ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕೊರಿಯಾದ ಮುಳುಗಿದ ಹಡಗಿನ ದುರಂತ ಕಥನ

Last Updated 26 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಂದಿನ ಹಡಗು ಪ್ರಯಾಣ ದುರಂತ ಅಂತ್ಯ ಕಾಣುತ್ತದೆ ಎಂದು ಅದರಲ್ಲಿದ್ದವರು ಯಾರೂ ಅಂದುಕೊಂಡಿರಲಿಲ್ಲ. ಬದುಕಿ ‘ಉಳಿದವರು ಕಂಡಂತೆ’ ಹಡಗಿನ ದುರಂತದ ಕಥೆ ಈಗ ಒಂದೊಂದೇ ಹೊರ ಬೀಳುತ್ತಿದೆ.

ಈ ತಿಂಗಳ 16ರಂದು ದಕ್ಷಿಣ ಕೊರಿಯಾದ ನೈಋತ್ಯ ಕರಾವಳಿಯ ಬಿಯಾಂಗ್‌ಪಂಗ್ ದ್ವೀಪದ ದಕ್ಷಿಣಕ್ಕೆ 20 ಕಿ.ಮೀ. ದೂರದಲ್ಲಿ ಪ್ರಯಾಣಿಕರ ಹಡಗು ಕೊರೆಯುವ ಸಮುದ್ರದಲ್ಲಿ ಮುಳುಗುತ್ತಿದ್ದಾಗ ಪ್ರಯಾಣಿಕರ ರಕ್ಷಣೆಗೆ ಮುಂದಾಗದೆ ಹಡಗನ್ನು ಮುಳುಗಲು ಬಿಟ್ಟು ಪಲಾಯನ ಮಾಡಿದ ಕ್ಯಾಪ್ಟನ್ ಲೀ ಜೂನ್ಸಿ­ಯೋಕ್ ವಿರುದ್ಧ ಕೊರಿಯಾದಲ್ಲಿ ವ್ಯಕ್ತವಾದ ಆಕ್ರೋಶ ಅಷ್ಟಿಷ್ಟಲ್ಲ.  ಈ ಹಡಗು ಅರ್ಧಂಬರ್ಧ ಮುಳುಗುತ್ತಿದ್ದಂತೆಯೇ ಕ್ಯಾಪ್ಟನ್ ಜೀವರಕ್ಷಕ ಜಾಕೆಟ್ ಧರಿಸಿಕೊಂಡು ನೀರಿನಲ್ಲಿ ಧುಮುಕಿ ಪಲಾಯನ ಮಾಡಿಬಿಟ್ಟರು. ಹಡಗಿನಲ್ಲಿದ್ದ  476 ಪ್ರಯಾಣಿಕರಲ್ಲಿ 171 ಜನರು ಜಲಸಮಾಧಿಯಾದರು. ಇವರಲ್ಲಿ ಬಹುತೇಕರು ಪ್ರೌಢಶಾಲಾ ವಿದ್ಯಾರ್ಥಿಗಳು. 131 ಮಂದಿ ಇನ್ನೂ ಕಣ್ಮರೆಯಾಗಿದ್ದಾರೆ.

ಹಡಗು ಮುಳುಗಡೆಯಾದ ಸಮಯದಲ್ಲಿ ಅದರ ಸಂವಹನ ಸಾಧನಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲವಾದ್ದರಿಂದ ದಡದಲ್ಲಿನ ನಿಯಂತ್ರಣಾ ಕೇಂದ್ರಕ್ಕೆ ಸಂಪರ್ಕ ತಕ್ಷಣ ಸಿಗಲಿಲ್ಲ. ಕ್ಯಾಪ್ಟನ್ ಮತ್ತು ಸಿಬ್ಬಂದಿ ವರ್ಗದವರಿಗೆ ಏನು ಮಾಡುವುದೆಂದು ತೋಚಲಿಲ್ಲ, ಬರೀ ಗೊಂದಲ. ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದ ಒತ್ತಡ ದಿಂದ ನಿರ್ಧಾರ ಕೈಗೊಳ್ಳುವುದು ಕಠಿಣವಾಗುತ್ತಲೇ ಹೋಯಿತು ಮತ್ತು ಅವರು ಆ ಕ್ಷಣದಲ್ಲಿ ಕೈಗೊಂಡ ನಿರ್ಧಾರ ಕೂಡ ಪ್ರಶ್ನಾರ್ಹ ವಾ­ಯಿತು. ಸಂಪರ್ಕ ದೊರಕಿದ ಮೇಲೂ ತುರ್ತು ಕೇಂದ್ರದವರು ಸ್ಪಂದಿಸಲು ವಿಳಂಬ ಮಾಡಿದರು. ಹಡಗು ಮತ್ತು ತುರ್ತು ನೆರವು ಕೇಂದ್ರದ ಮಧ್ಯೆ ನಡೆದ ಸಂವಹನ ಕೂಡ ಗೊಂದಲಕಾರಿಯಾಗಿಯೇ ಇತ್ತು. ಈ ಗೊಂದಲಗಳು 40 ನಿಮಿಷಗಳ ಮುಂದುವರಿದ ಕಾರಣ ನೂರಾರು ಜನರು ಬಲಿಯಾಗಬೇಕಾಯಿತು.

‘15 ನಿಮಿಷದಲ್ಲಿ ಕರಾವಳಿ ರಕ್ಷಣಾ ಪಡೆಯವರು ಬರುತ್ತಾರೆ. ಪ್ರಯಾಣಿಕರಿಗೆ ಜೀವರಕ್ಷಕ ಜಾಕೆಟ್‌ಗಳನ್ನು ಧರಿಸುವಂತೆ ಹೇಳಿ’ ಎಂದು ನೆರವಿಗೆ ಯಾಚಿಸಿದ ಅರ್ಧ ತಾಸಿನ ನಂತರ ತುರ್ತು ನೆರವು ಕೇಂದ್ರದಿಂದ ಸೂಚನೆ ಹೊರಬಿತ್ತು. ಆದರೆ, ಇದನ್ನು ಪ್ರಯಾಣಿಕರಿಗೆ ತಿಳಿಸಲು ಹಡಗಿನ ಧ್ವನಿವರ್ಧಕ ಕೆಟ್ಟು ಹೋಗಿತ್ತು. ಈ ಮಾಹಿತಿ­ಯನ್ನು ವಾಪಸ್ ತುರ್ತು ಕೇಂದ್ರಕ್ಕೆ ರವಾನಿಸಲು ರೇಡಿಯೊ ತರಂಗಾಂತರ ಕೈಕೊಡುತ್ತಿತ್ತು. ಹಾಗೂಹೀಗೂ ಸಂವಹನ ಸಾಧನ­ದಿಂದ ಸಂದೇಶದ ಮೂಲಕ ಮಾಹಿತಿ ರವಾನೆಯಾಯಿತು. ಅಷ್ಟರಲ್ಲಿ ಹಡಗಿನ ಸಂವಹನ ವಿಭಾಗ ಇಂಟರ್‌ಕಾಂ ಮೂಲಕ ಪ್ರಯಾಣಿಕರಿಗೆ ಎಲ್ಲಿರುವಿರೋ ಅಲ್ಲೇ ಇರುವಂತೆ ಸೂಚನೆ ಕೊಟ್ಟುಬಿಟ್ಟಿತ್ತು. ಬಹುಶಃ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ಭಾವಿಸಿರಬೇಕು?!

ತುರ್ತು ನೆರವು ಕೇಂದ್ರದಿಂದ ಮತ್ತೊಂದು ಸಂದೇಶ ಬಂತು: ‘ಧ್ವನಿವರ್ಧಕ ಕೆಟ್ಟುಹೋಗಿದ್ದರೆ ಪರವಾಗಿಲ್ಲ. ಪ್ರಯಾಣಿಕರು ದಪ್ಪ ಬಟ್ಟೆ ಮೇಲೆ ಜೀವರಕ್ಷಕ ಜಾಕೆಟ್ ತೊಟ್ಟು ಹೊರಬಂದರೆ, ಕರಾವಳಿ ರಕ್ಷಣಾ ಪಡೆ ರಕ್ಷಣೆಗೆ ಧಾವಿಸುತ್ತದೆ’ ಎಂಬ ಮಾಹಿತಿ ನೀಡಿತು.
ಇದಕ್ಕೆ ಪ್ರತಿಕ್ರಿಯಿಸಿದ ಹಡಗಿನ ಸಂವಹನ ವಿಭಾಗ, ‘ಅವರು (ಕರಾವಳಿ ರಕ್ಷಣಾ ಪಡೆ) ಬೇಗ ಬರಲಿ’ ಎಂಬ ಮಾಹಿತಿ ರವಾನಿಸಿತು. ಒಂದು ನಿಮಿಷದ ತರುವಾಯ ಅತ್ತಕಡೆಯಿಂದ ‘ನಮಗೆ ಅಲ್ಲಿನ ಸನ್ನಿವೇಶ ಏನು ಎಂಬುದು ತಿಳಿದಿಲ್ಲ. ಆದ್ದರಿಂದ ಅಂತಿಮ ನಿರ್ಧಾರ ಹಡಗಿನ ಕ್ಯಾಪ್ಟನ್‌ಗೆ ಬಿಟ್ಟ ವಿಚಾರ. ಆದರೆ, ನಿರ್ಧಾರ ಬೇಗ ತೆಗೆದುಕೊಂಡರೆ ಉತ್ತಮ’ ಎಂಬ ಮಾಹಿತಿ ಬಂತು. ಆದರೆ, ಹಡಗಿನ ಆಂತರಿಕ ಗೊಂದಲಗಳು ಪರಿಹಾರ ಆಗಿರಲಿಲ್ಲ. ಹಡಗಿನ ಸಂವಹನಾಧಿಕಾರಿ ಬೇರೊಂದು ಮಹಡಿಯಲ್ಲಿದ್ದರು. ಕ್ಯಾಪ್ಟನ್‌ಗೆ ತುರ್ತು ಕೇಂದ್ರದಿಂದ ಬಂದ ಮಾಹಿತಿಯನ್ನು ನಿಖರವಾಗಿ ದಾಟಿಸಲು ಆಗಲಿಲ್ಲ. ಈ ಮಾಹಿತಿಯನ್ನು ಕ್ಯಾಪ್ಟನ್‌ಗೆ ಮುಟ್ಟಿಸಿದ ‘ಬ್ರಿಡ್ಜ್’ನಲ್ಲಿದ್ದ (ಹಡಗಿನ ಚಾಲಕರ ಕೋಣೆಯಲ್ಲಿ ಚಾಲನಾ ಸಾಧನಗಳಿರುವ ಭಾಗ) ಸಿಬ್ಬಂದಿಯೊಬ್ಬ, ಹಡಗಿನಿಂದ ಪ್ರಯಾಣಿಕರು ಹೊರಹೋಗಲು ಕ್ಯಾಪ್ಟನ್ ತಿಳಿಸಿದ್ದಾರೆಂದು ಉಸುರಿದ. ಆದರೆ, ಸಂವಹನಾಧಿಕಾರಿ ಪ್ರಯಾಣಿಕರಿಗೆ ನೀಡಿದ ಸಂದೇಶವನ್ನು ಆತ ಕೇಳಿಯೇ ಇರಲಿಲ್ಲ!
ಕೊನೆಯ ಪಯಣ: ನತದೃಷ್ಟ ‘ಎಂವಿ ಸೆವೊಲ್’ ಹಡಗು, ಸೋಲ್‌ನ ಪಶ್ಚಿಮಕ್ಕಿರುವ ಇನ್‌ಚೊನ್ ಪಟ್ಟಣದ ಹಡಗುಕಟ್ಟೆಯಿಂದ  ಈ ತಿಂಗಳ 15ರಂದು ಮಂಗಳವಾರ ರಾತ್ರಿ 9ಕ್ಕೆ ಪ್ರಯಾಣ ಆರಂಭಿಸಿತ್ತು. ದಕ್ಷಿಣ ಭಾಗದಲ್ಲಿನ ಜೆಜು ದ್ವೀಪ ಇದು ಸೇರಬೇಕಾದ ಗುರಿಯಾಗಿತ್ತು. 460 ಅಡಿ ಎತ್ತರದ ಐದು ಮಹಡಿಗಳುಳ್ಳ ಪ್ರಯಾಣಿಕರ ಈ ಹಡಗು 264 ಕಿ.ಮೀ. ದೂರದ ಪ್ರಯಾಣವನ್ನು ವಾರಕ್ಕೆ ಎರಡು ಸಾರಿ ಮಾಡುತ್ತಿತ್ತು.

ಹಡಗಿನ ಪ್ರಯಾಣಿಕರ ಒಟ್ಟು ಸಾಮರ್ಥ್ಯದಲ್ಲಿ ಅರ್ಧಕ್ಕಿಂತ ಸ್ವಲ್ಪ ಜಾಸ್ತಿ ಮಾತ್ರ ಅಂದು ಪಯಣಿಸುತ್ತಿದ್ದರು. ಇವರಲ್ಲಿ 325 ಮಂದಿ  ಪ್ರೌಢಶಾಲೆಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು. ಮುಂದಿನ ವರ್ಷ ಕಾಲೇಜಿಗೆ ಹೋಗುವ ಕನಸು ಹೊತ್ತ ಈ ತರುಣ–ತರುಣಿಯರು ತಮ್ಮ ಶಾಲಾ ದಿನದ ಕಡೆಯ ಪ್ರವಾಸ ಕೈಗೊಂಡಿದ್ದರು. ಆದರೆ, ಇದು ಅನೇಕ ವಿದ್ಯಾರ್ಥಿಗಳ ಜೀವನದ ಕಡೆಯ ಪಯಣವಾಗಿದ್ದು ವಿಪರ‍್ಯಾಸ.

ಈ ಹಡಗಿನ ಸರಕು ವಿಭಾಗ  ಭರ್ತಿಯಾಗಿತ್ತು. 124 ಕಾರು, 56 ಟ್ರಕ್‌ ಮತ್ತು 105 ಬೃಹತ್‌ ಗಾತ್ರದ ಪೆಟ್ಟಿಗೆಗಳು ಅದರಲ್ಲಿದ್ದವು. ಹಡಗು ಮುಳುಗಡೆ ಪ್ರಕರಣದ ಬಗ್ಗೆ ಈ ತಿಂಗಳ 21ರಂದು  ನ್ಯಾಯಾಲಯದ  ನಡೆದ ವಿಚಾರಣೆ ಸಂದರ್ಭದಲ್ಲಿ ಪ್ರಾಸಿಕ್ಯೂಟರ್, ಹಡಗಿನ ಮುಖ್ಯ ಎಂಜಿನಿಯರ್ ಮತ್ತು ಬದುಕು­ಳಿದ ಸಿಬ್ಬಂದಿಯಲ್ಲಿ ಮೂವರನ್ನು ಪಾಟಿಸವಾಲಿಗೆ ಗುರಿ ಮಾಡಿದರು. ‘ಹಡಗು ಮಗುಚಿ ಬೀಳಲು ಅದು ಎಡಭಾಗಕ್ಕೆ ದಿಢೀರ್ ತಿರುವು ಪಡೆದಿದ್ದೇ ಕಾರಣ. ವಾಲಿಕೊಂಡ ಹಡಗನ್ನು ಅವ್ಯವಸ್ಥಿತವಾಗಿ ಜೋಡಿಸಿದ್ದ ಸರಕು ಮತ್ತಷ್ಟು ವಾಲಿಸಿತು. ಒಂದೇ ಕಡೆ ಭಾರ ಹೆಚ್ಚಾಗಿ ಈ ದುರಂತ ಘಟಿಸಿತು’ ಎಂದು ಹಡಗಿನಲ್ಲಿದ್ದವರು ಕೋರ್ಟಿನ ಗಮನಕ್ಕೆ ತಂದರು. ಹಡಗು ಮತ್ತು ತುರ್ತು ಕೇಂದ್ರದ ಮಧ್ಯೆ ನಡೆದ ಸಂವಹನದ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎಂದು ಪ್ರಾಸಿಕ್ಯೂಟರ್ ಅವರು ಕೋರ್ಟ್‌ಗೆ ತಿಳಿಸಿದರು.

ಹಡಗಿನ ಚಾಲಕ ಜೊ ಜುನ್–ಗಿ, ‘ನಾನೂ ತಪ್ಪು ಮಾಡಿದೆ. ಅಷ್ಟರಲ್ಲಿ ಹಡಗು ತೀರಾ ಎಡಕ್ಕೆ ವಾಲಿಕೊಂಡಿತ್ತು’ ಎಂದಿದ್ದಾರೆ. ‘ದೇಹ ಅಲ್ಲಾಡಿದಂತಾಗಿ ಎಚ್ಚರಗೊಂಡೆ. ಆಗ ಬೆಳಿಗ್ಗೆ 8.48ರ ಸಮಯ. ಕೋಣೆ ಗೋಡೆಯ ಕಡೆಗೆ ಜಾರಿಕೊಂಡು ಬಿದ್ದಿದ್ದೆ. ಹಡಗು ಒಂದೆಡೆಗೆ ವಾಲಿಕೊಂಡಿದೆ ಎಂಬುದು ಅರಿವಿಗೆ ಬಂತು. ದಡಬಡನೆ ಕೋಣೆಯಿಂದ ಹೊರಬಂದೆ, ಓಲಾಡುತ್ತಿದ್ದ ಹಡಗಿನಲ್ಲಿ ಸಾವರಿಸಿಕೊಂಡು ‘ಬ್ರಿಡ್ಜ್’ನತ್ತ ಹೆಜ್ಜೆಯಿಟ್ಟೆ. ಅಲ್ಲಿ ಮೊದಲು ಕಂಡಿದ್ದು, ಹಡಗಿನ ಕ್ಯಾಪ್ಟನ್ ಲೀ ಅವರನ್ನು’ ಎಂದು ಹಡಗಿನ ಸಿಬ್ಬಂದಿ ಓ ಅವರು ಹೇಳಿದ್ದಾರೆ.

‘ಲೀ ಅವರು ಚಾಲಕರ ಕೋಣೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಹಡಗು ಓಲಾಡುತ್ತಿದ್ದ ಕಾರಣ ಕೋಣೆಯ ಬಾಗಿಲ ಚೌಕಟ್ಟನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅವರನ್ನು ಕೋಣೆಯೊಳಕ್ಕೆ ತಳ್ಳಿ, ನಾನೂ ಒಳಗೆ ಹೋದೆ. ಅಲ್ಲಿಗೆ ಹಡಗಿನ ಕೆಲವು ಸಿಬ್ಬಂದಿ ಮತ್ತು ಹೆಲ್‌ಮ್ಸ್‌ಮೆನ್ ಬಂದರು. ಕಂಬಕ್ಕೊರಗಿನಿಂತ ಕ್ಯಾಪ್ಟನ್, ನಕ್ಷೆಯನ್ನು ಹರಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲು ಅಣಿಯಾದರು. ‘‘ಹಗಡು ತೀರ ವಾಲಿಕೊಂಡಿದೆ. ಪ್ರಯಾಣಿಕರು ಕೈಗೆ ಸಿಕ್ಕಿದ್ದನ್ನು ಬಿಗಿಯಾಗಿ ಹಿಡಿದು ನಿಂತುಕೊಂಡಿದ್ದಾರೆ’ ಎಂಬ ಕ್ಯಾಪ್ಟನ್ ಮಾತಿಗೆ ನಾನೂ ದನಿಗೂಡಿಸಿದೆ. ನಾವು ಖಂಡಿತ ಕಷ್ಟಕರ ಸನ್ನಿವೇಶದಲ್ಲಿದ್ದೇವೆ. ಇನ್ನು ಕೆಲವೇ ಕ್ಷಣಗಳಲ್ಲಿ ಇದು ಇನ್ನಷ್ಟು ಬಿಗಡಾಯಿಸುತ್ತದೆ ಎಂದೆ’ ಎಂದು ಓ ತಿಳಿಸಿದ್ದಾರೆ. ಚಾಲಕರ ಕೋಣೆಯಲ್ಲಿ ನಡೆದ ಈ ಸಂಭಾಷಣೆಯನ್ನು ಆಧರಿಸಿ ತನಿಖಾಧಿಕಾರಿ ಗಳು ಅಲ್ಲಿನ ಸನ್ನಿವೇಶವನ್ನು ಮರುಕಲ್ಪಿಸಿ ಸುಳಿವು ದೊರೆಯ ಬಹುದೇ ಎಂದು ತನಿಖೆ ಮುಂದುವರಿಸಿದ್ದಾರೆ. 

ಹಡಗಿನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಇರಿಸುವ ಸಾಧನ ತುರ್ತು ಸಂದರ್ಭದಲ್ಲಿ ನಿಷ್ಕ್ರಿಯವಾಗಿದ್ದು, ಇದ್ದಕ್ಕಿದ್ದಂತೆ ಎದ್ದ ದೈತ್ಯ ಅಲೆ, ಅವ್ಯವಸ್ಥಿತವಾಗಿ ಪೇರಿಸಿದ್ದ ಸರಕು, 20 ವರ್ಷಗಳಷ್ಟು ಹಳೆಯದಾದ ಈ ಹಡಗಿಗೆ ಮೇಲಿನ ಮಹಡಿಗಳ ಭಾರವನ್ನು ತಾಳಿಕೊಳ್ಳುವ ಶಕ್ತಿ ಇತ್ತೇ, ಸುರಕ್ಷತಾ ವಿಧಾನಗಳನ್ನು ಕಡೆಗಣಿಸಲಾಗಿತ್ತೇ ಎಂಬ ಪ್ರಶ್ನೆಗಳ ಸಿಕ್ಕನ್ನು ತನಿಖಾಧಿಕಾರಿಗಳು ಬಿಡಿಸಲು ಪ್ರಯತ್ನಿಸುತ್ತಿದ್ದಾರೆ.
ಹಡಗಿನ ಎರಡನೇ ಮಹಡಿಯಲ್ಲಿದ್ದ ಸಂವಹನಾಧಿಕಾರಿಗಳಲ್ಲಿ ಒಬ್ಬರಾದ ಕಾಂಗ್ ಹಾಯಿ- ಸೆಂಗ್ ಅವರು ದುರಂತದ ನಂತರ ನೀಡಿದ ಸಂದರ್ಶನದಲ್ಲಿ– ‘ಹಡಗು ಎಡಕ್ಕೆ ವಾಲಿಕೊಂಡಾಗ ನಾನು ರೇಡಿಯೊ ಸಂವಹನ ಕೋಣೆಯಲ್ಲಿದ್ದೆ. ಏನು ಮಾಡುವುದೆಂದು ತೋಚದೆ ಚಡಪಡಿಸುತ್ತಿದ್ದೆ. ಹಡಗು ಆಗಲೇ 30 ಡಿಗ್ರಿಯಷ್ಟು ವಾಲಿಕೊಂಡಿತ್ತು. ಶೆಲ್ಫ್‌ನಲ್ಲಿದ್ದ ಊಟದ ಪರಿಕರಗಳು ಕೆಳಗೆ ಬೀಳುತ್ತಿದ್ದವು. ಕೂಡಲೇ ಧ್ವನಿವರ್ಧಕದ ಮೂಲಕ ಪ್ರಯಾಣಿಕರನ್ನುದ್ದೇಶಿಸಿ ಹೇಳಿದೆ: ‘‘ನೀವು ಎಲ್ಲಿರುವಿರೋ ಅಲ್ಲೇ ಇರಿ, ಆತುರಾತುರವಾಗಿ ನುಗ್ಗಬೇಡಿ’’ ತುರ್ತು ಸಂದರ್ಭದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಸೂಚನೆಗಳಿರುವ ಕೈಪಿಡಿಯನ್ನೂ ನೋಡಲು ಆಗಲಿಲ್ಲ. ಮೊದಲು ಆತಂಕಗೊಂಡಿರುವ ಪ್ರಯಾಣಿಕರನ್ನು ಸಮಾಧಾನ ಮಾಡುವುದು ನನ್ನ ಆದ್ಯತೆ ಆಗಿತ್ತು. ಹಾಗಾಗಿ ಈ ಘೋಷಣೆ ಮಾಡಿದೆ’ ಎಂದು ಹೇಳಿದ್ದಾರೆ.

‘ನಾನು ತಕ್ಷಣದಲ್ಲೇ ಪ್ರಯಾಣಿಕರನ್ನು ಹಡಗಿನಿಂದ ಹೊರಗೆ ಹೋಗುವಂತೆ ಹೇಳಲಿಲ್ಲ. ಹಡಗಿನೊಳಗಿದ್ದ ಜೀವಭಯಕ್ಕಿಂತ ಹೊರಗೇ ಹೆಚ್ಚು ಅಪಾಯ ಇತ್ತು. ದೊಡ್ಡ ಅಲೆಗಳು ಅಬ್ಬರಿಸುತ್ತಿ ದ್ದವು, ಗಿರಗಿರನೆ ಸುತ್ತಿದ್ದ ಸುಳಿ ಜನರನ್ನು ನುಂಗಿ ಆಪೋಷನ ತೆಗೆದುಕೊಳ್ಳುವಂತೆ ಕಾಣುತ್ತಿತ್ತು. ಕೊರೆಯುತ್ತಿದ್ದ ನೀರಿಗಿಳಿದರೆ ಪ್ರಯಾಣಿಕರು ಪ್ರಾಣ ಬಿಡುವುದು ನಿಶ್ಚಿತ ಎಂದೆಣಿಸಿದೆ’ ಎಂದು ಕ್ಯಾಪ್ಟನ್ ಲೀ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 9.18ರ ಹೊತ್ತಿಗೆ ಹಡಗು 50 ಡಿಗ್ರಿಯಷ್ಟು ವಾಲಿಕೊಂಡಿತ್ತು. ಆ ಸಂದರ್ಭದಲ್ಲಿ ಪ್ರಯಾಣಿಕರ ಸ್ಥಳಾಂತರ ಅಸಾಧ್ಯ. ‘ಬ್ರಿಡ್ಜ್’ ಮೇಲಿದ್ದ ಕೆಲವರು ರೇಡಿಯೊ ಸಂವಹನದ ಮೂಲಕ ತುರ್ತು ಕೇಂದ್ರಕ್ಕೆ ನೆರವು ಯಾಚಿಸಿದರು. ಸೆಂಗ್ ಅವರು ತಮ್ಮ ಮೊಬೈಲ್ ಮೂಲಕ ಕರಾವಳಿ ರಕ್ಷಣಾ ಪಡೆಯನ್ನು ಸಂಪರ್ಕಿ ಸಿದರು. ಆಗಲೂ ಪ್ರಯಾಣಿಕರಿಗೆ ಇರುವ ಸ್ಥಳದಿಂದ ಕದಲದಂತೆ ಧ್ವನಿವರ್ಧಕದ ಮೂಲಕ ತಿಳಿಸುತ್ತಲೇ ಇದ್ದರು. ಜೀವರಕ್ಷಕ ದೋಣಿಗಳನ್ನು ಹೊರಕ್ಕೆ ತೆಗೆಯಲಾಗುತ್ತದೆ ಎಂಬುದು ಅವರ ಎಣಿಕೆ ಆಗಿತ್ತೇನೋ?!

‘ಬ್ರಿಡ್ಜ್’ನಿಂದ ಹೊರಡುವುದಕ್ಕೂ ಮುನ್ನ ಕ್ಯಾಪ್ಟನ್ ಲೀ  ಪ್ರಯಾಣಿಕರನ್ನು ಸ್ಥಳಾಂತರ ಮಾಡಲು ಆದೇಶಿಸಿ ದ್ದರು ಎಂಬುದು ಸಿಬ್ಬಂದಿ ಓ ಅವರ ಹೇಳಿಕೆ. ಆದರೆ, ಓ ಅವರು ಸಂವಹನಾಧಿ ಕಾರಿ ಸೆಂಗ್ ಪ್ರಯಾಣಿಕರಿಗೆ ನೀಡುತ್ತಿದ್ದ ಸೂಚನೆಗ ಳನ್ನು ಕೇಳಿಸಿಕೊಂಡಿರಲಿಲ್ಲವೆ?  ಇಂತಹ ಆದೇಶ ತಮಗೆ ತಲುಪಿರಲೇ ಇಲ್ಲ ಸೆಂಗ್‌ ಹೇಳಿದ್ದಾರೆ. ಎಲ್ಲವೂ ಗೊಂದಲದಿಂದ ಕೂಡಿದೆ!

ಹಡಗಿನ ಒಟ್ಟು 29 ಸಿಬ್ಬಂದಿಯಲ್ಲಿ ಮೂರನೇ ಎರಡರಷ್ಟು ಮಂದಿ ‘ಬ್ರಿಡ್ಜ್’ನತ್ತ ಧಾವಿಸಿದರು. ಇವರಲ್ಲಿ ಚಾಲಕರ ಕೋಣೆಯಲ್ಲಿದ್ದವರೂ ಇದ್ದರು. ಇವರೆಲ್ಲರೂ ಹಡಗಿನಿಂದ ಹೊರಬಂದು ಜೀವ ಉಳಿಸಿಕೊಂಡರು. 174 ಜನರು ಮಾತ್ರ ಬದುಕುಳಿಯಲು ಸಾಧ್ಯವಾಯಿತು. ಕ್ಯಾಪ್ಟನ್ ಲೀ ಅವರು ಕೆಳಮಹಡಿಯಲ್ಲಿನ ಚಕ್ರಯಂತ್ರಗಳಿರುವ ಕೋಣೆಯ (ವ್ಹೀಲ್ ಹೌಸ್) ಬಾಗಿಲನ್ನು ಒಡೆದು ಹೊರಹೋಗಿದ್ದನ್ನು ಕಂಡಿದ್ದಾಗಿ ಓ ಅವರು ಹೇಳಿದ್ದಾರೆ. ಲೀ ಮೇಲಿನ ಆರೋಪ ಸಾಬೀತಾದರೆ ಅವರಿಗೆ ಜೀವಾವಧಿ ಶಿಕ್ಷೆ ನಿಶ್ಚಿತ ಎಂಬುದು ಕಾನೂನು ತಜ್ಞರ ಅಭಿಪ್ರಾಯ.

–ಚೊ ಸಂಗ್– ಹುನ್, ಕ್ರಿಕ್ ಸೆಂಪೆಲ್, ಇಂಟರ್‌ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT