ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಕಾಲಗಳ ಚೌಕಟ್ಟು ದಾಟುವ ಚಿತ್ರಗಳು

Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ತಸ್ವೀರ್‌ ಆರ್ಟ್‌ ಗ್ಯಾಲರಿ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಮ್ಯೂಸಿಯಮ್‌ ಆಫ್‌ ಆರ್ಟ್‌ ಅಂಡ್‌ ಫೊಟೊಗ್ರಫಿ ಸಹಯೋಗದಲ್ಲಿ ‘ಛಾಯಾಚಿತ್ರ ಪತ್ರಿಕೋದ್ಯಮದ ಪರಂಪರೆ’ (ಲೆಗಸಿ ಆಫ್‌ ಫೊಟೊ ಜರ್ನಲಿಸಮ್‌) ಎಂಬ ಹೆಸರಿನಲ್ಲಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದೆ. ದೀಪಕ್‌ ಪುರಿ ಅವರ ಸಂಗ್ರಹದಲ್ಲಿನ ಐವತ್ತಕ್ಕೂ ಹೆಚ್ಚಿನ ಅನನ್ಯ ಛಾಯಾಚಿತ್ರಗಳು ಇಲ್ಲಿ ವೀಕ್ಷಣೆಗೆ ಲಭ್ಯ ಇವೆ.

ದೀಪಕ್‌ ಪುರಿ ಟೈಮ್‌ ಲೈಫ್‌ ನ್ಯೂಸ್‌ ಸರ್ವೀಸ್‌ನ ದಕ್ಷಿಣ ಏಷ್ಯ ಬ್ಯೂರೋದ ಮ್ಯಾನೇಜರ್‌ ಆಗಿ ಕೆಲಸ ಮಾಡಿದವರು. ಮೂರು ದಶಕಗಳ ಕಾಲ ಛಾಯಾಚಿತ್ರ ಸಂಪಾದಕರಾಗಿ ಕೆಲಸ ಮಾಡಿದ ಅನುಭವವೂ ಅವರ ಬೆನ್ನಿಗಿದೆ. ಜಗತ್ತಿನಾದ್ಯಂತ ಅನೇಕ ಮಹತ್ವದ  ಛಾಯಾಚಿತ್ರಕಾರರ ಸ್ನೇಹ ಹೊಂದಿರುವ ದೀಪಕ್‌ ಅವರ ಛಾಯಾಚಿತ್ರ ಸಂಗ್ರಹವೂ ಅಷ್ಟೇ ಅಮೂಲ್ಯವಾದದ್ದು. ಅವರು ಬೆಂಗಳೂರಿನ ಮ್ಯೂಸಿಯಮ್‌ ಆಫ್‌ ಆರ್ಟ್‌ ಅಂಡ್‌ ಫೊಟೊಗ್ರಫಿಗೆ ದೇಣಿಗೆ ನೀಡಿದ ಸುಮಾರು 200 ಛಾಯಾಚಿತ್ರಗಳ ಸಂಗ್ರಹದಿಂದ ಆಯ್ದ ಕೆಲವು ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

‘ಜಗತ್ತಿನ ಅನೇಕ ಪ್ರಖ್ಯಾತ ಛಾಯಾಚಿತ್ರಕಾರರು ದೀಪಕ್‌ ಅವರಿಗೆ ನೀಡಿದ ಛಾಯಾಚಿತ್ರಗಳು ಇಲ್ಲಿವೆ. ದೀಪಕ್‌ ಅವರ ಸಂಗ್ರಹದ ಶ್ರೀಮಂತಿಕೆ ಮತ್ತು ವೈವಿಧ್ಯವನ್ನು ಪ್ರತಿನಿಧಿಸಬಲ್ಲ ಚಿತ್ರಗಳನ್ನು ಆಯ್ದು ಪ್ರದರ್ಶನಕ್ಕೆ ಇರಿಸಲಾಗಿದೆ. ಈ ಆಯ್ಕೆಯಲ್ಲಿ ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿಲ್ಲ. ಭಾರತದ ವಿವಿಧ ಪ್ರದೇಶಗಳ ಛಾಯಾಚಿತ್ರಗಳು, ವಿದೇಶದ ಕೆಲವು  ಛಾಯಾಚಿತ್ರಗಳು, ಹಾಗೆಯೇ ಭಾರತೀಯ ಮತ್ತು ವಿದೇಶಿ ಛಾಯಾಗ್ರಾಹಕರ ಚಿತ್ರಗಳೂ ಇಲ್ಲಿವೆ’ ಎಂದು ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತಾರೆ ತಸ್ವೀರ್ ಆರ್ಟ್‌ ಗ್ಯಾಲರಿಯ ಶಿಲ್ಪಾ. ಈ ಪ್ರದರ್ಶನಕ್ಕೆ ‘ಛಾಯಾಚಿತ್ರ ಪತ್ರಿಕೋದ್ಯಮದ ಪರಂಪರೆ’ ಎಂದೇ ಹೆಸರಿಸಲಾಗಿದ್ದರೂ ಇಲ್ಲಿನ ಎಲ್ಲ ಚಿತ್ರಗಳೂ ಛಾಯಾಚಿತ್ರ ಪತ್ರಕರ್ತರೇ ತೆಗೆದವಲ್ಲ. ತಮ್ಮ ವೈಯಕ್ತಿಕ ಸಂಗ್ರಹಕ್ಕೆ ತೆಗೆದ ಅನೇಕ ಛಾಯಾಚಿತ್ರಗಳೂ ಇಲ್ಲಿವೆ.

ಆಯಾಮಗಳ ವೈವಿಧ್ಯ
ಈ ಛಾಯಾಚಿತ್ರಗಳನ್ನು ಒಂದೊಂದಾಗಿ ವೀಕ್ಷಿಸುತ್ತಾ ಹೋದರೆ, ಶಿಲ್ಪಾ ಹೇಳಿದಂತೆ ವಿಶೇಷವಾಗಿ ವೈವಿಧ್ಯ  ಗಮನ ಸೆಳೆಯುತ್ತದೆ.  ಛಾಯಾಚಿತ್ರಕಾರರು, ವಸ್ತು, ಪ್ರದೇಶ, ಮಾಧ್ಯಮ, ಹೀಗೆ ಹಲವು ಆಯಾಮಗಳಲ್ಲಿಯೂ ಈ ವೈವಿಧ್ಯ ಎದ್ದು ಕಾಣುತ್ತದೆ. ಎಲ್ಲ ಚಿತ್ರಗಳೂ ಏಕಕಾಲದಲ್ಲಿ ಹಲವು ಕಥೆಗಳನ್ನು ಹೇಳುತ್ತಾ ಚೌಕಟ್ಟಿನಾಚೆ ಜಿಗಿದು ನಮ್ಮ ಮನಸ್ಸಲ್ಲಿ ವಿಸ್ತರಿಸಿಕೊಳ್ಳುತ್ತಾ ಹೋಗುವಷ್ಟು ಶಕ್ತವಾಗಿವೆ.

ಗ್ಯಾಲರಿಯಲ್ಲೊಂದು ಸುತ್ತು
ರಾಕ್ಷಸೀ ಮುಖವನ್ನು ಹೊತ್ತ ಬೃಹತ್‌ ಭಗ್ನಮೂರ್ತಿಯ ಬುಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಂಬಗಳ ಮೇಲೆ ಅಮಾಯಕವಾಗಿ ಮಲಗಿರುವ ಟಿಬೆಟಿಯನ್ ಹುಡುಗನ ಚಿತ್ರ ವಿಶೇಷವಾಗಿ ಗಮನ ಸೆಳೆಯುತ್ತದೆ. ಗ್ಯಾಲರಿ ಹೊಕ್ಕ ಕೂಡಲೆ ಮೊದಲಿಗೇ ಕಾಣುವ ಈ ಚಿತ್ರವನ್ನು ನ್ಯಾನ್ಸಿ ಜೊ ಜಾನ್ಸನ್‌ ಅವರು 1993ರಲ್ಲಿ ಟಿಬೆಟ್‌ನಲ್ಲಿ ತೆಗೆದ ಚಿತ್ರ. ಅದರ ಪಕ್ಕವೇ ಇರುವ ಚಿತ್ರ 2002ರಲ್ಲಿ ಅಪ್ಘಾನಿಸ್ತಾನದಲ್ಲಿ ಕ್ರಿಸ್ಟೋಫರ್‌ ಮೊರಿಸ್‌ ಅವರು ತೆಗೆದಿದ್ದು. ತಮ್ಮಷ್ಟೇ ದೊಡ್ಡ ಬೆನ್ನುಚೀಲವನ್ನು ಕಟ್ಟಿಕೊಂಡು ಕೈಯಲ್ಲಿ ಗನ್‌ ಹಿಡಿದು ನಿಂತವರು ಯಾವ ದೇಶದ ಯೋಧರು ಎಂಬ ಗುರುತೂ ಸಿಕ್ಕಲಾರದಷ್ಟು ಮಂದಗೊಂಡಿರುವ ಬೆಳಕಿಗೂ ಯುದ್ಧಕ್ಕೆ ಹೆದರಿದಂತಿದೆ. ಈ ಚಿತ್ರದ ಅಸ್ಪಷ್ಟತೆಯೇ ದೇಶ ದೇಶಗಳ ಗಡಿರೇಖೆಗಳನ್ನು ಮೀರಿ, ಮಾನವೀಯತೆಯ ದೃಷ್ಟಿಯಲ್ಲಿ ಯುದ್ಧದ ಘೋರತೆಯನ್ನು ಬಿಂಬಿಸುತ್ತಿರುವಂತೆ ಕಾಣುತ್ತದೆ.

ಬಂದೂಕು ಹಿಡಿದು ಹೊಂಚು ಹಾಕಿ ನಿಂತ ಮಾನವರು ಕೊಲ್ಲಲು ಹೊರಟಿರುವುದೂ ತನ್ನಂತಹುದೇ ಇನ್ನೊಬ್ಬ ಮಾನವನನ್ನೇ ಎಂಬ ಅರಿವು ಮೂಡಿಸುವ ಆ ಚಿತ್ರದ ಮುಂದುವರಿದ ಭಾಗದಂತೇ ಕಾಣುವುದು ಜೇಮ್ಸ್‌ ನ್ಯಾಶ್ಟ್‌ವೇ ಅವರು ತೆಗೆದ ಅಪ್ಘಾನಿಸ್ತಾನದ್ದೇ ಇನ್ನೊಂದು ಚಿತ್ರ. ಅಷ್ಟೆತ್ತರದ ಬೃಹತ್‌ ಕಟ್ಟಡಗಳ ಛಿದ್ರ ಅವಶೇಷಗಳ ನಡುವಣ ದಾರಿಯಲ್ಲದ ದಾರಿಯಲ್ಲಿ ಹೊರಟಿರುವ ಮುಸುಕುಧಾರಿ ಮಾನವ ಚಿತ್ರ ಇಡೀ ಮನುಕುಲಕ್ಕೆ ಯುದ್ಧದ ವಿನಾಶಿರೂಪವನ್ನು ಮಾನವೀಯ ಕಣ್ಣುಗಳಲ್ಲಿ ದರ್ಶಿಸುವಂತಿದೆ. ಇದೇ ಛಾಯಾಚಿತ್ರಕಾರರು ತೆಗೆದಿರುವ ಇನ್ನೊಂದು ಚಿತ್ರದಲ್ಲಿ ಬುರ್ಖಾಧಾರಿ ಮಹಿಳೆಯರ ಕಪ್ಪು ಆಕೃತಿಗಳು ಒತ್ತೊತ್ತಾಗಿ ನಿಂತಿವೆ. ಈ ಮಹಿಳಾ ಆಕೃತಿಗಳ ಕಪ್ಪು ದಿರಿಸಿನ ನಡುವೆ ಹೊರಚಾಚಿದ ಒಂದೇ ಒಂದು ಕರ ಜಗತ್ತಿನೆದುರಿಗೆ ಘನತೆಯ ಬದುಕನ್ನು ಯಾಚಿಸುತ್ತಿರುವಂತೆಯೇ ಭಾಸವಾಗುವಂತಿವೆ.

ಮುಗಿಲಿಗೆ ಬಲೆ ಬೀಸಿದಂತೇ ಪಂಚೆಯನ್ನು ಮೇಲಕ್ಕೆ ಹಾರಿಬಿಟ್ಟ ಇನ್ನೊಂದು ಛಾಯಾಚಿತ್ರವು ವಾರಾಣಸಿಯ ಲೌಕಿಕ ಬದುಕನ್ನೂ, ಅಲೌಕಿಕ ಹಂಬಲವನ್ನೂ ಏಕಕಾಲಕ್ಕೆ ಸೆರೆಹಿಡಿದಿದೆ. ತನ್ನ ಆವರಣದ ಕಾರಣದಿಂದಲೇ ಬಹಳಷ್ಟು ಮಾತನಾಡಬಲ್ಲ ಈ ಚಿತ್ರ, ಸ್ಟಿಫನ್‌ ಸೆಡ್‌ನೌ  ಕ್ಯಾಮೆರಾ ಕಣ್ಣಿಗೆ 1992ರಲ್ಲಿ ಸೆರೆಸಿಕ್ಕವು.

ಕೆನ್ರೊ ಇಝು ಅವರು ತಮಿಳುನಾಡಿನ ಕಾಂಚಿಪುರಂನಲ್ಲಿ ತೆಗೆದ ಒಂದು ಚಿತ್ರವೂ ಧಾರ್ಮಿಕ ಭಾವವನ್ನು ಉದ್ದೀಪಿಸುವಂತಿದೆ. ಬೃಹತ್‌ ಕಂಬಗಳ ಸಾಲಿನ ನಡುವೆ ಜಪನಿರತ ಬ್ರಾಹ್ಮಣನ ಚಿತ್ರ, ಅವನ ಮುಖದ ಮೇಲೆ ಬಿದ್ದ ಬೆಳಕಿನ ಕಾರಣದಿಂದ ಪ್ರಕೃತಿಯ ಅವ್ಯಕ್ತ ಶಕ್ತಿಯತ್ತ ಮಾನವನ ಹಂಬಲವನ್ನು ಬಿಂಬಿಸುವಂತಿದೆ.
ಈ ಎಲ್ಲವೂ ಕಪ್ಪು ಬಿಳುಪಿನವಾಗಿದ್ದು, ಬಣ್ಣದ ಹಂಗನ್ನು ಮೀರಿದಂತಿವೆ. ಹಾಗೆಂದು ಇಲ್ಲಿ ಬರೀ ಕಪ್ಪು ಬಿಳುಪು ಚಿತ್ರಗಳಷ್ಟೇ ಇವೆ ಎಂದು ಅಂದುಕೊಳ್ಳಬೇಕಿಲ್ಲ. ಸ್ಟೀವ್‌ ಮೆಕರ್ರಿ ಅವರ ‘ತಾಜ್‌ ಅಂಡ್‌್ ಟ್ರೈನ್‌’, ‘ಫ್ಲವರ್ ಸೆಲ್ಲರ್‌ ಅಟ್‌ ದಲ್‌ ಲೇಕ್‌’, ‘ಮಾರ್ಕೆಟ್‌ ವೆಂಡರ್‌ ಆನ್‌ ದಾಲ್‌ ಲೇಕ್‌’, ‘ಡಸ್ಟ್‌ ಸ್ಟಾರ್ಮ್‌’ ಹೆಸರಿನ ಛಾಯಾಚಿತ್ರಗಳು ವಿಶಿಷ್ಟವಾದ ವರ್ಣಸಂಯೋಜನೆಯಿಂದಲೇ ಮೈಮರೆಸುತ್ತವೆ.

ಜಾನ್‌ ಸ್ಟಾಮೇಯರ್‌ ಅವರ ಟ್ರೈನ್‌ ಫ್ರಮ್‌ ದೆಹಲಿ ಟು ಲಖನೌ, ಮತ್ತು ಲಖನೌನ ಕನ್ನಡಿಯಂಗಡಿಗಳೂ ಆವರಣದ ಕಾರಣದಿಂದಲೇ ಗಮನಸೆಳೆಯುವ ಇನ್ನೆರಡು ಚಿತ್ರಗಳು. ಬ್ರೆಜಿಲ್‌ನ ಗಣಿಗಾರಿಕೆಯ ದಾರುಣತೆ, ಅಲಹಾಬಾದ್‌ನ ಮಹಾಕುಂಭಮೇಳ, ಕರ್ನಾಟಕದ ಬೀದರ್‌ನ ಹೋಳಿ ಸ್ನಾನ, ದೆಹಲಿಯ ಮಾನ್‌ಸೂನ್‌ ಸೊಬಗು, ಹೀಗೆ ಒಂದೊಂದು ಚಿತ್ರವೂ ತನ್ನ ಕಾಲದ– ದೇಶದ ಛಾಯೆಯನ್ನು ನೋಡುಗರ ಎದೆಯಲ್ಲಿ ಬೀರುವಂತಿವೆ.

ಛಾಯಾಚಿತ್ರಕಾರರ ಹಸ್ತಾಕ್ಷರ
ಹಲವಾರು ಛಾಯಾಚಿತ್ರಗಳ ಮೇಲೆ ಛಾಯಾಚಿತ್ರಕಾರರ ರುಜುವನ್ನೂ ಕಾಣಬಹುದು. ಸ್ಟಿಫನ್‌ ಡುಪಾಂಟ್‌ ಅವರು ಗಂಗಾನದಿಯ ದಡದಲ್ಲಿ ತೆಗೆದ 2001ರಲ್ಲಿ ಚಿತ್ರದ ಮೇಲೆ ‘ಮೈ ಬೆಸ್ಟ್‌ (ನೋ ಸುಸೈಡ್‌ನೋಟ್ ದಿಸ್‌ ಟೈಮ್‌) ಎಂದು ಬರೆದ ಹಸ್ತಾಕ್ಷರವನ್ನು ಅವರ ಅಭಿಮಾನಿಗಳು ನೋಡಿ ಆನಂದಿಸುವ ಅವಕಾಶವೂ ಇದೆ.

ಇಲ್ಲಿ ಉಲ್ಲೇಖಿಸಿದ ಚಿತ್ರಗಳನ್ನು ಹೊರತುಪಡಿಸಿಯೂ ಅನೇಕ ಆಸಕ್ತಿದಾಯಕ ಚಿತ್ರಗಳು ಇಲ್ಲಿವೆ. ವಿವಿಧ ದೇಶ–ಕಾಲಗಳಿಗೆ ಸಂಬಂಧಿಸಿದ ಈ ಚಿತ್ರಗಳನ್ನು ಒಟ್ಟಿಗೆ ನೋಡಿದಾಗ ಅವುಗಳು ಆಂತರಿಕವಾಗಿ ಒಂದಕ್ಕೊಂದು ಸಂಬಂಧಿಸಿದಂತೆಯೂ, ಎಲ್ಲವೂ ಒಟ್ಟಿಗೇ ಸೇರಿ ಮನುಕುಲದ ಅಗಾಧ ಕಥನವನ್ನು ಕಟ್ಟುತ್ತಿರುವಂತೆ ತೋರುತ್ತವೆ. ಆದ್ದರಿಂದಲೇ ಇವು ಛಾಯಾಚಿತ್ರ ಆಸಕ್ತರಷ್ಟೇ ಅಲ್ಲದೇ, ಎಲ್ಲ ಸಹೃದಯರೂ ನೋಡಲೇ ಬೇಕಾದ ಪ್ರದರ್ಶನ ಎಂದು ನಿಸ್ಸಂಶಯವಾಗಿ ಹೇಳಬಹುದು.
*
ಪ್ರದರ್ಶನದ ವಿವರಗಳು
‘ಛಾಯಾಚಿತ್ರ ಪತ್ರಿಕೋದ್ಯಮದ ಪರಂಪರೆ’ ಛಾಯಾಚಿತ್ರ ಪ್ರದರ್ಶನ ಅಕ್ಟೋಬರ್‌ 1ರವರೆಗೆ ನಡೆಯಲಿದೆ. ವಿಳಾಸ: ಸುವ ಹೌಸ್‌, ತಸ್ವೀರ್‌ ಆರ್ಟ್‌ ಗ್ಯಾಲರಿ, 26/1 ಕಸ್ತೂರಬಾ ಕ್ರಾಸ್‌ ರಸ್ತೆ. ಬ್ರಿಟೀಶ್‌ ಲೈಬ್ರರಿ ಸಮೀಪ. ದೂರವಾಣಿ: 08040535217.
ಜಾಲತಾಣ: www.tasveerarts.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT