ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿ, ಗದ್ದಲ, ಸಭೆ ಮುಂದೂಡಿಕೆ

ಪಾಲಿಕೆ ಸಾಮಾನ್ಯ ಸಭೆ: ಆಯುಕ್ತರ ವಿರುದ್ಧ ಬಿಜೆಪಿ–ಜೆಡಿಎಸ್‌ ಸದಸ್ಯರ ಆಕ್ರೋಶ
Last Updated 27 ಫೆಬ್ರುವರಿ 2015, 9:02 IST
ಅಕ್ಷರ ಗಾತ್ರ

ಮೈಸೂರು: ಕೆಲಸ ಮಾಡಲು ‘ಅಸಮರ್ಥ’ರಾಗಿರುವ ಪಾಲಿಕೆ ಆಯುಕ್ತ ಸಿ.ಜಿ. ಬೆಟಸೂರಮಠ ಅವರನ್ನು ಬೇರೆಡೆ ವರ್ಗ ಮಾಡಲು ಸರ್ಕಾರದ ಮೇಲೆ ಒತ್ತಡ ತರಬೇಕು. ಇಲ್ಲವಾದಲ್ಲಿ ಅವರೇ ಬೇರೆಡೆ ವರ್ಗ ಮಾಡಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಆಯುಕ್ತರ ವಿರುದ್ಧ ಹರಿಹಾಯ್ದು, ಮೇಯರ್ ಪೀಠದ ಮುಂದಿನ ಅಂಗಳಕ್ಕೆ ತೆರಳಿ ಧರಣಿ ನಡೆಸಿದ್ದರಿಂದ ಕೋಲಾಹಲ ಉಂಟಾಯಿತು. ಸಭೆಯಲ್ಲಿ ಗದ್ದಲ, ಆರ್ಭಟ ಹೆಚ್ಚಾಗಿ ಪರಿಸ್ಥಿತಿ ತಹಬದಿಗೆ ಬಾರದ್ದರಿಂದ ಸಭೆಯನ್ನು ಮುಂದೂಡಲಾಯಿತು.

ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆ ಗೊಂದಲದ ಗೂಡಾಯಿತು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬೇಸಿಗೆ ಹೊಸ್ತಿಲಲ್ಲಿ ಇರುವಾಗಲೇ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ ಏರುತ್ತಿದೆ. ನಮ್ಮನ್ನು ಆರಿಸಿ ಕಳುಹಿಸಿದ ಜನರಿಗೆ ಕನಿಷ್ಠ ಕುಡಿಯುವ ನೀರು ಪೂರೈಸಲು ಆಗದಿದ್ದ ಮೇಲೆ ನಾವು ಜನಪ್ರತಿನಿಧಿಗಳಾಗಿರುವುದು ವ್ಯರ್ಥ. ಪಾಲಿಕೆಯಲ್ಲಿ ಒಂದೂ ಕೆಲಸವೂ ಆಗುತ್ತಿಲ್ಲ. ಯಾವುದೇ ಕಡತ ಆಯುಕ್ತರ ಬಳಿ ಹೋದರೆ ‘ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದು’ ಎಂದು ಬರೆಯುತ್ತಾರೆ. ಒಂದೊಂದು ಕಡತ ವಿಲೇವಾರಿಗೆ ತಿಂಗಳಾನುಗಟ್ಟಲೇ ಕಾಯಬೇಕು. ಇದಕ್ಕೆಲ್ಲ ಪಾಲಿಕೆ ಆಯುಕ್ತರೇ ನೇರ ಹೊಣೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಆರೋಪಗಳ ಸುರಿಮಳೆಗರೆದರು.

‘ಬೇಜವಾಬ್ದಾರಿ ನಡವಳಿಕೆ ಇರುವ ಮೇಯರ್‌ ಮತ್ತು ಆಯುಕ್ತರನ್ನು ನಾನು ಎಂದೂ ಕಂಡಿಲ್ಲ. ಕಳೆದ ಆರು ತಿಂಗಳಿಂದ ಏನು ಸಾಧನೆ ಮಾಡಿದ್ದೀರಾ? ಸ್ವಚ್ಛತೆ ಬಗ್ಗೆ ಭಾಷಣ ಬಿಗಿಯುತ್ತೀರಾ. ಪತ್ರಿಕೆಗಳಲ್ಲಿ ಪ್ರಚಾರ ತೆಗೆದುಕೊಳ್ಳುತ್ತೀರಾ. ನಿತ್ಯ ಸಭೆ–ಸಮಾರಂಭ ಮಾಡುವುದೇ ನಿಮ್ಮ ಕಾಯಕವಾಗಿದೆ. ಒಂದು ಕಡತಕ್ಕೆ ಸಹಿ ಹಾಕಬೇಕೆಂದರೆ ಆಯುಕ್ತರು ಹಿಂದೆ ಮುಂದೆ ಯೋಚಿಸುತ್ತಾರೆ. ನಿಮ್ಮ ದೃಷ್ಟಿಯಲ್ಲಿ ನಾವೆಲ್ಲ ಕಳ್ಳರು, ನೀವೆಲ್ಲಾ ಒಳ್ಳೆಯವರಾ? ನಾನು ನಿಮ್ಮಗಳ ಪರ ಇಲ್ಲ, ವಿರುದ್ಧ ಇದ್ದೇನೆ ಎಂದು ನೇರವಾಗಿಯೇ ಹೇಳುತ್ತೇನೆ. ನೀವು ಏನೇನು ತಪ್ಪುಗಳನ್ನು ಮಾಡಿದ್ದೀರಾ ಎಂಬುದನ್ನು ಲಿಖಿತವಾಗಿಯೇ ದೂರು ನೀಡುತ್ತೇನೆ’ ಎಂದು ಬಿಜೆಪಿ ಸದಸ್ಯ ನಂದೀಶ್‌ ಪ್ರೀತಂ ಗುಡುಗಿದರು.

ಸಭೆಯಲ್ಲಿ ಕೇಳಿಸಿದ್ದು...

ನಿಮಗೆ ನಾಚಿಕೆ ಆಗುವುದಿಲ್ಲವೇ?

‘ಕಳೆದ ಬಾರಿಯ ಬಜೆಟ್‌ನಲ್ಲಿ ಹೇಳಿದ ಒಂದನ್ನೂ ಅಧಿಕಾರಿಗಳು ಈಡೇರಿಸಿಲ್ಲ. ಕಾಟಾಚಾರಕ್ಕೆ ಬಜೆಟ್‌ ಕಾಪಿ ಮುದ್ರಿಸಲಾಗಿದೆ. ಆಯುಕ್ತರಲ್ಲಿ ಬೇಜವಾಬ್ದಾರಿ, ಅದಕ್ಷತೆ ಎದ್ದು ಕಾಣುತ್ತಿದೆ. ನಿಮಗೆ ನಾಚಿಕೆ ಆಗಲ್ವಾ? ಎಂದು ಸದಸ್ಯ ರವೀಂದ್ರಸ್ವಾಮಿ ಆಯುಕ್ತರನ್ನು ಮೂದಲಿಸಿದರು.

ಇದಕ್ಕೆ ಮೇಯರ್‌ ಆರ್‌. ಲಿಂಗಪ್ಪ ಆಕ್ಷೇಪ ವ್ಯಕ್ತಪಡಿಸಿ, ‘ಸಭೆಯಲ್ಲಿ ಅಸಂಬದ್ಧ ಪದ ಬಳಸಬೇಡಿ. ಸಮಸ್ಯೆ ಇದ್ದರೆ ವಿಷಯ ಪ್ರಸ್ತಾಪಿಸಿ’ ಎಂದರು.

‘ನಾಚಿಕೆ’ ಪದ ಬಳಕೆ ಮಾಡಿದರೆ ನಿಮಗೆ ಅವಮಾನವೇ. ಅಸಂಬದ್ಧ ಪದ ಯಾವುದು ಬಳಕೆ ಮಾಡಿದ್ದೇನೆ ಎಂಬುದನ್ನು ಬಹಿರಂಗಪಡಿಸಿ. ‘ನಾಚಿಕೆ’ ಕೆಟ್ಟ ಪದವಲ್ಲ. ನೀವೇ ಈ ರೀತಿ ಸಡಿಲ ಕೊಟ್ಟರೆ, ಅಧಿಕಾರಿಗಳು ಕೆಲಸ ಮಾಡುತ್ತಾರಾ?’ ಎಂದು ರವೀಂದ್ರಸ್ವಾಮಿ ಪ್ರತಿಕ್ರಿಯಿಸಿದರು.

ಗುತ್ತಿಗೆದಾರರಿಗೆ ಕೈಮುಗಿಯುವ ಪರಿಸ್ಥಿತಿ ಬಂದಿದೆ
‘ಈ ಮೊದಲು ಕೆಲಸ ಕೊಡಿ ಎಂದು ಸದಸ್ಯರನ್ನು ಗುತ್ತಿಗೆದಾರರು ಹುಡುಕಿಕೊಂಡು ಬರುತ್ತಿದ್ದರು. ಆದರೆ, ಪರಿಸ್ಥಿತಿ ಈಗ ಬದಲಾಗಿದೆ. ಬಿಲ್‌ ಬಾಕಿ ಉಳಿಸಿಕೊಂಡಿರುವುದರಿಂದ ಗುತ್ತಿಗೆದಾರರು ಟೆಂಡರ್‌ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸದಸ್ಯರೇ ಗುತ್ತಿಗೆದಾರರಿಗೆ ಕೈಮುಗಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ.ಆರ್‌. ಕ್ಷೇತ್ರದ ವ್ಯಾಪ್ತಿಗೆ ಬಿದರಗೂಡು ಕಬಿನಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈಗ ಏಕಾಏಕಿ ಬೇರೆಡೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನಗರಕ್ಕೆ ೨೫೦ ಎಂಎಲ್‌ಡಿ ನೀರು ಬಂದರೂ ನೀರಿಗಾಗಿ ಪರಿತಪಿಸಬೇಕಾಗಿದೆ’ ಎಂದು ಕಾಂಗ್ರೆಸ್‌ ಸದಸ್ಯ ಎಂ. ಪುರುಷೋತ್ತಮ ತಿಳಿಸಿದರು.

ಯುಜಿಡಿ ನಿರ್ಮಿಸಿದ್ದವರಿಗೆ ಹಣ ನೀಡಿ
‘ಯಾವ ವಾರ್ಡಿನಲ್ಲಿ ಯುಜಿಡಿ ಕೆಲಸ ಆಗಿದೆ ಅದನ್ನು ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕು. ನೀರಿನ ಕಂದಾಯ ತಿಂಗಳಿಗೆ ₨ ೪ ಕೋಟಿ ಸಂಗ್ರಹವಾಗುತ್ತದೆ. ಇದರಲ್ಲಿ ₨ ೧.೨೫ ಕೋಟಿ ಹಣವನ್ನು ಯುಜಿಡಿಗೆ ನೀಡಬೇಕಾಗಿದೆ. ಆದರೆ, ಸರಿಯಾಗಿ ಹಣ ಸಂದಾಯ ಆಗುತ್ತಿಲ್ಲ. ಮೇಗಳಾಪುರ ನೀರು ಸರಬರಾಜು ಕೇಂದ್ರದ ಯಂತ್ರಗಳು ಆಗಾಗ್ಗೆ ಕೆಡುತ್ತಿವೆ. ಮೇಗಳಾಪುರ ನೀರು ಸರಬರಾಜಿನಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಬೇಕು’ ಎಂದು ಕಾಂಗ್ರೆಸ್‌ ಸದಸ್ಯ ಶೌಕತ್‌ ಪಾಷ ತಿಳಿಸಿದರು.

ಬಳಿಕ ನೇರವಾಗಿ ಮೇಯರ್ ಪೀಠದ ಮುಂಭಾಗಕ್ಕೆ ತೆರಳಿ, ಏರುಧ್ವನಿಯಲ್ಲಿ ಪ್ರಶ್ನಿಸಿ ಧರಣಿಗೆ ಮುಂದಾದರು. ‘ನಿಮಗೆ ಅನ್ಯಾಯವಾಗಿಲ್ಲವಾ? ಎಲ್ಲರೂ ಬಂದು ಧರಣಿಯಲ್ಲಿ ಪಾಲ್ಗೊಳ್ಳಿ’ ಎಂದು ಸದಸ್ಯರನ್ನು ಒತ್ತಾಯಿಸಿದರು. ಬಳಿಕ ಆಯುಕ್ತರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಬಿಜೆಪಿಯ ಮ.ವಿ. ರಾಮಪ್ರಸಾದ್‌, ಎಂ.ಕೆ. ಶಂಕರ್‌, ಬಿ.ವಿ. ಮಂಜುನಾಥ್‌, ಶಿವಕುಮಾರ್‌, ಸ್ನೇಕ್‌ ಶ್ಯಾಂ ಆಡಳಿತ ಪಕ್ಷದವರಾದ ಜೆಡಿಎಸ್‌ನ ಬಿ.ಎಂ. ನಟರಾಜ್‌, ಕೆಂಪಣ್ಣ, ವಿ. ಶೈಲೇಂದ್ರ, ಚನ್ನಪ್ಪ, ಶಿವಣ್ಣ ಸಹ ಧರಣಿಯಲ್ಲಿ ಪಾಲ್ಗೊಂಡರು. ಇದರಿಂದ ಸದನದಲ್ಲಿ ಮತ್ತಷ್ಟು ಗದ್ದಲ ಉಂಟಾಗಿ ಸಭೆಯನ್ನು ನಿಯಂತ್ರಿಸಲು ಮೇಯರ್‌ ಆರ್‌. ಲಿಂಗಪ್ಪ ಹೆಣಗಾಡಿದರೂ ಪ್ರಯೋಜನವಾಗಲಿಲ್ಲ. ಅತ್ತ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಧರಣಿ ನಡೆಸುತ್ತಿದ್ದರೆ; ಇತ್ತ ವಿರೋಧ ಪಕ್ಷದ ನಾಯಕ ಡಿ. ಗಭೂಷಣ್‌, ಎಚ್‌.ಎನ್‌. ಶ್ರೀಕಂಠಯ್ಯ, ಪ್ರಶಾಂತ್‌ ಮತ್ತು ಅನಂತು ಅವರು ಆಕ್ಷೇಪ ವ್ಯಕ್ತಪಡಿಸಿ, ಧರಣಿಯನ್ನು ನಿಲ್ಲಿಸಿ, ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದಾಗ ನಂದೀಶ್‌ ಪ್ರೀತಂ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಮಧ್ಯ ಪ್ರವೇಶಿಸಿದ ಶಾಸಕ ವಾಸು ಅವರು ಮಾತನಾಡಿ, ‘ಸದಸ್ಯರು ತಮ್ಮ ನೋವನ್ನು ಆಕ್ರೋಶದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮೆಲ್ಲರ ನೋವು ಅರ್ಥವಾಗುತ್ತದೆ. ಆದರೆ, ಸಭೆಯಲ್ಲಿ ಗದ್ದಲ ಉಂಟಾದಾಗ ಅದನ್ನು ನಿಯಂತ್ರಿಸುವ ಜವಾಬ್ದಾರಿ ಮೇಯರ್‌ ಅವರಿಗಿದೆ. ನಾನು ಯಾರ ಪರವಾಗಿಯೂ ಮಾತನಾಡುತ್ತಿಲ್ಲ.

ಆಡಳಿತ ಚುರುಕುಗೊಳಿಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಎಲ್ಲ ವಾರ್ಡ್‌ಗಳು ಮತ್ತು ಸದಸ್ಯರನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಕೆ.ಜಿ. ಕೊಪ್ಪಲಿನಲ್ಲಿ ಕುಡಿಯುವ ನೀರು ಇಲ್ಲವೆಂದರೆ ನಮಗೂ ನಾಚಿಕೆ. ಸಭೆಯಲ್ಲಿ ನೀತಿ ನಿಯಮಕ್ಕೆ ಅನುಗುಣವಾಗಿ ಸದಸ್ಯರು ನಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಈ ನಡುವೆ ಹಿರಿಯ ಸದಸ್ಯ ಎಚ್‌.ಎನ್‌. ಶ್ರೀಕಂಠಯ್ಯ, ‘ಸಭೆಯಲ್ಲಿ ಧರಣಿ ನಡೆಯುವ ವೇಳೆ ಬೇರೊಬ್ಬರಿಗೆ ಮಾತನಾಡಲು ಅವಕಾಶ ನೀಡುವುದು ನಡಾವಳಿಗೆ ವಿರುದ್ಧವಾದುದು’ ಎಂದು ತಿಳಿಸಿದಾಗ ಅದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ವಾಸು ತಮ್ಮ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಮತ್ತೆ ಆಯುಕ್ತರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದಾಗ ಸಭೆಯಲ್ಲಿ ಗದ್ದಲ ಉಂಟಾಯಿತು. ಪರಿಸ್ಥಿತಿಗೆ ಹತೋಟಿಗೆ ಬಾರದ ಕಾರಣ ಮೇಯರ್‌ ಲಿಂಗಪ್ಪ ಸಭೆಯನ್ನು ಮುಂದೂಡಿ ಹೊರನಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT