ್ತಾರೆ. ಮನೆ, ಅಡುಗೆ, ಹೂವಿನ ಗಿಡ ಎಲ್ಲ ನಾನು ನೋಡಿಕೊಳ್ಳುತ್ತೀನಿ. 

ಸಂತಸ ಅಳೆಯಲಾಗದು
ಮಕ್ಕಳಿಲ್ಲ ಅನ್ನೊ ಫೀಲ್‌ ಇಲ್ಲ. ಈ ಮನೆ, ಪ್ರಾಣಿಗಳು, ಮರ, ತೋಟವೇ ಮಕ್ಕಳ ಕೊರತೆ ನೀಗಿಸಿದೆ. ಸಂತೋಷವನ್ನು ಕೇವಲ ಹಣದಲ್ಲಿ, ಐಶಾರಾಮಿ ಬದುಕಿನಲ್ಲಿ ಅಳೆಯಲಾಗದು. ಸಣ್ಣ ಸಣ್ಣ ಘಟನೆಗಳು ದೊಡ್ಡ ಸಂತಸ ನೀಡುತ್ತಿವೆ. ಮಳೆಯ ಹನಿ ಬೀಳುವುದನ್ನು ನೋಡುವುದು, ಹೂವು ಅರಳಿದ್ದನ್ನು ವೀಕ್ಷಿಸುವುದು, ಪಕ್ಷಿಗಳ ಕೂಗು ಕೇಳಿದಾಗ, ಪ್ರೀತಿಯ ನಾಯಿ ತೊಡೆಯ ಮೇಲೆ ಕುಳಿತಾಗ ಸಿಕ್ಕುವ ಆನಂದವನ್ನು ಅಳೆಯಲಾಗದು. 

ಮನೆಗೆ ಸೋಲಾರ್ ಇದೆ. ವಿದ್ಯುತ್‌ ಇಲ್ಲದಿರುವಾಗ ಅದನ್ನು ಉಪಯೋಗಿಸುತ್ತೇವೆ.  ಬ್ಯಾಕ್‌ಅಪ್‌ಗೆ ಯುಪಿಎಸ್ ಇದೆ. ಅಲ್ಲದೆ ಜನರೇಟರ್‌ ಇದೆ.
ಮನೆಯ ಎಲ್ಲ ವೆಚ್ಚ ₹1 ಕೋಟಿ  20 ಲಕ್ಷ ಆಗಿರಬಹುದು. ಬೆಂಗಳೂರು ನಗರದಲ್ಲಿ ಇಷ್ಟು ದುಡ್ಡಿಗೆ ಅಪಾರ್ಟ್‌ ಮೆಂಟ್‌  ಸಿಗಲ್ಲ. ಆದರೆ ಇಲ್ಲಿ ನಾನು ಆರು ಎಕರೆ ಡೆವಲಪ್ ಮಾಡಿದೀನಿ.

ವಿಳಾಸ: ಗ್ರಾಸ್‌ರೂಟ್ಸ್ , ನೃತ್ಯಗ್ರಾಮ  ರಸ್ತೆ, ಹೆಸರಘಟ್ಟ.
ಫೇಸ್ ಬುಕ್‌ : www.facebook.com/groups/earthkitchen
ವೆಬ್‌ಸೈಟ್‌: earthkitchen.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT