ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದರ್ಶನದಲ್ಲಿ ಅನಂತಮೂರ್ತಿ ‘ಸಾಹಿತ್ಯ ಸಹವಾಸ’

Last Updated 27 ಜೂನ್ 2014, 19:30 IST
ಅಕ್ಷರ ಗಾತ್ರ

‘ದೂರದರ್ಶನ ಇರುವವರೆಗೂ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಅವಕಾಶ ಇದ್ದೇ ಇರುತ್ತದೆ ಎಂಬ ನಂಬಿಕೆ ಇತ್ತು. ಯಾಕೆಂದರೆ ಚಂದನ ವಾಹಿನಿಯಲ್ಲಿ ಮಾತ್ರ ಇಂತಹ ಗಂಭೀರ ಮತ್ತು ಮಹತ್ವದ ಕಾರ್ಯಕ್ರಮ ಪ್ರಸಾರವಾಗಲು ಸಾಧ್ಯ’ ಎನ್ನುತ್ತಲೇ ಮಾತಿಗಿಳಿದರು ಚಂದನ್ ಗೌಡ.

ಚಂದನ್ ಗೌಡ ಪ್ರತಿ ಭಾನುವಾರ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುತ್ತಿರುವ ‘ಸಾಹಿತ್ಯ ಸಂಜೆ’ ಸರಣಿ ಕಾರ್ಯಕ್ರಮದ ನಿರ್ದೇಶಕ. ಕನ್ನಡದಲ್ಲಿನ ತಮ್ಮ ಹಿರಿಯ ಮತ್ತು ಸಮಕಾಲೀನ ಲೇಖಕರ ಕುರಿತು ಯು.ಆರ್. ಅನಂತಮೂರ್ತಿ ನೀಡಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಮಾಹಿತಿಯನ್ನು ಅವರು ‘ಮೆಟ್ರೊ’ದೊಂದಿಗೆ ಹಂಚಿಕೊಂಡರು.

ಸಾಹಿತ್ಯ ಸಂಜೆ ಪರಿಕಲ್ಪನೆಯು ಕೂತು ತುಂಬ ಯೋಚಿಸಿ ಯೋಜಿಸಿ ಬಂದಿದ್ದಲ್ಲವಂತೆ. ಅಕಸ್ಮಾತ್ ಹೊಳೆದ ವಿಚಾರವನ್ನು ತಾವು ಸಮಾಜಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕುಲಪತಿಯೊಂದಿಗೆ ಹಂಚಿಕೊಂಡಾಗ ವಿಶ್ವವಿದ್ಯಾಲಯವು ಕಾರ್ಯಕ್ರಮ ನಿರ್ಮಾಣಕ್ಕೆ ಮುಂದಾಗಿದ್ದರ ಪರಿಣಾಮವಾಗಿ ಈ ಕಾರ್ಯಕ್ರಮ ರೂಪುಗೊಂಡಿತಂತೆ.

‘ಇಲ್ಲಿ ಅನಂತಮೂರ್ತಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಂತೆ ಮಾತನಾಡಿಲ್ಲ. ನಿರ್ದಿಷ್ಟ ಲೇಖಕರ ಸಾಹಿತ್ಯ ಗುಣ, ಭಿನ್ನತೆ, ಸಾಹಿತ್ಯ ಜಗತ್ತಿನಲ್ಲಿ ಅವರ ಸ್ಥಾನ, ಹೀಗೆ ತುಂಬ ಕ್ರಿಯಾತ್ಮಕವಾಗಿ ಮಾತನಾಡುತ್ತಾ ಹೋಗಿದ್ದಾರೆ’ ಎಂದು ಚಂದನ್ ವಿವರಿಸಿದರು.
‘ಇಂದಿನ ತಲೆಮಾರಿನವರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಸಾಹಿತ್ಯ ಸಹವಾಸದಂತಹ ಕಾರ್ಯಕ್ರಮಗಳು ಸಾಹಿತ್ಯ ಸಂಪ್ರದಾಯದ ಬಗ್ಗೆ ಅವರಲ್ಲಿ ಕುತೂಹಲ ಹುಟ್ಟಿಸುತ್ತವೆ.

ಇದೊಂದು ರೀತಿಯಲ್ಲಿ ತಮ್ಮ ಹಿರಿಯರೊಂದಿಗೆ ಮತ್ತು ಸಮಕಾಲೀನ ಲೇಖಕರೊಂದಿಗೆ ಅನಂತಮೂರ್ತಿ ಅವರ ಸಂಬಂಧ ಯಾವ ರೀತಿ ಇತ್ತು ಎನ್ನುವುದರ ದಾಖಲೆಯೂ ಹೌದು. ಅವರ ವಿಶಿಷ್ಟ ಮಾತಿನ ಶೈಲಿಯನ್ನು ವೀಕ್ಷಿಸುವುದೇ ಒಂದು ಸಂಭ್ರಮ’ ಎಂದು ಕಾರ್ಯಕ್ರಮದ ಹಿಂದಿನ ಉದ್ದೇಶಗಳನ್ನು ಅವರು ತಿಳಿಸುತ್ತಾರೆ.

ಈ ಉಪನ್ಯಾಸಗಳನ್ನು ಎರಡು ವರ್ಷಗಳ ಹಿಂದೆಯೇ ಚಿತ್ರೀಕರಿಸಲಾಗಿತ್ತಂತೆ. 2012ರ ಏಪ್ರಿಲ್‌ನಿಂದ ಜುಲೈವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿ ವಾರ ಅನಂತಮೂರ್ತಿ ಅವರ ಮನೆಗೇ ಹೋಗಿ ಈ ಉಪನ್ಯಾಸಗಳನ್ನು ಚಿತ್ರೀಕರಿಸಿದ್ದಂತೆ. ‘ಆದರೆ ಕೆಲವು ತಾಂತ್ರಿಕ ಕೊರತೆಗಳಿಂದ ಈ ಕಾರ್ಯಕ್ರಮ ಪ್ರಸಾರವಾಗಲು ತಡವಾಯಿತು’ ಎಂದರು ಚಂದನ್.

ಕೇಬಲ್ ಸಂಪರ್ಕ ಇಲ್ಲದಿದ್ದವರೂ ನೋಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಸರಣಿ ಕಾರ್ಯಕ್ರಮವನ್ನು ‘ಚಂದನ’ ವಾಹಿನಿಯಲ್ಲೇ ಪ್ರಸಾರ ಮಾಡಲು ನಿರ್ಧರಿಸಿದರು. 58 ನಿಮಿಷಗಳ ಈ ಕಾರ್ಯಕ್ರಮದ ನಡುವೆ ಒಂದೂ ಜಾಹೀರಾತು ಇಲ್ಲ. ಶೀರ್ಷಿಕೆ ಗೀತೆಯ ಹೊರತಾಗಿ ಸಂಗೀತವನ್ನೂ ಹಾಕಿಲ್ಲ.

‘ಕೆ.ಜಿ. ಸೋಮಶೇಖರ್ ಅವರು ತೆಗೆದಿರುವ ಅಪರೂಪದ ಕಪ್ಪು-, ಬಿಳುಪು ಚಿತ್ರಗಳನ್ನು ಬಳಸಿದ್ದೇವೆ. ತೇಜಸ್ವಿ ಕುರಿತ ಉಪನ್ಯಾಸದಲ್ಲಿ ಅವರ ಹೆಂಡತಿ ತೆಗೆದ ಕೆಲವು ಫೋಟೊಗಳನ್ನು ಬಳಸಿಕೊಂಡಿದ್ದೇವೆ. ಲಂಕೇಶ್ ಕುರಿತ ಉಪನ್ಯಾಸದಲ್ಲಿ ಅವರ ಮಗಳು ನೀಡಿದ ಫೋಟೊಗಳನ್ನು ಬಳಸಿಕೊಂಡಿದ್ದೇವೆ. ಹೀಗೆ ಉದ್ದೇಶಪೂರ್ವಕವಾಗಿಯೇ ಸಾಕ್ಷ್ಯಚಿತ್ರದ ಜನಪ್ರಿಯ ಮಾದರಿಯನ್ನು ಬಿಟ್ಟು ವಿಭಿನ್ನವಾಗಿ ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ’ ಎಂದು ಚಂದನ್‌ ತಮ್ಮ ಕಾರ್ಯಕ್ರಮದ ವಿಶೇಷವನ್ನು ಬಿಚ್ಚಿಟ್ಟರು.

ಈ ಕಾರ್ಯಕ್ರಮವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ರೂಪಿಸಲಾಗಿದೆಯಂತೆ. ‘ಗಾಯಕಿ ಎಂ. ಡಿ. ಪಲ್ಲವಿ, ಛಾಯಾಗ್ರಾಹಕ ಕೆ.ಜಿ. ಸೋಮಶೇಖರ್, ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್, ಸಂಕಲನಕಾರ, ಕ್ಯಾಮೆರಾಮನ್ ಎಲ್ಲರೂ ಕಡಿಮೆ ಸಂಭಾವನೆಗೆ ಕೆಲಸ ಮಾಡಿಕೊಟ್ಟಿದ್ದಾರೆ. ಇದರಿಂದ ಸಾಹಿತ್ಯ ಸಹವಾಸವನ್ನು ಸುಮಾರು 3 ಲಕ್ಷ ರೂಪಾಯಿಗಳಲ್ಲಿ ಮುಗಿಸಲು ಸಾಧ್ಯವಾಗಿದೆ’ ಎಂದು ಸ್ಮರಿಸುತ್ತಾರೆ.

ಇದನ್ನೊಂದು ಶಾಶ್ವತ ದಾಖಲೆಯನ್ನಾಗಿ ಉಳಿಸಿಕೊಂಡು ಮುಂದಿನ ತಲೆಮಾರಿಗೂ ಸಿಗುವಂತೆ ಮಾಡಲು ಡಿವಿಡಿ ರೂಪದಲ್ಲಿಯೂ ತರಲಾಗುತ್ತದಂತೆ. ಕಾರ್ಯಕ್ರಮ ಸರಣಿ ಪ್ರಸಾರವಾದ ಎರಡು ತಿಂಗಳ ಒಳಗಾಗಿ ಸಾಹಿತ್ಯ ಸಹವಾಸ ಡಿವಿಡಿಗಳು ಲಭ್ಯವಾಗಲಿವೆ.
ಬೇಂದ್ರೆ ಅವರನ್ನು ಕೇಂದ್ರೀಕರಿಸಿ ಆರಂಭಗೊಂಡ ಈ ಸರಣಿ ಉಪನ್ಯಾಸದ ಮೂರು ಕಂತುಗಳು ಈಗಾಗಲೇ ಮುಗಿದಿವೆ. ಎರಡು ಮತ್ತು ಮೂರನೇ ಸಂಚಿಕೆಯಲ್ಲಿ ಕುವೆಂಪು ಮತ್ತು ಕಾರಂತರ ಬಗ್ಗೆ ಉಪನ್ಯಾಸಗಳು ಪ್ರಸಾರವಾಗಿವೆ. ಮುಂದಿನ ಉಪನ್ಯಾಸಗಳ ವಿವರ ಹೀಗಿವೆ.

ಜೂನ್‌ 29 – ಗೋಪಾಲಕೃಷ್ಣ ಅಡಿಗ

ಜುಲೈ 6 – ಪೂರ್ಣಚಂದ್ರ ತೇಜಸ್ವಿ ಮತ್ತು ಪಿ. ಲಂಕೇಶ್‌
ಜುಲೈ 13 – ಭಾಗ 1. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌,
ಭಾಗ 2. ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ್‌, ಎ.ಕೆ ರಾಮಾನುಜಂ
ಜುಲೈ 20 –  ನವ್ಯ ಸಾಹಿತ್ಯ
ಜುಲೈ 27 – ಭಾಗ 1. ದಲಿತ ಸಾಹಿತ್ಯ, ಭಾಗ 2. ಕನ್ನಡ ಭಾಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT